ಅಲ್ಲಾಹನು ಪ್ರೀತಿಸುವವರ ಗುಣಗಳು

0
3445

ಸನ್ಮಾರ್ಗ ವಾರ್ತೆ

ಅಲ್ಲಾಹನು ನಮ್ಮನ್ನು ಪ್ರೀತಿಸಬೇಕಾದರೆ ಪವಿತ್ರ ಕುರ್ ಆನ್ ಮತ್ತು ಪ್ರವಾದಿಯವರ ಹದೀಸ್ ಗಳ ಆಧಾರದಲ್ಲಿ ತಮ್ಮ ಜೀವನದಲ್ಲಿ ಯಾವುದೆಲ್ಲಾ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಪ್ರತಿಯೊಬ್ಬ ಸತ್ಯವಿಶ್ವಾಸಿಯು ಸರಿಯಾಗಿ ಅರಿತಿರಬೇಕು.

ಅವನಿಗೆ ಮಾತ್ರ ಆರಾಧನೆ ಮಾಡಬೇಕು ಮತ್ತು ಅವನ ಪ್ರವಾದಿಯನ್ನು ಅನುಸರಿಸಬೇಕು. ಅವನು ಪ್ರೀತಿಸುವುದೆಲ್ಲವನ್ನು ನಾವು ಪ್ರೀತಿಸಬೇಕು ಮತ್ತು ಅವನು ನಿಷೇಧಿಸಿದವುಗಳಿಂದ ಸಂಪೂರ್ಣವಾಗಿ ದೂರವಿರುವುದು ಪ್ರಮುಖವಾಗಿದೆ. ಜೀವನದ ಪ್ರತಿಯೊಂದು ರಂಗಗಳಲ್ಲಿಯೂ ನಿಷ್ಕಳಂಕವಾದ ಮನಸ್ಸಿನಿಂದ ಅಲ್ಲಾಹನ ಆಜ್ಞೆಯನ್ನು ಅನುಸರಿಸುತ್ತಾ ಇಹಲೊಕದಲ್ಲಿ ಅವನ ಪ್ರೀತಿ ಮತ್ತು ಪರಲೊಕದಲ್ಲಿ ಸ್ವರ್ಗವನ್ನು ಗಳಿಸುವುದು ಒರ್ವ ಸತ್ಯವಿಶ್ವಾಸಿಯ ಜೀವನದ ಮುಖ್ಯ ಗುರಿಯಾಗಿರಬೇಕು. ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನು ಇಷ್ಟಪಡುವ ಗುಣಗಳನ್ನು ವಿವಿಧ ಕಡೆಗಳಲ್ಲಿ ವಿವರಿಸಲಾಗಿದೆ.

ಪಶ್ಚಾತ್ತಾಪ ಪಡುವವರು (ತೌಬಾ)
“ನಿಶ್ಚಯವಾಗಿಯೂ ಪಾಪಗಳಿಂದ ಪಶ್ಚಾತ್ತಾಪ ಪಡುವವರನ್ನು ಅಲ್ಲಾಹ್ ಇಷ್ಟಪಡುತ್ತಾನೆ.” (ಪವಿತ್ರ ಕುರ್ ಆನ್ 2:222)

ತೌಬಾ ಎಂದರೆ ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು ಅಲ್ಲಾಹನೆಡೆಗೆ ಮರಳುವುದಾಗಿದೆ. ಪ್ರತಿಯೊಬ್ಬ ಮನುಷ್ಯನೂ ತಪ್ಪೆಸಗುತ್ತಾನೆ. ತಪ್ಪೆಸಗುವವರ ಪೈಕಿ ತೌಬಾ (ಪಶ್ಚಾತ್ತಾಪ) ಮಾಡುವವರು ಅತ್ಯುತ್ತಮರು ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿರುವರು. ನಿರಂತರ ಪಶ್ಚಾತ್ತಾಪ ಪಡುವವರೆಂಬುದು ಸತ್ಯವಿಶ್ವಾಸಿಗಳ ವಿಶಿಷ್ಟ ಗುಣವಾಗಿದೆ. ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ, ಪಾಪಗಳನ್ನು ಕ್ಷಮಿಸುವವನೂ ಆಗಿರುತ್ತಾನೆ. ಪಾಪಿಗಳ ಪಶ್ಚಾತ್ತಾಪವನ್ನು ಸ್ವೀಕರಿಸಲು ಅಲ್ಲಾಹನು ಹಗಲು ರಾತ್ರಿ ಕೈ ಚಾಚುತ್ತಾನೆ.

ಪಶ್ಚಾತ್ತಾಪವು ಮನುಷ್ಯನ ಅತಿಯಾದ ಲೌಖಿಕ ವ್ಯಾಮೋಹವನ್ನು ನಿಯಂತ್ರಿಸುತ್ತದೆ. ಪ್ರತಿಯೊಬ್ಬ ಮನುಷ್ಯನೂ ಜೀವನದ ವಿವಿಧ ಸಂದರ್ಭಗಳಲ್ಲಿ ತಪ್ಪೆಸಗುತ್ತಿರುತ್ತಾನೆ. ಪಶ್ಚಾತ್ತಾಪ ಮಾಡಿದ ನಂತರ ಅದೇ ಪಾಪವನ್ನು ಪುನಃ ಮಾಡಲಾರೆನೆಂದು ದೃಢ ನಿರ್ಧಾರ ಮಾಡಬೇಕು. ಪ್ರವಾದಿ(ಸ) ದಿನ ನಿತ್ಯ ನೂರು ಬಾರಿ ಪಶ್ಚಾತ್ತಾಪ ಮಾಡುತ್ತಿದ್ದರು ಎಂದು ಹದೀಸ್ ಗ್ರಂಥಗಳಲ್ಲಿ ತಿಳಿಸಲಾಗಿದೆ.

ಶುಚಿತ್ವ ಪಾಲಿಸುವವರು (ತಹಾರಃ)
“ಶುದ್ಧಾಚಾರವಿರಿಸುವವರನ್ನು ಅಲ್ಲಾಹ್ ಇಷ್ಟಪಡುತ್ತಾನೆ.” (ಪವಿತ್ರ ಕುರ್ ಆನ್ 2:222)

ಶುಚಿತ್ವವು ಸತ್ಯವಿಶ್ವಾಸದ ಅರ್ಧಾಂಶವಾಗಿದೆ. ಅಲ್ಲಾಹನ ದಾಸರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶವ, ರಕ್ತ, ಮಲಮೂತ್ರ, ಹಂದಿ, ನಾಯಿ, ವಾಂತಿ, ಶರಾಬು ಇತ್ಯಾದಿಗಳನ್ನು ಇಸ್ಲಾಮ್ ಧರ್ಮವು ಮಲಿನ ವಸ್ತುಗಳಾಗಿ ಪರಿಗಣಿಸುತ್ತದೆ. ಮಣ್ಣು ಮತ್ತು ನೀರಿನಿಂದ ಮಾಲಿನ್ಯವನ್ನು ದೂರೀಕರಿಸುವ ಹಲವು ವಿಧಾನಗಳನ್ನು ಕಲಿಸಿ ಕೊಡಲಾಗಿದೆ.

ಶುದ್ಧವೆಂದರೆ ಆಂತರಿಕ ಹಾಗೂ ಬಾಹ್ಯ ಶುದ್ಧಿಯಾಗಿದೆ. ಸತ್ಯವಿಶ್ವಾಸಿಯು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಶುದ್ಧಿಯಾಗಿರಬೇಕು. ಅಂಗಸ್ನಾನ (ವುಝೂ), ಸ್ನಾನ ಮಾಡುತ್ತಾ ಶರೀರವನ್ನು ಶುಚಿಯಾಗಿಡಬೇಕು. ನಾವು ಮಾಡುವ ವ್ಯಾಪಾರ ವಹಿವಾಟುಗಳು, ಗಳಿಸುವ ಅದಾಯ, ಧರಿಸುವ ವಸ್ತ್ರ ಹಾಗೂ ವಾಸಿಸುವ ಪರಿಸರ ಎಲ್ಲಾ ಪರಿಶುದ್ಧವಾಗಿರಬೇಕು.

ಆಂತರಿಕ ಶುದ್ಧಿ ಎಂದರೆ ಮನಸ್ಸು, ನೋಟ, ಆಲೋಚನೆ, ಕಲ್ಪನೆ,ಆಚಾರ, ವಿಚಾರ, ಸಂಬಂಧ, ತಿನ್ನುವ ಆಹಾರ, ಕುಡಿಯುವ ಪಾನೀಯ, ಆಡುವ ಮಾತು ಮತ್ತು ಕೇಳುವ ಎಲ್ಲಾ ವಿಷಯಗಳು ಪರಿಶುದ್ಧವಾಗಿರಬೇಕು.

ಸಜ್ಜನರು (ಇಹ್ಸಾನ್)
“ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಪವಿತ್ರ ಕುರ್ ಆನ್ 3: 134)

ಸದಾ ಸತ್ಕರ್ಮಗಳನ್ನು ಮಾಡುವವರು, ಸಹ ಜೀವಿಗಳೊಂದಿಗೆ ದಯೆ ತೋರುವವರು, ಒಳಿತನ್ನು ಆಜ್ಞಾಪಿಸುವವರು, ಕೆಡುಕನ್ನು ತಡೆಯುವವರು, ಜನರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವರ್ತಿಸುವವರು, ಕೋಪವನ್ನು ನಿಯಂತ್ರಿಸುವವರು, ಇತರರ ಅಪರಾಧಗಳನ್ನು ಕ್ಷಮಿಸುವವರು ಇವೆಲ್ಲಾ ಸಜ್ಜನ ದಾಸರ ಲಕ್ಷಣವಾಗಿದೆ. ಅಲ್ಲಾಹನು ಸದಾ ಸಮಯ ನನ್ನನ್ನು ನೋಡುತ್ತಿದ್ದಾನೆ ಎಂಬ ಭಯದೊಂದಿಗೆ ಎಲ್ಲಾ ಕೆಲಸಗಳನ್ನು ನಿಷ್ಕಳಂಕ ಮನಸ್ಸಿನಿಂದ ಮಾಡುವುದಾಗಿದೆ.

ಸಹನೆ ಶೀಲರು (ಸಬ್ರ್)
“ಅಲ್ಲಾಹ್ ಸಹನಶೀಲರನ್ನೇ ಪ್ರೀತಿಸುತ್ತಾನೆ.” (ಪವಿತ್ರ ಕುರ್ ಆನ್ 3: 146)

ಜೀವನದಲ್ಲಿ ನಮ್ಮ ಯೋಜನೆ ಹಾಗೂ ಕೆಲಸ ಕಾರ್ಯಗಳು ನಾವಿಚ್ಛಿಸಿದಂತೆ ನಡೆಯದಿರುವಾಗ, ಕಷ್ಟ ನಷ್ಟದ ಸಮಯದಲ್ಲಿ ಅಲ್ಲಾಹನಿಗೆ ವಿಧೇಯನಾಗಿರಬೇಕು. ಆಪ್ತರು ಮರಣ ಹೊಂದುವುದು, ರೋಗ, ಅಪಘಾತ, ವಿಪತ್ತು, ಆರ್ಥಿಕವಾಗಿ ನಷ್ಟ ಅನುಭವಿಸುವ ಸಮಯದಲ್ಲಿ ಸಹನೆ ವಹಿಸುವುದು. ಅಲ್ಲಾಹನು ನಮಗೆ ವಿಧಿಸಿದ್ದು ತನಗೆ ಇಷ್ಟವಿಲ್ಲದಿದ್ದರೂ ಅದರಲ್ಲಿ ಪ್ರತಿಫಲವನ್ನು ನಿರೀಕ್ಷಿಸುತ್ತಾ ಸಂತೃಪ್ತರಾಗುವುದು.

ಸಹನೆಯೆಂದರೆ ಅಲ್ಲಾಹನ ಮೇಲೆ ದೃಢ ವಿಶ್ವಾಸವಿರುತ್ತದೆ, ಶುಭ ನಿರೀಕ್ಷೆಯಿರುತ್ತದೆ, ಪ್ರತಿಯೊಂದು ಮಾತಿನಲ್ಲೂ ಆತ್ಮವಿಶ್ವಾಸದ ಪ್ರಾರ್ಥನೆಗಳಿರುತ್ತದೆ, ಗಾಢವಾದ ಮೌನವಿರುತ್ತದೆ. ಹೃದಯದಲ್ಲಿ ಕೃತಜ್ಞತಾಭಾವವಿರುತ್ತದೆ. ನಿರಾಶೆ ಮತ್ತು ದೂರುಗಳಿರುವುದಿಲ್ಲ. ಕಷ್ಟ, ನಷ್ಟ, ನೋವು ಅನುಭವಿಸುತ್ತಿರುವಾಗಲೂ ನಗುಮುಖ ಮತ್ತು ಶುಭ ನಿರೀಕ್ಷೆಗಳೊಂದಿಗೆ ಜನರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ.

ನ್ಯಾಯಪಾಲಕರು (ಖಿಸ್ತ್)
“ಅಲ್ಲಾಹ್ ನ್ಯಾಯಪರಿಪಾಲಕರನ್ನು ಮೆಚ್ಚುತ್ತಾನೆ.” (ಪವಿತ್ರ ಕುರ್ ಆನ್ 5:42)

ಶಾಂತಿಯುತ ಸಮಾಜ ನಿರ್ಮಾಣಕ್ಕೆ ನ್ಯಾಯವು ಅತ್ಯಗತ್ಯವಾಗಿರುತ್ತದೆ. ನ್ಯಾಯಕ್ಕಾಗಿ ದೃಢವಾಗಿ ನಿಲ್ಲುವವರನ್ನು ಅಲ್ಲಾಹ್ ಇಷ್ಟಪಡುತ್ತಾನೆ. ಅದು ನಿಮ್ಮ ವಿರುದ್ಧ, ನಿಮ್ಮ ಆಪ್ತ ಸಂಬಂಧಿಕರ ಹಾಗೂ ಸ್ನೇಹಿತರ ವಿರುದ್ಧವಾದರೂ ಸರಿ. ನ್ಯಾಯವು ನಿಮ್ಮ ವೈರಿ ಅಥವಾ ನೀವಿಷ್ಟಪಡದವರ ಪರವಾಗಿದ್ದರೂ ಅದನ್ನು ಅಲ್ಲಾಹನ ವಿಧಿಯೆಂದು ಸ್ವೀಕರಿಸಬೇಕು. ಇಹಲೋಕದಲ್ಲಿ ನ್ಯಾಯ ಸಿಗದಿದ್ದರೂ ಅಲ್ಲಾಹನ ನ್ಯಾಯಾಲಯದಲ್ಲಿ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂಬ ದೃಢ ವಿಶ್ವಾಸವನ್ನು ಹೊಂದಿರಬೇಕು.

ನ್ಯಾಯವು ಮನೆಯಿಂದಲೇ ಆರಂಭವಾಗಬೇಕು. ತಂದೆ, ತಾಯಿ, ಸಹೊದರ, ಸಹೊದರಿಯರ, ಪತ್ನಿ, ಮಕ್ಕಳ ಮಧ್ಯೆ ನ್ಯಾಯ ಪಾಲಿಸುವುದು ಮುಖ್ಯವಾಗಿದೆ. ನಮ್ಮ ಮಾತು ಮತ್ತು ಕೃತಿಯಲ್ಲಿ ಸಮಾನತೆ ಪಾಲಿಸುವುದು. ನಾಯಕನಾಗಿರುವಾಗ ತನ್ನ ಅನುಯಾಯಿಗಳ ಮಧ್ಯೆ ನ್ಯಾಯ ಪಾಲಿಸುವುದು ಮತ್ತು ನಮಗೆ ಲಭಿಸಿದ ಪ್ರತಿಯೊಂದು ಅಧಿಕಾರದಲ್ಲಿ ನ್ಯಾಯ ಪಾಲಿಸುವುದು ಕಡ್ಡಾಯವಾಗಿದೆ .ಅಲ್ಲಾಹನೊಂದಿಗೆ ಯಾರನ್ನೂ ಭಾಗೀದಾರರಾಗಿ ಮಾಡದಿರುವುದು ಅಲ್ಲಾಹನೊಂದಿಗೆ ಪಾಲಿಸುವ ನ್ಯಾಯವಾಗಿರುತ್ತದೆ.

ಧರ್ಮನಿಷ್ಠರು (ತಕ್ವಾ)
“ಧರ್ಮನಿಷ್ಠರು ಅಲ್ಲಾಹನಿಗೆ ಪ್ರಿಯರು.” (ಪವಿತ್ರ ಕುರ್ ಆನ್ 3: 76)

ಅಲ್ಲಾಹನ ಆಜ್ಞೆಯನ್ನು ಪಾಲಿಸುವುದು ಮತ್ತು ನಿಷೇಧಿಸಿದುವುಗಳಿಂದ ದೂರವಿರುವುದು. ಅಲ್ಲಾಹನ ಭಯವು ಸತ್ಯ ವಿಶ್ವಾಸಿ ಹಾಗೂ ನರಕದ ಮಧ್ಯೆ ತಡೆಗೋಡೆಯನ್ನುಂಟು ಮಾಡುತ್ತದೆ. ಹೃದಯದಲ್ಲಿ ಧರ್ಮನಿಷ್ಠೆಯು ಮನುಷ್ಯನನ್ನು ಒಳಿತಿನೆಡೆಗೆ ಪ್ರೇರೇಪಿಸುತ್ತಾ ವಿನಯಶೀಲನನ್ನಾಗಿ ಮಾಡುತ್ತದೆ. ಅಲ್ಲಾಹನ ಭಯವು ಪ್ರೀತಿ ಮತ್ತು ವಿಧೇತೆಯಿಂದ ಕೂಡಿದ ಶುದ್ಧ ಆತ್ಮದ ಮೂಲವಾಗಿದೆ.

ಅಲ್ಲಾನ ಮೇಲೆ ಭರವಸೆಯಿಡುವವರು (ತವಕ್ಕುಲ್)
“ಅಲ್ಲಾಹನ ಮೇಲೆಯೇ ಭರವಸೆಯಿಟ್ಟು ಕಾರ್ಯವೆಸಗುವವರನ್ನು ಅವನು ಪ್ರೀತಿಸುತ್ತಾನೆ.” (ಪವಿತ್ರ ಕುರ್ ಆನ್ 3: 159)

ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವಂತಹ ಸನ್ನಿವೇಶ, ಸಮಸ್ಯೆ ಹಾಗೂ ಕೆಲಸ ಕಾರ್ಯಗಳನ್ನು ನಮಗೆ ಸಾಧ್ಯವಾದಷ್ಟು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿ ಅಲ್ಲಾಹನ ಮೇಲೆ ಭರವಸೆಯಿಡುವುದಾಗಿದೆ. ಅದರ ಫಲಿತಾಂಶ ಲಾಭ ನಷ್ಟವಾದರೂ ಎಲ್ಲವನ್ನೂ ಧೈರ್ಯ ಮತ್ತು ಸ್ಥೈರ್ಯದಿಂದ ಎದುರಿಸಬೇಕು. ಅವಲಂಬನೆಗೆ, ಸಂಪೂರ್ಣ ಭರವಸೆಗೆ, ನಂಬಿಕೆಯಿಂದ ವ್ಯವಹಾರಗಳನ್ನು ವಹಿಸಿಕೊಡುವುದಕ್ಕೆ ಹಾಗೂ ಮಾರ್ಗದರ್ಶನ ಮತ್ತು ಸಹಾಯ ಬೇಡಲು ಅಲ್ಲಾಹ್ ಮಾತ್ರ ಅರ್ಹನು.

ಅಲ್ಲಾಹನ ಪ್ರೀತಿಯನ್ನು ಗಳಿಸಲು ಈ ಪ್ರಾರ್ಥನೆಯನ್ನು ಪ್ರಾರ್ಥಿಸುತ್ತಿರಬೇಕು:
“ಓ ಅಲ್ಲಾಹ್! ನಾನು ನಿನ್ನ ಪ್ರೀತಿಯನ್ನು ಬೇಡುತ್ತೇನೆ. ನಿನ್ನನ್ನು ಪ್ರೀತಿಸುವವರ ಪ್ರೀತಿಯನ್ನು ಯಾಚಿಸುತ್ತೇನೆ. ನನ್ನನ್ನು ನಿನ್ನ ಪ್ರೀತಿಯ ವರೆಗೆ ತಲುಪಿಸುವಂತಹ ಕರ್ಮಗಳ ಪ್ರೀತಿಯನ್ನು ಬಯಸುತ್ತೇನೆ.”

✍️ಖದೀಜ ನುಸ್ರತ್