ಟೆಹ್ರಾನ್,ಎ.6: ಇರಾನ್ ಎಲೈಟ್ ರೆವುಲ್ಯೂಶನರಿ ಗಾರ್ಡ್ ಕಾಪ್ಸ್(ಐಆರ್ಜಿಸಿ)ನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸುವುದಾದರೆ ಅಮೆರಿಕದ ಸೇನೆಯನ್ನು ಕೂಡ ಕಪ್ಪು ಪಟ್ಟಿಗೆ ಸೇರಿಸುತ್ತೇವೆ ಎಂದು ಇರಾನ್ ಘೋಷಿಸಿದೆ. ಐಆರ್ಜಿಸಿಯನ್ನು ಅಮೆರಿಕ ಭಯೋತ್ಪಾದಕರು ಎಂಬ ಪಟ್ಟಿಗೆ ಸೇರಿಸಲು ಶ್ರಮಿಸಿದರೆ ಅಮೆರಿಕದ ಸೈನ್ಯವನ್ನು ಇರಾನ್ ಐಎಸ್ಗೆ ಸಮಾನವಾದ ಸಂಘಟನೆಯ ಪಟ್ಟಿಯಲ್ಲಿ ಸೇರಿಸುತ್ತದೆ ಎಂಬುದರಲ್ಲಿ ಸಂದೇಹ ಬೇಡ ಎಂದು ಇರಾನ್ ಪಾರ್ಲಿಮೆಂಟ್ ಕಮಿಟಿ ಅಧ್ಯಕ್ಷ ಹಿಶ್ಮತುಲ್ಲಾ ಫಲಾಹ್ ಹೇಳಿದರು. ಶನಿವಾರ ಟ್ವಿಟರ್ ಮೂಲಕ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಆರ್ಜಿಸಿಯನ್ನು ಅಮೆರಿಕ ವಿದೇಶೀ ಭಯೋತ್ಪಾದನಾ ಸಂಘಟನೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ನೋಡುತ್ತಿದೆ ಎಂದು ಮಾಜಿ ಅಮೆರಿಕನ್ ಹಿರಿಯ ಅಧಿಕಾರಿಯನ್ನು ಉದ್ಧರಿಸಿ ರಾಯಿಟರ್ಸ್ ವರದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ರಾಷ್ಟ್ರೀಯ ಸುರಕ್ಷಾ ವಕ್ತಾರರಾದ ಹಿಸ್ಮತ್ತುಲ್ಲಾ ಉತ್ತರಿಸಿದ್ದಾರೆ.












