ಮುಸ್ಲಿಮರಾಯ್ತು, ಈಗ ಕ್ರೈಸ್ತರ ಬೆನ್ನು ಬಿದ್ದ ಧರ್ಮ ದ್ವೇಷಿಗಳು

0
849

✍️ ಮಿಷಲ್

ಕ್ರಿಸ್ಮಸ್ ವಿರುದ್ಧ ದುಷ್ಕರ್ಮಿಗಳು ದೇಶಾದ್ಯಂತ ದಾಳಿ ನಡೆಸುತ್ತಿದ್ದಾರೆ. ಕೇರಳದಿಂದ ಹಿಡಿದು ಒಡಿಸ್ಸಾದವರೆಗೆ ಮತ್ತು ಕರ್ನಾಟಕದವರೆಗೆ ಎಲ್ಲೆಡೆ ಕ್ರಿಸ್ಮಸ್ ಆಚರಣೆಯ ವಿರುದ್ಧ ದಾಳಿಗಳು ನಡಿಯುತ್ತಿವೆ. ಬೆಂಗಳೂರಿನಲ್ಲಿ ಸತ್ಯ ನಿಷ್ಠ ಆರ್ಯ ಎಂಬತನ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕ್ರೈಸ್ತ ಸಮುದಾಯದ ಕಾರ್ಯಕ್ರಮ ಒಂದಕ್ಕೆ ತಂಡದೊಂದಿಗೆ ತೆರಳಿ ಚರ್ಚಿನ ಪಾದ್ರಿಗೆ ಬೆದರಿಕೆ ಒಡ್ಡಿದ್ದು ಮತ್ತು ಕ್ರೈಸ್ತ ಹಾಗು ಮುಸ್ಲಿಂ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಈತ ಮಾತಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಈತ ಯೇಸುಕ್ರಿಸ್ತರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತಾಡಿದ್ದ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಈತನನ್ನು ಪ್ರಶ್ನಿಸಿದಾಗ ಆಕೆಯನ್ನು ನಿಂದಿಸಿದ್ದ. ಅಲ್ಲದೆ ಕೋರಮಂಗಲ ವ್ಯಾಪ್ತಿಯ ಬ್ಯಾಂಕ್ ಒಂದರಲ್ಲಿ ಖಾತೆ ತೆರೆದು ಧರ್ಮ ರಕ್ಷಣೆಗಾಗಿ ತನಗೆ ಆರ್ಥಿಕ ಸಹಾಯ ಮಾಡುವಂತೆ ಸಂದೇಶ ಹಾಕ್ತಾ ಇದ್ದ ಎಂದು ಹೇಳಲಾಗುತ್ತಿದೆ.

ಇನ್ನೊಂದು ವಿಡಿಯೋ ಒಡಿಸ್ಸಾದಿಂದ ವರದಿಯಾಗಿದೆ. ರಸ್ತೆ ಬದಿಯಲ್ಲಿ ಕ್ರಿಸ್ಮಸ್ ಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟಕ್ಕೆ ಇಟ್ಟ ಬಡಪಾಯಿಗಳ ವಿರುದ್ಧ ಕೇಸರಿ ಬಟ್ಟೆ ಧರಿಸಿದ ವ್ಯಕ್ತಿ ಮುಗಿ ಬೀಳುವುದು ವಿಡಿಯೋದಲ್ಲಿದೆ. ಇಲ್ಲಿ ಈ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಹೇಳಿ ಬಡಪಾಯಿ ಮಾರಾಟಗಾರರನ್ನು ಅಲ್ಲಿಂದ ಎಬ್ಬಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಇದಲ್ಲದೆ ಕೇರಳದ ಪಾಲಕಾಡು ಜಿಲ್ಲೆಯ ಪುದುಷ್ಯೇರಿಯಲ್ಲಿ ಡಿಸೆಂಬರ್ 21ರಂದು 13 ವರ್ಷದ ಸುಮಾರು 25 ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ. ಕ್ರಿಸ್ಮಸ್ ಪ್ರಯುಕ್ತ ಮನೆ ಮನೆಗೆ ತೆರಳಿ, ಕ್ರಿಸ್ಮಸ್ ಹಾಡು ಹಾಡುತ್ತಿದ್ದ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ. ನಿಮಗೆ ಹಣ ನೀಡುತ್ತೇವೆ ಎಂದು ಹೇಳಿ ಕರಕೊಂಡು ಹೋಗಿ ಹಲ್ಲೆ ನಡೆಸಿರುವುದಾಗಿ ಮಕ್ಕಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮುಖ್ಯ ಆರೋಪಿ ಅಶ್ವಿನ್ ರಾಜ್ ನನ್ನು ಬಂಧಿಸಲಾಗಿದೆ.

ಇದೇ ವೇಳೆ ಕೇರಳದ ಶಾಲೆಗಳು ಕೋಮುವಾದದ ಪ್ರಯೋಗ ಶಾಲೆಗಳಾಗಲು ಅವಕಾಶ ನೀಡಲ್ಲ ಎಂದು ಕೇರಳ ಸರ್ಕಾರ ಘೋಷಿಸಿದೆ. ಕೇರಳದ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕ್ರಿಸ್ಮಸ್ ಸಂಭ್ರಮಾಚರಣೆಯ ಮೇಲೆ ನಿರ್ಬಂಧ ಹೇರಿ ಅದಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಮರಳಿಸಿದೆ ಎಂಬ ವರದಿಯ ನಡುವೆ ಕೇರಳ ಸರಕಾರದಿಂದ ಈ ಹೇಳಿಕೆ ಬಿಡುಗಡೆಗೊಂಡಿದೆ. ಕೇರಳ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತರ ಭಾರತದ ಮಾದರಿಯನ್ನು ಪರಿಚಯಿಸಲು ಬಿಡಲ್ಲ ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಘೋಷಿಸಿದ್ದಾರೆ.

ಇವಲ್ಲದೆ ದೇಶದ ಬೇರೆ ಬೇರೆ ಕಡೆಗಳಿಂದ ಕ್ರಿಸ್ಮಸ್ ಸಂಭ್ರಮಾಚರಣೆಗೆ ಅಡ್ಡಿಪಡಿಸಿದ ಸುದ್ದಿಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂತೂ ಮುಸ್ಲಿಮರ ಮೇಲೆ ನಡೆಯುತ್ತಿದ್ದ ದಾಳಿ ಇದೀಗ ಕ್ರೈಸ್ತರ ವಿರುದ್ಧ ತಿರುಗಿದೆ. ಕ್ರಿಸ್ಮಸ್ ನ ನೆಪದಲ್ಲಿ ಕಂಡ ಕಂಡಲ್ಲಿ ಕ್ರೈಸ್ತ ಸಂಭ್ರಮಾಚರಣೆಗೆ ಅಡ್ಡಿಪಡಿಸಲಾಗ್ತಾ ಇದೆ. ಉತ್ತರ ಪ್ರದೇಶ ಸರಕಾರವಂತೂ ಈ ಬಾರಿ ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆಯನ್ನೇ ರದ್ದು ಮಾಡಿದೆ. ಆ ದಿನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಪ್ರಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಸುತ್ತೋಲೆ ಹೊರಡಿಸಿದೆ.

ಅಂತೂ ದೇಶಾದ್ಯಂತ ಅಸಹಿಷ್ಣುತೆಯ ಘಟನೆಗಳು ವರದಿಯಾಗುತ್ತಿವೆ.