ರಾಜಕೀಯ ಹಾಗೂ ಧಾರ್ಮಿಕ ಕೈದಿಗಳ ಮತ್ತು ಬಂಧನದಲ್ಲಿರುವ ಉಯಿಗುರ್ ಗಳ ಅವಯವ ಕದಿಯುತ್ತಿರುವ ಚೀನ

0
662

ಬೀಜಿಂಗ್, ಜೂ. 20: ಚೀನ ಜೈಲಿಗೆ ಹಾಕಿರುವ ರಾಜಕೀಯಹಾಗೂ ಧಾರ್ಮಿಕ ಕೈದಿಗಳ ಮತ್ತು ಉಯಿಗುರ್ ಮುಸ್ಲಿಮರ ಅವಯವನ್ನು ತೆಗೆಯುತ್ತಿದೆ ಎಂದು ಮಾನವಹಕ್ಕು ಟ್ರಿಬ್ಯೂನಲ್ ವರದಿ ತಿಳಿಸಿದೆ. ಹೀಗೆ ಚೀನ ಬಲವಂತದಿಂದ ಅವಯವಗಳನ್ನು ಕಿತ್ತು ಹಾಕುತ್ತಿದ್ದು, ಜೈಲಿನೊಳಗೆ ಕೈದಿಗಳು ಶಂಕಾಸ್ಪದವಾಗಿ ಸಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಚೀನದ ಕಮ್ಯೂನಿಸ್ಟ್ ಸರಕಾರದ ಆಶ್ರಯದಲ್ಲಿ ಕ್ರೂರ ಕೃತ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಚೀನ ಅವಯವ ಕಸಿಗೆ ಕುಪ್ರಸಿದ್ಧವಾದ ದೇಶವಾಗಿದೆ. ಹೊರದೇಶಗಳ ಜನರು ಚೀನಕ್ಕೆ ಬಂದು ಕಾನೂನು ವಿರುದ್ಧವಾಗಿ ಅವಯವ ಕಸಿ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುತ್ತಿದ್ದಾರೆ. ಚೀನದ ಈ ಕ್ರೂರ ಕೃತ್ಯವನ್ನು ಚೀನದ ಧಾರ್ಮಿಕ ಗುಂಪಾದ ಫಾಲುನ್ ಗಾಂಗ್ ಎಂಬ ಆಧ್ಯಾತ್ಮಿಕ ಗುಂಪಿನ ಜನರು ಬಯಲಿಗೆ ತಂದಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಮಂದಿ ಚೀನದಲ್ಲಿ ನಾಪತ್ತೆಯಾಗಿದ್ದು, ಈ ಗುಂಪಿಗೆ ಸೇರಿದ ಸಾವಿರಾರು ಮಂದಿ ಚೀನದ ಜೈಲುಗಳಲ್ಲಿದ್ದಾರೆ.

ರಾಜಕೀಯ ಕೈದಿಗಳ ಅವಯವಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇತ್ತೀಚೆಗೆ ಉಯಿಗುರ್ ಮುಸ್ಲಿಮರ ಅಂಗಾಂಗಗಳನ್ನು ತೆಗೆಯಲಾಗುತ್ತಿದೆ. ಚೀನದ ಕುಕೃತ್ಯದ ವಿರುದ್ಧ ಫಾಲುನ್ ಗಾಂಗ್ ಹಲವು ವರ್ಷಗಳಿಂದ ಧ್ವನಿ ಎತ್ತಿದ್ದು ವಿಶ್ವ ಆರೋಗ್ಯ ಸಂಘಟನೆ ಸಹಿತ ಜಗತ್ತಿನ ಸಕಲ ಮಾನವ ಹಕ್ಕು ಸಂಘಟನೆಗಳಿಗೆ ಮತ್ತು ಹಲವು ದೇಶಗಳಿಗೆ ತಡೆಯುವಂತೆ ಮನವಿ ಮಾಡಿದೆ.

ಚೀನದಲ್ಲಿ 1999ರಲ್ಲಿ ಆಧ್ಯಾತ್ಮಿಕ ಗುಂಪು ಫಾಲನ್ ಗಾಂಗ್‍ ನ್ನು ನಿಷೇಧಿಸಲಾಗಿತ್ತು. ಇದರ ಸಾವಿರಾರು ಮಂದಿ ಚೀನದ ಜೈಲುಗಳಲ್ಲಿದ್ದಾರೆ. ಇವರಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ನಂತರ ಈ ಸಂಘಟನೆ ತನ್ನ ಮುಖ್ಯ ಕಚೇರಿಯನ್ನು ಅಮೆರಿಕದಲ್ಲಿ ಸ್ಥಾಪಿಸಿತು.