ಕೊಲೊಂಬೊ, ಜೂ4: ಶ್ರೀಲಂಕದಲ್ಲಿ ಮುಸ್ಲಿಂ ಸಚಿವರು, ಪ್ರಾಂತ ರಾಜ್ಯಪಾಲರುಗಳು, ಮುಂತಾದ ಉನ್ನತ ಅಧಿಕಾರ ಹೊಂದಿದ ಮುಸ್ಲಿಮರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈಸ್ಟರ್ ದಿನದ ಆತ್ಮಾಹುತಿ ದಾಳಿಯ ಬಳಿಕ ದೇಶದ ಮುಸ್ಲಿಂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಸರಕಾರ ವಿಫಲವಾಗಿದೆ ಎಂಬುದನ್ನು ಬೆಟ್ಟು ಮಾಡಿ ಸಚಿವರು ರಾಜೀನಾಮೆ ನೀಡಿದರು. ಬುದ್ಧ ಸನ್ಯಾಸಿಗಳ ಒಂದು ಗುಂಪು ಮುಸ್ಲಿಂ ಸಚಿವರು ಈಸ್ಟರ್ ದಾಳಿಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿತ್ತು. ನಂತರ ಮುಸ್ಲಿಮ್ ಸಚಿವರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು.
ಒಂಬತ್ತು ಸಚಿವರು, ಎರಡು ಪ್ರಾಂತ ರಾಜ್ಯಪಾಲರು ರಾಜೀನಾಮೆ ಸಲ್ಲಿಸಿದ್ದು ಬುದ್ಧ ಸನ್ಯಾಸಿಗಳ ನೇತೃತ್ವದಲ್ಲಿ ಮುಸ್ಲಿಂ ಸಚಿವರನ್ನು ಹೊರದಬ್ಬಲು ಕ್ಯಾಂಡಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು. ಸರಕಾರಕ್ಕೆ ಬೆಂಬಲ ಮುಂದುವರಿಸುತ್ತೇವೆ. ಆದರೆ. ಈಗ ಬುದ್ಧರು ಮುಸ್ಲಿಂ ಸಚಿವರ ವಿರುದ್ಧ ಆರೋಪ ಹೊರಿಸಿದ್ದಾರೆ. ಅದನ್ನು ಸಾಬೀತು ಪಡಿಸಲು ಒಂದು ತಿಂಗಳ ಸಮಯ ಕೊಡುತ್ತೇವೆ ಎಂದು ರಾಜೀನಾಮೆ ನೀಡಿದ ಮುಸ್ಲಿಂ ಸಚಿವರು ಹೇಳಿದರು. ಈಸ್ಟರ್ ದಿನದ ಆತ್ಮಾಹುತಿ ದಾಳಿಯಲ್ಲಿ 250 ಮಂದಿ ಕೊಲ್ಲಲ್ಪಟ್ಟಿದ್ದರು. ನಂತರ ವ್ಯಾಪಕ ಅಕ್ರಮ ನಡೆದಿವೆ. ಒಂದು ವಾರದ ಹಿಂದೆ ಜನರ ಗುಂಪು ದಾಂಧಲೆ ನಡೆಸಿ ಮುಸ್ಲಿಮರ ಸೊತ್ತು ವಿತ್ತ ನಾಶಪಡಿಸಿತ್ತು. ಇದೇ ವೇಳೆ ಓರ್ವ ಕೊಲೆಯಾಗಿದ್ದ. ಪ್ರಾಂತ ರಾಜ್ಯಪಾಲರು ಮತ್ತು ಮುಸ್ಲಿಂ ಸಚಿವರನ್ನು ಹೊರಗಿಡಲು ಮುಸ್ಲಿಮರ ವಿರುದ್ಧ ಅಪರಾಧಗಳಲ್ಲಿ ಕುಪ್ರಸಿದ್ಧನಾದ ಬುದ್ಧ ಸನ್ಯಾಸಿ ಗಲಗೊಡ ಅತ್ತೆ ಗಣಸಾರ ಸರಕಾರಕ್ಕೆ ಅಂತಿಮ ಗಡು ವಿಧಿಸಿದ್ದ. ಕಳೆದ ತಿಂಗಳು ಗಣಸಾರೆಯನ್ನು ಸರಕಾರ ವಿಶೇಷ ಪರಿಗಣನೆ ನೀಡಿ ಜೈಲಿನಿಂದ ಬಿಡುಗಡೆಗೊಳಿಸಿತ್ತು.












