ಮಣಿಪಾಲ-ತಿರುವನಂತಪುರಂ ಬಸ್‍ನಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ; ಆರೋಪಿ ಬಸ್ ಸಿಬ್ಬಂದಿ ಬಂಧನ

0
2523

ಕೋಝಿಕ್ಕೋಡ್, ಜೂ. 20: ಮಣಿಪಾಲದಿಂದ ತಿರುವನಂತಪುರಂಗೆ ತೆರಳುತ್ತಿದ್ದ ಕಲ್ಲಡ ಹೆಸರಿನ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರನ್ನು ಪಾನಮತ್ತ ಬಸ್‍ ಸಿಬ್ಬಂದಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಇಂದು ಬೆಳಗ್ಗಿನ ಜಾವ ಕೋಝಿಕ್ಕೋಡ್ ಸಮೀಪ ನಡೆದಿದೆ. ಮಹಿಳೆಯ ದೂರಿನಂತೆ ಬಸ್ ಸಿಬ್ಬಂದಿ ಮತ್ತು ಬಸ್ಸನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಬಸ್‍ನಲ್ಲಿ ಎರಡನೆ ಚಾಲಕನಾಗಿ ದುಡಿಯುತ್ತಿದ್ದ ಜೋನ್ಸನ್ ಜೋಸೆಫ್ (39) ಎಂಬಾತ ಇಂದು ಬೆಳಗ್ಗಿನ ಜಾವ 1:30ಕ್ಕೆ ಮಹಿಳೆಯನ್ನು ಬರಸೆಳೆದು ಅಪ್ಪಿಹಿಡಿಯಲು ಹೋಗಿದ್ದಾನೆ. ಈ ವೇಳೆ ಬಸ್ ಕೋಝಿಕ್ಕೋಡ್ ದಾಟಿ ಸಮೀಪದ ಕಾಕಂಚೇರಿಯಲ್ಲಿ ಹೋಗುತ್ತಿತ್ತು. ಜೋನ್ಸನ್‍ ನ ಅನಿರೀಕ್ಷಿತ ವರ್ತನೆಯಿಂದ ಹೆದರಿದ ಮಹಿಳೆ ಬೊಬ್ಬೆ ಹೊಡೆದಿದ್ದಾರೆ. ಕೂಡಲೇ ಪ್ರಯಾಣಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಬಸ್‍ ನ ಮುಂಭಾಗದ ಗಾಜು ಕೂಡಾ ಒಡೆದು ಹೋಗಿದೆ. ಘಟನೆ ನಡೆಯುವ ವೇಳೆ ಆರೋಪಿ ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ ಎಂದು ಮಲಪ್ಪುರಂ ಎಸ್ಪಿ ಮಾಧ್ಯಮಗಳಿಗೆ ತಿಳಿಸಿದರು. ಮಹಿಳೆಯ ಹೇಳಿಕೆ ಪಡೆದುಕೊಂಡಿದ್ದು ಆರೋಪಿಯ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.