ಸನ್ಮಾರ್ಗ ವಾರ್ತೆ
✍️ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್
ಸ್ಮಾರ್ಟ್ ಸಿಟಿ ಯೋಜನೆಯ ಅಪೂರ್ಣ ಕಾಮಗಾರಿಯಿಂದ ನೆನೆಗುದಿಗೆ ಬಿದ್ದಿರುವ ಸರ್ವಿಸ್ ಬಸ್ಟಾಂಡಿನಲ್ಲಿ ಬೋರಲು ಬಿದ್ದಿರುವ ಖಾಲಿ ಮರದ ಹಲಗೆಯ ಮೇಲೆ ಸುಮಾರು ಒಂದು ತಾಸು ಬಸ್ಸಿಗೆ ಕಾದ ನನಗೆ ಮಂಪರು ಹತ್ತಿ ನಿದ್ದೆಗೆ ಜಾರಿ ಬಿದ್ದದ್ದು ಗೊತ್ತಾಗಲೇ ಇಲ್ಲ. ಪಾಂ ಪಾಂ ಹಾರ್ನ್ ಶಬ್ದಕ್ಕೆ ದಿಢೀರ್ ಎಚ್ಚರವಾದಾಗ ಬಸ್ ಕಣ್ಮುಂದೆ ನಿಂತಿತ್ತು. ಕಂಡೆಕ್ಟರ್ ಬಿಡುವು ಮಾಡದೆ ಕರೆಯುತ್ತಿದ್ದ. ಕಿಟಕಿ ಭಾಗವನ್ನೇ ಆಯ್ದುಕೊಂಡು ಸೀಟು ಭದ್ರವಾಗಿಸಿದೆ.
ನಗರದಲ್ಲಿ ಕೆಲಸ ಸಿಕ್ಕಿದ ಮೇಲೆ ಬಸ್ಸು ಸಂಚಾರ ನಿತ್ಯ ಜೀವನದ ಭಾಗವಾಗಿ ಹೋಗಿದೆ. ಬಸ್ಟಾಂಡ್ ಕೂಡಾ ಚಿರಪರಿಚಿತ. ಭಿಕ್ಷುಕರು, ಮಂಗಳಮುಖಿಯರು, ಕೂಲಿಯಾಳುಗಳು, ಗೂಡಂಗಡಿ ವ್ಯಾಪಾರಸ್ಥರು, ಮೀನು ಮಾರಾಟಗಾರರು, ಡ್ರೈವರ್ ಕಂಡೆಕ್ಟರ್ ಅಗತ್ಯ ವಸ್ತುಗಳ ಮಾರಾಟಗಾರರು, ಸಂಜೆ ಪತ್ರಿಕೆ ವಿತರಕರು ಹೀಗೆ ಎಲ್ಲರ ಮುಖ ಪರಿಚಿತವಿರುವುದರಿಂದ ಕೋಟು ಸೂಟು ಧರಿಸಿದ್ದ ನನ್ನನ್ನು ಸ್ವಲ್ಪ ಗೌರವದಿಂದಲೇ ಕಾಣುತ್ತಿದ್ದರು. `ಸರ್’ ಎಂದೇ ಕರೆಯುತ್ತಿದ್ದರು.
`ಸರ್’ ಬಸ್ಸಿನ ಸಣ್ಣ ಗಾಜಿನ ಕಿಟಕಿಯ ಎಡೆಯಿಂದ ಹೊರಗಿನ ಚಲನ ವಲನಗಳನ್ನು ನೋಡುತ್ತಿದ್ದವನಿಗೆ “ಈ ಶಬ್ದ ಎಲ್ಲೋ ಕೇಳಿದ ಹಾಗೆ ಇದೆಯಲ್ಲ” ಎಂದು ಎಚ್ಚರವಾಗಿ ಮುಖ ತಿರುಗಿಸಿದೆ. ಭುಜಕ್ಕೆ ಒಂದು ಜೋಳಿಗೆ ನೇತಾಕಿ ಇಂಗ್ಲೀಷರು ಗಾಲ್ಫ್ ಆಡುವಾಗ ಹಾಕುವ ಟೋಪಿ ಧರಿಸಿ ಹೊಟ್ಟೆ ಊದಿದರೂ ಭದ್ರವಾದ ಬೆಲ್ಟ್ ನಿಂದ ಕಟ್ಟಿ ಇನ್‌ಶರ್ಟ್ ಮಾಡಿ ಹಿಂದಿ ಸಿನಿಮಾದ ಧ್ರುವ ತಾರೆ ದೇವಾನಂದ್ ಸ್ಟೈಲಲ್ಲಿ ಐವತ್ತು ದಾಟಿದ ವಯೋವೃದ್ಧನಂತೆ ಕಾಣುವ ಒಬ್ಬ ಕೈಯಲ್ಲಿ ನಾಲ್ಕಾರು ಪುಸ್ತಕ ಹಿಡಿದು ನಿಂತಿದ್ದ.
“ಹಲೋ ಸರ್”
ಪುಸ್ತಕ ಬೇಕಾ ಸಾರ್?
ಪುಸ್ತಕ ಓದೋದಂತೂ ಇತ್ತೀಚೆಗೆ ಭಾರವಾಗಿ ಹೋಗಿದೆ. ಫೇಸ್‌ಬುಕ್, ಇನ್ಸ್ಟಾಗ್ರಾಂ, ರೀಲ್ಸ್, ಶಾಟ್ಸ್ ಅಂತ ನೂರಾರು ಮೊಬೈಲ್ ಆಪ್ ಗಳಲ್ಲಿ ಒಂದು ಘಳಿಗೆ ಕಣ್ಣು ಓಡಿಸಿದರೆ ಸಾಕು ಮೂರು ತಾಸು ಮುಗಿದರೂ ಗೊತ್ತಾಗುವುದಿಲ್ಲ. ಅಂತದರಲ್ಲಿ ಪುಸ್ತಕ ಓದಲು ಎಲ್ಲಿ ಸಮಯ? ಓದುವುದು ದೂರವಾದರೂ ಪುಸ್ತಕ ಖರೀದಿಸಿ ಅಲೆಮಾರೆಯಲ್ಲಿ ರಾಶಿ ಹಾಕುವ ಹವ್ಯಾಸ ಬಾಕಿ ಉಳಿದಿದ್ದರಿಂದ ಅವರ `ಸರ್’ ಎಂಬ ಕರೆಗೆ ಗೌರವ ಕೊಟ್ಟು ಒಂದು ಪುಸ್ತಕ ತೆಗೆದು ಬ್ಯಾಗ್ ನೊಳಗೆ ಇಟ್ಟೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಆ ವ್ಯಕ್ತಿಯನ್ನು ಎಲ್ಲೋ ನೋಡಿದ ನೆನಪು ತಲೆಗೆ ಹತ್ತಿ ಬಿಟ್ಟಿತ್ತು. ಎಷ್ಟು ಕೆದಕಿದರೂ ನೆನಪು ಬರಲೇ ಇಲ್ಲ. ಒಬ್ಬ ಜೆಂಟಲ್ ಮೆನ್‌ನಂತೆ ವ್ಯವಹರಿಸುತ್ತಿದ್ದರೂ ನೋಡುಗರಿಗೆ ಜೋಳಿಗೆ ಹೊತ್ತ ಫಕೀರನಂತೆ ಕಾಣುತ್ತಿದ್ದರು. ಈ ಕಾಲದಲ್ಲಿ ಪುಸ್ತಕ ಮಾರಿ ಏನು ಕಮಾಯಿ ಮಾಡಬಹುದು. ಒಂದು ಹೊತ್ತಿನ ಊಟಕ್ಕೆ ದಕ್ಕಿದರೆ ಪುಣ್ಯ ಎನ್ನುವಷ್ಟರ ಮಟ್ಟಿಗೆ ಪುಸ್ತಕ ಖರೀದಿಸುವವರು ವಿರಳವಾಗಿ ಬಿಟ್ಟಿದ್ದಾರೆ.
ಆ ಜೋಳಿಗೆ ಹೊತ್ತ ಫಕೀರ ಕೈಯಲ್ಲಿದ್ದ ಎರಡು ಜೋಡಿ ಪುಸ್ತಕವನ್ನು ತನ್ನ ಹೆಗಲಲ್ಲಿ ತೂಗಿ ಹಾಕಿದ್ದ ಚೀಲದಲ್ಲಿ ಹಾಕಿ ಕಿಸೆಯಿಂದ ಚಿಲ್ಲರೆ ನಾಣ್ಯಗಳನ್ನು ಅಗೆದು ತೆಗೆದು ಭಿಕ್ಷುಕನ ತಟ್ಟೆಯ ಮೇಲೆ ಹಾಕಿ ಬಸ್ಟಾಂಡಿನ ಎದುರಿಗೆ ದೈತ್ಯಾಕಾರದಲ್ಲಿ ಎದ್ದು ನಿಂತ ಕಟ್ಟಡದ ಓಣಿಯಿಂದ ಹಾದು ಹೋಗುತ್ತಿದ್ದುದನ್ನು ನೋಡಿದ ನನಗೆ ತಟ್ಟನೆ ಜ್ಞಾಪಕಕ್ಕೆ ಬಂತು.
ಅಯ್ಯೋ! ದೇವರೇ…
ಇವರ ಅವರು?
ಅವರೇಕೇ ಹೀಗಾದರು?
ಪಾಪ! ಈ ಸ್ಥಿತಿಗೇಕೆ ತಲುಪಿದರು…?
ನೂರಾರು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿ ಬಿದ್ದ ನನಗೆ ಛೆ! ಅವರಲ್ಲಿ ಮಾತಾಡಿಸಿಕೊಳ್ಳಲಾಗಿಲ್ಲವಲ್ಲ ಎಂಬ ವ್ಯಾಕುಲತೆಗೂ ಒಳಗಾದೆ. ಆ ದೈತ್ಯಾಕಾರದ ಕಟ್ಟಡದ ಮಾಲಿಕ ಜೋಳಿಗೆ ಹಿಡಿಯಲು ಕಾಣರವೇನೆಂಬ ಕಥೆಯನ್ನು ತಿಳಿಯುವ ಕುತೂಹಲ ಜಾಸ್ತಿ ಇತ್ತು.
v v v
`ಜೀವನ್ ಡೆವಲಪ್ ಮೆಂಟ್’ ಎರಡು ಸಾವಿರ ಇಸವಿಯ ಆರಂಭದಲ್ಲಿ ನಗರದಲ್ಲಿ ಗಗನಚುಂಬಿ ಕಟ್ಟಡಗಳ ಕ್ರಾಂತಿ ಸೃಷ್ಟಿಸಿದ ಸಂಸ್ಥೆ. ಹತ್ತು ವರ್ಷದ ಅವಧಿಯಲ್ಲಿ ಮೂವತ್ತಕ್ಕಿಂತ ಹೆಚ್ಚು ಗಗನಚುಂಬಿ ಕಟ್ಟಡಗಳು ನಗರದಲ್ಲಿ ತಲೆ ಎತ್ತಿದ್ದವು. ಜೀವನ್, ನೆಪ್ಚೂನ್, ಜೀವನ್ ಸ್ಕೈಲೈನ್, ಜೀವನ್ ಗ್ರಸೆಂಟ್, ಜೀವನ್ ಪ್ಲಾನೆಟ್, ಜೀವನ್ ಜುಪಿಟರ್, ಜೀವನ್ ವೀನಸ್, ಬಾಹ್ಯಾಕಾಶದಲ್ಲಿರುವ ಎಲ್ಲಾ ಗ್ರಹಗಳು ನಗರದಲ್ಲಿ ಠಿಕಾಣಿ ಹೂಡಿದಂತಿತ್ತು.
ಜೀವನ್ ಜಾರ್ಜ್ ಪರಂಪರಾಗತ ಸೊತ್ತು ತುಂಬಿಕೊಂಡು ಬೆಳೆದವರೇನಲ್ಲ. ಮಧ್ಯಮ ಕುಟುಂಬದಲ್ಲಿ ಬೆಳೆದು ತನ್ನ ತ್ಯಾಗ ಮತ್ತು ಪರಿಶ್ರಮದಿಂದ ಹಂತ ಹಂತವಾಗಿ ಹಣ ಮಾಡಿಕೊಂಡವರೆಂದು ಎಲ್ಲರಿಗೂ ಗೊತ್ತು. ಆ ಕಾರಣಕ್ಕಾಗಿಯೇ ಅವರಿಗೆ ಪ್ರಖ್ಯಾತ ಶ್ರೀಮಂತರ ಕೂಟದಲ್ಲಿ ಒಂದು ಅಸ್ಪೃಷ್ಯತಾ ಭಾವ ಇತ್ತು.
ನಗರದಲ್ಲಿ ಫ್ಲಾಟ್ ತೆಗೆಯುವ ಸಿರಿವಂತರಿಗೆ ಮಾತ್ರ ಇದ್ದ ಸ್ಥಿತಿಯನ್ನು ಬಡವನ ಬಾಗಿಲಿಗೆ ತಲುಪಿಸುವಲ್ಲಿ ಜೀವನ್ ಡೆವಲಪ್‌ಮೆಂಟ್ ಪ್ರಮುಖ ಪಾತ್ರ ವಹಿಸಿದೆ. ಕನ್‌ಸ್ಟ್ರಕ್ಟಿಂಗ್ ಉದ್ದಿಮೆಗೆ ಇಳಿದ ಹೆಚ್ಚಿನ ಶ್ರೀಮಂತರು ಹಣ ಮಾಡುವುದನ್ನೇ ಲೆಕ್ಕ ಹಾಕುತ್ತಿರುವಾಗ ಜಾರ್ಜ್ರವರು ಜೀವನ್ ಸಹಾಯ ಹಸ್ತ ಎಂಬ ಸಂಸ್ಥೆ ಹುಟ್ಟು ಹಾಕಿ ಅನೇಕ ಸಮಾಜ ಸೇವೆ ಮಾಡಿದ್ದರು. ಸಾಧಕರನ್ನು ಗುರುತಿಸಿ ಸನ್ಮಾನ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಡವರಿಗೆ ಅಕ್ಕಿ ವಿತರಣೆ, ಮಸೀದಿ, ಚರ್ಚ್, ದೇವಸ್ಥಾನಗಳಿಗೆ ಧನ ಸಹಾಯ, ದಿನ ಬೆಳಗಾದರೆ ಸಾಕು ಅವರ ಆಫೀಸ್ ಮುಂದೆ ಎಷ್ಟು ಜನ ಸಾಲು ಗಟ್ಟಿ ನಿಂತಿರುವುದು. ಮನೆ ಕಟ್ಟಲು, ಮಗಳ ಮದುವೆಗೆ, ಮದ್ದಿಗೆ, ಡಿಸ್ಟಾರ್ಚ್ ಮಾಡಲು ಅಬ್ಬಾಬ್ಬಾ! ಹೇಳಿ ಮುಗಿಯದು.
ಕ್ಯೂ ನಿಂತವರಾರು ಬರಿ ಕೈಯಲ್ಲಿ ಮರಳಿದವರಲ್ಲ. ಉದ್ಘಾಟನೆಗೆ ರಾಶಿ ರಾಶಿ ಕಾರ್ಯಕ್ರಮಗಳ ಆಹ್ವಾನಗಳೂ ಈ ಒತ್ತಡದ ನಡುವೆ ಬರುತ್ತಿದ್ದವು. ಅವರ ಬೆಳವಣಿಗೆ ಕೆಲವರ ಹೊಟ್ಟೆ ಉರಿಸುತ್ತಿತ್ತು. ಮಾಟ ಮಂತ್ರದ ಪ್ರಯೋಗವೂ ಸರಿಯಾಗಿ ಫಲಿಸಲೂ ಇಲ್ಲ. ಅವರ ಉನ್ನತಿಗೆ ಯಾವ ಕೊರತೆಯೂ ಆಗಲಿಲ್ಲ. ನಾನು ಆಗಿನ್ನೂ ಕಾಲೇಜು ಬಿಟ್ಟು ಕೆಲಸದ ಹುಡುಕಾಟದಲ್ಲಿದ್ದೆ. ಕಲಿತದ್ದು ಸಿಗಲು ಇನ್ನೂ ಮೂರು ಜನ್ಮ ಕಾಯಬೇಕೆಂಬ ಸ್ಪಷ್ಟತೆ ಇದ್ದುದರಿಂದ ಏನಾದರೂ ಕೆಲಸ ಮಾಡಿ ನಾಲ್ಕು ಕಾಸು ಮಾಡಬೇಕು. ಮನೆಯವರನ್ನು ಸಾಕಬೇಕೆಂಬ ಇರಾದೆ ಇದ್ದುದರಿಂದ ಆಫೀಸು ಮುಂದೆ ಇರುವ ಕ್ಯೂನಲ್ಲಿ ನಾನೂ ಸೇರಿಕೊಂಡು ಅವರ ಕಚೇರಿಯಲ್ಲಿ ಕೆಲಸ ಪಡೆದು ಒಂದೆರಡು ವರ್ಷ ದುಡಿದಿದ್ದೆ. ಮನೆ ರೀಪೇರಿಗೂ, ಅಕ್ಕನ ಮದುವೆಗೂ ಅವರ ಕೈ ಸಹಾಯ ಈಗ ನೆನಪಾಗುತ್ತದೆ.
ಕಚೇರಿಗೆ ಅವರು ಬರುವಾಗಲೂ ಹೋಗುವಾಗಲೂ ಅವರ ಹಿಂದೆ ಮುಂದೆ ತಿರುಗುತ್ತಿದ್ದ ಅಷ್ಟೂ ಜನರಲ್ಲಿ ಒಬ್ಬ ಮನಸ್ಸು ಮಾಡಿದ್ದರೆ ಐವತ್ತು ಕಟ್ಟಡದ ಒಡೆಯನಿಗೆ ಪುಸ್ತಕ ಮಾರುವ ಅವಸ್ಥೆ ಬರುತ್ತಿರಲಿಲ್ಲ ಎಂದೆನಿಸಿತು.
v v v
ಪೈಶಾಚಿಕತನ ಮನುಷ್ಯನನ್ನು ತಾನು ಅರಿಯದ ರೀತಿಯಲ್ಲಿ ಆವರಿಸಿಕೊಳ್ಳುತ್ತದೆ. ತಾನು ತಿಳಿಯದ ಹಾಗೆ ಅವನನ್ನು ನಾಶಗೊಳಿಸುತ್ತದೆ. ಪ್ರಖ್ಯಾತಿ ಹೆಚ್ಚುತ್ತಿದ್ದಂತೆ ಜೀವನ್ ಜಾರ್ಜ್ ರವರ ಸ್ನೇಹ ಕೂಟವು ಹೆಚ್ಚಾಗುತ್ತಾ ಹೋಯಿತು. ಒಳ್ಳೆಯ ಸಲಹೆಗಾರರು ದೂರವಾದರು. ಕೆಟ್ಟ ಸಲಹೆಗಾರರು ಹತ್ತಿರವಾದರು. ಕಳ್ಳರು, ಖದೀಮರು ಹೊಗಲುತ್ತಾ ತೆಗಲುತ್ತಾ ಅವರ ಶ್ರಮದ ಫಲವನ್ನು ನುಂಗ ತೊಡಗಿದರು. ವಿಲಾಸ, ವಿನೋದ, ಮೋಜು ಮಸ್ತಿಯಲ್ಲಿ ಮುಳುಗಿ ಥೈಲಾಂಡ್, ಹಾಂಕಾಂಗ್, ಸಿಂಗಾಪುರ್ ಸುತ್ತಿ ಬರುವಾಗ ನೋಟ್ ಬ್ಯಾನ್ ಜೆಎಸ್‌ಟಿಯ ಭಾರವಾದ ಹೊಡೆತ ಬೇರೆ ಬೀಳತೊಡಗಿತು. ಅವರ ಸೋಲನ್ನೇ ಎದುರು ನೋಡುತ್ತಿದ್ದವರು ಲಾಭ ಪಡೆದರು. ಬಡವರು ಇನ್ನೊಂದು ಶ್ರೀಮಂತನ ಕಚೇರಿಯ ಎದುರಿಗೆ ತಮ್ಮ ಸಾಲನ್ನು ಬದಲಿಸಿಕೊಂಡರು. ಸಾಲದ ಖೆಡ್ಡ ತುಂಬಿಸಿಕೊಳ್ಳಲು ತನ್ನ ಆಸ್ತಿ ಮಾರಿದರು.
ಸೋಲು ಮನುಷ್ಯನನ್ನು ಏಕಾಂತದೆಡೆಗೆ ಒಯ್ಯುತ್ತದೆ ಎಂಬುವುದು ಎಷ್ಟು ಸತ್ಯ. ಜೀವನ್ ಜಾರ್ಜ್ ಜೊತೆಗೆ ಈಗ ಯಾರೂ ಇಲ್ಲ. ಅವರು ಒಬ್ಬಂಟಿ. ತನ್ನನ್ನು ವೇದಿಕೆಗೆ ಕರೆಯುವವರಿಲ್ಲ, ಸನ್ಮಾನಿಸುವವರಿಲ್ಲ, ಹೊಗಲುವವರಿಲ್ಲ, ಮನುಷ್ಯತ್ವಕ್ಕಿಂತ ಆಸ್ತಿ ಅಂತಸ್ತಿಕೆಗೆ ಜನ ಗೌರವ ಕೊಟ್ಟರು ಎಂಬ ವಾಸ್ತವಿಕತೆ ಅರಿವಾಯಿತು.
v v v
ಅವರ ಕಚೇರಿ ಬಿಟ್ಟು ಗಲ್ಫ್ ಗೆ ತೆರಳಿದ ಮೇಲೆ ನಡೆದ ಈ ಘಟನೆಯನ್ನು ಗೆಳೆಯ ಅಪ್‌ಡೇಟ್ ಮಾಡುತ್ತಿದ್ದ. ಅವರನ್ನು ಒಮ್ಮೆ ಕಾಣಬೇಕೆಂಬ ಇರಾದೆ ಇದ್ದರೂ ಒತ್ತಡದ ನಡುವೆ ಸಮಯ ಕೂಡಿ ಬರಲಿಲ್ಲ. ಪುಸ್ತಕ ವ್ಯಾಪಾರಿಯಾದ ಜೋಳಿಗೆ ಹಿಡಿದ ಮಾಲಿಕನನ್ನು ನೋಡಿ ಬೇಸರವಾಯಿತು.
ಸೋಲಲು ಆತನ ಸ್ವಾಭಿಮಾನ ಬಿಡಲಿಲ್ಲವೆಂದನಿಸುತ್ತಿದೆ. ಕಾಡಿ ಬೇಡಿ ಬದುಕುವುದಕ್ಕಿಂತ ದುಡಿದು ಬದುಕುವುದರಲ್ಲಿ ಗೌರವ ಹೆಚ್ಚು. ಆಸ್ತಿ ಅಂತಸ್ತು ಒಂದು ಕಂಪನಕ್ಕೆ ದೂಳುಗಳಾಗಿ ಪರಿವರ್ತನೆಗೊಳ್ಳಬಹುದು. ನಾವು ಮಾಡಿದ ನಿಸ್ವಾರ್ಥ ಸೇವೆ ಕೆಲವರ ಹೃದಯಲ್ಲಾದರೂ ಸ್ಮರಿಸಲ್ಪಡುತ್ತದೆ.
ಆತ ನಡೆದ ದಾರಿಯ ಬೆನ್ನು ಹಿಡಿದು ನಡೆದೆ. ಓಣಿಯ ಮೂಲೆಯಲ್ಲಿರುವ ಗೂಡಂಗಡಿಯಲ್ಲಿ ಟೀ ಹೀರುತ್ತಿದ್ದರು.
`ಸರ್’ ಎಂದೆ.
ಟೀ ಕುಡಿತೀರ? ಎಂದು ಕೇಳಿದರು.
ಬೇಡ ಥ್ಯಾಂಕ್ಸ್ ಎಂದೆ.
ಸರ್ ಎಂದು ಮತ್ತೆ ಮಾತಿಗೆ ಕರೆದು “ನಿಮ್ಮ ಸೇವೆಯಿಂದ ಫಲ ಉಂಡವನು ನಾನು. ನೀವಿದನ್ನು ಸ್ವೀಕರಿಸಬೇಕು ಎಂದು ಐನೂರರ ಇಪ್ಪತ್ತು ನೋಟಿನ ಕಟ್ಟನ್ನು ಅವರ ಎದುರು ನೀಡಿದೆ. ಅವರು ನಯವಾಗಿ ತಿರಸ್ಕರಿಸಿ ಹೇಳಿದರು, ಸಂತೋಷ. ತುಂಬಾ ಸಂತೋಷ. ಕೃತಘ್ನ ಲೋಕದಲ್ಲಿ ನಿನ್ನಂತ ಒಬ್ಬ ಕೃತಾರ್ತ ಇರುವುದು ನೋಡಿ ಸಂತೋಷವಾಯಿತು. ಮತ್ತೆ ಅವರು ಬ್ಯಾಗಿನೊಳಗೆ ಕೈ ಹಾಕಿ ಪುಸ್ತಕ ತೆಗೆದರು. ನಾನಾಗಲೇ ತೆಗೆದಿದ್ದರ ನೆನಪೂ ಅವರಿಗಿರಲಿಲ್ಲ ಎಂದೆನಿಸುತ್ತದೆ.












