ದೇವಸ್ಮರಣೆ: ಕೆಟ್ಟ ಆಲೋಚನೆಗಳಿಗೆ ಪರಿಹಾರ

0
263

✍️ ಖದೀಜ ನುಸ್ರತ್

ಪವಿತ್ರ ಕುರ್‌ಆನ್ ಹಾಗೂ ಪ್ರವಾದಿ ವಚನಗಳಲ್ಲಿ ಹಲವಾರು ಬಾರಿ ದೇವಸ್ಮರಣೆಯ ಬಗ್ಗೆ ಆಜ್ಞಾಪಿಸಲಾಗಿದೆ. ಅಲ್ಲಾಹನನ್ನು ಸ್ತುತಿಸುವುದು, ಅವನ ಪರಿಶುದ್ಧತೆಯನ್ನು ಕೊಂಡಾಡುತ್ತಾ ಮನಸ್ಸು, ಹೃದಯ ಮತ್ತು ನಾಲಗೆಯ ಮೂಲಕ ಮಾಡುವ ಆರಾಧನೆಯಾಗಿದೆ. ಸಂಜೆ ಮುಂಜಾನೆ, ಮಲಗುವ ಮುಂಚೆ, ನಿದ್ದೆಯಿಂದ ಎದ್ದೇಳುವಾಗ, ತಿನ್ನುವಾಗ, ಕುಡಿಯುವಾಗ, ಮತ್ತಿತರ ದೈನಂದಿನ ಯಾವುದೇ ಕೆಲಸವನ್ನು ಆರಂಭಿಸುವಾಗ, ಐದು ಬಾರಿ ನಮಾಝ್‌ನಲ್ಲಿಯೂ ನಿರಂತರವಾಗಿ ಅಲ್ಲಾಹನನ್ನು ಸ್ತುತಿಸುತ್ತಿರುವುದು ಸತ್ಯವಿಶ್ವಾಸದ ಲಕ್ಷಣವಾಗಿದೆ.

ಪ್ರತಿಯೊಬ್ಬ ಸತ್ಯವಿಶ್ವಾಸಿಯ ಇಹಪರ ವಿಜಯವು ದೇವಸ್ಮರಣೆಯನ್ನೇ ಅವಲಂಬಿಸಿದೆ. ಇಸ್ಲಾಮ್ ಧರ್ಮದ ಎಲ್ಲಾ ಆರಾಧನೆಗಳು ದೇವಸ್ಮರಣೆಯನ್ನು ಪ್ರತಿಬಿಂಬಿಸುತ್ತದೆ. ಶರೀರ ಮತ್ತು ಮನಸ್ಸಿನ ಮಧ್ಯೆ ಸಾಮರಸ್ಯವನ್ನು ಬೆಳೆಸಲು, ಸಮತೋಲನವನ್ನು ಕಾಪಾಡಲು ಸಹಕರಿಸುತ್ತದೆ. ದೇವಸ್ಮರಣೆಯನ್ನು ಹೆಚ್ಚಿಸುವುದರಿಂದ ಅಂತ್ಯ ದಿನದಂದು ಸತ್ಕರ್ಮದ ತಕ್ಕಡಿ ಭಾರವಾಗಿರುವುದು ಮತ್ತು ಅಲ್ಲಾಹನ ಭಯಾನಕ ಶಿಕ್ಷೆಯಿಂದ ರಕ್ಷಿಸುವುದು.

“ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರೂ ಆದ ಎಲ್ಲಾ ಪುರುಷರು ಮತ್ತು ಸ್ತ್ರೀಯಯರಿಗೆ ಅಲ್ಲಾಹನು ಕ್ಷಮೆ ಮತ್ತು ಅತೀ ದೊಡ್ಡ ಸತ್ಫಲವನ್ನು ಸಿದ್ಧಗೊಳಿಸಿದ್ದಾನೆ.” (ಪವಿತ್ರ ಕುರ್‌ಆನ್- 33: 35)

ಮನುಷ್ಯನು ಒಂಟಿಯಾಗಿರುವಾಗ ಅವನ ಆಲೋಚನೆ, ಚಿಂತೆ, ಮನಸ್ಸಿನಲ್ಲಿರುವ ದೇವ ಭಯವು ವ್ಯಕ್ತಿತ್ವದ ಪ್ರತೀಕವಾಗಿರುತ್ತದೆ. ಕೆಲವೊಮ್ಮೆ ನಮಗೆ ಅರಿವಿಲ್ಲದಂತೆಯೇ ಹಲವಾರು ಚಿಂತೆಗಳು ಮನಸ್ಸಿನಲ್ಲಿ ಉದ್ಭವಿಸುತ್ತದೆ. ಮನುಷ್ಯನು ಸುತ್ತ ಮುತ್ತಲು ನೋಡುವ, ಕೇಳುವ, ಓದುವ ವಿಷಯಗಳೇ ಚಿಂತೆಗಳಾಗಿ ಮಾರ್ಪಡುತ್ತದೆ. ಮನುಷ್ಯನಿಗೆ ತನ್ನ ಚಿಂತೆ, ಭಾವನೆ, ಆಲೋಚನೆಗಳ ಮೇಲೆ ಸಂಪೂರ್ಣ ನಿಯಂತ್ರಣವಿಲ್ಲದಿರುವುದನ್ನು ಮಾನಸಿಕ ಅಸ್ವಸ್ಥತೆ ಎನ್ನಬಹುದು. ಯಾವುದೇ ಆಘಾತ, ಕಷ್ಟ ನಷ್ಟಗಳನ್ನು ಸ್ವೀಕರಿಸಲು ನಿರಾಕರಿಸುವುದು, ಕೋಪಗೊಳ್ಳುವುದು, ಅದರ ಬಗ್ಗೆ ನಕಾರಾತ್ಮಕವಾಗಿ ಚಿಂತಿಸಿವುದು ಮನುಷ್ಯನ ದೌರ್ಬಲ್ಯವಾಗಿದೆ.

ಯಾವುದೇ ವಿಷಯ, ಸನ್ನಿವೇಶದ ಕುರಿತು ಅತಿಯಾಗಿ ಚಿಂತಿಸುವುದು, ವಿಶ್ಲೇಷಿಸುವುದರಿಂದ ಮಾನಸಿಕ ಬಳಲಿಕೆ, ಒತ್ತಡ, ಖಿನ್ನತೆ, ಆತಂಕಗಳಿಗೆ ಕಾರಣವಾಗುವುದು. ಇದು ಓರ್ವ ವ್ಯಕ್ತಿಯ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಮನಸ್ಸಿನಲ್ಲಿ ನಿರಂತರ ನಕಾರಾತ್ಮಕ ಚಿಂತೆಯು ಮನುಷ್ಯನನಲ್ಲಿ ದುಃಖ, ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಡಿಮೆಗೊಳಿಸಬಹುದು.

ಭೂತಕಾಲದ ಕಷ್ಟನಷ್ಟ, ವೈಫಲ್ಯ, ಇನ್ನೊಬ್ಬರು ನೀಡಿದ ಕಿರುಕುಳ, ಅನುಭವಿಸಿದಂತಹ ಅವಮಾನ ಅಥವಾ ನಾನು ಜೀವನದಲ್ಲಿ ಸೋತು ಹೋದೆನು ಎಂಬ ಭಾವನೆ, ನನಗೆ ಅದರ ಸಾಮರ್ಥ್ಯವಿಲ್ಲ ಎಂದು ನಮ್ಮ ಕುರಿತಾಗಿ ನಮಗೆ ಉತ್ತಮ ಅಭಿಪ್ರಾಯವಿಲ್ಲದಿರುವುದು, ಇಲ್ಲದ ಸಮಸ್ಯೆಗಳ ಕುರಿತು ಭವಿಷ್ಯದ ಬಗ್ಗೆ ಆಲೋಚಿಸುತ್ತಾ ಆತಂಕ ಪಡುತ್ತಾ ಚಿಂತಿತರಾಗುವುದು, ಅಸೂಯೆ, ಹಗೆತನ, ದ್ವೇಷ, ಭಯದಿಂದ ಕೂಡಿದ ಚಿಂತೆಗಳು, ಇನ್ನೊಬ್ಬರು ಸರಿಯಿಲ್ಲ, ಅವರು ಮಾಡುವುದು ಸರಿಯಲ್ಲ, ಸುತ್ತಮುತ್ತಲಿರುವುದು ಸರಿಯಿಲ್ಲ ಎಂಬ ಚಿಂತನೆಗಳು, ಅವನ ಮಾತು ಮತ್ತು ವರ್ತನೆಗಳು ಸರಿಯಿಲ್ಲ ಎಂಬ ಆಲೋಚನೆಗಳು ಮತ್ತು ನಮ್ಮ ಬಾಯಿಯಿಂದ ಅಂತಹ ಮಾತುಗಳು ಪದೇ ಪದೇ ಬರುವುದಾದರೆ ನಮ್ಮ ಮನಸ್ಸು ಯಾವಾಗಲೂ ನಕಾರಾತ್ಮಕವಾಗಿ ಚಿಂತಿಸುತ್ತದೆ ಎಂದು ಅರ್ಥ.

ಯಾವಾಗಲೂ ಮನಸ್ಸಿನಲ್ಲಿ ಉದ್ಭವಿಸುವ ನಕಾರಾತ್ಮಕ ಚಿಂತೆಗಳನ್ನು ಸಕಾರಾತ್ಮವಾಗಿ ಪರಿವರ್ತಿಸಲು ಸಾಧ್ಯವಾಗಬೇಕು. ಶೈತಾನನು ನಿಮ್ಮ ಮನಸ್ಸಿನ ಬಾಗಿಲ ಬಳಿ ಬಂದು ನಕಾರಾತ್ಮಕವಾಗಿ ಚಿಂತಿಸಲು ಸದಾ ಪ್ರೇರೇಪಿಸುತ್ತಿರುತ್ತಾನೆ. ಅವನನ್ನು ನಮ್ಮ ಮನಸ್ಸಿನ ಒಳಗೆ ಸೇರಿಸಬೇಕೆ ಅಥವಾ ಓಡಿಸಬೇಕೆ ಎಂಬುದು ನಮ್ಮ ಆಯ್ಕೆಯಾಗಿದೆ. ಇನ್ನೊಬ್ಬರ ನಕಾರಾತ್ಮಕ ಮಾತು ನಮ್ಮ ಶರೀರ, ಮನಸ್ಸು, ಚಿಂತೆಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ಅಂತರವನ್ನು ಕಾಪಾಡಿಕೊಳ್ಳಬೇಕು.

“ವಾಸ್ತವದಲ್ಲಿ ಧರ್ಮನಿಷ್ಠರಾದವರಿಗೆ ಶೈತಾನನ ಪ್ರಭಾವದಿಂದ ದುರಾಲೋಚನೆಗಳು ಸೋಂಕಿದರೂ ಅವರು ತಕ್ಷಣ ಜಾಗೃತರಾಗುತ್ತಾರೆ ಮತ್ತು ಅವರಿಗೆ ಸರಿಯಾದ ಕರ್ಮವಿಧಾನ ಯಾವುದೆಂದು ಸ್ಪಷ್ಟವಾಗಿ ಗೋಚರಿಸುತ್ತದೆ.” (ಪವಿತ್ರ ಕುರ್‌ಆನ್- 7: 201)

ದೇವರ ಸ್ಮರಣೆಯು ಆಂತರಿಕ ಆತ್ಮಶಾಂತಿಯನ್ನು ಬಲಪಡಿಸುತ್ತದೆ ಮತ್ತು ಲೌಕಿಕ ಚಿಂತೆಗಳಿಂದ ಗಮನವನ್ನು ಬದಲಾಯಿಸುವ ಮೂಲಕ ಮನಸ್ಸಿನಲ್ಲಿ ಶಾಂತಿಯ ಭಾವನೆಯನ್ನು ಬೆಳೆಸುತ್ತದೆ. ಆಧ್ಯಾತ್ಮಿಕ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುಲು, ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಷ್ಟಗಳನ್ನು ಎದುರಿಸುವಾಗ, ದೇವರ ಕರುಣೆ, ತಾಳ್ಮೆ ಮತ್ತು ಶಕ್ತಿಯನ್ನು ನೆನಪಿಸಿಕೊಳ್ಳುತ್ತದೆ. ಈ ಭಾವನಾತ್ಮಕ ನಿಯಂತ್ರಣವು ಅವಸರದಲ್ಲಿ ತೆಗೆದುಕೊಳ್ಳುವ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಸಮತೋಲಿತ ಮಾನಸಿಕ ಸ್ಥಿತಿಯನ್ನು ಉತ್ತೇಜಿಸುತ್ತದೆ.

ತಾಳ್ಮೆ ಮತ್ತು ಭಾವನಾತ್ಮಕ ಸ್ವಯಂ ನಿಯಂತ್ರಣವನ್ನು ಸುಧಾರಿಸುತ್ತದೆ. ಪ್ರಾರ್ಥನೆಯಂತಹ ದೇವ ಸ್ಮರಣೆಯನ್ನು ಒಳಗೊಂಡಿರುವ ಆಧ್ಯಾತ್ಮಿಕ ಅಭ್ಯಾಸಗಳು ಸ್ವಯಂ-ಶಿಸ್ತನ್ನು ಹೆಚ್ಚಿಸುತ್ತವೆ. ಪ್ರಾರ್ಥನೆ ಅಥವಾ ಪವಿತ್ರ ಗ್ರಂಥಗಳನ್ನು ಪಠಿಸುವುದರಿಂದ ಮಾನಸಿಕ ಸಹಿಷ್ಣುತೆಯನ್ನು ಒದಗಿಸುತ್ತವೆ. ದುಃಖ, ನಷ್ಟ ಮತ್ತು ಪ್ರತಿಕೂಲತೆಯನ್ನು ಹತಾಶೆಗಿಂತ ಭರವಸೆಯೊಂದಿಗೆ ಮುನ್ನಡೆಯಲು ಮಾಡಲು ಸಹಾಯ ಮಾಡುತ್ತದೆ.

ದೇವಸ್ಮರಣೆ ಯಾವುದೇ ಪುರೋಹಿತರಿಲ್ಲದೆ, ಮಧ್ಯವರ್ತಿಗಳಿಲ್ಲದೆ, ಹೆಚ್ಚಿನ ಪರಿಶ್ರಮ ಮತ್ತು ಖರ್ಚಿಲ್ಲದೆ ಅಲ್ಲಾಹನೊಂದಿಗೆ ಸಂಬಂಧ ನಿಕಟ ಗೊಳಿಸಲು ಪ್ರೇರೇಪಿಸುತ್ತದೆ. ಅಲ್ಲಾಹನೊಂದಿಗೆ ಸಂಬಂಧವಿಲ್ಲದಿದ್ದರೆ ಹೃದಯವು ಆಧ್ಯಾತ್ಮಿಕವಾಗಿ ನಿರ್ಜೀವವಾದಂತೆ. ಹೃದಯವನ್ನು ಮೃದು ಗೊಳಿಸಲು, ಆತ್ಮವನ್ನು ಶುದ್ಧಗೊಳಿಸಲು ದೇವಸ್ಮರಣೆ ಅಗತ್ಯವಾಗಿದೆ. ಶೈತಾನನ ದುಷ್ಪ್ರೇರಣೆಯಿಂದ ಮುಕ್ತಿ ಪಡೆಯಲು ನಿರಂತರ ಅಲ್ಲಾಹನ ಸ್ಮರಣೆ ಮಾಡುತ್ತಿರಬೇಕು.

ಶೈತಾನನು ಆಲಸ್ಯ, ಸಂಶಯವನ್ನು ತುಂಬಿ ಜನರನ್ನು ಅಲ್ಲಾಹನ ಆರಾಧನೆ, ಸತ್ಕರ್ಮಗಳಿಂದ ದೂರವಿರಲು ಸದಾ ಪ್ರೇರೇಪಿಸುತ್ತಾನೆ. ಅತಿ ಹೆಚ್ಚು ದೇವಸ್ಮರಣೆ ಮಾಡುವುದರಿಂದ ಸತ್ಯವಿಶ್ವಾಸವು ಪ್ರಬಲವಾಗುತ್ತಾ, ಶೈತಾನನ ನಿಯಂತ್ರಣವು ದುರ್ಬಲವಾಗುತ್ತದೆ. ಅಲ್ಲಾಹನು ನೀಡಿದ ಲೌಖಿಕ ಜೀವನ ಮತ್ತು ಕುಟುಂಬ ಜೀವನವನ್ನು ಆಸ್ವಾದಿಸುತ್ತಲೇ ದೇವಸ್ಮರಣೆ ಮಾಡುವುದನ್ನು ಇಸ್ಲಾಮ್ ಧರ್ಮ ಪ್ರೋತ್ಸಾಹಿಸುತ್ತದೆ. ಆದುದರಿಂದ ಬ್ರಹ್ಮಚರ್ಯೆಯನ್ನು ನಿಷೇಧಿಸಲಾಗಿದೆ.

ಜನರಿಲ್ಲದ ಸ್ಥಳಗಳಲ್ಲಿ ಆರಾಧನೆ ಮಾಡುವುದಕ್ಕಿಂತಲೂ ಸಮಾಜದಲ್ಲಿ ಬಡ ಜನರ, ರೋಗಿಗಳ ಸೇವೆ ಮಾಡುತ್ತಾ ಮಾಡುವ ಆರಾಧನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕಲ್ಪಿಸಲಾಗಿದೆ.

ಅಲ್ಲಾಹನೊಂದಿಗಿನ ಬಲವಾದ ಆಧ್ಯಾತ್ಮಿಕ ಸಂಪರ್ಕವು ಒಂಟಿತನದ ಭಾವನೆಗಳನ್ನು ನಿವಾರಿಸುತ್ತದೆ. ಅಲ್ಲಾಹನು ಯಾವಾಗಲೂ ಆಲಿಸುತ್ತಾನೆ ಮತ್ತು ಸಂಕಷ್ಟದ ಸಮಯದಲ್ಲಿ ದೈವಿಕ ಬೆಂಬಲ ಲಭ್ಯವಿದೆ ಎಂಬ ಕಲ್ಪನೆಯಲ್ಲಿ ಅನೇಕ ಜನರು ಕೃತಜ್ಞತೆ ಮತ್ತು ಸಾಂತ್ವನವನ್ನು ಕಂಡುಕೊಳ್ಳುತ್ತಾರೆ. ಈ ಅಭ್ಯಾಸವು ಮೆದುಳನ್ನು ಸಕಾರಾತ್ಮಕತೆಯ ಕಡೆಗೆ ತಿರುಗಿಸುತ್ತದೆ.

ದೇವಸ್ಮರಣೆ ಮಾಡುವವರು ಮಾನಸಿಕ ಖಿನ್ನತೆ ಅ ನುಭವಿಸುವ ಸಾಧ್ಯತೆ ಕಡಿಮೆಯಿರುತ್ತದೆ. ದುಃಖ, ಚಿಂತೆ, ಸಂತೋಷ, ಭಯದ ಸ್ಥಿತಿಯಲ್ಲಿ, ಯಾರಾದರೂ ಕಿರುಕುಳ ನೀಡುವಾಗ, ಅ ಶಾಂತಿ, ಆತಂಕದ ಭಾವನೆ, ಅನಿಶ್ಚಿತತೆ ಅನುಭವಿಸುವಾಗ, ಸಮಸ್ಯೆಗಳನ್ನು ಎದುರಿಸುವಾಗ, ನಿಂತುಕೊಂಡಿರುವಾಗಲೂ, ಮಲಗಿರುವಾಗಲೂ, ನಡೆಯುವಾಗಲೂ, ಯಾವುದೇ ಕೆಲಸ ಮಾಡುತ್ತಿರುವಾಗಲೂ, ಜನರನ್ನು ಪರಸ್ಪರ ಭೇಟಿಯಾಗುವಾಗ, ನೀವು ಇಷ್ಟಪಡುವ ವ್ಯಕ್ತಿ, ವಸ್ತುವನ್ನು ಕಳೆದುಕೊಂಡಾಗ ಶಾಂತವಾಗಿ ಜೀವಿಸಲು, ಅನಾರೋಗ್ಯ, ಹಣಕಾಸು ಮತ್ತಿತರ ಇಹಲೋಕದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದೇವಸ್ಮರಣೆಯು ಅಸಾಧಾರಣವಾದ ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ.

ದೇವಸ್ಮರಣೆಯಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗದಿದ್ದರೂ, ಅದರ ಬಗ್ಗೆ ಮನಸ್ಸಿನಲ್ಲಿರುವ ನೋವು ದೂರವಾಗುವುದು. ದೇವಸ್ಮರಣೆಯಿಂದ ತನ್ನನ್ನು ನಿಯಂತ್ರಿಸಲು ಅಸಾಧ್ಯವಾದರೆ ಅಂತಹವರಿಗೆ ಕೌನ್ಸಿಲಿಂಗ್ ಅಗತ್ಯವಾಗಿದೆ.

ಭೂತ ಕಾಲ ಮತ್ತು ಭವಿಷ್ಯತ್ ಕಾಲವು ನಮ್ಮ ನಿಯಂತ್ರಣದಲ್ಲಿಲ್ಲ. ಪ್ರಸಕ್ತ ವರ್ತಮಾನದ ಕಡೆಗೆ ಗಮನಹರಿಸಬೇಕು. ಭವಿಷ್ಯದ ಬಗ್ಗೆ ಚಿಂತಿಸುವುದಾದರೂ ಮರಣಾನಂತರದ ಜೀವನದ ಬಗ್ಗೆ ಚಿಂತಿಸಬೇಕು. ನಮ್ಮ ಶರೀರದ ಎಲ್ಲ ಅವಯವಗಳು ಕಾರ್ಯನಿರ್ಹಹಿಸುತ್ತಿದ್ದರೆ, ನಾವು ಸುರಕ್ಷಿತ ಮತ್ತು ಸುಭದ್ರ ಸ್ಥಳದಲ್ಲಿದ್ದರೆ, ನಮ್ಮ ಮುಂದೆ ಅಂದಿನ ಆಹಾರ ಲಭ್ಯವಿದ್ದರೆ ಸಂತೃಪ್ತರಾಗಿ ಅಲ್ಲಾಹನಿಗೆ ಕೃತಜ್ಞರಾಗುತ್ತಾ ತನ್ನ ಇಹಪರ ಜೀವನದ ವಿಜಯವನ್ನು ಗುರಿಯಾಗಿಸಿದರೆ ಕೆಟ್ಟ ಆಲೋಚನೆ, ಚಿಂತೆಗಳಿಂದ ಮುಕ್ತಿ ಸಿಗುವುದು.

“ಕೇಳಿರಿ, ಮಸಶ್ಶಾಂತಿಯೊದಗುವುದು ಅಲ್ಲಾಹನ ಸ್ಮರಣೆಯಿಂದಲೇ ಎಂಬುದು ಖಚಿತ.” (ಪವಿತ್ರ ಕುರ್‌ಆನ್- 13:28)