ಸನ್ಮಾರ್ಗ ವಾರ್ತೆ
ಸೌದಿ ಅರೇಬಿಯಾ ಸರ್ಕಾರವು ಅಜಯ್ ದೇವಗನ್ ನಟನೆಯ ‘ಸಿಂಘಮ್ ಎಗೇನ್’ ಮತ್ತು ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭುಲೈಯಾ 3’ ಚಿತ್ರಗಳನ್ನು ಬಿಡುಗಡೆ ಮಾಡಲು ನಿಷೇಧಿಸಿರುವ ವರದಿಗಳು ಬಂದಿವೆ.
ಪಿಂಕ್ವಿಲ್ಲಾ ಮೂಲದ ಪ್ರಕಾರ, ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಘಮ್ ಎಗೇನ್’ ಚಿತ್ರವು ರಾಮಾಯಣದ ಉಲ್ಲೇಖಗಳು ಹಾಗೂ ಹಿಂದೂ-ಮುಸ್ಲಿಂ ಸಂಘರ್ಷದ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೊಳಗಾಗಿದ್ದು, ಅದರ ವಿವಾದಾತ್ಮಕ ಧಾರ್ಮಿಕ ಕಾರಣಕ್ಕಾಗಿ ಸೌದಿ ಅರೆಬಿಯಾ ಸರ್ಕಾರವು ಈ ಚಿತ್ರ ಪ್ರದರ್ಶನಕ್ಕೆ ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಅನೀಸ್ ಬಾಜ್ಮೀ ನಿರ್ದೇಶನದ ‘ಭೂಲ್ ಭುಲೈಯಾ 3’ ಚಿತ್ರವು, ಅದರ ಕಥೆ ಮತ್ತು ಪಾತ್ರ ಚಿತ್ರಣಗಳಲ್ಲಿ ಸಲಿಂಗಕಾಮದ ಉಲ್ಲೇಖವಿರುವ ಕಾರಣ, ನಿಷೇಧಕ್ಕೆ ಒಳಗಾಗಿದೆ ಎಂದು ವರದಿಯಾಗಿದೆ.
ಈ ನಿಷೇಧದ ಕುರಿತು ಸೌದಿ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಎರಡೂ ಚಿತ್ರಗಳು ದೀಪಾವಳಿ ಹಬ್ಬದ ಅಂಗವಾಗಿ ನವೆಂಬರ್ 1 ರಂದು ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.












