ಕಾಸರಗೋಡು,ಎ.29: ಕಾಸರಗೋಡಿನ ಲೋಕಸಭಾ ಕ್ಷೇತ್ರದಲ್ಲಿ ಶೇ.90ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಕಾಂಗ್ರೆಸ್ ಆಗ್ರಹಿಸಿ ಯುಡಿಎಫ್ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ರು ಮುಖ್ಯ ಚುನಾವಣಾ ಏಜೆಂಟ್ ಆಗಿರುವ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಕಲ್ಯಾಶೇರಿ, ಪಯ್ಯನ್ನೂರ್, ಕಾಂಞಂಗಾಡ್, ತೃಕ್ಕರಿಪ್ಪುರ್, ಉದುಮ ಸಹಿತ ವಿಧಾನಸಭಾ ಕ್ಷೇತ್ರಗಳಿಗೆ ಒಳಪಟ್ಟ 110 ಬೂತ್ಗಳಲ್ಲಿ ಮರುಮತದಾನ ನಡೆಸಬೇಕೆಂದು ಅವರು ಆಗ್ರಹಿಸಿದ್ದು ನ್ಯಾಯಯುತ ಮತದಾನಕ್ಕೆ ಅಡ್ಡಿಪಡಿಸುವ ಕಾರ್ಯ ಕಾಸರಗೋಡು ಲೋಕಸಭಾ ಕ್ಷೇತ್ರದ ವಿವಿದ ಕಡೆ ನಡೆದಿದೆ ಎಂದು ದೂರಿನಲ್ಲಿ ಉಣ್ಣಿತ್ತಾನ್ರು ತಿಳಿಸಿದ್ದಾರೆ. ದೂರಿನ ಪ್ರತಿಯನ್ನು ಮುಖ್ಯ ಚುನಾವಣಾಧಿಕಾರಿ ಢೀಕಾರಾಂ ಮೀಣರಿಗೂ ಕಾಂಗ್ರೆಸ್ ನೀಡಲಿದೆ. ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಸರಗೋಡು, ಕಣ್ಣೂರ್ ಜಿಲ್ಲೆಗಳಲ್ಲಿ ನಕಲಿ ಮತದಾನ ನಡೆದಿದೆ ಎನ್ನಲಾದ ದೃಶ್ಯಗಳನ್ನು ಕಾಂಗ್ರೆಸ್ ಈಗಾಗಲೇ ಬಹಿರಂಗಪಡಿಸಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದ ಕಣ್ಣೂರಿನ ಚೆರುತಾಯಂ ಗ್ರಾಮ ಪಂಚಾಯತ್ನ ಪಿಲಾತ್ತರ ಎಯುಪಿ ಸ್ಕೂಲಿನ 19ನೆ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡುತ್ತಿರುವ ದೃಶ್ಯಗಳನ್ನು ಯುಡಿಎಫ್ ಬಹಿರಂಗಪಡಿಸಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದ ಕಯ್ಯೂರ್ ಚೀಮೇನಿ ಪಂಚಾಯತ್ನ ಕುಳಿಯಾಡ್ ಸರಕಾರಿ ಹೈಸ್ಕೂಲಿನ 48ನೆ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿದೆ ಎನ್ನಲಾದ ವೀಡಿಯೊವನ್ನು ಮಾಧ್ಯಮಗಳು ಕೂಡ ಬಹಿರಂಗಪಡಿಸಿವೆ.
ಬೇರೆ ವ್ಯಕ್ತಿ, ಮತಗಟ್ಟೆ ಬದಲಾಯಿಸಿ ನಕಲಿ ಗುರುತು ಚೀಟಿ ಉಪಯೋಗಿಸಿ ಮತದಾನ ಮಾಡಿರುವ ದೃಶ್ಯಗಳು ಬಹಿರಂಗವಾಗಿದ್ದು ಚುನಾವಣಾ ಆಯೋಗದ ವೆಬ್ಕಾಸ್ಟಿಂಗ್ನ ದೃಶ್ಯಗಳು ಬಹಿರಂಗಗೊಂಡಿದೆ. ಅರ್ಧಗಂಟೆಯಲ್ಲಿ ಒಬ್ಬಳೇ ಮಹಿಳೆ ಎರಡು ಸಲ ಮತದಾನ ಮಾಡುತ್ತಿರುವ ದೃಶ್ಯಗಳು ವೀಡಿಯೊದಲ್ಲಿದೆ. 19ನೇ ನಂಬರ್ ಬೂತ್ನ 774 ನಂಬರ್ ಮತದಾರೆಯಾದ ಪದ್ಮಿನಿ ಅರ್ಧಗಂಟೆಯಲ್ಲಿ ಎರಡು ಬಾರಿ ಮತದಾನ ಮಾಡಿದ್ದರು.












