ನೀವೇಕೆ ಇಲ್ಲಿಗೆ ಬಂದಿರಿ ಎಂದು ಆಲೋಚಿಸಿದ್ದೀರಾ?

0
717

✍️ ಪಿ.ಎಂ. ಗಫೂರ್

“ಏನಾದರೂ ಬಯಕೆಗಳು ಬಾಕಿ ಉಳಿದಿವೆಯೇ?”
“ಹೌದು ಒಂದು ಬಯಕೆಯಿದೆ, ಮುಂದೆ ಯಾವಾಗಲಾದರೂ ಒಮ್ಮೆ ಸ್ವಂತ ಹೊಸದಾದ ಮನೆಯೊಂದನ್ನು ಕಟ್ಟಿಸಬೇಕು. ಅಥವಾ ಈ ಮನೆಯನ್ನೇ ನವೀಕೃತಗೊಳಿಸಬೇಕು. ಅದರಲ್ಲಿ ನನಗೊಂದು ತ್ರೀಕೋನಾಕೃತಿಯ ಕೋಣೆಯೊಂದನ್ನು  ಮಾಡಿ ಅದರಲ್ಲಿ ಮಲಗಬೇಕು.”

“ಅದೇಕೆ”
“ನಂತರ ಹೇಳಬೇಕು ನಾನೀಗ ನಾಲ್ಕು ಗೋಡೆಯೊಳಗಿಲ್ಲ.”
“ಒಂದು ಕೋಣೆಯಲ್ಲಿ ಹದಿನೇಳು ವರ್ಷಗಳ ಕಾಲ ಮಲಗಿದ್ದ ಓರ್ವರು ಹೇಳಿದ ಮಾತಿದು, ಸಾಂತ್ವನ ಹೇಳಲು  ಬಂದವರ ಮುಂದೆ ಆಹ್ಲಾದ ತುಂಬಿದ ಕಣ್ಣುಗಳಿಂದ ನಸುನಗುತ್ತಾ ಇರುವ ಓರ್ವ ವ್ಯಕ್ತಿ. ಸಾವಿನ ಪ್ರತಿಯೊಂದು ಬಡಿತವನ್ನು ಸಂತೋಷದಿಂದ ಅವರು ಸ್ವೀಕರಿಸುತ್ತಿದ್ದಾರೆ. ಅವರನ್ನು ಭೇಟಿಯಾದಾಗ “ರಈಸ್, ಏನೆಂದು ನೀವು  ಪ್ರಾರ್ಥಿಸುತ್ತೀರಿ?” ಎಂದು ಕೇಳಿದ.

ಆತನ ಉತ್ತರವೂ ಸ್ವಾರಸ್ಯಕರವಾಗಿತ್ತು.
ಪ್ರಾರ್ಥಿಸದೇ ಇರುವ ಒಂದು ವಿಚಾರದ ಬಗ್ಗೆ ನಾನು ಹೇಳಲೇ? ನನ್ನ ಈ ರೋಗವನ್ನು ಗುಣಪಡಿಸು ಎಂದು ಈ ತನಕ  ನಾನು ಪ್ರಾರ್ಥಿಸಿಲ್ಲ. ಯಾಕೆಂದರೆ ನನಗೆ ಇದು ಸಾಕು?
ಅತೀ ಕಡಿಮೆ ಭಾಗದಲ್ಲಿ ಮಾತ್ರ ಆತನ ದೇಹದಲ್ಲಿ ಚಲನೆಯಿದೆ. ತುಟಿ, ಕಣ್ಣು, ಕಿವಿ ಮಾತ್ರ ಚಲಿಸುತ್ತದೆ. ಸ್ವಲ್ಪ ನೋಡುತ್ತಾ ಅದಕ್ಕಿಂತ ತುಸು ಹೆಚ್ಚು ಆಲಿಸುತ್ತಾ ಸ್ವಲ್ಪ ಮಾತ್ರ ಹೇಳಿ ಒಂದು ಆಯುಸ್ಸಿಗೆ ಅರ್ಥ ಕೊಡುವುದು ಹೇಗೆಂಬುದನ್ನು ಆತ  ತೋರಿಸಿಕೊಡುತ್ತಾನೆ. ಯಾವ ಬಿಸಿಲಿನಲ್ಲಿಯೂ ಚಿಗುರಿದ ಹಸುರೆಲೆ ಇರುವ ಮರದಂತೆ.

ಪುಟ್ಟ ಮಕ್ಕಳ ಬಗ್ಗೆ ಓದಿದ ಒಂದು ವಿಚಾರವಿದೆ. ಸುತ್ತಮುತ್ತಲಿನಿಂದ ಕೇಳುವ ಪ್ರತಿಯೊಂದು ಶಬ್ದಗಳೂ ಅವರನ್ನು  ಸಂತೋಷಭರಿತರನ್ನಾಗಿ ಮಾಡಲು ಇರುವುದೆಂದು ಭಾವಿಸುತ್ತಾರೆ. ನಾವು ಅಂತಹ ಮಕ್ಕಳಾಗಿದ್ದೇವೆ. ಇವೆಲ್ಲಾ ನಮಗೆ  ಇರುವಂತಹದ್ದಲ್ಲ ಎಂಬುದನ್ನು ನಿಧಾನವಾಗಿ ಅರಿಯತೊಡಗಿದೆವು. ಅಥವಾ ನಾವು ಬೆಳೆಯ ತೊಡಗಿದೆವು.  ಬೆಳವಣಿಗೆಯ ಮಧ್ಯೆ ಬೆಲೆ ಬಾಳುವಂತಹ ಹಲವನ್ನು ಮರೆತೆವು. ಶರೀರವು ಸಂಪೂರ್ಣವಾಗಿ ಚಲಿಸಿದರೂ ಹೆಚ್ಚಿನವರು ಸಂತಸದ ಕೋಣೆಗಳನ್ನು ಮುಚ್ಚಿ ಬಿಟ್ಟರು. ಜನರ ಕೈಗೆ ಮುಚ್ಚಲ್ಪಟ್ಟ ಕೋಣೆಗಳ ಬೀಗದ ಕೈಯನ್ನು ನೀಡಿರುವುದೇ ಸಮಸ್ಯೆಯಾಗಿದೆ. ಅವರು ಅದನ್ನು ಉದಾಸೀನತೆಯಿಂದ ಕಳೆದುಬಿಟ್ಟರು. ಬಳಿಕ ನಿರಂತರ ದುಃಖಗಳಲ್ಲಿ ಮುಳುಗಿದಾಗ ನಮ್ಮ ಪ್ರಯಾಣದ ವೇಗವು ಕಡಿಮೆಯಾಗುತ್ತಾ ಬಂತು.

ಅನುಭವಗಳನ್ನು ಸ್ವೀಕರಿಸುವುದು ಹೇಗೆಂಬುದು ನಮ್ಮ ನಿರ್ಧಾರವಾಗಿದೆ. ದುಃಖ, ಒತ್ತಡಗಳು ನಿಜವಾದ ಪಾಠ ಶಾಲೆ ಎಂದು ಅಲ್ಲಿ ಕಲಿತವರಿಗೆ ತಿಳಿದಿದೆ. ಆ ಪಾಠಗಳು ನಮ್ಮನ್ನು ಕುಸಿಯದಂತೆ ನಿಲ್ಲಿಸಿದೆ. ಈಗ ಸಾಗಿ ಬರುತ್ತಿರುವ  ದುಃಖಗಳು ಮುಂದೆ ಬರಲಿರುವ ಯಶಸ್ಸಿನ ಗುರಿ ಅಲ್ಲದೆ ಇನ್ನೇನು? ಅದು ಗತಿಸಿದ ಕಾಲವು ಕಲಿಸಿದ ಪಾಠವಲ್ಲವೇ?

ಖಲೀಫ ಅಲಿಯವರು(ರ) ಹೇಳಿದಂತೆ “ಗಾಳಿ ಬೀಸುವುದು ಎಲೆಗಳು ನೃತ್ಯವಾಡಲಿಕ್ಕಲ್ಲ, ಬೇರುಗಳನ್ನು ಬಲವಾಗಿಸಲು.”
“ಜೀವನವು ನಮಗೆಲ್ಲರಿಗೂ ಅಷ್ಟೊಂದು ಸುಲಭವಾಗಿರಬೇಕೆಂದಿಲ್ಲ. ಅದರಲ್ಲೇನಿದೆ ಸಮಸ್ಯೆ? ಜಿಗುಪ್ಸೆ ಹುಟ್ಟದಿದ್ದರೆ ಸಾಕು. ಆತ್ಮಸ್ಥೈರ್ಯ ಕಳೆದುಕೊಳ್ಳದಿದ್ದರಷ್ಟೇ ಸಾಕು. ಯಾವುದೋ ಒಂದು ಕಾರ್ಯಸಾಧನೆಗೆ ಬಂದವರೆಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು. ಅದನ್ನು ಸಾಧಿಸಿಯೇ ತೀರಬೇಕು ಎಂಬ ನಿರ್ಧಾರ ತಾಳಬೇಕು” ಎಂದು ಹೇಳಿದ ಮಹಿಳೆಯೊಬ್ಬರಿದ್ದಾರೆ.

ಅವರ ಕುರಿತು ನಿಮಗೆ ಗೊತ್ತೇ?
ಶಿಕ್ಷಣ ಗಳಿಸಬೇಕೆಂಬ ಆಸೆಯಿಂದ ಉತ್ಸಾಹದಿಂದ ಹಸುಗೂಸಿನೊಂದಿಗೆ ಕಾಲೇಜಿನ ಮೆಟ್ಟಲು ತುಳಿದವಳು. ಹಾಗೆ ಕಲಿತು  ಪ್ರಥಮ ರ‍್ಯಾಂಕ್ ಗಳಿಸಿದಳು. ಜಗತ್ತಿಗೆ ಅಗತ್ಯವಾದ ಸಂಶೋಧನೆಗಳಿಗೆ ಪತಿಯ ಜೊತೆ ಶ್ರಮಿಸಿದಳು. ಅದು ಯಶಸ್ವಿಯಾಯಿತು. ಹೀಗೆ ಅವಳು ನೋಬೆಲ್ ಪ್ರಶಸ್ತಿ ಪಡೆದ ಮೊತ್ತ ಮೊದಲ ಮಹಿಳೆ ಎಂಬ ಹಿರಿಮೆ-ಗರಿಮೆ ಆಕೆಗೆ ಸಿದ್ಧಿಸಿತು. ಪತಿಯ ಮರಣದ ಬಳಿಕ ಆಕೆ ತನ್ನ ಪಯಣವನ್ನು ಮುಕ್ತಾಯಗೊಳಿಸಲಿಲ್ಲ. ಮತ್ತು ಪ್ರಯತ್ನ ಮುಂದುವರಿಸಿದಳು. ಎಂಟು ವರ್ಷಗಳ ಬಳಿಕ ಪುನಃ ನೋಬೆಲ್ ಪುರಸ್ಕಾರ ಪಡೆದಳು. ಮನ್ಯ ಎಂದೇ ಕರೆಯಲ್ಪಡುವ ಮೇರಿ ಕ್ಯೂರಿ ಎಂಬವರೇ ಆ ಮಹಿಳೆ. ಇನ್ನು ಆ ಮಹಿಳೆ ಮೇಲೆ ಹೇಳಿದ ಆ ಮಾತುಗಳನ್ನು ಒಮ್ಮೆ ಓದಿ ನೋಡಿರಿ.  ದುಃಖಗಳು ಸಮೀಪದಲ್ಲಿಯೇ ಬಂದು ಸುತ್ತಾಡುತ್ತಿದ್ದು ಗದ್ದಲವೆಬ್ಬಿಸುತ್ತಿವೆ. ತತ್ಕಾಲಕ್ಕೆ ಅದನ್ನು ಬದಿಗೆ ತಳ್ಳಿ ಮೆಲ್ಲನೆ ನಮ್ಮ  ಪ್ರಯಾಣವನ್ನು ಮುಂದುವರಿಸಬೇಕು.