ಪ್ರವಾದಿಯನ್ನು ಸ್ಮರಿಸುವಾಗ

0
437

✍️ ಒ.ವಿ. ಉಷಾ

ಒ.ವಿ ಉಷಾ; ಖ್ಯಾತ ಕವಿ, ಕಾದಂಬರಿಕಾರ ಮತ್ತು ಅಂಕಣಕಾರದ ಒ.ವಿ ವಿಜಯನ್ ಅವರ ಸಹೋದರಿಯಾಗಿರುವ ಇವರು ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೆಲವು ಕಾಲ ದೆಹಲಿಯ ಮಾಸ್ ಕಮ್ಯುನಿಕೇಷನ್ ಸಂಶೋಧನಾ ವಿಭಾಗದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಆನಂತರ ಮೆಕ್‌ಗ್ರಾ-ಹಿಲ್ ಬುಕ್ ಕಂಪನಿಯಲ್ಲಿ ಸಹ ಸಂಪಾದಕಿಯಾಗಿ ಕೆಲಸ ಮಾಡಿದರು. ಸ್ಟರ್ಲಿಂಗ್‌ನಲ್ಲಿಯೂ ಸಂಪಾದಕೀಯ ಸಹಾಯಕರಾಗಿ, ಮತ್ತು ವಿಕಾಸ್ ಪಬ್ಲಿಷಿಂಗ್ ಹೌಸ್‌ನಲ್ಲಿ ಹಿರಿಯ ಸಂಪಾದಕರಾಗಿ, ಪ್ರಸ್ತುತ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಪ್ರಕಾಶಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವನ ಮತ್ತು ಲೇಖನಗಳನ್ನು ಬರೆಯುತ್ತಾರೆ. ಮುಖ್ಯ ಕೃತಿಗಳೆಂದರೆ ಸ್ನೇಹ ಗೀತೆಗಳು, ಒಟ್ಟ ಚುವಡ್, ಅಗ್ನಿಮಿತ್ರತಿ ನೋರು ಕುರಿಪ್ಪು (ಕವನಗಳು), ಶಾಹಿದ್ ನಾಮ (ಕಾದಂಬರಿ), ನಿಲಂ ತೊಡಾ ಮನ್ನ್ (ಕಥೆಗಳು).

ಮಾನವ ಸಮಾಜಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಧಾರ್ಮಿಕ ಸಂಪ್ರದಾಯಗಳಿವೆ. ಬಹುದೇವ ಮತ್ತು ಏಕದೇವೋಪಾಸನೆ. `ಏಕಂ ಸತ್ ವಿಪ್ರಾ: ಬಹುಧಾ ವದಂತಿ’ (ದೇವರು ಒಂದೇ, ವಿವಿದ ಹೆಸರುಗಳಲ್ಲಿ ಪೂಜಿಸಲಾಗುತ್ತದೆ) ಎಂದು ಹೇಳಿದವರು ಭಾರತೀಯರು.

ಭಾರತೀಯ ಸನಾತನ ಧರ್ಮವು ಅದರ ಮೂಲ ರೂಪದಲ್ಲಿ ಏಕತತ್ವ ಮನೋಭಾವವನ್ನು ನಂಬಿದವರಾಗಿದ್ದಾರೆ. ನಾವು ಯಾವ ಮಾರ್ಗದಲ್ಲಿ ಸಾಗಿದರೂ ಅಂತಿಮವಾಗಿ ಆ ಸತ್ವವನ್ನು ತಲುಪುತ್ತೇವೆ ಎಂಬ ಸಮರ್ಥನೆಯನ್ನು ಸಹಜವಾಗಿ ನಾವು ಮುಂದಿಡುತ್ತಿದ್ದೇವೆ. ಆ ಬಳಿಕ ನನ್ನ ಮುಲ್ಲಕ್ಕಲ್ ತೇವೆರಾ! ನನ್ನ ಎಲಂಜಿಕಲ್ ಭಗವತಿ! ನನ್ನ ನಾಗ ದೇವತೆ! ಎಂದು ಆರಂಭಿಸಿ ಮನೆ ದೇವರಾಗಿ ನೇಮಿಸಿದ ಇಷ್ಟದೇವತೆಗಳನ್ನು ನಾವು ಆಶ್ರಯಿಸುತ್ತೇವೆ ಮತ್ತು ಪೂಜಿಸುತ್ತೇವೆ.

ಗ್ರಾಮಗಳ ಮತ್ತು ಭೂ ಪ್ರದೇಶಗಳ ಕಾವಲುಗಾರರನ್ನಾಗಿ ತಾಯಂದಿರರನ್ನು, ತಂದೆಯಂದಿರರನ್ನು ಪ್ರತಿಷ್ಠಾನಗೊಳಿಸಿ ಮತ್ತು ಅವರನ್ನು ಶಿವ, ಪಾರ್ವತಿ, ವಿಷ್ಣು, ಇತ್ಯಾದಿಗಳ ಅವತಾರವಾಗಿ ಪರಿಗಣಿಸುತ್ತಾರೆ. ಅದೇ ರೀತಿ ಅವರಿಗಾಗಿ ಅನೇಕ ನೈವೇದ್ಯಗಳನ್ನು, ಉತ್ಸವಗಳನ್ನು ಮತ್ತು ಆಚರಣೆಗಳನ್ನು ನೆರವೇರಿಸಿ ಕೃತಾರ್ಥರಾಗುತ್ತಾರೆ. ಈ ರೀತಿಯ ಬಹುದೇವತಾ ಪರಿಕಲ್ಪನೆಗಳು ಇಲ್ಲಿ ಸಾರ್ವತ್ರಿಕವಾಗಿವೆ. ಮಾನವನು ತನ್ನ ಸಾಮಾನ್ಯ ಜ್ಞಾನದಿಂದ ಆಲೋಚಿಸುವುದಾದರೆ ಈ ಸಂಕೀರ್ಣವಾದ ಪ್ರಪಂಚಿಕ ವ್ಯವಸ್ಥೆಯನ್ನು ನಿಯಂತ್ರಿಸಲು ಒಂದು ಚೈತನ್ಯಕ್ಕೆ ಮಾತ್ರ ಸಾಧ್ಯ ಎಂಬುವುದು ಸತ್ಯ. ಇದು ನಮ್ಮ ಋಷಿಮುನಿಗಳ ದರ್ಶನವೂ ಆಗಿತ್ತು. ಉಪನಿಷತ್ತುಗಳಲ್ಲಿ ಉಲ್ಲೇಖಿಸಲ್ಪಟ್ಟ ವಿಷಯವೂ ಆಗಿದೆ. ಆದರೆ, ಪುರೋಹಿತ ಶಾಹಿಯ ಆಗಮನದಿಂದಾಗಿ ಆಚರಣೆ, ಸಂಪ್ರ ದಾಯ, ಮಂತ್ರ ತಂತ್ರಗಳಿಂದಾಗಿ ಭಾರತೀಯರು ಜಾತಿ ವ್ಯವಸ್ಥೆಯಲ್ಲಿ ಸಿಲುಕಿಕೊಂಡರು ಮತ್ತು ಅವರ ಜ್ಞಾನಕ್ಕೆ ಗ್ರಹಣ ಬಾಧಿಸಿತು.

ಆ ನಂತರ ಅದು ಮತ್ತೆ ಪ್ರಕಾಶಿಸಲಾರಂಭಿಸುವುದು ಮಧ್ಯಪ್ರಾಚ್ಯದಲ್ಲಿ, ಪ್ರವಾದಿ ಪರಂಪರೆಯ ಮೂಲಕವಾಗಿದೆ. ಆ ಅರಿವಿನ ಹಾದಿಯಲ್ಲಿ ಪ್ರವಾದಿ ಮುಹಮ್ಮದರ(ಸ) ದರ್ಶನ ಬಹಳ ಸ್ಪಷ್ಟವಾಗಿದೆ.

ಗ್ರೀಕ್-ರೋಮನ್ ಧರ್ಮಶಾಸ್ತ್ರದಲ್ಲಿ ಅಥವಾ ಭಾರತೀಯ ಧರ್ಮಶಾಸ್ತçದಲ್ಲಿ ತ್ಯಾಗದ ಪಾಠಗಳಿಲ್ಲ. ಹೆಚ್ಚಾಗಿ ಅವು ಆಚರಣೆಗಳು ಮತ್ತು ದುಂದುಗಾರಿಕೆಯನ್ನು ಪೋಷಿಸುವ ಸಂಪ್ರದಾಯಗಳಾಗಿವೆ (ಹಿಂಬಾಲಕರು ಅದನ್ನು ಎಷ್ಟು ಗುರುತರವಾಗಿ ಗ್ರಹಿಸಿದ್ದಾರೆ ಎಂದು ತಿಳಿಯಬೇಕಷ್ಟೇ) ಬದಲಾಗಿ ಪ್ರವಾದಿ ಮುಹಮ್ಮದರ(ಸ) ಜೀವನವೂ ತ್ಯಾಗ ಮತ್ತು ಸಂಕಷ್ಟದಿಂದ ಕೂಡಿದ್ದವು. ಜಗತ್ತಿನಲ್ಲಿ ಏಸು ಕ್ರಿಸ್ತ ಶಿಲುಬೆಯೇರಿದ ತ್ಯಾಗವೂ ಹೆಚ್ಚು ಪ್ರಸಿದ್ಧವಾಗಿದ್ದರೂ, ಪ್ರವಾದಿ(ಸ)ರು ಅನುಭವಿಸಿದ ನೋವುಗಳ ಇತಿಹಾಸವೂ ಅಷ್ಟೇ ಶ್ರೀಮಂತವಾಗಿದೆ.

ಪ್ರವಾದಿಯವರ(ಸ) ಜೀವ ಹಲವು ಬಾರಿ ಕೂದಲಂತರದಲ್ಲಿ ರಕ್ಷಿಸಲ್ಪಟ್ಟಿತ್ತು. ಅವರ ಸಮಕಾಲೀನ ಮೇಧಾವಿಗಳು, ಬಲಾಢ್ಯರು ಚಾವಟಿ ಮತ್ತು ಈಟಿಗಳಿಂದ ಹೊಡೆದರು ಸುಡು ಮರುಭೂಮಿಯಲ್ಲಿ ಎಳೆದುಕೊಂಡು ಚಿತ್ರಹಿಂಸೆ ನೀಡಿದರು ಎಂದು ಹೇಳಲಾಗುತ್ತದೆ. ಪ್ರವಾದಿಯವರು(ಸ) ಅಪಾಯಗಳನ್ನು ಮತ್ತು ಹಿಂಸೆಯನ್ನು ನಿರಂತರ ಎದುರಿಸುತ್ತಾ ತನಗೆ ಸಿದ್ಧಿಸಿದ ದಿವ್ಯ ಜ್ಞಾನವನ್ನು ತಮ್ಮ ಸಂಗಾತಿಗಳಿಗೆ ಧಾರೆಯೆರೆದರು.

ಜೀವ ಪಣಕ್ಕಿಟ್ಟು ಅಸಾಧಾರಣ ಶೌರ್ಯದಿಂದ ಮೂರ್ತಿ ಪೂಜೆಯನ್ನು ಕೊನೆಗೊಳಿಸಿದರು. ನಿಜವಾಗಿಯೂ ಪರಮ ಪ್ರಭುವಿನ ಕಾರ್ಯವನ್ನು ಮನುಷ್ಯ ನಿಷ್ಕಳಂಕವಾಗಿ ನಿರ್ವಹಿಸುವಾಗ ಖಂಡಿತವಾಗಿಯೂ ದಿವ್ಯ ಶಕ್ತಿಯನ್ನು ಆತ ಪಡೆಯುತ್ತಾನೆ. ಆದರೆ, ಆ ದಿವ್ಯ ಶಕ್ತಿಯನ್ನು ಹೀರಿಕೊಳ್ಳಲು ತ್ಯಾಗ, ಆತ್ಮ ಸಮರ್ಪಣೆ ಮತ್ತು ಸಹ ಜೀವಿಗಳ ಮೇಲೆ ತೋರುವ ಪ್ರೀತಿಯಿಂದ ಮಾತ್ರ ಆತ ಪ್ರಬುದ್ಧನಾಗುತ್ತಾನೆ.

ಈ ಕ್ಷೇತ್ರದಲ್ಲಿ ಪ್ರವಾದಿಯವರ(ಸ) ಜೀವನವು ನಿತ್ಯ ವಿಸ್ಮಯ ಮತ್ತು ಅದ್ಭುತವಾಗಿದೆ. ಶ್ರೀ ನಾರಾಯಣ ಗುರುಗಳು ತಮ್ಮ ‘ಅನುಕಂಪ ದಶಕ’ದಲ್ಲಿ ಪ್ರೀತಿಯ ಚಿಲುಮಯಂತೆ ಬದುಕಿದ ಮಹನೀಯರ ಸಾಲಿನಲ್ಲಿ ಪ್ರವಾದಿಯನ್ನು ಕಾಣುತ್ತಾರೆ: ‘ಪ್ರವಾದಿ ಕರುಣೆಯ ಮುತ್ತು ರತ್ನ’ ಎಂದು ಬಣ್ಣಿಸುತ್ತಾರೆ. ಕಾರುಣ್ಯದ ಹೃದಯವಂತಿಕೆಯಿಂದಾಗಿ ಜೀವನದ ಅತ್ಯಂತ ಕಠಿಣ ಸನ್ನಿವೇಶದಲ್ಲೂ ಮುಂದೆ ನಿಂತು ಕಾರ್ಯಪ್ರವೃತರಾದರು ಮತ್ತು ಯುಗ ಚೇತನವನ್ನು ಅನುಸರಿಸಲು ಪ್ರಯತ್ನಿಸಿದರು.

ಪ್ರವಾದಿಯವರು(ಸ) ಯಾವುದೇ ಘಟನೆಯಿಂದಲೂ ಹಿಂದೆ ಸರಿಯಲಿಲ್ಲ. ಹೊಣೆಗಾರಿಕೆಯನ್ನು ತಿರಸ್ಕರಿಸಿಯೂ ಇಲ್ಲ. ಅವರು ವ್ಯಾಪಾರಿ, ಮಗ, ಪತಿ, ರಾಜ, ದಂಡನಾಯಕ ಮತ್ತು ಸೈನಿಕ ಇತ್ಯಾದಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದರು! ಆ ಸಮಗ್ರ ಮತ್ತು ಆಳವಾದ ಜೀವನ ಅನುಭವಗಳು ಪರಮ ಪ್ರಭುವಿನ ಅನುಕಂಪಕ್ಕೆ ಕಾರಣವಾದ ಹಿನ್ನೆಲೆಯಾಗಿದೆ.

ಅವರು ಭಾಗವಹಿಸಿದ್ದ ಯುದ್ಧಗಳಲ್ಲಿ ಕೈದಿಗಳೊಂದಿಗೆ ತೋರಿದ ಸಹಾನುಭೂತಿಯೂ ದೊಡ್ಡ ಮಾದರಿಯಾಗಿದೆ. ಪ್ರವಾದಿಯವರು(ಸ) ಸೈದ್ಧಾಂತಿಕವಾಗಿ ನಿರಂತರ ಹಿಂಸೆಗೊಳಗಾದಾಗ ಅನಿವಾರ್ಯವಾಗಿ ಪ್ರತೀಕಾರದಲ್ಲಿ ತೊಡಗಬೇಕಾಯಿತು ಎಂಬುದನ್ನೂ ಇಲ್ಲಿ ನೆನಪಿಸಬಯಸುತ್ತೇನೆ.

ಅಂದಿನ ಸಂದರ್ಭಗಳನ್ನು ಅವಲೋಕಿಸುವುದಾದರೆ ಅಂದು ನಡೆದ ಎಲ್ಲಾ ಘಟನೆಗಳಲ್ಲಿ ಅವರು ಸಾಕಷ್ಟು ಸಮಚಿತ್ತತೆ ಮತ್ತು ನ್ಯಾಯವನ್ನು ಕಾಯ್ದುಕೊಂಡಿರುವುದು ಕಂಡುಬರುತ್ತದೆ. ಇಂದು ಕೋಮುವಾದದ ಪ್ರೇರಣೆಯಿಂದ ನಡೆಯುತ್ತಿರುವ ಅಮಾನವೀಯ ಹಿಂಸಾಕೃತ್ಯಗಳ ಸಂದರ್ಭದಲ್ಲಿ ಮುಸ್ಲಿಮರು ಮತ್ತು ಮುಸ್ಲಿಮೇತರರು ನೆನಪಿಸಿಕೊಳ್ಳಬೇಕಾದ ವಿಚಾರಗಳಲ್ಲಿ ಇದೂ ಒಂದಾಗಿದೆ ಎಂಬುವುದು ನನ್ನ ಭಾವನೆ. ಪ್ರವಾದಿ(ಸ)ರನ್ನು ಪ್ರೀತಿಸುವ ಮೂಲಕ ಅಲ್ಲಾಹನು ತನ್ನ ಕೃಪೆಯನ್ನು ಮಾನವ ಕುಲದ ಮೇಲೆ ನೆರಳಾಗಿ ಹಾಸಲಿ ಎಂದು ಆಶಿಸೋಣ. ಹಾಗೆಯೇ ವೈಯಕ್ತಿಕ ಮತ್ತು ಸಾಮಾಜಿಕ ಅನುಭವಗಳೊಂದಿಗೆ ಪ್ರಾಮಾಣಿಕ ಮತ್ತು ನ್ಯಾಯೋಚಿತ ಮಾರ್ಗಗಳನ್ನು ಸ್ವೀಕರಿಸಬೇಕೆಂಬ ನೆನಪು ಸದಾ ನಮ್ಮೆಲ್ಲರಲ್ಲಿ ಇರಲಿ ಎಂದು ಪ್ರಾರ್ಥಿಸೋಣ.

ಅನು: ಅಶೀರುದ್ದೀನ್ ಆಲಿಯಾ ಸಾರ್ತಬೈಲ್
ಮೂಲ: ಮಲೆಯಾಳಂ