ಸನ್ಮಾರ್ಗ ವಾರ್ತೆ
ಫೆಲೆಸ್ತೀನ್ ಪರ ವಿದ್ಯಾರ್ಥಿಗಳಿಗೆ ವಿಸಾ ರದ್ದು ಪಡಿಸುವ ವಿವಾದಿತ ಕಾನೂನಿಗೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ.
ಇದೇ ವೇಳೆ ಟ್ರಂಪ್ ಅವರ ಈ ನಡೆಯ ವಿರುದ್ಧ ಮಾನವ ಹಕ್ಕು ಸಂಘಟನೆಗಳು ಮತ್ತು ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ವಂಶ ಹತ್ಯೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಯಾವುದೇ ವಿದ್ಯಾರ್ಥಿಯ ವಿಸಾವನ್ನು ರದ್ದುಗೊಳಿಸುವುದಕ್ಕೆ ಈ ಕಾನೂನು ಅವಕಾಶ ನೀಡಲಿದೆ.
2023 ಅಕ್ಟೋಬರ್ 7ರಂದು ಇಸ್ರೇಲ್ ನ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕ ನಮ್ಮ ಕ್ಯಾಂಪಸ್ ಗಳಲ್ಲಿ ಮತ್ತು ರಸ್ತೆಗಳಲ್ಲಿ ನಡೆವ ಯಹೂದಿ ವಿರೋಧಿ ಪ್ರತಿಭಟನೆಗಳು ಮತ್ತು ರ್ಯಾಲಿಗಳಲ್ಲಿ ಭಾಗವಹಿಸುವುದನ್ನು ನಾವು ಶಕ್ತವಾಗಿ ತಡೆಯುತ್ತೇವೆ. ಜಿಹಾದಿಗಳಿಗೆ ಅನುಕೂಲಕರ ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲಾ ವಿದೇಶಿಗಳಿಗೂ ನಾವು ಈ ಕುರಿತಂತೆ ಶಕ್ತವಾದ ಸಂದೇಶವನ್ನು ತಿಳಿಸುತ್ತಿದ್ದೇವೆ. 2025 ರಲ್ಲಿ ನಾವು ನಿಮ್ಮನ್ನು ಪತ್ತೆ ಹಚ್ಚಲಿದ್ದೇವೆ ಮತ್ತು ಗಡೀಪಾರುಗೊಳಿಸಲಿದ್ದೇವೆ ಎಂದು ಅಮೆರಿಕ ಆಡಳಿತವು ಬಿಡುಗಡೆಗೊಳಿಸಿದ ಪ್ರಸ್ತಾವನೆಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.
ಯಾವ ಯಾವ ಕಾಲೇಜ್ ಕ್ಯಾಂಪಸ್ ಗಳಲ್ಲಿ ಯಹೂದಿ ವಿರೋಧಿ ಪ್ರತಿಭಟನೆ ನಡೆಸಲಾಗಿದೆ ಮತ್ತು ಅದರಲ್ಲಿ ಯಾರೆಲ್ಲ ಭಾಗವಹಿಸಿದ್ದಾರೆ ಅನ್ನುವ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನಗಳು ಕೂಡ ಈಗ ನಡೆದಿದೆ ಎಂದು ತಿಳಿದು ಬಂದಿದೆ.
ಟ್ರಂಪ್ ಅವರು ಇದೀಗ ಈ ಕಾನೂನಿಗೆ ಸಹಿ ಹಾಕಿರುವುದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನ ಬೇಟೆಯಾಡುವುದಕ್ಕೆ ದುರುಪಯೋಗ ಆಗುವ ಸಾಧ್ಯತೆ ಇದೆ. ಹಾಗೆಯೇ ವಿದ್ಯಾರ್ಥಿ ಧ್ವನಿಯನ್ನು ಹತ್ತಿಕ್ಕುವ ಉದ್ದೇಶಕ್ಕಾಗಿಯೂ ಈ ಕಾನೂನು ದುರ್ಬಳಕೆ ಆಗಲಿದೆ ಎಂದು ನಂಬಲಾಗಿದೆ.












