ಸನ್ಮಾರ್ಗ ವಾರ್ತೆ
ನವದೆಹಲಿ: ಗುರು ತೇಜ್ ಬಹದ್ದೂರ್ ಅವರ ಹುತಾತ್ಮತೆಯ 350 ನೇ ವರ್ಷದ ಸ್ಮರಣಾರ್ಥವಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಖ್ ಮತ್ತು ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಸೇರಿ, ನ್ಯಾಯ, ಏಕತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಂತೆ ಕರೆ ನೀಡಿದರು. ‘ಹಕ್-ಎ-ಅಮನ್’ ಎಂಬ ಶೀರ್ಷಿಕೆಯಡಿಯಲ್ಲಿ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ನಲ್ಲಿ ಆಯೋಜಿಸಲಾಗಿದ್ದ ಈ ವಿಚಾರ ಸಂಕಿರಣದಲ್ಲಿ ರಾಜಕೀಯ ನಾಯಕರು, ನ್ಯಾಯಾಧೀಶರು ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಜಮಾತೆ-ಇ-ಇಸ್ಲಾಮಿ ಹಿಂದ್ (ಜೆಐಎಚ್) ರಾಷ್ಟ್ರೀಯ ಅಧ್ಯಕ್ಷರಾದ ಸಾದತುಲ್ಲಾ ಹುಸೇನಿ ಅವರು ಮಾತನಾಡುತ್ತಾ, “ಗುರು ತೇಜ್ ಬಹದ್ದೂರ್ ಅವರ ತ್ಯಾಗವು ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ ದಾರಿದೀಪವಾಗಿದೆ. ಯಾವುದೇ ಸರ್ಕಾರಕ್ಕೆ ಜನರ ಆತ್ಮಸಾಕ್ಷಿಯನ್ನು ಹತ್ತಿಕ್ಕುವ ಅಧಿಕಾರವಿಲ್ಲ. ಇತಿಹಾಸವನ್ನು ವಿಭಜನೆಗೆ ಬಳಸಿಕೊಳ್ಳದೆ, ಮಾರ್ಗದರ್ಶನಕ್ಕಾಗಿ ಉಪಯೋಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಅನ್ಯಾಯ, ದಬ್ಬಾಳಿಕೆಯನ್ನು ವಿರೋಧಿಸುವಲ್ಲಿ ಇಸ್ಲಾಂ ಮತ್ತು ಸಿಖ್ ಧರ್ಮಗಳ ನಡುವೆ ಇರುವ ಸಾಮಾನ ಮೌಲ್ಯಗಳನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
”ಸಮುದಾಯಗಳು ರಾಜಕೀಯ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸಂವಹನ ನಡೆಸಬೇಕು. ವಿಭಜಕ ಶಕ್ತಿಗಳು ಅಧಿಕಾರಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತವೆ. ನಿಜವಾದ ಧರ್ಮಗಳು ಸಹೋದರತ್ವವನ್ನು ಪ್ರೋತ್ಸಾಹಿಸುತ್ತವೆ ಎಂದು ಜೆಐಎಚ್ ಉಪಾಧ್ಯಕ್ಷ ಸಲೀಂ ಇಂಜಿನಿಯರ್ ಅಭಿಪ್ರಾಯ ಪಟ್ಟರು. ಇಂದಿನ ಭಾರತಕ್ಕೆ ಪ್ರೀತಿ, ನಂಬಿಕೆ ಮತ್ತು ನ್ಯಾಯಕ್ಕಾಗಿ ಸಾಮೂಹಿಕ ಹೋರಾಟದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಾತನಾಡುತ್ತಾ, ಸಮಾಜದಲ್ಲಿ ಹೆಚ್ಚುತ್ತಿರುವ ಭಯ ಮತ್ತು ಮಾನವೀಯತೆಯ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಿಖ್ ಸಮುದಾಯದ ಶಿಸ್ತನ್ನು ಶ್ಲಾಘಿಸಿದ ಅವರು, ಎಲ್ಲ ಭಾರತೀಯರು ಪರಸ್ಪರ ಗೌರವವನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ನಾಯಕ ಗುರುದೀಪ್ ಸಪ್ಪಲ್, ಗುರು ತೇಜ್ ಬಹದ್ದೂರ್ ಅವರ ಹುತಾತ್ಮತೆ ಭಾರತದ ಬಹುತ್ವದ ಗುರುತಿಗೆ ಕೇಂದ್ರಬಿಂದುವಾಗಿದೆ ಎಂದು ಬಣ್ಣಿಸಿದರು. ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅಂತರ್-ಧರ್ಮೀಯ ಸಂವಾದದ ಮಹತ್ವವನ್ನು ಒತ್ತಿಹೇಳಿದರು.

ವಿಭಜನೆಯ ನಂತರ ಅಲ್ಪಸಂಖ್ಯಾತರು ಮಾಡಿದ ತ್ಯಾಗಗಳನ್ನುಬಮಾಜಿ ಸಂಸದ ಮುಹಮ್ಮದ್ ಅದೀಬ್ ಸ್ಮರಿಸಿದರು ಮತ್ತು ಮುಸ್ಲಿಂ ದೇಶಭಕ್ತಿಯನ್ನು ಪ್ರಶ್ನಿಸುವ ವಿಭಜಕ ಸಿದ್ಧಾಂತಗಳನ್ನು ಟೀಕಿಸಿದರು.
ಪಾಟ್ನಾ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಇಕ್ಬಾಲ್ ಅನ್ಸಾರಿ, ಗಾಝಾದಂತಹ ಪ್ರದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿದರು.
ಕಾರ್ಯಕ್ರಮದ ಸಂಚಾಲಕ ದಯಾ ಸಿಂಗ್, “ಹಕ್-ಎ-ಅಮನ್ ಯಾತ್ರೆ”ಯನ್ನು ಶಾಂತಿ ಮತ್ತು ಏಕತೆಯ ಸಂದೇಶವನ್ನು ಹರಡುವ ಉದ್ದೇಶದಿಂದ ಹಮ್ಮಿಕೊಳ್ಳಬೇಕು ಎಂದು ಪ್ರಸ್ತಾಪಿಸಿದರು. ಈ ಕಾರ್ಯಕ್ರಮವು ಗುರು ತೇಜ್ ಬಹದ್ದೂರ್ ಅವರು ಜಾತಿ ಧರ್ಮವನ್ನು ಮೀರಿದ್ದು, ಭಾರತದ ಆತ್ಮಸಾಕ್ಷಿಗೆ ಸೇರಿದೆ ಎಂಬ ದೃಢೀಕರಣದೊಂದಿಗೆ ಕೊನೆಗೊಂಡಿತು.












