ಕಲ್ಲಿಕೋಟೆ,ಮೇ 3: ಮುಂದಿನ ನಾಲ್ಕು ವರ್ಷಗಳಿಗೆ ಜಮಾಅತೇ ಇಸ್ಲಾಮೀ ಹಿಂದ್ ಕೇರಳ ಘಟಕಾಧ್ಯಕ್ಷರಾಗಿ ಪ್ರಮುಖ ಇಸ್ಲಾಮೀಕ್ ವಿದ್ವಾಂಸ ಮತ್ತು ಭಾಷಣಗಾರರಾದ ಎಂಐ ಅಬ್ದುಲ್ ಅಝೀಝ್ ಪುನರಾಯ್ಕೆಯಾಗಿದ್ದಾರೆ. ಕೇರಳದ ಸದಸ್ಯರು ಮತ್ತ ರಾಜ್ಯ ಸಮಾಲೋಚನಾ ಸಮಿತಿಯ ಅಭಿಪ್ರಾಯದ ಬಳಿಕ ಜಮಾಅತ್ ಅಖಿಲ ಭಾರತ ಅಧ್ಯಕ್ಷರಾದ ಸಅದತುಲ್ಲ ಹುಸೈನಿಯವರು ಎಂಐ ಅಬ್ದುಲ್ ಅಝೀಝ್ರ ಪುನರಾಯ್ಕೆಯನ್ನು ಪ್ರಕಟಿಸಿದರು.
ಕಳೆದ ಅವಧಿಯಲ್ಲಿ ಅವರು ಅಧ್ಯಕ್ಷರಾಗಿದ್ದರು. ಇಪ್ಪತ್ತೆರಡು ವರ್ಷಗಳಿಂದ ಸಂಘಟನೆಯ ಕೇಂದ್ರ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದಾರೆ. ರಾಜ್ಯ ಉಪಾಧ್ಯಕ್ಷ, ವಲಯ ನಾಸಿಂ, ಜಿಲ್ಲಾಧ್ಯಕ್ಷ ಸ್ಥಾನಗಳನ್ನು ಈ ಹಿಂದೆ ನಿರ್ವಹಿಸಿದ್ದಾರೆ. ವಿದ್ಯಾರ್ಥಿ ಆಂದೋಲನದ ಮೂಲಕ ಸಂಘಟನಾ ಕ್ಷೇತ್ರಕ್ಕೆ ಬಂದ ಅವರು ಎಸ್ಐಒ ರಾಜ್ಯ ಅಧ್ಯಕ್ಷರು, ಕೇಂದ್ರ ಸಲಹಾ ಸಮಿತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಎಡಕ್ಕರ ಸರಕಾರಿ ಹೈಸ್ಕೂಲ್, ತಿರೂರ್ಕ್ಕಾಡ್ ಇಲಾಹಿಯ ಕಾಲೇಜ್ಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.












