ಜಿದ್ದ, ಜೂ. 18: ನಿರಂತರ ಆರನೇ ದಿವಸ ಕೂಡ ಸೌದಿ ಅರೇಬಿಯದ ಅಬ್ಹಾಕ್ಕೆ ಹೂತಿಗಳು ಡ್ರೋಣ್ ದಾಳಿ ಮಾಡಿದ್ದು ಸೋಮವಾರ ರಾತ್ರೆ 10:37ಕೆ ಸ್ಫೋಟಕ ತುಂಬಿದ ಡ್ರೋಣ್ ಅಬ್ಹಾ ಗುರಿಯಾಗಿಟ್ಟು ಕಳುಹಿಸಲಾಗಿತ್ತು. ಇದನ್ನು ನಾಶಪಡಿಸಲಾಯಿತು ಎಂದು ಸೌದಿ ಅರೇಬಿಯದ ಮಿತ್ರಪಡೆಯ ವಕ್ತಾರ ಕರ್ನಲ್ ತುರ್ಕಿ ಅಲ್ ಮಾಲಿಕಿ ತಿಳಿಸಿದರು.
ಕಳೆದ ಆರು ದಿವಸಗಳಲ್ಲಿ ನಡೆದಿದ್ದ ರೀತಿಯಲ್ಲಿಯೇ ಸ್ಫೋಟಕಗಳೊಂದಿಗೆ ಡ್ರೋಣ್ ದಾಳಿ ಈ ಸಲವೂ ನಡೆದಿದೆ. ಅಬ್ಹಾ, ನಝ್ರಾನ್, ಜೀಸಾನ್ಗಳ ಜನವಾಸವಿರುವ ಸ್ಥಳಗಳಿಗೆ ಮತ್ತು ವಿಮಾನ ನಿಲ್ದಾಣಗಳನ್ನು ಹೂಥಿಗಳು ಗುರಿಯಾಗಿ ದಾಳಿ ನಡೆಸುತ್ತಿದ್ದಾರೆ. ಅಬ್ಹಾ ವಿಮಾನ ನಿಲ್ದಾಣದ ಮೇಲೆ ಕ್ರೂಸ್ ಮಿಸೈಲ್ ದಾಳಿಯಲ್ಲಿ ಕಳೆದ ಬುಧವಾರ 26 ಮಂದಿ ಗಾಯಗೊಂಡಿದ್ದರು. ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ನಡೆದಿದ್ದು ಹೂಥಿಗಳ ಕೃತ್ಯವನ್ನು ಒಕ್ಕೊರಳಿನಿಂದ ಖಂಡಿಸಲಾಗಿದೆ. ಅಬ್ಹಾ ವಿಮಾನ ನಿಲ್ದಾಣದ ದಾಳಿಯ ನಂತರ ಯಮನ್ನ ಹೂಥಿಗಳ ಕೇಂದ್ರಗಳ ಮೇಲೆ ಸೌದಿ ಮಿತ್ರಪಡೆಗಳು ದಾಳಿಯನ್ನು ತೀವ್ರಗೊಳಿಸುತ್ತಿದೆ ಎಂದು ವರದಿಯಾಗಿದೆ.












