✍️ ಸಲೀಮ್ ಬೋಳಂಗಡಿ
ಇಂದಿನ ಸಮಾಜದಲ್ಲಿ ಹಬ್ಬಗಳು ಬಂತೆಂದರೆ ಹೆದರುವ ಪರಿಸ್ಥಿತಿ ಉದ್ಭವವಾಗಿದೆ. ಪತಾಕೆಗಳ ಫಲಕಗಳ ಪೈಪೋಟಿಗಳಿಂದ ಈ ತರಹದ ಒಂದು ವಾತಾವರಣ ಉಂಟಾಗುತ್ತಿದೆ. ಯಾವ ಮೆರವಣೆಗೆಯ ಮೇಲೆ ಯಾರು ಕಲ್ಲು ಹೊಡೆಯುತ್ತಾರೋ, ಯಾರು ಪತಾಕೆ ಕಿತ್ತು ತಮ್ಮ ಪತಾಕೆಯನ್ನು ನಾಟುತ್ತಾರೋ ಎಂದು ಆತಂಕ ಪಡುವ ಪರಿಸ್ಥಿತಿಯ ಹಂತಕ್ಕೆ ಮುಟ್ಟಿದೆ. ರಾಜ್ಯದ ಕೆಲವೆಡೆ ನಡೆದ ಘಟನೆಗಳು ಇಂತಹ ಸಂಶಯ ಮೂಡಿಸುವಂತಹದ್ದು ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಬಹಳ ಸಂತಸ ಸಡಗರದಿಂದ ಆಚರಿಸಬೇಕಾದ ಹಬ್ಬಗಳು ಕೆಲವು ಕಿಡಿ ಗೇಡಿಗಳಿಂದಾಗಿ ಹಬ್ಬದ ಮಹತ್ವವನ್ನೇ ಕಳಕೊಳ್ಳುತ್ತಿದೆ. ಎಲ್ಲದಕ್ಕೂ ಜಾತಿಧರ್ಮದ ಲೇಪ ಹಚ್ಚಿ ಹಾಳು ಮಾಡಲು ಶ್ರಮಿಸುತ್ತಿದ್ದಾರೆ.
ಮೈಸೂರು ದಸರಾ ನಾಡಹಬ್ಬದ ಉದ್ಘಾಟನೆಯ ವಿವಾದವನ್ನೇ ತೆಗೆದುಕೊಳ್ಳೋಣ. ಬಾನು ಮುಷ್ತಾಕ್ ಹೆಸರು ಬಂದ ಕೂಡಲೇ ಕೆಲವರು ತಗಾದೆ ತೆಗೆದು ರಾದ್ದಾಂತ ಮಾಡಿ ಗುಲ್ಲೆಬ್ಬಿಸಿದ್ದಕ್ಕೆ ಈ ಕನ್ನಡ ನಾಡು ಸಾಕ್ಷಿಯಾಗಿದೆ. ಕೋರ್ಟು ಕಟಕಟೆಯ ಮೆಟ್ಟಲೂ ಹತ್ತಿದರು. ಕೊನೆಗೆ ನ್ಯಾಯಾಲಯವೇ ಅವರಿಗೆ ಅಂಕುಶ ಹಾಕಬೇಕಾಯಿತು. ಅಷ್ಟು ಮಾತ್ರವಲ್ಲ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಸನಾತನ ಧರ್ಮದವರಷ್ಟೇ ಚಾಮುಂಡೇಶ್ವರಿಗೆ ಹೂ ಮುಡಿಸಬೇಕು. ದಲಿತ ಮಹಿಳೆಗೂ ಅವಕಾಶವಿಲ್ಲ ಎಂಬ ದರ್ಪದ ಮಾತುಗಳನ್ನೂ ಆಡಿ ದಲಿತರನ್ನೂ ತುಳಿಯುವ ಪ್ರಯತ್ನ ಮಾಡಿದರು. ಇವೆಲ್ಲಾ ಒಂದು ಧರ್ಮದವರನ್ನು ವಿರೋಧಿಸಿ ತಮ್ಮ ಸ್ಥಾನ ಗಟ್ಟಿಗೊಳಿಸುವಂತಹ ಹುನ್ನಾರವೆಂದು ಅರ್ಥೈಸಲು ಕಷ್ಟವೇನಿಲ್ಲ. ಹಬ್ಬಗಳಂತಹ ಸಂಭ್ರಮದ ಸಂದರ್ಭದಲ್ಲೂ ಜಾತಿಯನ್ನು ಎಳೆದು ತಂದು ಅದರ ಸೊಗಡನ್ನು ಕೆಡಿಸುವವರು ನಿಜವಾಗಿ ಧರ್ಮ ಪ್ರೇಮಿಯಾಗಲು ಸಾಧ್ಯವೇ?
ಹಾಸನದಲ್ಲಿ ನಡೆದ ಗಣೇಶೋತ್ಸವದ ಮೆರವಣಿಗೆಯ ಮೇಲೆ ಟ್ರಕ್ಕೊಂದು ಹರಿದು ಹತ್ತಾರು ಅಮಾಯಕ ಜೀವಗಳು ಹರಣವಾದವು. ಅದು ನಾಡಿನಲ್ಲಿ ಶೋಕದ ವಾತಾವರಣವನ್ನೇ ಮೂಡಿಸಿತು. ಆದರೆ ಅದರಲ್ಲೂ ಟ್ರಕ್ ಚಾಲಕ ಅನ್ಯಮತೀಯ ಎಂದು ಬಿಂಬಿಸಲು ಕೆಲವು ಕಿಡಿ ಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದನ್ನು ನಾವು ನೋಡಿದ್ದೇವೆ. ಅಮಾಯಕರ ಸಾವಿನ ದುಃಖದ ಮಡುವಿನಲ್ಲಿ ರಾಜ್ಯವಿದ್ದರೂ ಕೋಮು ಲೇಪಿತ ದುಷ್ಟ ಮನಸ್ಸು ಪರಿಸ್ಥಿತಿಯ ಲಾಭ ಪಡೆಯಲು ಹವಣಿಸಿತು.
ಬೇಲೂರಿನಲ್ಲಿ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ನೀಚ ಕೃತ್ಯವೆಸಗಿದ ಆರೋಪಿ ಯಾರೆಂದು ಪತ್ತೆ ಹಚ್ಚುವ ಮುನ್ನವೇ ಮುಸ್ಲಿಮ್ ಧರ್ಮೀಯರ ಕೃತ್ಯವಿದು ಎಂಬಂತೆ ಬಿಂಬಿಸಲು ಶ್ರಮಿಸಲಾಯಿತು. ಈ ಎಲ್ಲಾ ಪ್ರಕ್ರಿಯೆಗಳನ್ನು ಗಮನವಿಟ್ಟು ನೋಡಿ ಚಿಂತಿಸಿ. ನಿಜವಾಗಿ ಈ ಜನಗಳ ಉದ್ದೇಶವೇನಾಗಿರಬಹುದು ಸ್ವಲ್ಪ ಯೋಚಿಸಿ. ಇಂತಹ ಬಿರುಕಿನಿಂದ ಲಾಭ ಪಡೆಯುವವರು ಯಾರು ಎಂಬುದು ಗಮನಾರ್ಹವಾದ ವಿಚಾರವಾಗಿದೆ. ಇನ್ನು ಉದ್ದೇಶ ಪೂರ್ವಕವಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮವನ್ನು ಕ್ಷಿಪ್ರಗತಿಯಲ್ಲಿ ಕೈಗೊಂಡರೆ ಇಂತಹದ್ದನ್ನು ಹದ್ದುಬಸ್ತಿಗೆ ತರಬಹುದು. ಹಬ್ಬ ಉತ್ಸವಗಳಂತಹ ಸಂಭ್ರಮದ ಸಂದರ್ಭದಲ್ಲಿ ಸಂತೋಷದ ಸವಿಯನ್ನು ಅನುಭ ವಿಸುವುದರಿಂದ ತಡೆಯುವ ಸ್ವಾರ್ಥಿಗಳ ವಿರುದ್ದ ಜನಜಾಗೃತಿಯಾಗಬೇಕಾಗಿದೆ.
ಈ ದೇಶದ ನಿಜವಾದ ಸಮಸ್ಯೆಯ ಕಡೆ ಜನ ಗಮನಹರಿಸದಂತೆ ಮಾಡುವ ಷಡ್ಯಂತ್ರವೇ ಇದು ಎಂಬ ಅನುಮಾನ ಜನರಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಇಂದಿಗೂ ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಅವಮಾನ, ಹಸಿವು, ಕ್ರೌರ್ಯ, ಹಿಂಸೆ, ಅತ್ಯಾಚಾರಗಳು ದೈನಂದಿನ ಸುದ್ದಿಯಾಗುತ್ತಿದೆ. ಅಪರಾಧ ಕೃತ್ಯಗಳು ನಿರ್ದಿಷ್ಟ ಧರ್ಮಕ್ಕೆ ಹೊಂದಿಕೊಂಡು ಪ್ರಚಾರ ಪಡೆಯುತ್ತಿವೆ. ಈ ನಡುವೆ ಅವಕಾಶವಾದಿ ರಾಜಕಾರಣ ಹೆಡೆಯೆತ್ತಿ ವಿಜೃಂಭಿಸುತ್ತಿದೆ. ಜಾತಿಯ ವಿಚಾರವನ್ನೇ ವೈಭವೀಕರಿಸಲಾಗುತ್ತಿದೆ. ಆದ್ದರಿಂದಲೇ ಹಬ್ಬದ ವಾತಾವರಣವನ್ನು ವ್ಯವಸ್ಥಿತವಾಗಿ ಕೆಡಿಸಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಸಮಾಜದ ಅಭಿವೃದ್ಧಿಯ ಕಡೆಗೆ ಗಮನಹರಿಸಲು ಜನರಿಗೆ ಇದು ಅಡ್ಡಿಯಾಗಿದೆ ಎಂದರೆ ತಪ್ಪಾಗಲಾರದು.
ಹಬ್ಬಗಳ ಸಂದರ್ಭಗಳಲ್ಲಿ ಪತಾಕೆ, ಫಲಕಗಳ ಭರಾಟೆ ಜೋರಾಗಿಯೇ ಇದೆ, ನಿಜ. ಅದರಲ್ಲೇನೂ ಅಭ್ಯಂತರವಿಲ್ಲ. ಅದನ್ನು ಸಮರ್ಪಕವಾಗಿ ಬಳಸ ಬೇಕಾದ ಅಗತ್ಯವಿದೆ. ಅದರಲ್ಲಿ ಹಬ್ಬದ ಮಹತ್ವದ ಬಗ್ಗೆ ಮಹಾತ್ಮರ ಹಿತನುಡಿಗಳು ಪರಸ್ಪರ ಹಿತಾಕಾಂಕ್ಷೆಯ, ಭಾವೈಕ್ಯತೆಯನ್ನು ಸಾರುವ ನುಡಿಗಳು ರಾರಾಜಿಸುತ್ತಿರಬೇಕು. ಶಾಂತಿಯುತ ಸೌಹಾರ್ದಯುತ ಸಮಾಜವನ್ನು ಕಟ್ಟುವ ನುಡಿಗಳು ಮೇಳೈಸುತ್ತಿರಬೇಕು. ದೇಶದ ಭವ್ಯ ಪರಂಪರೆಯ ಬಗ್ಗೆ ಇತಿಹಾಸವನ್ನು ನೆನಪಿಸುವ ಅಣಿಮುತ್ತುಗಳು ಸಮಾಜದಲ್ಲಿ ಸಂಚಲನ ಹುಟ್ಟಿಸುವ ನುಡಿಗಟ್ಟುಗಳು ಅದರಲ್ಲಿ ಬಿಂಬಿತವಾಗಬೇಕು. ಅದು ಹೊಸ ಸಮಾಜದ ಉದಯಕ್ಕೆ ನಾಂದಿಯಾಗುವಂತಿರಬೇಕು.
ಹಬ್ಬಗಳ ಆಗಮನವೆಂದರೆ ಎಲ್ಲರೂ ಸಂತಸ ಸಂಭ್ರಮದಿಂದ ಸ್ವಾಗತಿಸುವಂತಿರಬೇಕು. ಹಬ್ಬಗಳನ್ನು ಸಂಭ್ರಮಿಸಬೇಕಾದ ಸಂದರ್ಭದಲ್ಲಿ ಅಸಹನೆ, ಹಿಂಸೆ, ಬಿಕ್ಕಟ್ಟು ಅಸಹನೆಗಳಿಗೆ ಅವಕಾಶ ನೀಡಬಾರದು. ಹಬ್ಬಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಮಾರಕಾಸ್ತ್ರಗಳ ಫೋಟೋಗಳು, ಕೊಂಕು ನುಡಿಗಳು, ಕೋಮು ಪ್ರಚೋದಕ ಮಾತುಗಳು ಅದರಲ್ಲಿರಬಾರದು. ಫಲಕ ಬ್ಯಾನರ್ಗಳು ಜನರಲ್ಲಿ ಅಸಹನೆಯುಂಟು ಮಾಡುವಂತಾಗಬಾರದು. ಅದು ಕಟ್ಟುವುದಕ್ಕೂ ಒಂದು ಮಿತಿಯಿರಬೇಕು.
ಸಮಾಜವನ್ನು ಪರಸ್ಪರ ಜೋಡಿಸಿ ಸಂಬಂಧಗಳನ್ನು ಬಲಪಡಿಸುವ ಕಾರ್ಯಗಳು ಹಬ್ಬದ ಸಂದರ್ಭದಲ್ಲಾಗಬೇಕು. ಆಗ ನಾವು ಸಾಮಾನ್ಯವಾಗಿ ಬಳಸುವ ಹಬ್ಬದ ವಾತಾವರಣ ಎಂಬ ನುಡಿಗಟ್ಟಿಗೆ ಅರ್ಥಬರುತ್ತದೆ. ಅಲ್ಲಿ ಜನರ ನಡುವೆ ಯಾವುದೇ ರೀತಿಯ ಭೇದ-ಭಾವ ಇರಲೇಬಾರದು. ಹಬ್ಬದ ಸಂಭ್ರಮಗಳಿಗೆ ಕಲ್ಲು ಹಾಕುವ ಪ್ರಯತ್ನಗಳನ್ನು ಸರಕಾರ ಕೂಡಾ ತಹಬಂದಿಗೆ ತರಬೇಕು. ಸರಕಾರದ ಪ್ರಯತ್ನವೂ ಇದರಲ್ಲಿ ಅಗತ್ಯವಿದೆ. ಹಬ್ಬದ ಸವಿಯುಣ್ಣುವ ವಾತಾವರಣ ಇಲ್ಲಿ ಮೂಡಿಬರಬೇಕು. ಹಬ್ಬಗಳೂ ಭಾವೈಕ್ಯತೆ ಸಾರಬೇಕು.












