ಕಲ್ಲಿಕೋಟೆ,ಮೇ 2: ಸಾರ್ವಜನಿಕ ಸ್ಥಳದಲ್ಲಿ ಪತ್ನಿಯ ಶರೀರಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಕೊಲೆ ಮಾಡುವ ಯತ್ನ ನಡೆದಿದೆ. ತಳಿಪ್ಪರಂಬ್ ಎಂಬಲ್ಲಿನ ಮೆಡಿಕಲ್ ಕಾಲೇಜು ನರ್ಸಿಂಗ್ ಅಸಿಸ್ಟೆಂಟ್ ಆಗಿರುವ ರಮಾರನ್ನು ಪತಿ ಶಿನೋಜ್ ಕುಮಾರ್ ಬಹಿರಂಗವಾಗಿ ಬೆಂಕಿಗಾಹುತಿ ಮಾಡಿ ಕೊಲ್ಲುವ ಯತ್ನ ಮಾಡಿದ್ದಾನೆ.
ಬುಧವಾರ ಸಂಜೆ ಆರೂವರೆ ಗಂಟೆಗೆ ಘಟನೆ ನಡೆದಿದ್ದು ಎನ್ಜಿಒ ಕ್ವಾಟ್ರರ್ಸ್ ಪರಿಸರದಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದಾಗ ರಮಾರ ದೇಹಕ್ಕೆ ಶಿನೋಜ್ ಕುಮಾರ್ ಪೆಟ್ರೋಲ್ ಸುರಿದ ಕೂಡಲೇ ಅಪಾಯದ ಸುಳಿವು ಸಿಕ್ಕಿ ರಮಾ ಓಡಿ ತಪ್ಪಿಸಿಕೊಂಡು ಹತ್ತಿರದ ಮನೆಯಲ್ಲಿ ಆಶ್ರಯ ಪಡೆದದ್ದರಿಂದ ದೊಡ್ಡ ದುರಂತವೊಂದು ತಪ್ಪಿಹೋಯಿತು. ನಂತರ ಮನೆಯವರು ಮತ್ತು ಸಮೀಪದ ನಿವಾಸಿಗಳು ಸೇರಿ ಶಿನೋಜ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಐದು ವರ್ಷದ ಹಿಂದೆ ಶಿನೋಜ್ ಮತ್ತು ರಮಾ ಮದುವೆಯಾಗಿದ್ದರು. ಈಗ ರಮಾ ಮತ್ತು ಶಿನೋಜ್ ಬೇರೆ ಬೇರೆಯಾಗಿ ವಾಸಿಸುತ್ತಿದ್ದು ಎನ್ಜಿಒ ಕ್ವಾಟ್ರರ್ಸ್ನ ಸಮೀಪದ ಲೇಡಿಸ್ ಹಾಸ್ಟೆಲ್ನಲ್ಲಿ ರಮಾ ವಾಸವಿದ್ದಾರೆ. ಇಬ್ಬರೂ ವಿವಾಹ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ಈ ನಡುವೆ ರಮಾರ ಹತ್ಯೆಗೆ ಶಿನೋಜ್ ಯತ್ನಿಸಿದ್ದಾನೆ.ಶಿನೊಜ್ ಕುಮಾರ್ ವಿರುದ್ಧ ಪೊಲೀಸರು ಕೊಲೆಯತ್ನಕ್ಕೆ ಕೇಸು ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.












