✍️ ಮಿಷಲ್
- ಚಿನ್ನದ ಪದಕದೊಂದಿಗೆ LL ಬಿ ಪದವಿ
- ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಕೀಟಶಾಸ್ತ್ರದಲ್ಲಿ ಪಿಎಚ್ಡಿ ಪದವಿ
- ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸಲಹೆಗಾರ
- ಸುಪ್ರೀಂ ಕೋರ್ಟಿನಲ್ಲಿ ಲಾಯರ್
- ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲದ ಸ್ವಚ್ಛ ಹಿನ್ನೆಲೆ
- 71 ವರ್ಷ
- ಸುಪ್ರೀಂ ಕೋರ್ಟ್ನ ಬಾರ್ ಅಸೋಸಿಯೇಷನ್ ಸದಸ್ಯ
ಇಂಥ ಓರ್ವ ವ್ಯಕ್ತಿ ಸುಪ್ರೀಂ ಕೋರ್ಟ್ನ ಒಳಗಡೆ ವಿಚಾರಣೆ ನಡೆಯುತ್ತಿರುವ ಸಮಯದಲ್ಲಿಯೇ ಮುಖ್ಯ ನ್ಯಾಯಾಧೀಶ ಬಿ ಆರ್ ಗವಾಯಿ ಅವರಿಗೆ ಶೂ ಎಸೆಯುತ್ತಾರೆ. ಸನಾತನ ಧರ್ಮವನ್ನು ಅವಮಾನಿಸುವುದನ್ನು ಭಾರತ ಸಹಿಸುವುದಿಲ್ಲ ಎಂದು ಹೇಳುತ್ತಾರೆ. ಗವಾಯಿ ಪಕ್ಕ ಕುಳಿತು ವಿಚಾರಣೆಯಲ್ಲಿ ಭಾಗಿಯಾಗಿದ್ದ ಜಸ್ಟಿಸ್ ವಿನೋದ್ ಚಂದ್ರ ಅವರನ್ನು ಉದ್ದೇಶಿಸಿ ನಾನು ಶೂ ಎಸೆದದ್ದು ನಿಮಗಲ್ಲ, ಗವಾಯಿ ಅವರಿಗೆ ಎಂದು ಸ್ಪಷ್ಟನೆಯನ್ನು ನೀಡುತ್ತಾರೆ. ಏನು ಇವೆಲ್ಲ? ಅತ್ಯಂತ ವಿದ್ಯಾವಂತ ಕ್ರಿಮಿನಲ್ ಹಿನ್ನೆಲೆ ಇಲ್ಲದ ಮತ್ತು ವಯಸ್ಸಿನಲ್ಲಿ ಹಿರಿಯರಾಗಿರುವ ವ್ಯಕ್ತಿಯೋರ್ವ ಹೀಗೆ ನಡಕೊಳ್ಳುವುದನ್ನು ಹೇಗೆ ನೋಡಬಹುದು? ವೆಬ್ ಪೋರ್ಟಲ್ ಗಳಲ್ಲಿ ಪ್ರಕಟವಾದ ಈ ಸುದ್ದಿಗೆ ಓದುಗರು ಮಾಡಿದ ಕಮೆಂಟನ್ನು ನೋಡಿದರೆ ಆಘಾತವಾಗಬಹುದು. ಅತ್ಯಂತ ಕಡು ಕೆಟ್ಟ ಭಾಷೆಯಲ್ಲಿ ಮುಖ್ಯ ನ್ಯಾಯಾಧೀಶರನ್ನೇ ನಿಂದಿಸುವ ಅವಮಾನಿಸುವ ಮತ್ತು ರಾಕೇಶ್ ಕಿಶೋರ್ ಎಂಬ ಈ ವಕೀಲರನ್ನು ಸಮರ್ಥಿಸುವ ಸಾಲು ಸಾಲು ಪ್ರತಿಕ್ರಿಯೆಗಳು ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಸಿಗಬಹುದು.
ವಕೀಲನ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದು ಮುಖ್ಯ ನ್ಯಾಯಾಧೀಶರೇ ಹೇಳಿದ ಕಾರಣದಿಂದಾಗಿ ಕೇವಲ ಮೂರೇ ಮೂರು ಗಂಟೆಯ ಒಳಗಡೆ ಈ ರಾಕೇಶ್ ಕಿಶೋರ್ನ ಬಿಡುಗಡೆಯೂ ಆಗುತ್ತದೆ. ಅದರ ಬೆನ್ನಿಗೆ ವಿವಿಧ ಸುದ್ದಿ ಸಂಸ್ಥೆಗಳು ಇವರ ಸಂದರ್ಶನ ನಡೆಸುತ್ತವೆ. ಆ ಸಂದರ್ಶನದಲ್ಲಿ ಈ ಮನುಷ್ಯ ಆಡಿರುವ ಮಾತುಗಳನ್ನು ನೋಡಿದರೆ ಈ ದೇಶದ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಆತಂಕವೂ ಆಗುತ್ತದೆ
ನಾನು ಏನು ಮಾಡಿರುವೆನೋ ಆ ಬಗ್ಗೆ ಪಶ್ಚಾತಾಪ ಇಲ್ಲ. ಮುಖ್ಯ ನ್ಯಾಯಮೂರ್ತಿಯಲ್ಲಿ ಕ್ಷಮೆ ಯಾಚಿಸಲ್ಲ. ನನ್ನ ನಿರ್ಧಾರ ಸರಿ ಇದೆ. ಶೂ ಎಸೆಯುವಂತೆ ದೇವರೇ ನನಗೆ ಪ್ರಚೋದನೆ ನೀಡಿದ್ದಾರೆ. ಭಾರತೀಯ ನ್ಯಾಯ ವ್ಯವಸ್ಥೆ ಬುಲ್ಡೋಜರ್ ನಿಯಮದಿಂದ ನಡೆಯುತ್ತಿಲ್ಲ ಎಂದು ಇತ್ತೀಚಿಗೆ ಮಾರಿಷಸ್ ನಲ್ಲಿ ಗವಾಯಿ ಅವರು ನೀಡಿರುವ ಹೇಳಿಕೆ ನನ್ನಲ್ಲಿ ಸಿಟ್ಟು ತರಿಸಿದೆ. ಅಕ್ರಮ ಒತ್ತುವರಿಯನ್ನು ಯೋಗಿ ಆದಿತ್ಯನಾಥ್ ತೆರವುಗೊಳಿಸಿದ್ದರಲ್ಲಿ ತಪ್ಪು ಏನಿದೆ? ಹಲ್ ದ್ವಾನಿಯಲ್ಲಿ ಮುಸ್ಲಿಮರಿಂದ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಹೊರಟ ಸರ್ಕಾರದ ನಿರ್ಧಾರಕ್ಕೆ ಇದೇ ಸುಪ್ರೀಂಕೋರ್ಟು ತಡೆಯನ್ನು ವಿಧಿಸಿದೆ. ಆದರೆ ನೂಪುರ್ ಶರ್ಮಾ ಪ್ರಕರಣದಲ್ಲಿ ಇದಕ್ಕೆ ವಿರುದ್ಧವಾಗಿ ವರ್ತಿಸಿದೆ… ಎಂದೆಲ್ಲ ಈ ವಕೀಲ ತನ್ನ ಆಕ್ರೋಶವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ
ಒಂದು ವೇಳೆ ಸುಪ್ರೀಂ ಕೋರ್ಟಿನ ನ್ಯಾಯ ವಿಧಾನದಲ್ಲಿ ಅಸಮಾಧಾನ ಇದ್ದರೆ ಮರು ವಿಚಾರಣೆಗೆ ಆಗ್ರಹಿಸಿ ಅರ್ಜಿ ಸಲ್ಲಿಸಬಹುದು. ಇವರು ಲಾಯರ್. ಆದ್ದರಿಂದ ಹೀಗೆ ಮಾಡುವುದು ಬಹಳ ಸುಲಭ. ಆದರೆ ಹಾಗೆ ಮಾಡದೆ ಈ ಲಾಯರ್ ಕೈಗೆ ಶೂವನ್ನು ಪಡಕೊಂಡದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಈ ದೇಶದ ಬೀದಿಗಳಲ್ಲಿ ಕಾಣಸಿಗುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಒಂದು ಗುಂಪು ಈ ದೇಶದಲ್ಲಿ ಸಕ್ರಿಯವಾಗಿದೆ. ಅವರಿಗೆ ಕೋರ್ಟು ಬೇಕಾಗಿಲ್ಲ. ಪೊಲೀಸರು ಬೇಕಾಗಿಲ್ಲ. ಅವರು ಏನು ಅಂದುಕೊಂಡಿದ್ದಾರೋ ಅದುವೇ ಸತ್ಯ. ಅದುವೇ ಜಾರಿ ಆಗಬೇಕು. ಈ ಮನಸ್ಥಿತಿಯನ್ನೇ ಈ ರಾಕೇಶ್ ಕಿಶೋರ್ ಎಂಬ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಪ್ರದರ್ಶಿಸಿದ್ದಾರೆ.
ಚಿನ್ನದ ಪದಕ ದೊಂದಿಗೆ ಎಲ್ಲೆಲ್ಬಿಯನ್ನು ಮುಗಿಸಿರುವ ಮತ್ತು 71 ವರ್ಷದ ದೀರ್ಘ ಜೀವನಾನುಭವ ಇರುವ ವ್ಯಕ್ತಿಯೇ ಬೀದಿ ನ್ಯಾಯದ ಭಾಷೆಯಲ್ಲಿ ಮಾತಾಡುತ್ತಾರೆ ಎಂದರೆ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಎಂದರೆ ಈ ದೇಶದ ಭವಿಷ್ಯ ಏನಿರಬಹುದು? ಮುಖ್ಯ ನ್ಯಾಯಾಧೀಶ ಗವಾಯಿ ಅವರು ಈ ಲಾಯರನ್ನು ಕ್ಷಮಿಸಿರಬಹುದು. ಆದರೆ ಈ ಲಾಯರ್ ಕೃತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಬೆಂಬಲವನ್ನು ನೋಡಿದರೆ ಈ ಲಾಯರ್ ಒಂಟಿಯಲ್ಲ ಅನ್ನುವುದು ಗೊತ್ತಾಗುತ್ತದೆ. ಇಂತಹ ಮನಸ್ಥಿತಿಯವರು ಪ್ರಭುತ್ವದ ಆಯಕಟ್ಟಿನ ಜಾಗದಲ್ಲಿ ಇರಬಹುದು ಅನ್ನುವ ಸೂಚನೆಯನ್ನು ನೀಡುತ್ತದೆ. ಈ ಲಾಯರ್ ನಂತೆ ಅವರೆಲ್ಲ ಬಹಿರಂಗವಾಗಿ ತಮ್ಮ ಮನಸ್ಥಿತಿಯನ್ನು ಪ್ರದರ್ಶಿಸುತ್ತಿಲ್ಲ. ಅಷ್ಟೇ.












