ಸನ್ಮಾರ್ಗ ವಾರ್ತೆ
ಅಮೆರಿಕಾದ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಗಾಝಾ ಸಂಘರ್ಷಕ್ಕೆ ಅಂತ್ಯ ಹಾಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ವಿಷಯದಲ್ಲಿ ನಾಲ್ಕು ಅರಬ್ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದು ಹಮಾಸನ್ನು ಗಾಝಾದಿಂದ ಹೊರ ಹಾಕುವುದು ಮತ್ತು ಗಾಝಾದ ನಿಯಂತ್ರಣವನ್ನು ನಾಲ್ಕು ಅರಬ್ ರಾಷ್ಟ್ರಗಳ ಸುಪರ್ದಿಗೆ ವಹಿಸಿ ಕೊಡುವುದು ನಿರ್ಧಾರದಲ್ಲಿ ಸೇರಿದೆ ಎಂದು ವರದಿಯಾಗಿದೆ.
ಮುಂದಿನ ಎರಡು ವಾರಗಳೊಳಗೆ ಗಾಝಾ ಯುದ್ಧ ಕೊನೆಗೊಳ್ಳಲಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ.
ಯು ಎ ಈ, ಈಜಿಫ್ಟ್ ಮತ್ತು ಎರಡು ಹೆಸರು ಉಲ್ಲೇಖಿಸದ ಅರಬ್ ರಾಷ್ಟ್ರಗಳು ಗಾಝಾ ಆಡಳಿತವನ್ನು ವಹಿಸಿಕೊಳ್ಳುವುದಕ್ಕೆ ಒಪ್ಪಿಕೊಂಡಿದೆ. ವರದಿಯ ಪ್ರಕಾರ ಹಮಾಸ್ ಅನ್ನು ಗಾಝಾದಿಂದ ಹೊರ ಹಾಕಲಾಗುವುದು. ಮಾತ್ರ ಅಲ್ಲ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿಕೊಳ್ಳುವ ಮತ್ತು ಗಾಝಾದ ಜನರು ಗಾಝಾ ತೊರೆಯಲು ಬಯಸುವುದಾದರೆ ಸ್ವೀಕರಿಸುವ ರಾಷ್ಟ್ರಕ್ಕೆ ಅವರನ್ನು ಕಳುಹಿಸಿಕೊಡಲಾಗುವುದು ಎಂದು ವರದಿ ತಿಳಿಸಿದೆ.
ಹಾಗೆಯೇ ಟ್ರಂಪ್ ಮತ್ತು ನೆತನ್ಯಾಹು ಅವರ ನಡುವೆ ನಡೆದ ಮಾತುಕತೆಯ ಪ್ರಕಾರ ಸೌದಿ ಅರೇಬಿಯ ಮತ್ತು ಸಿರಿಯಾದ ಜೊತೆಗೆ ಇಸ್ರೇಲ್ ನ ರಾಜತಾಂತ್ರಿಕ ಸಂಬಂಧವನ್ನು ಆರಂಭಿಸುವುದಕ್ಕೂ ನಿರ್ಧರಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಎರಡು ರಾಷ್ಟ್ರಗಳ ಸಿದ್ಧಾಂತಕ್ಕೆ ಇಸ್ರೇಲ್ ಒಪ್ಪಿಕೊಂಡಿದ್ದು ಆದರೆ ಫೆಲೆಸ್ತೀನ್ ಪ್ರಾಧಿಕಾರದಲ್ಲಿ ಬಹು ಮುಖ್ಯ ಬದಲಾವಣೆಗಳನ್ನು ಮಾಡಬೇಕು ಎಂದು ಅದು ಶರತ್ತನ್ನು ವಿಧಿಸಿದೆ.
ಹಾಗೆಯೇ ಪಶ್ಚಿಮದಂಡೆಯ ಕೆಲವು ಭಾಗಗಳ ಮೇಲೆ ಈ ಒಪ್ಪಂದದಲ್ಲಿ ಇಸ್ರೇಲ್ ಗೆ ಸಾರ್ವಭೌಮತ್ವವನ್ನು ನೀಡಲಾಗಿದೆ. ಜೊತೆಗೇ ಸ್ವಯಂ ಪ್ರೇರಣೆಯಿಂದ ಗಾಝಾವನ್ನು ತೊರೆಯ ಬಯಸುವವರಿಗೆ ಜಾಗತಿಕವಾಗಿ ಪುನರ್ವಸತಿಯನ್ನು ಒದಗಿಸುವುದಕ್ಕೂ ಈ ಒಪ್ಪಂದದಲ್ಲಿ ಒಮ್ಮತಕ್ಕೆ ಬರಲಾಗಿದೆ.
ಈ ಒಪ್ಪಂದ ಒಂದು ವೇಳೆ ಜಾರಿಗೆ ಬಂದರೆ ಮಧ್ಯ ಪ್ರಾಚ್ಯದ ಭೌಗೋಳಿಕ ಮತ್ತು ರಾಜಕೀಯ ವಾತಾವರಣವನ್ನೇ ಬದಲಿಸಬಹುದು ಎಂದು ಹೇಳಲಾಗಿದೆ. ಆದರೆ ಈ ಒಪ್ಪಂದದಿಂದ ಹಮಾಸ್ ಮತ್ತು ಇರಾನನ್ನು ಹೊರಗೆ ಇಟ್ಟಿರುವುದು ಗಾಝಾ ನಿವಾಸಿಗಳಲ್ಲಿ ಭಿನ್ನಾಭಿಪ್ರಾಯವನ್ನು ಉಂಟು ಮಾಡುವುದಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.












