ಸನ್ಮಾರ್ಗ ವಾರ್ತೆ
✍️ಪಿ.ಪಿ. ಅಬ್ದುರ್ರಹ್ಮಾನ್
ಕುಟುಂಬ ಎಂಬುದು ಮಾನವನ ಆರಂಭ ಕಾಲದಿಂದಲೇ ಇರುವಂತಹ ಸಾಮಾಜಿಕ ವ್ಯವಸ್ಥೆಯಾಗಿದೆ. ಅದು ಮಾನವೀಯತೆಯ ಭಾಗವಾಗಿದೆ. ಜಾನುವಾರು, ದನ ಕರು, ನಾಯಿ, ಬೆಕ್ಕು ಇದ್ಯಾವುದಕ್ಕೂ ಕುಟುಂಬ ವ್ಯವಸ್ಥೆಗಳಿಲ್ಲ. ಜೋಡಿಯಾಗಿ ಸೇರಿ ಸಾಮಾನ್ಯವಾಗಿ ಸಂಪನ್ಮೂಲ ಉದ್ಭವವಾಗುತ್ತದೆ. ಆದರೆ ಅದು ಸುಭದ್ರವಾದ ಕುಟುಂಬ ವ್ಯವಸ್ಥೆಯಲ್ಲ. ಹಲವು ಜಂತುಗಳಿಗೆ ಜಾನುವಾರುಗಳಿಗೆ ಪ್ರಸವದೊಂದಿಗೆ ಕ್ರಮೇಣ ಅದರ ಸಂಬಂಧ ಕಳಚುವುದು ಎಂಬುದನ್ನು ನೋಟದಲ್ಲಿ ಅರ್ಥೈಸಬಹುದು.
ಸಂಸರ್ಗ, ಮಾನವ ಸಂಪನ್ಮೂಲದ ಉತ್ಪಾದನೆ, ಜೊತೆಗೆ ಕುಟುಂಬ. ಕುಟುಂಬ ವ್ಯವಸ್ಥೆಯಲ್ಲಿ ಇವೆಲ್ಲ ಒಳಪಡುತ್ತವೆ ಎಂಬುದರಲ್ಲಿ ತರ್ಕವಿಲ್ಲ. ಇದಕ್ಕಿಂತ ಮಿಗಿಲಾಗಿ ತಲೆಮಾರುಗಳ ತನಕ ಮುಂದುವರಿಯುವ ಸುದೀರ್ಘವಾದ ಸುಭದ್ರವಾದ ಕುಟುಂಬ ವ್ಯವಸ್ಥೆ ಇರುತ್ತದೆ. ಕುಟುಂಬ ಎಂಬುದು ಮಾನವೀಯತೆಯ ಭಾಗವಾಗಿದೆ. ಕುಟುಂಬ ಎಲ್ಲಿಯ ತನಕ ಶಿಥಿಲವಾಗುತ್ತದೆಯೋ ಅಲ್ಲಿಯ ತನಕ ಮಾನವೀಯತೆಯೂ ನಶಿಸುತ್ತದೆ ಎಂಬುದು ಅನುಭವ ವೇದ್ಯಾವಾದುದು.
ಇಸ್ಲಾಮ್ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯವನ್ನು ನೀಡುತ್ತದೆ. ಮಾನವ ಕುಲದ ಆರಂಭದಿಂದಲೇ ಕುಟುಂಬ ಎಂಬ ನೆಲೆಯಲ್ಲಿ ಅಲ್ಲಾಹನು ತನ್ನ ಆದೇಶಗಳನ್ನು ಕೇವಲ ಗಂಡು, ಹೆಣ್ಣುಗಳಿಗೆಂದು ಪ್ರತ್ಯೇಕವಾಗಿ ಹೇಳಿಲ್ಲ. “ಆದಮ್! ನೀನು ಮತ್ತು ನಿನ್ನ ಬಾಳ ಸಂಗಾತಿ ಸ್ವರ್ಗದಲ್ಲಿ ವಿಹರಿಸಿರಿ” (ಪವಿತ್ರ ಕುರ್ಆನ್) ಎಂದು ಈರ್ವರನ್ನು ಸೇರಿಸಿ ಹೇಳಲಾಗಿದೆ. ನಂತರವೂ ದ್ವಿವಚನದಲ್ಲಿಯೇ ಆದೇಶಿಸಲಾಗಿದೆ. “ನೀವೀರ್ವರೂ ಆಹಾರವನ್ನು ಸೇವಿಸಿರಿ (ಫಕುಲಾ…) ನೀವೀರ್ವರೂ ಬಯಸುವೆಡೆಗೆ (ಹೈಸು ಶಿಅತುಮಾ…) ನೀವು ಈರ್ವರೂ ಸಮೀಪಿಸಬೇಡಿ (ವಲಾ ತಖ್ರಬಾ…) ಗಂಡು ಹೆಣ್ಣನ್ನು ಒಂದೇ ಆತ್ಮದಿಂದ ಸೃಷ್ಟಿಸಲಾಗಿದೆ ಎಂದು ಕುರ್ಆನಿನಲ್ಲಿ ಹೇಳಲಾಗಿದೆ.
ನೀವು ಪರಸ್ಪರ ಸಂಗಾತಿಗಳು ಎಂಬುವುದು ಇಸ್ಲಾಮಿನ ಸ್ಪಷ್ಟವಾದ ನಿರ್ದೇಶನವಾಗಿದೆ. ಝೌಜ್, ಝೌಜತ್ ಎಂಬುದು ಇಸ್ಲಾಮಿನ ಪ್ರಯೋಗವಾಗಿದೆ. ಸ್ತ್ರೀ -ಪುರುಷರು ಪರಸ್ಪರ ಸಹಾಯಕರಾದ ಸಂಗಾತಿಗಳು, ಕುಟುಂಬದ ಭಾಗೀದಾರರು ಎಂಬ ಉದಾತ್ತವಾದ ಸಂದೇಶವನ್ನು ಕುರ್ಆನ್ ನೀಡುತ್ತದೆ. ದಮನಿಸುವಿಕೆ, ಅಧಿಕಾರ ಪ್ರಯೋಗ, ಮೇಧಾವಿತ್ವ ಎಂಬುದು ಕುಟುಂಬ ಅರಳಲು ಸಹಾಯಕವಾಗದು. ಆದ್ದರಿಂದ ಹಾಗೆ ಮಾಡಬಾರದು.
ಪವಿತ್ರ ಕುರ್ಆನಿನಲ್ಲಿ ನಮಾಝ್ನ ಸಮಯ ಕ್ರಮದ ಬಗ್ಗೆ, ರಕಅತ್ಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿಲ್ಲ. (ಇವೆಲ್ಲವನ್ನೂ ಕುರ್ಆನನ್ನು ಮನುಷ್ಯರಿಗೆ ತಲುಪಿಸಿದ ಪ್ರವಾದಿವರ್ಯರು(ಸ) ಸುಂದರವಾಗಿ ವಿವರಿಸಿದ್ದಾರೆ.) ಆದರೆ ಕುರ್ಆನ್ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ವಿವರಿಸಿದೆ ಎಂಬುದು ಗಮನಾರ್ಹ. ಕುಟುಂಬ ವ್ಯವಸ್ಥೆಯ ಮಹತ್ವವನ್ನು ಇದರಿಂದ ಗ್ರಹಿಸಬಹುದು.
ವಿವಾಹ, ಮಹ್ರ್, ದಂಪತಿಗಳ ನಡುವಿನ ಕಲಹ, ಅದನ್ನು ಪರಿಹರಿಸುವ ರೀತಿ, ಅನಿವಾರ್ಯವೆಂದಾಗ ವಿವಾಹ ವಿಚ್ಛೇದನದ ರೀತಿ, ಮರಳಿ ಪಡೆಯುವ ರೀತಿ, ಮತಾಅï, ಇದ್ದ, ಖರ್ಚು ವೆಚ್ಚ, ಆರ್ತವ, ದಂಪತಿಯರ ನಡುವಿನ ನ್ಯಾಯ, ವಾರೀಸು ಹಕ್ಕು, ಮಕ್ಕಳಿಗೂ ಬಾಳ ಸಂಗಾತಿಗೂ ಮಾಡುವ ಪ್ರಾರ್ಥನೆ, ಪತ್ನಿಯರೊಂದಿಗಿನ ವರ್ತನೆ, ಕುಟುಂಬದ ಯಜಮಾನನ ಅನುಸರಣೆ, ಮಾತಾಪಿತರ ಜೊತೆಗಿನ ವರ್ತನೆ, ಕುಟುಂಬದವರ ಜೊತೆ ಸಮಾಲೋಚನೆ, ಸ್ತನಪಾನ ವಿವಾಹ ನಿಷಿದ್ಧರಾದವರು, ದೂರ ಇರಬೇಕಾದವರು, ಹತ್ತಿರ ಇರಬೇಕಾದವರು, ಸಂಬಂಧಗಳ ದೃಢತೆ ಮುಂತಾದ ಎಲ್ಲಾ ಪ್ರಾಮುಖ್ಯವಾದ ವಿಚಾರಗಳನ್ನು ಕುರ್ಆನ್ ಬಹಳ ಸ್ಪಷ್ಟವಾಗಿ ವಿವರಿಸಿದೆ. ಇದರಿಂದ ಸುಭದ್ರ ಕುಟುಂಬ ಎಂಬುದು ಇಸ್ಲಾಮಿನ ಬಹಳ ಮಹತ್ತರವಾದ ವಿಚಾರ ಎಂಬುದು ಗಮನಾರ್ಹ.
ಪವಿತ್ರ ರಮಝಾನ್ನಲ್ಲಿ ಉಪವಾಸ ವ್ರತಧಾರಿಯಾಗಿರಿ, ನೀವು ತಖ್ವಾ ಉಳ್ಳವರಾಗಿರಿ. (ಲಅಲ್ಲಕುಮ್ ತತ್ತಕೂನ್) ಎಂದು ಕುರ್ಆನಿನಲ್ಲಿ ವಿವರಿಸಲಾಗಿದೆ. ಇದು ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಒಂದು. ಉಪವಾಸ ವ್ರತ, ತಖ್ವಾ, ಪವಿತ್ರ ಕುರ್ಆನ್, ಸೃಷ್ಟಿಕರ್ತನಿಗೆ ಸ್ತುತಿ, ಅವನ ಆರಾಧನೆ, ಪ್ರಾರ್ಥನೆ, ಅಲ್ಲಾಹನ ಕರೆಗೆ ಓಗೊಟ್ಟು ಸಾಗುವುದು ಮುಂತಾದ ಪ್ರಾಮುಖ್ಯವಾದ ವಿಚಾರಗಳನ್ನು (ಅಲ್ಬಕರ 183-186) ಪ್ರಸ್ತಾಪಿಸಿದ ಕೂಡಲೇ ರಮಝಾನಿನ ಹಗಲಿನಲ್ಲಿ ನೀವು ನಿಮ್ಮ ಶಯ್ಯಾಗಾರದಿಂದ ದೂರವಿರಿ ಎಂದು ಸ್ಪಷ್ಟವಾಗಿ ವಿವರಿಸಿದೆ. (ಅಲ್ ಬಕರ: 187) ನಂತರ ಆ ಸೂಕ್ತವು ನೀವು ಮುತ್ತಕೀಗಳಾಗಿರಿ ಎಂದು ಮುಕ್ತಾಯವಾಗುತ್ತದೆ. ಉಪವಾಸ ವ್ರತ ಅದಕ್ಕೆ ಸಂಬಂಧಿಸಿದ ಸತ್ಕರ್ಮಗಳ ಮೂಲಕ ಯಾವುದನ್ನು ಗಳಿಸುತ್ತಾರೆಯೋ ಅದನ್ನು ನಿಮ್ಮ ಶಯ್ಯಾಗಾರದಲ್ಲೂ ಗಳಿಸಿರಿ ಎಂದಾಗಿದೆ. ದಾಂಪತ್ಯ ಬದುಕಿನ ಬಗ್ಗೆ ಕುರ್ಆನ್ ಎಷ್ಟೊಂದು ಮಹತ್ವ ನೀಡಿದೆ ಎಂಬುದನ್ನು ಇದರಿಂದ ಅರ್ಥೈಸಬಹುದು.
ವಿವಾಹವೆಂಬುವುದು ಕೇವಲ ಕಾಮದಾಹ ತೀರಿಸುವ ಉಪಾಧಿಯಲ್ಲ ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ. ಬದಲಾಗಿ ಅದು ನೈತಿಕತೆ, ಸತ್ಯವಿಶ್ವಾಸವನ್ನು ಸುಭದ್ರಗೊಳಿಸುವ ವ್ಯವಸ್ಥೆಯಾಗಿದೆ ಎಂದು ಕಲಿಸಲಾಗಿದೆ.
ಓರ್ವನು ತನ್ನ ಸಂಗಾತಿಯ ಮೂಲಕ ತನ್ನ ಬಯಕೆ ಪೂರ್ತೀಕರಿಸಲು ಸಾಧ್ಯವಾದರೆ ಅದರಲ್ಲಿ ಅವನಿಗೆ/ಳಿಗೆ ಅಲ್ಲಾಹನ ಪ್ರತಿಫಲವಿದೆ ಎಂದು ಪ್ರವಾದಿವರ್ಯರು(ಸ) ಹೇಳಿದಾಗ, ಕಾಮದಾಹವನ್ನು ಪೂರ್ತೀಕರಿಸುವುದು ಪುಣ್ಯ ಕರ್ಮವೇ ಎಂದು ಆಶ್ಚರ್ಯದಿಂದ ಓರ್ವನು ಕೇಳಿದಾಗ ಪ್ರವಾದಿವರ್ಯರು(ಸ) ಹೇಳಿದರು, “ಆತ ನಿಷಿದ್ಧ ಮಾರ್ಗದಿಂದ ಅದನ್ನು ಪೂರ್ತೀಕರಿಸಿದರೆ ಶಿಕ್ಷೆ ಸಿಗುತ್ತದೆಯಲ್ಲವೇ?” ಎಂದು ಕೇಳುತ್ತಾ ಸ್ಪಷ್ಟವಾದ ಉತ್ತರ ನೀಡಿದ್ದು ಸ್ಮರಣಾರ್ಹವಾಗಿದೆ.
ಕುಟುಂಬ ಜೀವನವನ್ನು ಇಸ್ಲಾಮ್ ಅಶ್ಲೀಲವಾಗಿ ಕಾಣದು ಅದನ್ನು ಉದಾತ್ತವಾದ ವಿಚಾರವಾಗಿ ಕಾಣುತ್ತದೆ. ಸರಳ ಸುಂದರವಾದ ದಾಂಪತ್ಯ ಜೀವನವು ಪರಲೋಕದ ಸ್ವರ್ಗದ ಹಾದಿಯಾಗಿದೆ. ಸ್ವರ್ಗದ ಬದುಕನ್ನು ಕುರ್ಆನ್ ಸಂಗಾತಿಯೊಂದಿಗೆ ಪರಿಚಯಿಸುತ್ತದೆ. ಪರಲೋಕದ ಸ್ವರ್ಗದಲ್ಲಿ ಬಾಳಸಂಗಾತಿಯೂ, ಸಂತತಿಗಳೂ ಜೊತೆಯಲ್ಲಿರಬೇಕೆಂದು ಸತ್ಯವಿಶ್ವಾಸಿ ಬಯಸಬೇಕು. ಅದಕ್ಕಾಗಿ ಪ್ರಾರ್ಥಿಸುತ್ತಾ ಪ್ರಯತ್ನಿಸುತ್ತಾ ಇರಬೇಕು.












