ಸನ್ಮಾರ್ಗ ವಾರ್ತೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಭಾರತ ಸರ್ಕಾರದ ಸೂಚನೆಯಂತೆ 509 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತೊರೆದಿದ್ದಾರೆ. ಭಾರತ ತೊರೆದವರಲ್ಲಿ ಹಲವಾರು ರಾಜತಾಂತ್ರಿಕರು ಮತ್ತು ಅಧಿಕಾರಿಗಳೂ ಸೇರಿದ್ದಾರೆ. ಇವರಲ್ಲಿ ಹೆಚ್ಚಿನವರು 12 ವಿಭಾಗಗಳ ಅಲ್ಪಾವಧಿ ವೀಸಾ ಹೊಂದಿದವರು.
ಇದೇ ಸಮಯದಲ್ಲಿ 14 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 745 ಭಾರತೀಯರು ಪಾಕಿಸ್ತಾನದಿಂದ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಿ ನಾಗರಿಕರಿಗೆ ತಕ್ಷಣ ದೇಶ ತೊರೆಯುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಸಾರ್ಕ್ ವೀಸಾ ಹೊಂದಿದವರಿಗೆ ಏಪ್ರಿಲ್ 26 ಹಾಗೂ ವೈದ್ಯಕೀಯ ವೀಸಾ ಹೊಂದಿದವರಿಗೆ ಏಪ್ರಿಲ್ 29 ಕೊನೆ ದಿನಾಂಕ ನಿಗದಿಯಾಗಿದೆ. ದೀರ್ಘಾವಧಿ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾ ಹೊಂದಿದವರು ಮಾತ್ರ ಈ ಆದೇಶದಿಂದ ವಿನಾಯಿತಿ ಪಡೆದಿದ್ದಾರೆ.












