ಅಸ್ಸಾಂ: ರಾಷ್ಟ್ರೀಯ ಪೌರತ್ವ ಪಟ್ಟಿಗೆ ಇನ್ನೊಂದು ಬಲಿ- 14 ವರ್ಷದ ನೂರ್ ಜಹಾನ್ ಆತ್ಮಹತ್ಯೆ

0
788

ಗುವಾಹಟಿ, ಜೂ. 27: ರಾಷ್ಟ್ರೀಯ ಪೌರತ್ವ ರಿಜಿಸ್ಟರ್ ನಲ್ಲಿ ಹೆಸರಿಲ್ಲದ್ದಕ್ಕೆ ನೊಂದು ಅಸ್ಸಾಂನಲ್ಲಿ ಹದಿನಾಲ್ಕು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದರಾಂದ್ ಜಿಲ್ಲೆಯ ರೌಮರಿ ಗ್ರಾಮದಲ್ಲಿ ನೂರ್ ಜಹಾನ್ ಬೇಗಂ ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡವಳು. ರಾಷ್ಟ್ರೀಯ ಪೌರತ್ವ ರಿಜಿಸ್ಟರ್ ನ ಹೊಸ ಪಟ್ಟಿಯಲ್ಲಿ ತನ್ನ ಹೆಸರು ಸೇರ್ಪಡೆಯಾಗಿಲ್ಲ ಎಂದು ಬಾಲಕಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ಸಂಬಂಧಿಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.

ಕಳೆದ ವರ್ಷ ಅಸ್ಸಾಂ ಸರಕಾರ ಬಿಡುಗಡೆಗೊಳಿಸಿದ ಕರಡು ಪಟ್ಟಿಯಲ್ಲಿ ನೂರ್ ಜಹಾನ್ ಹೆಸರು ಇರಲಿಲ್ಲ. ನಂತರ ಹಲವು ಸಲ ಪಟ್ಟಿ ಹೊರಬಂದರೂ ಅದರಲ್ಲಿಯೂ ನೂರ್ ಜಹಾನ್ ಹೆಸರಿರಲಿಲ್ಲ. ಇದರ ನಂತರ ಕಳೆದ ದಿವಸ ಸರಕಾರ ಹೊಸ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿಯೂ ಅವಳ ಹೆಸರಿರಲಿಲ್ಲ. ಇದರಿಂದ ನೊಂದುಕೊಂಡು ಬಾಲಕಿ ಆತ್ಮಹತ್ಯೆಗೆ ಶರಣಾದಳು ಎನ್ನಲಾಗಿದೆ. ಇನ್ನೂ ಒಂದು ಹೊಸ ಪಟ್ಟಿ ಜೂನ್ 31ಕ್ಕೆ ಪ್ರಕಟವಾಗಲಿದೆ. ಆದರೆ ಈಗಾಗಲೇ ಹೊರ ಬಂದ ಪಟ್ಟಿಯು ಅಂತಿಮ ಪಟ್ಟಿಯೆಂದು ಬಾಲಕಿ ಮತ್ತು ಮನೆಯವರು ತಿಳಿದುಕೊಂಡಿದ್ದರು. ರಾಷ್ಟ್ರೀಯ ಪೌರತ್ವ ಪಟ್ಟಿ ತಯಾರಿಸುವುದರಲ್ಲಿ ತುಂಬ ಎಡವಟ್ಟುಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಸರಕಾರ ಬಹಿರಂಗಪಡಿಸುವುದಿಲ್ಲ ಎಂದು ಅಸ್ಸಾಂ ಮೈನಾರಿಟೀಸ್ ಸ್ಟೂಡೆಂಟ್ಸ್ ಯೂನಿಯನ್ ನಾಯಕ ಅಬ್ದುಲ್ ಹೈ ಆರೋಪಿಸಿದ್ದಾರೆ. ಇದೇವೇಳೆ ಬಾಲಕಿಯ ಸಾವಿಗೂ ಪೌರತ್ವ ಪಟ್ಟಿಗೂ ಸಂಬಂಧ ಇಲ್ಲ ಎಂದು ಜರಾಂದ್ ಜಿಲ್ಲಾ ಪೊಲೀಸಧಿಕಾರಿ ಅಮೃತ್ ಭೂಯಾನ್ ಹೇಳಿದ್ದಾರೆ.