ಶಾರ್ಜ, ಜೂ.17: ಜೀವನವೇ ಆನ್ಲೈನ್ ಆಗಿ ಬದಲಾಗಿದ್ದರಿಂದ ವಂಚನೆಗಳು ಕೂಡ ಆಕಡೆಗೆ ಹೊರಳಿದೆ. ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿ ನಡೆದಿರುವ ವಂಚನೆಗಳ ಕತೆ ಈಗ ವೈರಲ್ ಆಗಿದೆ. ಗಲ್ಫ್ ನ ಪ್ರಮುಖ ಕಂಪೆನಿಗಳಿಗೆ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುವ ಮೂಲಕ ವಂಚಿಸುವ ತಂಡಗಳು ಕಾರ್ಯಾಚರಿಸುತ್ತಿವೆ. ಭಾರತ ಸಹಿತ ದಕ್ಷಿಣ ಏಷ್ಯದವರು ಹೆಚ್ಚಾಗಿ ಇವರ ಬಲೆಗೆ ಬೀಳುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವರು ನೀಡುತ್ತಿರುವ ಕೆಲಸದ ಜಾಹೀರಾತಿಗೆ ಆಕರ್ಷಿತರಾಗಿ ಯುವಕರು ಆನ್ಲೈನ್ನಲ್ಲಿ ಇವರನ್ನು ಸಂಪರ್ಕಿಸುತ್ತಾರೆ.
ಉತ್ತಮ ವೇತನ, ಉತ್ತಮ ವಾಸ್ತವ್ಯ, ಆಹಾರ, ಎರಡು ವರ್ಷದಲ್ಲಿ ಏರ್ ಟಿಕೆಟ್, ವರ್ಷದಲ್ಲಿ ಸಂಬಳದಲ್ಲಿ ಇನ್ಕ್ರಿಮೆಂಟ್, ಕೆಲಸದಲ್ಲಿ ಭಡ್ತಿ ಇತ್ಯಾದಿ ಆಕರ್ಷಕ ವಾಗ್ದಾನಗಳನ್ನು ಏಜೆಂಟರು ಮುಂದಿಡುತ್ತಾರೆ. ಇವರ ಬಲೆಗೆ ಬಿದ್ದರೆ ಹಣ ಕೇಳುತ್ತಾರೆ. ಆನ್ಲೈನಾಗಿ ಮಾತ್ರ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ. ಆದರೆ ಗರಿಷ್ಠ ಹಣ ಪೀಕಿಸಿದ ಮೇಲೆ ಈ ಏಜೆಂಟ್ ಮಾಯವಾಗುತ್ತಿದ್ದಾನೆ. ಇಂತಹ ಮೋಸ ಊರಿನಲ್ಲಿಯೇ ಮನಗಂಡವರು ಇವರ ಜಾಲದಿಂದ ಸುರಕ್ಷಿತವಾಗಬಲ್ಲರು. ಆದರೆ ಕೆಲವು ಏಜೆಂಟ್ಗಳು ಸಂದರ್ಶಕ ವೀಸಾದಲ್ಲಿ ಜನರನ್ನು ಕರೆದು ಕೊಂಡು ಬಂದು ನಡುದಾರಿಯಲ್ಲಿ ಬಿಟ್ಟು ಹೋಗುವ ಕೆಲಸ ಮಾಡುತ್ತಿದ್ದಾರೆ.












