ಕ್ಷಮೆ ಕೇಳಲ್ಲ, ಇಸ್ಲಾಂ ವಿರುದ್ಧ ದ್ವೇಷ ಇಲ್ಲ; ಪ್ರವಾದಿ ಬಗ್ಗೆ ಹೇಳಿಕೆ ನೀಡಿದ್ದ ಮಹಂತ್ ರಾಮಗಿರಿ ಮಹಾರಾಜ್ ಸ್ಪಷ್ಟನೆ

0
440

ಸನ್ಮಾರ್ಗ ವಾರ್ತೆ

ಪ್ರವಾದಿ ಮುಹಮ್ಮದ್ ಕುರಿತಾಗಿ ನೀಡಿದ ವಿವಾದಾತ್ಮಕ ಹೇಳಿಕೆಗಾಗಿ ತಾನು ಕ್ಷಮೆ ಯಾಚಿಸುವುದಿಲ್ಲ. ಇಸ್ಲಾಂ ವಿರುದ್ಧ ನನಗೆ ಯಾವುದೇ ದ್ವೇಷ ಇಲ್ಲ ಎಂದು ಮಹಂತ್ ರಾಮಗಿರಿ ಮಹಾರಾಜ್ ಅವರು, ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯ ನೀಡುವ ತೀರ್ಪನ್ನು ತಮ್ಮ ಭಾಗದಿಂದ ಪೂರ್ತಿಯಾಗಿ ಸ್ವೀಕರಿಸುವುದಾಗಿ ಅವರು ಸ್ಪಷ್ಟಪಡಿಸಿದರು.

ಈ ಪ್ರಕರಣವು ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ಪಾಂಚಾಲೆ ಗ್ರಾಮದಲ್ಲಿ ಆರಂಭವಾಗಿದ್ದು, ರಾಮಗಿರಿ ಮಹಾರಾಜರು ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಛತ್ರಪತಿ ಸಂಭಾಜಿನಗರದ ವೈಜಾಪುರ ಸೇರಿದಂತೆ ಇತರ ಪ್ರದೇಶಗಳಲ್ಲಿ ಉದ್ವಿಗ್ನತೆ ಉಂಟಾಯಿತು. ಜನಸಾಮಾನ್ಯರು ಮತ್ತು ಮುಸ್ಲಿಂ ಸಂಘಟನೆಗಳಿಂದ ಬೃಹತ್ ಮಟ್ಟದ ಪ್ರತಿಭಟನೆಗಳು ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.

ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಸಂವಿಧಾನದಿಂದ ನೀಡಿದೆ ಎಂದು ಉಲ್ಲೇಖಿಸಿದ ಅವರು, ನನ್ನ ಹೇಳಿಕೆಯಿಂದ ಯಾರ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಅದು ಅವರ ವೈಯಕ್ತಿಕ ವಿಚಾರ” ಎಂದು ಹೇಳಿದರು.

ಮಾತ್ರವಲ್ಲದೆ, ವಿದೇಶದಲ್ಲಿನ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತದಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ಕೂಡ ಹಾಜರಿದ್ದರು.

“ರಾಮಗಿರಿ ಮಹಾರಾಜರು ಕ್ಷಮೆ ಯಾಚಿಸಲು ಒಪ್ಪಿಗೆಯಿಲ್ಲವೆಂದು ಹೇಳಿದ್ದಾರೆ. ಏಕೆಂದರೆ ರಾಮಗಿರಿ ಅವರು ಇಸ್ಲಾಮಿಕ್ ಗ್ರಂಥಗಳಲ್ಲಿ ಬರೆದಿರುವ ವಿಚಾರಗಳನ್ನು ಹೇಳಿದ್ದಾರೆ ಎಂದು ಸತ್ಯಪಾಲ್ ಸಿಂಗ್ ಅಭಿಪ್ರಾಯಪಟ್ಟರು.

“ರಾಮಗಿರಿ ಮಹಾರಾಜರ ಹೇಳಿಕೆ ವಾಸ್ತವಿಕವಾಗಿಲ್ಲವೇ ಎಂಬುದನ್ನು ಇಸ್ಲಾಂ ವಿದ್ವಾಂಸರು ಮತ್ತು ಧರ್ಮಗುರುಗಳು ಸ್ಪಷ್ಟಪಡಿಸಬೇಕು” ಎಂದು ಸಿಂಗ್ ಮಾಧ್ಯಮದವರು ಮುಂದಿಟ್ಟು ಪ್ರಶ್ನೆಗೆ ಉತ್ತರಿಸಿದರು.