ಮುಹಮ್ಮದ್ ರಝಾ ಮಾನ್ವಿ AIITA ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮರು ಆಯ್ಕೆ

0
318

ಸನ್ಮಾರ್ಗ ವಾರ್ತೆ

ನವದೆಹಲಿ: ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (AIITA) ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಭಟ್ಕಳದ ನ್ಯೂ ಶಮ್ಸ್ ಪ್ರೌಢ ಶಾಲೆಯ ಹಿರಿಯ ಶಿಕ್ಷಕ ಮತ್ತು ಪತ್ರಕರ್ತ ಮುಹಮ್ಮದ್ ರಝಾ ಮಾನ್ವಿ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಯಾಸೀನ್ ಭಿಕ್ಬಾ ಮರು ಆಯ್ಕೆಯಾದರು.

2021-2024 ಅವಧಿಯಲ್ಲಿ ಈ ಇಬ್ಬರೂ ಕರ್ನಾಟಕದಲ್ಲಿ AIITA ಸಂಘಟನೆಯನ್ನು ಶ್ರೇಷ್ಟ ರೀತಿಯಲ್ಲಿ ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಶೇಷವಾಗಿ, COVID-19 ಸಮಯದಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಪರಿಹಾರ ಒದಗಿಸುವಲ್ಲಿ ತಮ್ಮ ಶ್ರಮದಿಂದ ಜನಮನ್ನಣೆ ಗಳಿಸಿದ್ದರು.

ಡಿಸೆಂಬರ್ 26 ಮತ್ತು 27 ರಂದು ದೆಹಲಿಯ AIITA ಕೇಂದ್ರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ, ಮಾನ್ವಿಯವರನ್ನು 2025-2028 ಅವಧಿಗೆ ಸರ್ವಾನುಮತದಿಂದ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ, ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದುಲ್ಲಾ ಹುಸೇನಿ, ಪ್ರಧಾನ ಕಾರ್ಯದರ್ಶಿ ಟಿ. ಆರಿಫ್ ಅಲಿ, AIITA ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಂ ಶೇಖ್, ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹ್ಮದ್ ಕೊತ್ವಾಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾನ್ವಿಯವರ ಮರು ಆಯ್ಕೆಯನ್ನು ರಾಜ್ಯದ ಶಿಕ್ಷಣ ವಲಯದಲ್ಲಿ ಮೆಚ್ಚುಗೆ ಗಳಿಸಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ AIITA ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಉನ್ನತಿಗೇರುವ ನಿರೀಕ್ಷೆ ವ್ಯಕ್ತವಾಗಿದೆ.