ಘರ್ಷಣೆ: ರಾಜ್ಯ ತೊರೆದ ಮಣಿಪುರ ರಾಜ್ಯಪಾಲ

0
184

ಸನ್ಮಾರ್ಗ ವಾರ್ತೆ

ಇಂಫಾಲ, ಸೆ.12: ರಾಜಭವನಕ್ಕೆ ಮಾರ್ಚ್ ಹೊರಟ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘಷಣೆ ನಡೆದ ಬೆನ್ನಿಗೆ ಮಣಿಪುರದ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮಣಿಪುರದಿಂದ ಅಸ್ಸಾಮ್‍ಗೆ ತೆರಳಿದರು. ಅಸ್ಸಾಂ ರಾಜ್ಯಪಾಲರಾಗಿರುವ ಅವರಿಗೆ ಮಣಿಪುರದ ಹೆಚ್ಚುವರಿ ಹೊಣೆ ವಹಿಸಲಾಗಿತ್ತು. ಬುಧವರ ಬೆಳಗ್ಗೆ 10 ಗಂಟೆಗೆ ಅವರು ಅಸ್ಸಾಮಿಗೆ ಹೋದರು.

ಘರ್ಷಣೆಯ ಹಿನ್ನೆಲೆಯಲ್ಲಿ ಮಣಿಪುರ ವಿಶ್ವವಿದ್ಯಾನಿಲಯ ಪದವಿ, ಸ್ನಾತಕ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮಂಗಳವಾರ ರಾಜ್‍ ಭವನಕ್ಕೆ ನಡೆದ ವಿದ್ಯಾರ್ಥಿ ಮಾರ್ಚ್‍ನಲ್ಲಿ ನಡೆದ ಘರ್ಷಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಸುರಕ್ಷಾ ಅಧಿಕಾರಿಗಳ ಸಹಿತ 55 ಮಂದಿ ಗಾಯಗೊಂಡಿದ್ದರು.

ರಾಜ್‍ಭವನಕ್ಕೆ ನುಗ್ಗಲು ಪ್ರಯತ್ನಿಸಿದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್ ಸಿಡಿಸಿದರು. ಕಾನೂನು ವ್ಯವಸ್ಥೆ ನಿರ್ವಹಿಸುವುದರಲ್ಲಿ ವಿಫಲರಾದ ರಾಜ್ಯದ ಡಿಜಿಪಿ, ಸರಕಾರದ ಸುರಕ್ಷಾ ಸಲಹೆಗಾರರನ್ನು ಬದಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಘರ್ಷಣೆಯ ನಂತರ ಮಂಗಳವಾರ ರಾತ್ರೆ ಹನ್ನೊಂದು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದರು.
ಬುಧವಾರ ಇಂಫಾಲದಲ್ಲಿ ಹೊಸ ಪ್ರತಿಭಟನೆ ಮತ್ತು ಘರ್ಷಣೆಗಳ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದರು.

ಇಂಟರ್ನೆಟ್ ಸೇವೆ ನಿಲ್ಲಿಸಲಾಗಿದೆ. ಕಾನೂನು ವ್ಯವಸ್ಥೆ ಪುನರ್‍ರೂಪಿಸಲು ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ. ರಾಜಧಾನಿಯ ಪ್ರಧಾನ ಸಂಸ್ಥೆಗಳ ಹತ್ತಿರದಲ್ಲಿ ಪೊಲೀಸರು ಬ್ಯಾರಿಕೇಡ್ ನಿಲ್ಲಿಸಿದ್ದಾರೆ.