ಪ್ರವಾದಿ(ಸ) ಮತ್ತು ಚಾರಿತ್ರ್ಯ

0
373

ಸನ್ಮಾರ್ಗ ವಾರ್ತೆ

✍️ ಸಯ್ಯದ್ ಅಬುಲ್ ಆಲಾ ಮೌದೂದಿ

ಅಲ್ಲಾಹನ ಸ್ಮರಣೆಯ ಬಳಿಕ ಅತ್ಯಧಿಕ ಅನುಗ್ರಹ ಲಭಿಸುವ ಸ್ಮರಣೆ ಪ್ರವಾದಿಯವರ(ಸ) ಸ್ಮರಣೆ ಎಂಬುದು ವಾಸ್ತವಿಕತೆಯಾಗಿದೆ. ದೇವ ಸಂದೇಶವಾಹಕರ ಪ್ರವಾದಿತ್ವಕ್ಕೆ ಪವಿತ್ರ ಕುರ್‌ಆನ್ ಮುಂದಿರಿಸಿದ ಕೆಲವು ಉದಾಹರಣೆಗಳನ್ನು ಸಂಕ್ಷಿಪ್ತವಾಗಿ ವಿವರಿಸಲು ನಾನು ಬಯಸುತ್ತೇನೆ. ಇವುಗಳಲ್ಲಿ ಅತ್ಯಂತ ಮುಖ್ಯ ಪುರಾವೆಗಳಲ್ಲಿ ಪವಿತ್ರ ಕುರ್‌ಆನ್ ಉಲ್ಲೇಖಿಸುವ ದೊಡ್ಡ ಪುರಾವೆ ಸಂದೇಶವಾಹಕರ ಉತ್ತಮ ಗುಣವಾಗಿದೆ.

ವಇನ್ನಕ ಲಅಲಾ ಕುಲ್ಕಿನ್ ಅಲೀಮ್ (ನಿಶ್ಚಯವಾಗಿಯೂ ನೀವು ಅತ್ಯುತ್ತಮ ಸ್ವಭಾವದವರಾಗಿರುವಿರಿ) ಪ್ರವಾದಿಯವರ (ಸ) ಪ್ರವಾದಿತ್ವ ವನ್ನು ತಿರಸ್ಕರಿಸಿದವರ ಮುಂದೆ ಅಲ್ಲಾಹನು ಪ್ರವಾದಿವರ್ಯರ(ಸ) ಗುಣಸ್ವಭಾವವನ್ನು ಪ್ರಸ್ತುತ ಪಡಿಸುತ್ತಾನೆ. ಇಂತಹ ಗುಣಗಳನ್ನು ಹೊಂದಿರುವ ಮನುಷ್ಯನನ್ನು ನೀವು ಹೇಗೆ ತಿರಸ್ಕರಿಸುವಿರಿ ಎಂಬುದು ಕುರ್‌ಆನ್ ಪ್ರಶ್ನೆ.

ಎಲ್ಲಾ ಪೂರ್ವಾಗ್ರಹವನ್ನು ಬದಿಗಿಟ್ಟು ಯಾರಾದರೂ ಆ ಪವಿತ್ರವಾದ ಬದುಕನ್ನು ನೋಡಿದರೆ ಅದು ಪ್ರವಾದಿಯದ್ದೇ(ಸ) ಬದುಕು ಎಂಬುದಕ್ಕೆ ಆತನ ಹೃದಯ ಸಾಕ್ಷ್ಯ ನುಡಿಯುತ್ತದೆ.

ಸ್ವಂತದವರ ಸಾಕ್ಷ್ಯಗಳು
ಪ್ರವಾದಿ(ಸ)ರ ಪವಿತ್ರ ಜೀವನವನ್ನು ಎರಡು ಹಂತಗಳಾಗಿ ವಿಂಗಡಿಸಬಹುದು. ಮೊದಲ ಹಂತವು ಪ್ರವಾದಿತ್ವದ ಮೊದಲ ನಲ್ವತ್ತು ವರ್ಷದ ಜೀವನವಾಗಿದೆ. ಎರಡನೆಯದು, ಪ್ರವಾದಿತ್ವದ ಬಳಿಕದ 23 ವರ್ಷದ ಜೀವನ. ಪ್ರವಾದಿತ್ವದ ಬಳಿಕ ಅವರು 13 ವರ್ಷ ಮಕ್ಕಾದಲ್ಲೂ 10 ವರ್ಷ ಮದೀನಾದಲ್ಲೂ ಬದುಕು ಸಾಗಿಸಿದರು. ಪ್ರವಾದಿತ್ವ ಲಭಿಸುವುದಕ್ಕಿಂತ ಮೊದಲಿನ 40 ವರ್ಷಗಳ ವಿವರಗಳಿಗೆ ಹೋಗದೆ ಒಂದೇ ವಿಷಯದಲ್ಲಿ ಗಮನ ಕೇಂದ್ರೀಕರಿಸಿದರೆ ಸಾಕು. ಇತರೆಲ್ಲರಿಗಿಂತಲೂ ಮೊದಲು ಪ್ರವಾದಿಯವರನ್ನು(ಸ) ನೋಡುವ ಅವಕಾಶ ಲಭಿಸಿದ ವ್ಯಕ್ತಿಗಳೇ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ್ದಾರೆಂದು ನಮಗೆ ತಿಳಿದು ಬರುತ್ತದೆ. ಹಝ್ರತ್ ಖದೀಜ, ಹಝ್ರತ್ ಅಬೂಬಕರ್, ಹಝ್ರತ್ ಅಲಿ, ಹಝ್ರತ್ ಝೈದ್ ಬಿನ್ ಹಾರಿಸ್ ಎಂಬವರೇ ಇದಕ್ಕೆ ಉದಾಹರಣೆ.

ಹಝ್ರತ್ ಅಲಿ(ರ)ರಿಗೆ ಅಂದು ಕೇವಲ 8 ವರ್ಷದ ಬಾಲಕರಾಗಿದ್ದನೆಂದು ಇಸ್ಲಾಮ್ ಅನ್ನು ವಿರೋಧಿಸುವವರಿಗೆ ಹೇಳಬಹುದು. ಅಲೀ(ರ)ರು ಪ್ರವಾದಿವರ್ಯರೇ(ಸ) ಪೋಷಿಸಿ ಬೆಳೆಸಿದ ಹುಡುಗ. ಆದ್ದರಿಂದ ಅಲಿ ಪೋಷಕರ ಒತ್ತಡಕ್ಕೆ ಮಣಿದು ಇಸ್ಲಾಮ್ ಸ್ವೀಕರಿಸಿದ್ದೆಂದು ಹೇಳಲು ಸಾಧ್ಯವಿತ್ತು. ಆದರೆ ಹಝ್ರತ್ ಖದೀಜಾರ ಸ್ಥಿತಿ ಹಾಗಿರಲಿಲ್ಲ. ಅವರಿಗೆ ಆಗ 55 ವರ್ಷಗಳು. 15 ವರ್ಷಗಳಿಂದ ಅವರು ಪ್ರವಾದಿಯ ಪತ್ನಿಯಾಗಿದ್ದರು. ಓರ್ವ ಪತಿಯ ಸ್ವಭಾವ ಸಂಪ್ರದಾಯ, ಗುಣಲಕ್ಷಣಗಳನ್ನು ಪತ್ನಿಗಿಂತ ಹೆಚ್ಚಾಗಿ ಯಾರಿಗೆ ತಿಳಿದಿರಲು ಸಾಧ್ಯ. ಹ. ಖದೀಜಾ(ರ)ರು ಕುರೈಶಿ ಗೋತ್ರದ ಸದ್ಗುಣ ಸಂಪನ್ನೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. 15 ವರ್ಷಗಳ ಕಾಲ ಪ್ರವಾದಿಯೊಂದಿಗೆ ಕಳೆದ ಬಳಿಕ, ಪ್ರವಾದಿವರ್ಯರು(ಸ) ಅವರಲ್ಲಿ ನನಗೆ ದೇವಸಂದೇಶ ಬಂದಿದೆಯೆಂದು ಹೇಳಿದಾಗ, ಅವರು ತಿಳಿಸಿದ ಅಭಿಪ್ರಾಯಗಳಿಂದಲೇ ಪ್ರವಾದಿಯವರ(ಸ) ಸ್ವಭಾವ ವೈಶಿಷ್ಟ್ಯ ಗಮನಿಸಬಹುದು. ಒಂದು ನಿಮಿಷವೂ ಯೋಚಿಸದೆ ಖಂಡಿತವಾಗಿಯೂ ಅಲ್ಲಾಹನು ನಿಮ್ಮನ್ನು ಪ್ರವಾದಿಯಾಗಿ ಆರಿಸಿದ್ದಾನೆ ಎಂದು ಹೇಳಿ ಖದೀಜಾ ಅದನ್ನು ಅಂಗೀಕರಿಸಿದರು.

ಇಂತಹ ಉತ್ತಮ ಚಾರಿತ್ರ್ಯವಂತ ವ್ಯಕ್ತಿಯು ತನಗೆ ಪ್ರವಾದಿತ್ವ ಲಭಿಸಿದೆ ಎಂದು ಹೇಳಿದಾಗ ಅವರು ಹೇಳಿದ್ದು ಸಂಪೂರ್ಣ ಸತ್ಯವೆಂದು ಅವರಿಗೆ ಅನಿಸಿದ್ದು ಸ್ವಾಭಾವಿಕವೇ ಆಗಿದೆ.

ಎರಡನೇಯ ವ್ಯಕ್ತಿ ಪ್ರವಾದಿಯವರ(ಸ) ಸಮವಯಸ್ಕರಾದ ಅಬೂಬಕರ್. ಅವರು ವಯಸ್ಸಿನಲ್ಲಿ ಪ್ರವಾದಿಯವರಿಗಿಂತ 2 ವರ್ಷ ಕಿರಿಯರಾಗಿದ್ದರು. ಪ್ರವಾದಿವರ್ಯರ(ಸ) ಹಳೆಯ ಸ್ನೇಹಿತ. ಪ್ರೀತಿಯ ಒಡನಾಡಿ. ಗೆಳೆಯನಿಗಿಂತ ಗೆಳೆಯನನ್ನು ಅರಿಯುವವರು ಯಾರಿದ್ದಾರೆ. ಗೆಳೆಯನಿಗೆ ತನ್ನ ಮಿತ್ರನ ಒಳ್ಳೆಯ ಗುಣಗಳು ಹಾಗೂ ಕೆಟ್ಟ ಗುಣಗಳನ್ನು ಎಲ್ಲಾ ತಿಳಿಯಲು ಸಾಧ್ಯವಾಗುತ್ತದೆ. ತನ್ನನ್ನು ಅಲ್ಲಾಹನು ಪ್ರವಾದಿಯಾಗಿ ನೇಮಿಸಿದ್ದಾನೆ ಎಂದು ಪ್ರವಾದಿವರ್ಯರು(ಸ) ಅಬೂಬಕರ್‌ರೊಂದಿಗೆ ಹೇಳಿದಾಗ, ತಾವು ನಿಜವಾಗಿಯೂ ಅಲ್ಲಾಹನ ಪ್ರವಾದಿಯಾಗಿದ್ದೀರಿ ಎಂದು ನಿಮಿಷವೂ ಯೋಚಿಸಿ ನಿಲ್ಲದೆ ಅದನ್ನು ಒಪ್ಪಿಕೊಳ್ಳುತ್ತಾರೆ. ಅವರ ಮನದಲ್ಲಿ ಆ ಕುರಿತು ಸ್ವಲ್ಪವೂ ಸಂಶಯ ಉಂಟಾಗಲಿಲ್ಲ.

ಪ್ರವಾದಿತ್ವಕ್ಕಿಂತ ಮೊದಲು ಅವರ ಜೀವನ ಅಷ್ಟೊಂದು ಪವಿತ್ರವಾಗಿತ್ತು ಎಂದರ್ಥ. ಪ್ರವಾದಿಯವರು(ಸ) ಪ್ರವಾದಿತ್ವದಿಂದ ಅನುಗ್ರಹೀತರಾಗಿದ್ದಾರೆಂದು ಅಬೂಬಕರ್‌ರಂತಹ ಓರ್ವರಿಗೆ ಕೂಡಲೇ ಮನವರಿಕೆಯಾಗುವಂತಹ ಉದಾತ್ತ ವ್ಯಕ್ತಿತ್ವ ಪ್ರವಾದಿಯವರದ್ದಾಗಿತ್ತು.

ಹಝ್ರತ್ ಝೈದ್ ಇಬ್ನು ಹಾರಿಸ್ ಮೂರನೇಯ ವ್ಯಕ್ತಿ. ಅವರು ಪ್ರಬುದ್ಧ ವಯಸ್ಸಿನ ವ್ಯಕ್ತಿಯಾಗಿದ್ದರು. ಅವರು ಹಲವು ಕಾಲದಿಂದ ಪ್ರವಾದಿಯವರ(ಸ) ನಿವಾಸದಲ್ಲಿ ಸೇವಕರಾಗಿದ್ದರು. ಒಂದು ಮನೆಯ ಸೇವಕನಿಗೆ ಯಜಮಾನನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಯಾವುದನ್ನೂ ಆತನಿಂದ ಅಡಗಿಸಿಡಲು ಸಾಧ್ಯವಿಲ್ಲ. ಆದ್ದರಿಂದಲೇ ಹಝ್ರತ್ ಝೈದ್‌ರು ಪ್ರವಾದಿಯವರು(ಸ) ತನ್ನ ಪ್ರವಾದಿತ್ವವನ್ನು ಘೋಷಿಸದ ತಕ್ಷಣವೇ ಲವಲೇಶವೂ ಸಂಶಯವಿಲ್ಲದೆ ವಿಶ್ವಾಸವಿರಿಸಿದರು. ಅಲ್ಲಾಹನು ಪ್ರವಾದಿಯವರನ್ನು ಪ್ರವಾದಿಯಾಗಿ ನೇಮಿಸಿದ್ದರೆ ಅವರು ಅದಕ್ಕೆ ಅರ್ಹರು ಎಂಬ ಕಾರಣದಿಂದಲೇ ಝೈದ್‌ರು ಇಸ್ಲಾಮ್ ಸ್ವೀಕರಿಸಿದರು.

ಶತ್ರುಗಳ ಸಾಕ್ಷ್ಯ
ಪ್ರವಾದಿವರ್ಯರು(ಸ) ಬದ್ಧ ವೈರಿಗಳ ಸಾಕ್ಷ್ಯವನ್ನು ಪಡೆಯಲು ಸಾಧ್ಯವಾಯಿತು ಎಂಬುದು “ಆ ಚಾರಿತ್ರ್ಯದ ನಿಜಾವಸ್ಥೆಯನ್ನು ಸಾಬೀತುಪಡಿಸುತ್ತದೆ. ಪ್ರವಾದಿಯವರು(ಸ) ಪ್ರವಾದಿತ್ವ ಘೋಷಿಸಿದಾಗ ಕುರೈಶಿ ನಾಯಕರಲ್ಲಿ ಅವರ ಬದ್ಧವೈರಿಗಳು ಕೂಡಾ ನೀವು ಹೇಗೆ ಪ್ರವಾದಿತ್ವವನ್ನು ವಾದಿಸುತ್ತೀರಿ” ಎಂದು ಸಾರ್ವಜನಿಕವಾಗಿ ಯಾರೂ ಕೇಳಲಿಲ್ಲ. “ನಾನು ಹೇಗೆ ಇಷ್ಟು ವರ್ಷ ನಿಮ್ಮ ನಡುವೆ ಜೀವಿಸಿದ್ದೆಂದು ನಿಮಗೆ ತಿಳಿಯದೇ” ಎಂದು ಪ್ರವಾದಿ ಕೇಳಿರಬೇಕಾದರೆ ಅದಕ್ಕೆ ಕಾರಣ ಅತ್ಯುನ್ನತ ಹಾಗೂ ಅತೀ ಪವಿತ್ರವಾದ ಅವರ ಜೀವನ ಮಾತ್ರವಾಗಿತ್ತು. ಕವಿ, ಮಾಟಗಾರ, ಜ್ಯೋತಿಷಿ ಎಂದೆಲ್ಲಾ ಅಪಹಾಸ್ಯ ಹಾಗೂ ಆರೋಪಗಳನ್ನು ಶತ್ರುಗಳು ಪ್ರವಾದಿಯವರ(ಸ) ವಿರುದ್ಧ ಮಾಡಿದ್ದಾರೆ. ಆದರೆ ಓರ್ವ ಪರಮ ಶತ್ರು ಕೂಡಾ ಪ್ರವಾದಿಯವರ(ಸ) ನೈತಿಕತೆ ಹಾಗೂ ಚಾರಿತ್ರ್ಯವನ್ನು ಪ್ರಶ್ನಿಸಲಿಲ್ಲ.

ಕಾಲ ಸಾಕ್ಷ್ಯ
ಇನ್ನೊಂದು ವಿಚಾರ ಚಿಂತನೆಗೆ ಅರ್ಹವಾಗಿದೆ. ಪ್ರವಾದಿತ್ವದ ಮೊದಲಿನ 40 ವರ್ಷ ನಿಜವಾಗಿಯೂ ಪವಿತ್ರವೇ ಆಗಿತ್ತು. ಪ್ರವಾದಿತ್ವ ಲಭಿಸುವ ಒಂದು ದಿನ ಮೊದಲು ಕೂಡಾ ಪ್ರವಾದಿ ವರ್ಯರು(ಸ) ಮೊದಲೇ ಪ್ರವಾದಿಯಾಗಲು ಸಿದ್ಧತೆ ನಡೆಸುತ್ತಿದ್ದರು ಎಂದು ಯಾರಿಗೂ ಹೇಳಲು ಸಾಧ್ಯವಿರಲಿಲ್ಲ. ಒಂದು ದಿನ ಮೊದಲು ಕೂಡಾ ಪ್ರವಾದಿಯವರಿಗಿಂತ ಯಾರೂ ಆ ವಿಷಯ ಕೇಳಿರಲಿಲ್ಲ. ಇವರು ಧಾರ್ಮಿಕವಾದದ ಅವಕಾಶದೊಂದಿಗೆ ಬರಲಿದ್ದಾರೆ ಎಂದು ಯಾರಾದರೂ ಯೋಚಿಸುವಂತಹ ಕಾರ್ಯಗಳು ಪ್ರವಾದಿಯವರಲ್ಲಿ(ಸ) ಕಂಡಿರಲಿಲ್ಲ. ಅಂತಹ ಸೂಚನೆ ಕಂಡಿದ್ದರೆ ನೀವು ಇದಕ್ಕೆ ಮೊದಲೇ ಸಿದ್ಧತೆ ನಡೆಸುತ್ತಿದ್ದೀರಿ ಎಂದು ನಮಗೆ ತಿಳಿದಿತ್ತು ಎಂದು ಅವರು ಹೇಳುತ್ತಿದ್ದರು.

ಪರಿಸರದ ಸಾಕ್ಷ್ಯ
ಇದರ ಬಳಿಕ ಪ್ರವಾದಿವರ್ಯರು(ಸ) ಮಕ್ಕಾದಲ್ಲಿ ಕಳೆದ ಹದಿಮೂರು ವರ್ಷಗಳಲ್ಲಿ ಪ್ರವಾದಿಯವರಲ್ಲಿ(ಸ) ವಿಶ್ವಾಸವಿರಿಸಿದವರ ಕುರಿತು ಸ್ವಲ್ಪ ಯೋಚಿಸಿ. ಅವರು ಯಾರಾಗಿದ್ದರು? ತನ್ನ ಹುಟ್ಟೂರಿನ ಸ್ಥಳೀಯ ಗೋತ್ರದ ಕೆಲವು ವ್ಯಕ್ತಿಗಳಲ್ಲಿ ಕೆಲವೇ ಮಂದಿಯಿದ್ದರು. ಇನ್ನು ಪ್ರವಾದಿತ್ವವನ್ನು ನಿರಾಕರಿಸಿದ ಜನರೂ ಇದ್ದಾರೆ. ನಲ್ವತ್ತು ವರ್ಷ ಪ್ರವಾದಿಯವರು(ಸ) ಯಾರೊಂದಿಗೆ ಬದುಕಿದರೋ ಅಂತವರೇ ಪ್ರವಾದಿಯ ಮೇಲೆ ವಿಶ್ವಾಸವಿರಿಸಿದರು. ಪ್ರವಾದಿಯವರ(ಸ) ಜೀವನದ ಯಾವುದೇ ವಿಷಯವೂ ಅವರಿಂದ ಮರೆಯಾಗಿರಲಿಲ್ಲ. ಓರ್ವನಿಗೆ ತನ್ನ ನಾಡಿನ ಹೊರಗೆ ತನ್ನ ಮಹತ್ವವನ್ನು ಹೇಳಿಕೊಂಡು ಮೆರೆಯಬಹುದು. ಅಂತಹವರನ್ನು ಅಲ್ಲಿಯವರು ನಂಬಲೂಬಹುದು. ಆದರೆ ಶೈಶವದಿಂದ ಹದಿಹರೆಯದ ವರೆಗೆ, ಯೌವನದಿಂದ ಮಧ್ಯ ವಯಸ್ಸಿನವರೆಗೆ ತನ್ನದೇ ಊರಿನಲ್ಲಿ ಬೆಳೆದ ಓರ್ವನಿಗೆ ಸಂಬಂಧಿಸಿ ಆತನ ಪವಿತ್ರ ಜೀವನಕ್ಕೆ ನಿಜವಾದ ಸಾಕ್ಷಿಗಳಾಗುವವರೆಗೆ ಆ ವ್ಯಕ್ತಿಯು ಪ್ರವಾದಿಯೆಂದು ಹೇಳಲು ಸಾಧ್ಯವಾಗುವುದಿಲ್ಲ.

ಪ್ರವಾದಿಯವರಲ್ಲಿ(ಸ) ವಿಶ್ವಾಸವಿರಿಸಿದವರು ಅವರ ಚಾರಿತ್ರ್ವನ್ನು ತಿಳಿದವರಾಗಿದ್ದರು. ಆದ್ದರಿಂದಲೇ ಅವರು ಪ್ರವಾದಿತ್ವವನ್ನು ಸತ್ಯ ಸಂಗತಿಯೆಂದು ದೃಢವಾಗಿ ನಂಬಿದರು.

ಮಾತು ಮತ್ತು ಕೃತಿ
ಇನ್ನು ನೀವು ಪ್ರವಾದಿಯವರ(ಸ) ಕಾರ್ಯ ವೈಖರಿಯನ್ನು ನೋಡಿರಿ. ಇಸ್ಲಾಮಿನ ಶತ್ರುಗಳ ಕೆಡುಕುಗಳನ್ನು ಪ್ರವಾದಿವರ್ಯರು(ಸ) ವಿಮರ್ಶಿಸುತ್ತಿದ್ದರು. ಆ ಸಮಾಜದಲ್ಲಿದ್ದ ಪ್ರತಿಯೊಂದು ಕೊರತೆಯನ್ನು ಬೊಟ್ಟು ಮಾಡಿ, ಜನರನ್ನು ಒಳಿತನೆಡೆಗೆ ಆಹ್ವಾನಿಸುತ್ತಿದ್ದರು. ಆದರೆ ಪ್ರವಾದಿಯನ್ನು ವಿರೋಧಿಸಲು ಟೊಂಕ ಕಟ್ಟಿ ನಿಂತುಕೊಂಡವರು ಪ್ರವಾದಿಯವರೊಂದಿಗೆ ನೀನು ಈಗ ವಿರೋಧಿಸುತ್ತಿರುವ ಕೆಡುಕು ನಿನ್ನಲ್ಲೂ ಇದೆ ಎಂದು ಅಥವಾ ನೀನು ಉಪದೇಶಿಸುವ ಒಳಿತುಗಳು ನಿನ್ನ ಜೀವನದಲ್ಲಿ ಕಾಣುತ್ತಿಲ್ಲವಲ್ಲಾ ಎಂದು ಹೇಳಲು ಧೈರ್ಯ ತೋರಲಿಲ್ಲ ಎಂಬುದು ಒಂದು ವಾಸ್ತವಿಕತೆಯಾಗಿದೆ. ಪ್ರವಾದಿಯವರ(ಸ) ಉನ್ನತ ಚಾರಿತ್ರ್ಯವು ಶತ್ರುಗಳಲ್ಲಿ ಎಷ್ಟು ಪ್ರಭಾವ ಬೀರಿದೆಯೆಂಬುದಕ್ಕೆ ಹಲವಾರು ಘಟನೆಗಳಿವೆ. ಅದರಲ್ಲಿ ಒಂದನ್ನು ಮಾತ್ರ ಹೇಳ ಬಯಸುತ್ತೇನೆ. [ಮುಂದುವರಿಯುವುದು]