ಸನ್ಮಾರ್ಗ ವಾರ್ತೆ
✍️ಖದೀಜ ನುಸ್ರತ್
ಆರೋಗ್ಯಕರ ಮೆದುಳಿನ ಬೆಳವಣಿಗೆಗೆ ಪೋಷಕರ ಸಮಯ, ಸಾಮಿಪ್ಯ ಮತ್ತು ತಮ್ಮ ಮಕ್ಕಳ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಭಾವನಾತ್ಮಕ ಬೆಂಬಲವನ್ನು ನೀಡಬೇಕಾಗಿದೆ. ಮಕ್ಕಳಿಗೆ ಸರಿಯಾದ ಪ್ರೀತಿ, ಶಾಂತಿಯುತವಾದ ವಾತಾವರಣ ಮತ್ತು ಕುಟುಂಬದಲ್ಲಿ ಸುರಕ್ಷಿತರಾಗಿದ್ದೇವೆ ಎಂಬ ಭಾವನೆಗಳು ಬಂದಾಗ, ಅವರ ಮೆದುಳಿನಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ರಾಸಾಯನಿಕಗಳನ್ನು ಬಿಡುಗಡೆಯಾಗುತ್ತದೆ. ಮಗುವಿನ ಜನನವಾಗುವಾಗ ಸುಮಾರು 20-30% ಮಾತ್ರ ಮೆದುಳು ಬೆಳವಣಿಗೆಯಾಗಿರುತ್ತದೆ. ಅನಂತರ ಇದು ಸುಮಾರು 20 ವಯಸ್ಸಿನವರೆಗೆ ಮುಂದುವರೆಯುತ್ತದೆ.
ಮೊದಲಿನ ಹತ್ತು ವರ್ಷ ಮೆದುಳಿನ ಬೆಳವಣಿಗೆಯ ಸಮಯವಾಗಿರುತ್ತದೆ. ಈ ಸಮಯದಲ್ಲಿ ಅವರಿಗೆ ಸ್ವತಃ ಎಲ್ಲಾ ವಿಷಯಗಳನ್ನು ಚಿಂತಿಸುವ ಸಾಮರ್ಥ್ಯವಿರುವುದಿಲ್ಲ. ಅವರು ಮಾತಾಪಿತರು ಮತ್ತು ನಿಕಟ ಬಂಧುಗಳಿಂದ ಹಲವಾರು ವಿಷಯಗಳನ್ನು ನೋಡಿ, ಕೇಳಿ ಮತ್ತು ಅನುಭವಿಸಿ ಕಲಿಯುತ್ತಾರೆ. ಹತ್ತು ವಯಸ್ಸಿನಿಂದ ಇಪ್ಪತ್ತು ವಯಸ್ಸಿನವರೆಗೆ ಅಭಿವೃದ್ಧಿಯ ಸಮಯವಾಗಿರುತ್ತದೆ. ನಂತರ ಅವರು ಹಲವಾರು ವಿಷಯಗಳ ಬಗ್ಗೆ ಚಿಂತಿಸುವರು. ಕೆಲವೊಮ್ಮೆ ಮಾತಾಪಿತರು ಹೇಳುವುದಕ್ಕೆ ವಿರುದ್ಧವಾಗಿಯೂ ಚಿಂತಿಸುವರು. ಈ ಸಮಯದಲ್ಲಿ ಅವರೊಂದಿಗೆ ಬಹಳ ಜಾಗರೂಕತೆಯಿಂದ ವರ್ತಿಸಬೇಕು. ಅತಿಯಾಗಿ ಉಪದೇಶಿಸಬಾರದು, ಗದರಿಸಬಾರದು ಮತ್ತು ಬೆದರಿಸಬಾರದು. ಅವರಿಗೆ ವಿರುದ್ಧವಾಗಿ ವರ್ತಿಸಿದರೆ ಹೆತ್ತವರು ಶತ್ರುಗಳಾಗಿ ಕಾಣುವ ಮತ್ತು ದಾರಿ ತಪ್ಪುವಂತಹ ಸಮಯವಾಗಿರುತ್ತದೆ. ಆದುದರಿಂದ ನೀವು ಅವರನ್ನು ಪ್ರೀತಿಸುತ್ತೀರಿ, ಉತ್ತಮ ಸ್ನೇಹಿತರು ಎಂದು ಪ್ರಕಟವಾಗುವ ರೀತಿಯಲ್ಲಿ ವರ್ತಿಸಬೇಕು ಮತ್ತು ಮಾತನಾಡಬೇಕು. ಅಗತ್ಯವಿದ್ದರೆ ಮಕ್ಕಳ ಮಾನಸಿಕ ತಜ್ಞರೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು.
ಮಕ್ಕಳ ದೈನಂದಿನ ಚಟುವಟಿಕೆ, ಅವರು ತಿನ್ನುವ ಆಹಾರ, ಅವರೊಂದಿಗೆ ಮಾತನಾಡುವ ರೀತಿ, ಅವರ ನಿದ್ರಾ ಸಮಯ, ಅವರ ಮಾತು ವರ್ತನೆಗಳು ಹಾಗೂ ಮುಗ್ದವಾದ ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಹೆತ್ತವರು ಪ್ರತಿಕ್ರಿಯಿಸುವ ರೀತಿ ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆತ್ತವರ ಕೆಲವೊಂದು ವರ್ತನೆಗಳು ಮಕ್ಕಳ ಮನಸ್ಸಿನಲ್ಲಿ ಸದಾಕಾಲ ನೆನಪಾಗಿಯೇ ಉಳಿಯುತ್ತದೆ. ಆದುದರಿಂದ ಉತ್ತಮ ವರ್ತನೆಗಳು ನೆನಪಿನಲ್ಲಿ ಉಳಿಯುವಂತೆ ಮತ್ತು ಅನುಚಿತವಾದ ವರ್ತನೆಗಳು ಮನಸ್ಸಿನಲ್ಲಿ ಉಳಿಯದಂತೆ ಜಾಗರೂಕತೆ ವಹಿಸಬೇಕು. ತಮ್ಮ ಕೋಪ, ಹತಾಶೆ, ಉದ್ವೇಗ ಅಥವಾ ಇನ್ನಾವುದೇ ಭಾವನೆಗಳನ್ನು ಮಕ್ಕಳೊಂದಿಗೆ ಪ್ರಕಟಿಸಬಾರದು. ನಮ್ಮ ಭಾವನೆಗಳನ್ನು ಯಾವ ರೀತಿ ನಿಯಂತ್ರಿಸಬೇಕೆಂದು ಸ್ವತಃ ಕಲಿತಿರಬೇಕು. ಸಣ್ಣ ಪ್ರಾಯದಿಂದಲೇ ಪೋಷಕರು ಹೆಚ್ಚಿನ ಸಮಯ ಮಕ್ಕಳೊಂದಿಗೆ ಆಟವಾಡಿದಾಗ ಅವರ ನಡುವಿನ ಸಂಬಂಧ ದೃಢವಾಗುತ್ತದೆ. ಪ್ರವಾದಿ ಮುಹಮ್ಮದ್(ಸ) ನಮಾಝ್ ಮಾಡುವಾಗಲೂ ಮೊಮ್ಮಕ್ಕಳು ಅವರೊಂದಿಗಿರುತ್ತಿದ್ದರು ಹಾಗೂ ಮೊಮ್ಮಕ್ಕಳು ಅವರ ಭುಜದಲ್ಲಿ ಆಡುತ್ತಿದ್ದರು.
“ಒಮ್ಮೆ ಪ್ರವಾದಿವರ್ಯರು ತಮ್ಮ ಮೊಮ್ಮಗ ಹ.ಹುಸೈನ್(ರ)ರನ್ನು ಮುದ್ದಿಸುತ್ತಿದ್ದರು. ಅಕ್ರಅ ಬಿನ್ ಹಾಬಸ್ ಅವರೂ ಅಲ್ಲಿದ್ದರು. ಅವರು ಹೇಳಿದರು, “ನನಗೆ ಹತ್ತು ಮಂದಿ ಮಕ್ಕಳಿದ್ದಾರೆ. ಆದರೆ ನಾನೆಂದೂ ಒಂದು ಮಗುವನ್ನೂ ಮುದ್ದಿಸಿರಲಿಲ್ಲ.” ಪ್ರವಾದಿ(ಸ) ಅವರು (ಅದನ್ನು ಕೇಳಿ) ಅವರನ್ನೊಮ್ಮೆ ನೋಡಿದರು ಮತ್ತು ಹೀಗೆಂದರು, “ಯಾರು ಕರುಣೆ ತೋರುವುದಿಲ್ಲವೋ ಅಲ್ಲಾಹನೂ ಅವನಿಗೆ ಕರುಣೆ ತೋರುವುದಿಲ್ಲ.” (ವರದಿ: ಹ.ಅಬೂಹುರೈರಾ(ರ) – ಬುಖಾರಿ)
ಸ್ಪರ್ಶವು ಮಾನವ ಶಿಶುಗಳಲ್ಲಿ ಬೆಳೆಯುವ ಮೊದಲ ಇಂದ್ರಿಯವಾಗಿದೆ. ಮಗು ಕೆಲವೊಮ್ಮೆ ಸುಮ್ಮನೆ ಅಳುತ್ತದೆ. ಅದಕ್ಕೆ ತಾಯಿಯ ಸ್ಪರ್ಶ, ಅಪ್ಪುಗೆ ಸಿಕ್ಕಿದಾಗ ಸುಮ್ಮನಾಗುವುದನ್ನು ಕಾಣಬಹುದು. ಸ್ಪರ್ಶವು ಹೆತ್ತವರು ಮತ್ತು ಮಕ್ಕಳ ಮಧ್ಯೆ ಉತ್ತಮ ಬಂಧವನ್ನುಂಟು ಮಾಡುತ್ತಾ ಮಗುವಿಗೆ ಸಾಂತ್ವನ ನೀಡುವುದು. ಸ್ಪರ್ಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ತಮ ಸ್ಪರ್ಶ ಸಿಗದ ಮಕ್ಕಳಿಗೆ ಕಲಿಕೆಯಲ್ಲಿ ಅಸಮರ್ಥತೆ ಮತ್ತು ನೆನಪು ಶಕ್ತಿ ಕೊರತೆಯುಂಟಾಗಬಹುದು.
ಮಕ್ಕಳು ಸುಮಾರು ಏಳು ವರ್ಷದವರೆಗೆಯಾದರೂ ತಂದೆತಾಯಿಯ ಜೊತೆಯಲ್ಲಿಯೇ ಮಲಗಬೇಕು. ಇಲ್ಲವಾದರೆ ಅವರ ಉಪಬೋಧ ಮನಸ್ಸಿನಲ್ಲಿ ಮತ್ತು ಕನಸಿನಲ್ಲಿಯೂ ಭಯವುಂಟಾಗುವ ಸಾಧ್ಯತೆ ಇದೆ. ಕೆಲವೊಮ್ಮೆಯಾದರೂ ಮನೆಯಲ್ಲಿ ಕುಟುಂಬದ ಇತರ ಸದಸ್ಯರೊಂದಿಗೆ ಜೊತೆಯಾಗಿ ಮಲಗಿ ಅಭ್ಯಾಸವಿರಬೇಕು. ಯಾವುದಾದರೂ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಂದೆ ತಾಯಿಯಿಲ್ಲದೆ ಸಮಾಧಾನದಿಂದ ಇರಲು ಸಾಧ್ಯವಾಗಬೇಕು.
ಮಕ್ಕಳು ಮನೆಯಲ್ಲಿರುವಾಗ ಅಥವಾ ಹೊರಗೆ ಹೋದಾಗ ಶಬ್ಧ ಮಾಡದೆ, ಓಡಾಡದೆ ಸುಮ್ಮನೆ ಕುಳಿತುಕೊಳ್ಳಲು ಆದೇಶಿಸಬೇಡಿರಿ. ಅವರು ಶಬ್ಧ ಮಾಡಿ ಓಡಾಡಿ ಆಟವಾಡುವಾಗಲೇ ಮೆದಳು ಬೆಳವಣಿಗೆಯಾಗುತ್ತದೆ. ಕೆಲವೊಮ್ಮೆ ಜಗಳ ಮಾಡಿ, ಕೂಗಿ, ಅಳುತ್ತಾ ತಮ್ಮ ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಲೇ ಬೆಳೆಯಲಿ. ಗದರಿಸಿ, ಬೆದರಿಸಿ, ಬೆತ್ತ ತೋರಿಸಿ ಅವರ ಭಾವನೆಗಳನ್ನು ಅದುಮಿಡುವಂತೆ ಮಾಡಬೇಡಿರಿ. ಯಾವುದೇ ವಸ್ತು ಮತ್ತು ವಿಷಯಗಳನ್ನು ಕೇಳಿದಾಗ ನಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಡಿರಿ. ಕೆಲವೊಮ್ಮೆ ಹೆತ್ತವರೊಂದಿಗೆ ಕೆಟ್ಟದಾಗಿ ವರ್ತಿಸಲಿ. ಅವರು ಸುರಕ್ಷಿತ ಎಂದು ಭಾವಿಸುವಲ್ಲೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕೋಪೋದ್ರೇಕದಲ್ಲಿರುವಾಗ ಅವರನ್ನು ಅಪ್ಪಿಹಿಡಿದು ಸ್ಪರ್ಶಿಸಿ ಚುಂಬಿಸಿರಿ ಮತ್ತು ಧೈರ್ಯದ ಮಾತುಗಳನ್ನಾಡಿರಿ. ದೊಡ್ಡವನಾದ ನಂತರ ಮಕ್ಕಳು ಏನಾಗಬೇಕೆಂಬುದು ಪೋಷಕರು ಮಕ್ಕಳನ್ನು ಬೆಳೆಸುವ ರೀತಿಯನ್ನು ಅವಲಂಬಿಸಿರುತ್ತದೆ.
ಮಕ್ಕಳ ಆಟಿಕೆ ಮತ್ತು ಅವರು ಆಡುವ ಆಟಗಳು ಶಾರೀರಿಕ, ಮಾನಸಿಕ ಮತ್ತು ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ವಸ್ತುಗಳೂ ಮಕ್ಕಳಿಗೆ ಆಡಲು ಅವಶ್ಯಕತೆ ಇಲ್ಲ. ಆಟಿಕೆಯ ವಸ್ತುಗಳನ್ನು ಖರೀದಿಸುವಾಗ ಮಕ್ಕಳ ವಯಸ್ಸನ್ನು ಪರಿಗಣಿಸಬೇಕು.
ನಾವು ಮನೆಯಲ್ಲಿ ಒಂದು ಗ್ಯಾಸ್ ನ ಒಲೆ, ಒಂದು ಫ್ರಿಡ್ಜ್, ಒಂದು ವಾಶಿಂಗ್ ಮೆಶಿನ್, ಒಂದು ಕಾರು, ಸ್ಕೂಟರ್ ಉಪಯೋಗಿವಂತೆ ಮಕ್ಕಳಿಗೂ ಆಟವಾಡಲು ಒಂದು ವಸ್ತು ಸಾಕು. ಒಮ್ಮೆ ಆಡಲು ಒಂದು ವಸ್ತುವನ್ನು ಮಾತ್ರ ನೀಡಬೇಕು. ಆಟಿಕೆಗಳ ರಾಶಿ ಅವನ ಗಮನ ವ್ಯಾಪ್ತಿ ಹಾಗೂ ಏಕಾಗ್ರತೆಯನ್ನು ಕಡಿಮೆಗೊಳಿಸುತ್ತದೆ. ಆಟಿಕೆಗಳು ಅವರಲ್ಲಿ ಭೌತಿಕತೆಯನ್ನುಂಟು ಮಾಡದಿರಲಿ. ಅವರಾಡುವ ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್ ಗಳ ಬಗ್ಗೆ ನಿಗಾವಹಿಸಿರಿ. ಗನ್ ಶೂಟ್ ಮತ್ತು ಜನರನ್ನು ಕೊಲ್ಲುವ ಯುದ್ಧಗಳಂತಹ ವಿಡಿಯೋ ಗೇಮ್ ಗಳನ್ನು ಅತಿಯಾಗಿ ಆಡುವುದರಿಂದ ದೂರವಿರಬೇಕು.
ಲೆಗೊ, ಬ್ಲೋಕ್ಸ್, ಡಿಐವೈ ಆರ್ಟ್ ಕಿಟ್, ಕ್ಲೇ ಮೌಲ್ಡಿಂಗ್, ಪಝ್ಲ್, ಮ್ಯಾಗ್ನೆಟಿಕ್ ಟೈಲ್ಸ್ ಹೀಗೆ ಕಣ್ಣು, ಕೈ , ಮೆದುಳು ಸಂಪರ್ಕವಿರುವಂತಹ ಆಟ ಅವರಲ್ಲಿ ಸೃಜನಶೀಲತೆ ಹೆಚ್ಚಿಸುವುದು. ಪಂಚೇಂದ್ರಿಯಗಳು ಸಕ್ರಿಯವಾಗುವಂತಹ ಆಟಗಳನ್ನು ಪ್ರೊತ್ಸಾಹಿಸಬೇಕು. ಮನೆಯಿಂದ ಹೊರಗೆ ಹೋಗಿ ಹಚ್ಚಹಸಿರು ಹುಲ್ಲು, ಮಣ್ಣು, ನೀರು, ಸೂರ್ಯನ ಬೆಳಕಿನಲ್ಲಿ ಆಟವಾಡಲು, ಸಮುದ್ರದ ಅಲೆ, ಜಲಪಾತ, ಜಲಾಶಯ, ಸೂರ್ಯಸ್ತಮಾನ ನೋಡಲು, ಸೈಕಲು ಓಡಿಸಲು, ಇನ್ನಿತರ ಹೊರಾಂಗಣ ಕ್ರೀಡೆಯನ್ನು ದಿನಂಪ್ರತಿ ಕನಿಷ್ಠ ಅರ್ಧಗಂಟೆಯಾದರೂ ಆಡಲು ಅವಕಾಶ ಕಲ್ಪಿಸಬೇಕು.
ಇದರಿಂದ ಶುದ್ಧವಾದ ಗಾಳಿಯೊಂದಿಗೆ ಶರೀರಕ್ಕೆ ಬೇಕಾದಂತಹ ರೋಗ ನಿರೋಧಕ ವಿಟಮಿನ್ ಗಳನ್ನು ಪಡೆಯಬಹುದಾಗಿದೆ. ಸಾಕು ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ನೀಡಲು, ಮರ ಗಿಡಗಳಿಗೆ ನೀರು ಹಾಕಲು ಪ್ರೆರೇಪಿಸಬೇಕು. ನಿಮಗೆ ಕ್ಷುಲ್ಲಕ್ಕವೆಂದು ಕಾಣುವ ಸಣ್ಣಪುಟ್ಟ ಆಟೋಟ ಮಕ್ಕಳ ಜಗತ್ತಿನಲ್ಲಿ ದೊಡ್ಡದಾಗಿರುತ್ತದೆ. ಅವರ ಯಾವುದೇ ಆಸೆ, ಆಕಾಂಕ್ಷೆಗಳನ್ನು ಕಡೆಗಣಿಸಬೇಡಿರಿ. ಸಣ್ಣ ಪ್ರಾಯದಲ್ಲೇ ಪುಸ್ತಕ ಓದಲು, ಚಿತ್ರ ನೋಡಲು, ಚಿತ್ರ ಬಿಡಿಸಲು, ಬಣ್ಣ ಹಚ್ಚಲು, ಹಾಡಲು, ಕುಣಿಯಲು ಮಾತ್ರವಲ್ಲ ತಾಯಿಯು ಮಾಡುವ ದೈನಂದಿನ ಎಲ್ಲಾ ಮನೆ ಕೆಲಸಗಳಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಳ್ಳುವಂತೆ ಮಾಡಬೇಕು. ಆಟೋಟ ಸ್ಪರ್ಧೆಗಳು, ಮದುವೆ ಮತ್ತಿತರ ಕುಟುಂಬ ಸಮ್ಮಿಲನ ಕಾರ್ಯಕ್ರಮಗಳು ಸಾಮಾಜಿಕ ಕೌಶಲ್ಯ, ಭಾವನಾತ್ಮಕ ಸಂಬಂಧ ಮತ್ತು ಸಹಕರಿಸುವಂತಹ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ.












