ದಲಿತ ಯುವಕನ ಮದುವೆ ಮೆರವಣಿಗೆಗೆ ಸವರ್ಣೀಯರಿಂದ ಕಲ್ಲೆಸೆತ: 20 ಮಂದಿಗೆ ಗಾಯ

0
694

ಕಲಬುರ್ಗಿ,ಮೇ 29:ಕಲಬುರ್ಗಿಯ ದಲಿತ ಯುವಕನ ಮದುವೆ ಮೆರವಣಿಗೆಯ ಮೇಲೆ ಸವರ್ಣೀಯರು ಕಲ್ಲೆಸದ ಘಟನೆ ನಡೆದಿದ್ದು ಸುಮಾರು ಇಪ್ಪತ್ತು ಮಂದಿ ಗಾಯಗೊಂಡಿದ್ದಾರೆ. ಕಲಬುರ್ಗಿ ನಾವಳ್ಳಿ ಗ್ರಾಮದಲ್ಲಿನ ಮಲ್ಲಿ ಕಾಲನಿಯಲ್ಲಿ ಕಲ್ಲೆಸತ ನಡೆದಿದೆ. ಸವರ್ಣೀಯ ಕಾಲನಿಯ ಮುಂದೆ ಮೆರವಣಿಗೆ ಕೊಂಡು ಹೋಗಲು ನೋಡಿದ್ದು ಮತ್ತು ಹನುಮಂತ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದ್ದು ಕಲ್ಲೆಸತಕ್ಕೆ ನಾಂದಿಯಾಗಿತ್ತು ಎಂದು ವರದಿಗಳು ತಿಳಿಸಿವೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಹೆಚ್ಚಿನ ಅಹಿತಕರ ಘಟನೆಗಳು ನಡೆದಿಲ್ಲ.

ಮದುವೆಯ ಮೆರವಣಿಗೆಯಲ್ಲಿ ಹೋದ ದಲಿತರಲ್ಲಿ ಹೆಚ್ಚು ಗಾಯಗೊಂಡಿದ್ದು ಜಾತಿಯ ಕಾರಣದಿಂದ ರಾಜ್ಯದಲ್ಲಿ ಮದುವೆ ಮೆರವಣಿಗೆಗೆ ಕಲ್ಲು ತೂರಿ ಗಲಾಟೆ ಮಾಡುವ ಘಟನೆ ಬಹಳ ವಿರಳವಾಗಿದೆ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ದುಷ್ಕರ್ಮಿಗಳು ಪೊಲೀಸರ ಜೀಪಿಗೂ ಕಲ್ಲೆಸೆದಿದ್ದಾರೆ ಎಂದು ಪೊಲೀಸರು ತಿಳಿಸಿದರು. ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.