ಗೋಹತ್ಯೆ ಪ್ರಕರಣ: 300 ಕ್ಕೂ ಹೆಚ್ಚು ಮುಸ್ಲಿಂ ಮನೆಗಳ ಮೇಲೆ ಬುಲ್ಡೋಜರ್!

0
34799

ಸನ್ಮಾರ್ಗ ವಾರ್ತೆ

ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಗೋಹತ್ಯೆ ಆರೋಪದ ಹಿನ್ನೆಲೆಯಲ್ಲಿ 300 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದ್ದು, ಈಗಾಗಲೇ ನಿವಾಸಿಗಳಿಗೆ ಮೂರು ದಿನಗಳ ಒಳಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.

ಜೀ ಸಲಾಮ್ ಪ್ರಕಾರ, ಹೋಳಿ ಹಬ್ಬದ ಮೊದಲು ಖಸಾಯಿ ಸಮುದಾಯದ ಸದಸ್ಯರ ಒಡೆತನದ ಈ ಮನೆಗಳನ್ನು ತೆರವುಗೊಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಈ ಮನೆಗಳು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೆ ನಿರ್ಮಿಸಲಾದ ಅತಿಕ್ರಮಿತ ಕಟ್ಟಡಗಳಾಗಿವೆ ಎಂದು ವರದಿಯಾಗಿದೆ.

ಮಾರ್ಚ್ 7ರಂದು ಗೋಹತ್ಯೆ ಆರೋಪ ವ್ಯಕ್ತವಾದ ಬಳಿಕ, ಹಿಂದುತ್ವ ಸಂಘಟನೆಗಳು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪ್ರದೇಶದ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದವು. ಅವರ ಒತ್ತಾಯದ ನಂತರ, ಸ್ಥಳೀಯ ಆಡಳಿತವು ಯಂತ್ರೋಪಕರಣಗಳ ಸಹಾಯದಿಂದ ಆರು ದೊಡ್ಡ ಕಟ್ಟಡಗಳನ್ನು ಮೊದಲು ಕೆಡವಿತು.

ಬುಲ್ಡೋಜರ್ ಕಾರ್ಯಾಚರಣೆ ಬಳಿಕ, ಪುರಸಭೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಶರ್ಮಾ, ಕೋಟ್ಯಂತರ ರೂಪಾಯಿ ಮೌಲ್ಯದ ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ಘೋಷಿಸಿದರು. ಎಸ್‌ಡಿಎಂ ಆರ್‌ಎಲ್ ಬಾಗ್ರಿ ಅವರ ಪ್ರಕಾರ, ಈ ಪ್ರದೇಶದಲ್ಲಿ ಇನ್ನೂ ಅನೇಕ ಅತಿಕ್ರಮಿತ ಕಟ್ಟಡಗಳಿದ್ದು, ನೋಟಿಸ್ ನೀಡಿದ ನಂತರ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಲಾಗಿದೆ.

ಪೊಲೀಸರ ಪ್ರಕಾರ, ಗೋಹತ್ಯೆ ನಡೆಯುತ್ತಿರುವ ಬಗ್ಗೆ ಸುಳಿವು ಬಂದ ಬಳಿಕ, ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಶನಿವಾರ ಬೆಳಗ್ಗೆ ಆ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಅವರ ಮೇಲೆ ಗುಂಡು ಹಾರಿಸಿರುವ ಆರೋಪದ ಬಗ್ಗೆ ವರದಿಯಾಗಿದೆ.

ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಐದು ಜನರನ್ನು ಬಂಧಿಸಲಾಗಿದೆ ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ಶರುತ್ಕೀರ್ತಿ ಸೋಮವಂಶಿ ತಿಳಿಸಿದ್ದಾರೆ. ಬಂಧಿತರನ್ನು ಮೆರವಣಿಗೆ ಮಾಡಿಸಿ, “ಹಸು ನಮ್ಮ ತಾಯಿ, ಗೋಹತ್ಯೆ ಅಪರಾಧ ಮತ್ತು ಪೊಲೀಸರು ನಮ್ಮ ತಂದೆ” ಎಂಬ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಲಾಯಿತು. ವರದಿಯ ಪ್ರಕಾರ, ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಕೆಲ ವಕೀಲರು ನ್ಯಾಯಾಲಯದ ಆವರಣದಲ್ಲಿ ಆರೋಪಿಗಳನ್ನು ಥಳಿಸಿರುವುದಾಗಿ ತಿಳಿದುಬಂದಿದೆ.

ಇದಕ್ಕೂ ಮುನ್ನ, ಉಜ್ಜಯಿನಿಯಲ್ಲೂ ಗೋಹತ್ಯೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಮುಸ್ಲಿಂ ಪುರುಷರನ್ನು ಮೆರವಣಿಗೆ ಮಾಡಿಸಿ, ಥಳಿಸಿ, ಇದೇ ರೀತಿಯ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಲಾಯಿತು.

ಅಪರಾಧ ಆರೋಪಿಗಳ ಮನೆಗಳನ್ನು ಕೆಡವುವ ಸರ್ಕಾರದ ಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ರಾಜ್ಯದಲ್ಲಿ ಈ ಕ್ರಮ ಮುಂದುವರಿಯುತ್ತಿರುವುದು ಕಳವಳಕಾರಿ ಆಗಿದೆ.

ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಮಾಲೀಕರಿಗೆ 15 ದಿನಗಳ ಪೂರ್ವ ಸೂಚನೆ ನೀಡದೆ ಮತ್ತು ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸದೆ ಯಾವುದೇ ಮನೆಗಳ ತೆರವುಗೊಳಿಸುವಂತಿಲ್ಲ ಎಂದು ತೀರ್ಮಾನಿಸಿದ್ದರೂ, ದಾಮೋಹ್‌ನಲ್ಲಿ ಈ ನಿಯಮ ಉಲ್ಲಂಘನೆಯಾಗುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ.