✍️ ಇಷಲ್
ಶೂಗಿಂತ ಬಾಯಿಗಳೆ ಸದ್ದು ಮಾಡ್ತಾ ಇವೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಗವಾಯಿ ಅವರಿಗೆ ರಾಕೇಶ್ ಕಿಶೋರ್ ಎಂಬ ವಕೀಲ ಶೂ ಎಸೆದ ಬಳಿಕ ಸೋಶಿಯಲ್ ಮೀಡಿಯಾದಿಂದ ಹಿಡಿದು ಬಿಜೆಪಿ ಮುಖಂಡ ಮತ್ತು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವರೆಗೆ ಸಮರ್ಥನೆಯೇ ಸಮರ್ಥನೆ. ಆರಂಭದಲ್ಲಿ ಶೂ ಎಸೆದ ವಕೀಲನೆ ಮಾಧ್ಯಮಗಳಿಗೆ ಸಮರ್ಥನೆಯ ಹೇಳಿಕೆ ನೀಡಿದರು. ತನಗೆ ಪಶ್ಚಾತಾಪ ಇಲ್ಲ, ದೇವನೇ ಶೂ ಎಸೆಯಲು ಪ್ರಚೋದನೆ ನೀಡಿದ್ದು ಎಂದೆಲ್ಲಾ ಹೇಳಿಕೆ ನೀಡಿದರು. ಮಾಧ್ಯಮಗಳು ಮೇಲಿಂದ ಮೇಲೆ ಅವರಿಂದ ಹೇಳಿಕೆಯನ್ನು ಪಡೆದು ಅವರನ್ನೇ ಹೀರೋ ಮಾಡಿದವು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ರಾಕೇಶ್ ಕಿಶೋರ್ ಪರ ವಾದ ಪ್ರಾರಂಭವಾಯಿತು. ಮುಖ್ಯ ನ್ಯಾಯಾಧೀಶರನ್ನು ಬೈಯುವ ತೆಗಳುವ ನಿಂದಿಸುವ ಅಭಿಪ್ರಾಯಗಳು ವ್ಯಕ್ತವಾಗುತೊಡಗಿದವು. ಈ ನಡುವೆ ಸುಮಾರು 7 ಗಂಟೆಯ ನಂತರ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಕ್ಕೂ ವಿರೋಧ ವ್ಯಕ್ತವಾಯಿತು.
ಪ್ರಧಾನಿಯವರು ಪ್ರತಿಕ್ರಿಯಿಸುವುದಕ್ಕೆ ಇಷ್ಟು ತಡ ಏಕೆ ಎಂದು ಅನೇಕರು ಪ್ರಶ್ನಿಸಿದರು. ಈ ನಡುವೆ ಬೆಂಗಳೂರಿನ ಮಾಜಿ ಐಪಿಎಸ್ ಅಧಿಕಾರಿ ಒಂದು ಪೋಸ್ಟ್ ಹಂಚಿಕೊಂಡ್ರು. ಶೂ ಎಸೆದದ್ದು ಕಾನೂನಿನ ಪ್ರಕಾರ ತಪ್ಪಾದರೂ ಈ ವಯಸ್ಸಿನಲ್ಲಿ ಯಾವುದೇ ಪರಿಣಾಮವನ್ನು ಲೆಕ್ಕಿಸದೆ ಶೂ ಎಸೆಯುವ ನಿಲುವು ತೆಗೆದುಕೊಂಡು ಅದರಲ್ಲಿ ದೃಢವಾಗಿ ನಿಲ್ಲುವ ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅವರು ಮಾತು ಬದಲಿಸಿದರು. ತನ್ನ ಅಭಿಪ್ರಾಯಕ್ಕೆ ಕ್ಷಮೆ ಯಾಚಿಸಿದರು.
ಹಾಗಂತ ಮೊದಲು ತಲೆ ಖರ್ಚು ಮಾಡದೆ ವರ್ತಿಸುವುದು ಮತ್ತು ಆ ಬಳಿಕ ಕ್ಷಮೆಯಾಚಿಸುವುದೆಲ್ಲ ಇದೇ ಮೊದಲ ಪ್ರಕರಣ ಅಲ್ಲ.
ಆಪರೇಷನ್ ಸಿಂಧೂರು ಕಾರ್ಯಾಚರಣೆಯ ಬಗ್ಗೆ ಕರ್ನಲ್ ಸೋಫಿಯ ಕುರೇಶಿ ಮತ್ತು ಯೋಮಿಕ ಸಿಂಗ್ ಅವರು ಪ್ರತಿದಿನ ಮಾಧ್ಯಮಗಳಿಗೆ ಅಪ್ಡೇಟ್ ನೀಡ್ತಾ ಇದ್ದರು. ಅವರ ಧೈರ್ಯ ಸಾಹಸ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಸಚಿವ ವಿಜಯ ಶಾ ಎಂಬವರು ವೀರಾವೇಷದ ಹೇಳಿಕೆ ಕೊಟ್ಟರು. ನಮ್ಮ ಸಹೋದರಿಯರ ಹಣೆಯಿಂದ ಸಿಂಧೂರವನ್ನು ಯಾರು ಅಳಿಸಿದ್ದಾರೋ ಅವರಿಗೆ ಪಾಠ ಕಲಿಸಲು ಅವರದೇ ಸಹೋದರಿಯನ್ನು ನಾವು ಕಳಿಸಿದೆವು ಎಂದು ಸೋಫಿಯಾ ಖುರೇಶಿಯವರನ್ನು ಉದ್ದೇಶಿಸಿ ಹೇಳಿದರು.
ಸೋಫಿಯಾ ಖುರೇಶಿ ಭಯೋತ್ಪಾದಕರ ಸಹೋದರಿ ಎಂಬ ಅರ್ಥ ಬರುವಂತೆ ಅವರು ನೀಡಿದ ಹೇಳಿಕೆಗೆ ವ್ಯಾಪಕ ಆಕ್ರೋಶ ಎದುರಾಯಿತು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತು. ಪ್ರಕರಣ ಗಂಭೀರ ಸ್ವರೂಪ ಪಡಕೊಳ್ಳುತ್ತಿರುವುದನ್ನು ತಿಳಿದುಕೊಂಡ ವಿಜಯ್ ಶಾ ಕ್ಷಮೆ ಯಾಚಿಸಿದರು. ಆದರೆ ಸುಪ್ರೀಂ ಕೋರ್ಟು ಅವರ ಕ್ಷಮಾಯಾಚನೆಯಿಂದ ತೃಪ್ತಿಪಡಲಿಲ್ಲ. ತನಿಖೆ ಮುಂದುವರಿಸುವಂತೆ ಮಧ್ಯಪ್ರದೇಶ ಹೈಕೋರ್ಟಿಗೆ ನಿರ್ದೇಶನ ನೀಡಿತು.
ಕಳೆದ ಆಗಸ್ಟ್ ತಿಂಗಳಲ್ಲಿ ವಿಧಾನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮಸ್ತೆ ಸದಾ ವತ್ಸಲೆ ಹಾಡಿದ್ರು. ಇದರ ವಿರುದ್ಧ ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಬಹಿರಂಗವಾಗಿಯೇ ತಮ್ಮ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಡಿಕೆ ಶಿವಕುಮಾರ್ ಅವರು ಕ್ಷಮೆಯಾಚಿಸಿದರು.
ಕಳೆದ ಜೂನ್ ತಿಂಗಳಲ್ಲಿ ಗೋವಾದಲ್ಲಿ ಒಂದು ಘಟನೆ ನಡೆಯಿತು. ಅಲ್ಲಿನ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಸಾರ್ವಜನಿಕವಾಗಿ ನಿಂದಿಸಿದರು. ಅತ್ಯಂತ ಅನಾಗರಿಕವಾಗಿ ನಡೆಸಿಕೊಂಡರು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತು. ಸಚಿವರ ವಿರುದ್ಧ ತೀವ್ರ ಅಕ್ರೋಶ ವ್ಯಕ್ತವಾಯಿತು. ಕೊನೆಗೆ ಅವರು ಕ್ಷಮೆಯಾಚಿಸಿದರು.
ಬಿಜೆಪಿ ಸಂಸದೆಯಾಗಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಅವರು ಗೋಡ್ಸೆಯನ್ನು ದೇಶಭಕ್ತ ಎಂದು ಹೋಗಳಿದ್ರು. ಪಾರ್ಲಿಮೆಂಟಲ್ಲಿ ಈ ಹೊಗಳಿಕೆ ನಡೆದಿತ್ತು. 2019ರಲ್ಲಿ ನಡೆದ ಈ ವರ್ತನೆಗೆ ಪಾರ್ಲಿಮೆಂಟಲ್ಲೂ ಹೊರಗಡೆಯೂ ತೀವ್ರ ವಿರೋಧ ವ್ಯಕ್ತವಾಯಿತು. ಕೊನೆಗೆ ಅವರು ಕ್ಷಮೆ ಯಾಚಿಸಿದರು.
ಇದೀಗ ಭಾಸ್ಕರ್ ರಾವ್ ಅವರ ಸರದಿ. ಐಪಿಎಸ್ ಅಧಿಕಾರಿಯಾಗಿದ್ದ ವ್ಯಕ್ತಿಯೊಬ್ಬ ಇಷ್ಟೊಂದು ನಿರ್ಲಜವಾಗಿ ಶೂ ಎಸೆತವನ್ನು ಸಮರ್ಥಿಸಿ ಪೋಸ್ಟ್ ಹಾಕ್ತಾರಂದ್ರೆ ಅದು ಕೊಡುವ ಸಂದೇಶ ಏನು? ಅವರು ಹಾಗೆ ಆಲೋಚಿಸಲು ಹೇಗೆ ಸಾಧ್ಯ? ಓರ್ವ ಐಪಿಎಸ್ ಅಧಿಕಾರಿಯೇ ಇಂಥ ಅಭಿಪ್ರಾಯವನ್ನು ಹೊಂದಿರುವರಾದರೆ ಇನ್ನು ಅವರ ಪಕ್ಷದ ಕಾರ್ಯಕರ್ತರ ಪರಿಸ್ಥಿತಿ ಏನಿದ್ದೀತು?
ಕ್ಷಮೆಯಾಚಿಸುವ ಮೂಲಕ ಮರೆತುಬಿಡಬಹುದಾದ ಅಭಿಪ್ರಾಯ ಅವರದಲ್ಲ. ಯಾಕೆಂದರೆ ಅವರು ಸಾಮಾನ್ಯ ವ್ಯಕ್ತಿಯಲ್ಲ. ಒಂದು ನಿರ್ದಿಷ್ಟ ವಿಚಾರಧಾರೆಯನ್ನು ಅವರು ಪ್ರತಿನಿಧಿಸಿದ್ದಾರೆ. ಆ ವಿಚಾರಧಾರೆ ರಾಜಕೀಯ ಪಕ್ಷವನ್ನು ಸೇರ್ಪಡೆಯಾದ ಬಳಿಕ ಹುಟ್ಟಿಕೊಂಡ ವಿಚಾರಧಾರೆಯೋ ಅಥವಾ ಐಪಿಎಸ್ ಅಧಿಕಾರಿಯಾಗಿದ್ದಾಗಲೇ ಆ ವಿಚಾರಧಾರೆ ಇತ್ತೋ ಅನ್ನೋದೇ ಈಗಿನ ಪ್ರಶ್ನೆ.












