ಅಸ್ಸಾಂ ಪೌರತ್ವ ಪಟ್ಟಿ: ಇನ್ನೂ ಒಂದು ಲಕ್ಷ ಮಂದಿ ಹೊರಕ್ಕೆ

0
652

ಗುವಾಹಟಿ, ಜೂ. 27: ವಿವಾದಿತ ಅಸ್ಸಾಂ ರಾಷ್ಟ್ರೀಯ ಪೌರತ್ವ ಪಟ್ಟಿ (ಎನ್‍ ಆರ್ ಸಿ ) ಕರಡಿನಿಂದ ಇನ್ನೂ ಒಂದು ಲಕ್ಷ ಮಂದಿಯನ್ನು ಹೊರಗಿರಿಸಲಾಗಿದೆ. ಪರಿಶೀಲನೆಯಲ್ಲಿ ಅನರ್ಹರೆಂದು ಕಂಡು ಬಂದ ಒಂದು ಲಕ್ಷ ಮಂದಿಯನ್ನು ಪೌರತ್ವದಿಂದ ಹೊರಗಿಡಲಾಗಿದೆ ಎಂದು ರಾಜ್ಯ ಎನ್‍ ಆರ್ ಸಿ ಕೋಆರ್ಡಿನೇಟರ್ ತಿಳಿಸಿದ್ದಾರೆ. 1,02,462 ಮಂದಿಯನ್ನು ಬುಧವಾರ ಪಟ್ಟಿಯಿಂದ ಹೊರಗಿರಿಸಲಾಯಿತು.

ರಾಜ್ಯದ ಜನರ ಪೌರತ್ವ ದೃಢೀಕರಿಸುವ ರಾಷ್ಟ್ರೀಯ ಪೌರತ್ವ ಪಟ್ಟಿಯ ಅಂತಿಮ ಕರಡು ಕಳೆದ ವರ್ಷ ಜುಲೈ ಮೂವತ್ತರಂದು ಪ್ರಕಟಿಸಲಾಗಿತ್ತು. ಇದರಲ್ಲಿ 40 ಲಕ್ಷ ಮಂದಿಯನ್ನು ದೇಶದ ನಾಗರಿಕಲ್ಲ ಎಂದು ಹೊರಗಿಡಲಾಗಿತ್ತು. ಸುಪ್ರೀಂಕೋರ್ಟಿನ ನಿರೀಕ್ಷಣೆಯಲ್ಲಿ ತಯಾರಿಸಿದ್ದ ಅಂತಿಮ ಪಟ್ಟಿ ಜುಲೈ 31ಕ್ಕೆ ಪ್ರಕಟವಾಗಲಿದೆ.

ವಿದೇಶಿ ಎಂದು ಘೋಷಿಸಲ್ಪಟ್ಟಿರುವವರು, ಶಂಕಿತ ಮತದಾರರು, ವಿದೇಶಿಯೆಂದು ಟ್ರಿಬ್ಯೂನಲ್‍ನಲ್ಲಿ ಕೇಸು ಇರುವವರು ಎಂದು ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕರಡು ಪಟ್ಟಿಯಿಂದ ಹೊರಗೆ ಹಾಕಲಾಗಿದೆ. ಇವರ ವಿವರಗಳನ್ನು ಎನ್‍ ಆರ್ ಸಿ ವೆಬ್‍ಸೈಟ್‍ಗೆ ನೀಡುವುದಲ್ಲದೆ ಪತ್ರ ಬರೆದು ನೇರವಾಗಿ ತಿಳಿಸಲಾಗುವುದು. ಪಟ್ಟಿ ಎನ್‍ ಆರ್ ಸಿ ಸೇವಾ ಕೇಂದ್ರಗಳಲ್ಲಿ , ಡೆಪ್ಯೂಟಿ ಕಮಿಶನರ್ ಕಚೇರಿ, ಸಬ್‍ಡಿವಿಜನ್ ಕಚೇರಿಯಲ್ಲಿಯೂ ಲಭಿಸಲಿದೆ. ಪಟ್ಟಿಯಿಂದ ಹೊರಗಿಡಲಾದವರ ದೂರುಗಳ ಮೇಲೆ ಜುಲೈ ಐದರಿಂದ ವಾದವನ್ನು ಆಲಿಸಲಾಗುವುದು. ಪೌರತ್ವ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಅಸ್ಸಾಂನಲ್ಲಿ 3. 29 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 2.9 ಕೋಟಿ ಮಾತ್ರ ಅರ್ಹರೆಂದು ಪತ್ತೆ ಹಚ್ಚಲಾಗಿದೆ. ಅಸ್ಸಾಂನಲ್ಲಿ ಅನಧಿಕೃತವಾಗಿ ವಲಸೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ. 1951ರ ನಂತರ ದೇಶದ ಪೌರತ್ವ ಪಟ್ಟಿಯನ್ನು ನವೀಕರಿಸಲಾಗುತ್ತಿದೆ. ದೇಶದ ಪ್ರಜೆಗಳೆಂದು ಸಾಬೀತು ಪಡಿಸಲು ತಾವು ಅಥವಾ ತಮ್ಮ ಪೂರ್ವಜರು 1951ರ ಮೊದಲು ಪೌರತ್ವ ಪಟ್ಟಿಯಲ್ಲಿ ಅಥವಾ ಮತದಾರ ಪಟ್ಟಿಯಲ್ಲಿರುವುದನ್ನು ಸಾಬೀತುಪಡಿಸಬೇಕಾಗುತ್ತದೆ.