ಅಮೇರಿಕಕ್ಕೆ ಪ್ರತಿರೋಧವನ್ನೇ ವ್ಯಕ್ತಪಡಿಸದೇ ಮಣಿಯಿತೇಕೆ ವೆನೆಝುವೇಲಾ?

0
221

ಸನ್ಮಾರ್ಗ ಸಂಪಾದಕೀಯ

ಇರಾಕ್‌ನ ಮೇಲೆ ಮಿಲಿಟರಿ ದಾಳಿ ನಡೆಸುವ ಮೊದಲು ಅಮೇರಿಕ ಮತ್ತು ಬ್ರಿಟನ್‌ಗಳು ಸುದ್ದಿಯುದ್ಧವನ್ನು ಆರಂಭಿಸಿದ್ದುವು. ಇರಾಕ್‌ನಲ್ಲಿ ಸಮೂಹ ನಾಶಕ ಅಸ್ತ್ರಗಳಿವೆ ಎಂಬುದು ಇದರಲ್ಲಿ ಒಂದಾದರೆ, ಅಮೇರಿಕದ ಅವಳಿ ಗೋಪುರದ ಮೇಲೆ ದಾಳಿ ನಡೆಸಿದ ಅಲ್ ಕಾಯಿದಾಕ್ಕೂ ಜೆಟ್‌ಗೂ ಸದ್ದಾಮ್‌ ಹುಸೇನ್‌ಗೂ ಸಂಬಂಧ ಇದೆ ಅನ್ನುವುದು ಇನ್ನೊಂದು. ಈ ಬಗ್ಗೆ ಹತ್ತು-ಹಲವು ಸುದ್ದಿಗಳು, ವರದಿಗಳು ಮತ್ತು ಸಂಶೋಧನಾ ಮಾಹಿತಿಗಳನ್ನು ಪ್ರಮುಖ ಮಾಧ್ಯಮಗಳಿಗೆ ಇನೇ ಶಕ್ತಿಗಳು ನೀಡಿ ಜಾಗತಿಕವಾಗಿ ಅವು ಪ್ರಸಾರವಾಗುವಂತೆ ಮತ್ತು ಚರ್ಚೆಯಾಗುವಂತೆ ನೋಡಿಕೊಂಡವು. ಆ ಬಳಿಕ ಅಮೇರಿಕದ ನೇತೃತ್ವದಲ್ಲಿ ದಾಳಿ ನಡೆಯಿತು.

ಅದಾಗಲೇ ಜಗತ್ತು ಅಮೇರಿಕ ಹಂಚಿಕೊಂಡ ಸುಳ್ಳುಗಳನ್ನು ಬಲವಾಗಿ ನಂಬಿದ್ದರಿಂದ ಇರಾಕ್ ಮೇಲಿನ ಮಿಲಿಟರಿ ದಾಳಿಯನ್ನು ಮತ್ತು ಸದ್ದಾನ್‌ ಆಡಳಿತದ ಪತನವನ್ನು ಕೀರಲು ವಿರೋಧದೊಂದಿಗೆ ಪರೋಕ್ಷವಾಗಿ ಸ್ವಾಗತಿಸಿತು. ಮಿಲಿಟರಿ ದಾಳಿಯ ಸುದ್ದಿಯನ್ನು ಹಂಚಿಕೊಂಡ ಪತ್ರಿಕೆಗಳು ಅದೇ ಪುಟದಲ್ಲಿ, ಸಮೂಹ ನಾಶಕ ಅಸ್ತ್ರಗಳು ಮಾಡಬಹುದಾಗಿದ್ದ ಅಪಾಯವನ್ನು ಬರೆದುವು. ಒಂದುವೇಳೆ,

ಅವು ಅಲ್ ಕಾಯಿದಾದ ಕೈಗೆ ಸಿಕ್ಕಿರುತ್ತಿದ್ದರೆ ಜಾಗತಿಕವಾಗಿ ಆಗಬಹುದಾಗಿದ್ದ ಅಲ್ಲೋಲ ಕಲ್ಲೋಲಗಳ ಮೇಲೆ ಕಾಲ್ಪನಿಕ ಭಯವನ್ನು ಬಿತ್ತಿದುವು. ವಿಶ್ವಸಂಸ್ಥೆಯ ಒಪ್ಪಿಗೆಯನ್ನು ಪಡೆಯದೇ ದಾಳಿ ನಡೆಸಿರುವುದಕ್ಕೆ ನೆಪಮಾತ್ರದ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಅಮೇರಿಕ ಹೇಗೆ ಜಗತ್ತನ್ನು ಸಾಮೂಹಿಕ ನರಮೇಧದಿಂದ ಬಚಾವ್ ಮಾಡಿತು ಎಂಬುದಕ್ಕೆ ರೆಕ್ಕೆ-ಪುಕ್ಕಗಳನ್ನು ಸೇರಿಸಿ ಬರೆದುವು. ಜಾರ್ಜ್ ಡಬ್ಲ್ಯು ಬುಶ್ ಮತ್ತು ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್‌ಗಳು ಜಗತ್ತನ್ನು ಸಮೂಹ ನಾಶಕ ಅಸ್ತ್ರಗಳ ದಾಳಿಯಿಂದ ರಕ್ಷಿಸಿದ ಹೀರೋಗಳಾಗಿ ಕಾಣಿಸಿಕೊಂಡರು. ಇರಾಕ್ ಪತನವಾಯಿತು. ಸಾವಿರಾರು ಮಂದಿ ಪ್ರಾಣ ಕಳಕೊಂಡರು. ಆಂತರಿಕ ಸಂಘರ್ಷ ಏರ್ಪಟ್ಟವು. ಆವರೆಗೆ ಇಲ್ಲದೇ ಇದ್ದ ಹತ್ತು-ಹಲವು ಉಗ್ರವಾದಿ ಗುಂಪುಗಳು ಇರಾಕ್‌ನ ಉದ್ದಕ್ಕೂ ಕಾಣಿಸಿಕೊಂಡವು ಮತ್ತು ಸದ್ದಾಮ್‌ ಕಾಲದಲ್ಲಿ ಶಾಂತವಾಗಿದ್ದ ಇರಾಕ್‌ನಲ್ಲಿ ಬಾಂಬ್ ಸ್ಫೋಟಗಳು ಸಾಮಾನ್ಯ ಎನ್ನುವಂತೆ ಬದಲಾದುವು. ಆ ಬಳಿಕ ಸದ್ದಾಮ್‌ರ ಬಂಧನವಾಯಿತು ಮತ್ತು ಗಲ್ಲು ಶಿಕ್ಷೆಯನ್ನು ನೀಡಲಾಯಿತು. ಅದಾಗಿ,

23 ವರ್ಷಗಳ ಬಳಿಕ ಅಮೇರಿಕದಿಂದ ಇಂಥದ್ದೇ ಕಾರ್ಯಾಚರಣೆ ನಡೆದಿದೆ. ಜನವರಿ 3ರಂದು ವೆನೆಝುವೇಲಾದ ಮೇಲೆ ಮುಂಜಾನೆ ಎರಡು ಗಂಟೆಯ ಸಮಯದಲ್ಲಿ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೋ ಮತ್ತು ಅವರ ಪತ್ನಿ ಸಿಲಿಯಾ ಪೊರೇಸ್‌ರನ್ನು ಬಂಧಿಸಿದೆ ಮತ್ತು ಅಮೇರಿಕಕ್ಕೆ ಕೊಂಡೊಯ್ದಿದೆ. ಆದರೆ ಈ ಬಂಧನಕ್ಕಿಂತ ಮೊದಲೇ ಈ ಕಾರ್ಯಾಚರಣೆಗೆ ಪೂರಕವಾದ ಪ್ರಚಾರ ಯುದ್ಧವನ್ನು ಟ್ರಂಪ್ ಆರಂಭಿಸಿದ್ದರು. ಮಡುರೋ ಮತ್ತು ಅವರ ಪತ್ನಿ ಮಾದಕ ದ್ರವ್ಯ ಭಯೋತ್ಪಾದನೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಾದಕ ದ್ರವ್ಯ ಕಳ್ಳಸಾಗಾಣೆಯನ್ನು ತಡೆಗಟ್ಟುವುದು ಮತ್ತು ತೈಲ ಸಂಪನ್ಮೂಲಗಳನ್ನು ಮರಳಿ ಪಡೆಯುವುದು ತಮ್ಮ ಉದ್ದೇಶ ಎಂದೂ ಅವರು ಹೇಳಿದ್ದರು. ಇವರಿಬ್ಬರೂ ವಿನಾಶಕಾರಿ ಆಯುಧಗಳನ್ನು ಹೊಂದಿದ್ದಾರೆ ಎಂಬ ಆರೋಪವನ್ನೂ ಹೊರಿಸಲಾಗಿತ್ತು. ಕಾರ್ಟೆಲ್ ಆಫ್ ದಿ ಸನ್ಸ್ ಮತ್ತು ಟ್ರೆನ್ ಡಿ ಅರಗುವಾ ಎಂಬ ಎರಡು ಕುಖ್ಯಾತ ಮಾದಕ ವಸ್ತು ಕಳ್ಳಸಾಗಾಣೆ ಗ್ಯಾಂಗ್‌ಗಳೊಂದಿಗೆ ಮಡುರೋ ಅವರಿಗೆ ಸಂಬಂಧ ಇದೆ ಎಂದೂ ಆರೋಪಿಸಲಾಯಿತು. ಅಂದಹಾಗೆ,

ಅಮೇರಿಕದ ಪಕ್ಕದಲ್ಲಿರುವ ಈ ವೆನೆಝುವೇಲಾದಲ್ಲಿ 1999ರಲ್ಲಿ ಹ್ಯೂಗೋ ಚಾವೇಝ್‌ ಎಂಬ ಕಮ್ಯೂನಿಸ್ಟ್ ವಿಚಾರಧಾರೆಯ ಪ್ರಖರ ವ್ಯಕ್ತಿ ಅಧ್ಯಕ್ಷರಾಗಿ ಆಯ್ಕೆಯಾಗುವವರೆಗೆ ಅಮೇರಿಕಕ್ಕೆ ವೆನೆಝುವೇಲಾದ ಮೇಲೆ ಶತ್ರುತ್ವವೇನೂ ಇರಲಿಲ್ಲ. ವಿಶ್ವದಲ್ಲಿಯೇ ಅತಿದೊಡ್ಡ ತೈಲ ಸಂಗ್ರಹಾಗಾರಗಳನ್ನು ಹೊಂದಿರುವ ಮತ್ತು ಬೃಹತ್ ಪ್ರಮಾಣದಲ್ಲಿ ತೈಲ ಉತ್ಪಾದಿಸುತ್ತಿರುವ ವೆನೆಝುವೇಲಾವನ್ನು ಆವರೆಗೆ ಅದು ತನ್ನ ಅಧೀನದಲ್ಲಿ ಇರಿಸಿಕೊಂಡೂ ಇತ್ತು. ಆದ್ದರಿಂದಲೇ, ಚೆವ್ರಾನ್‌ನಂಥ ಅಮೇರಿಕನ್ ಕಂಪೆನಿಗಳು 1990ರಲ್ಲಿ ತೈಲ ಕ್ಷೇತ್ರದಲ್ಲಿ ಭಾರೀ ಹೂಡಿಕೆಯನ್ನೂ ಮಾಡಿದ್ದುವು. ಅಲ್ಲಿಯ ತೈಲದ ಮೇಲೆ ಅನಧಿಕೃತ ಹತೋಟಿಯು ಅಮೇರಿಕದ ಕೈಯಲ್ಲಿ ಇತ್ತು. ಆದರೆ ಹ್ಯೂಗೋ ಚಾವೇಝ್‌ ಇದನ್ನು ಒಪ್ಪಿಕೊಳ್ಳಲಿಲ್ಲ.

ತನ್ನ ದೇಶದ ಮೇಲೆ ಅಮೇರಿಕದ ಅನಧಿಕೃತ ಹತೋಟಿಯನ್ನು ಕೊನೆಗೊಳಿ ಸಲು ನಿರ್ಧರಿಸಿದರು. ತೈಲ ಉದ್ಯಮವನ್ನೇ ರಾಷ್ಟ್ರೀಕರಣಗೊಳಿಸಿದರು ಮತ್ತು ಅಮೇರಿಕದ ತೈಲ ಕಂಪೆನಿಗಳನ್ನು ವಶಪಡಿಸಿಕೊಂಡರು. ಇದರಿಂದಾಗಿ ಅಮೇರಿಕಕ್ಕೆ 20ರಿಂದ 30 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳು ನಷ್ಟವಾದವು. ತೈಲ ಉತ್ಪಾದನೆಯಲ್ಲೂ ಕುಸಿತ ಉಂಟಾಯಿತು. ಇದೀಗ ತೈಲ ಸಂಪನ್ಮೂಲಗಳನ್ನು ಮರಳಿ ಪಡೆಯುವ ಉದ್ದೇಶವೂ ಈ ದಾಳಿಯ ಹಿಂದಿದೆ ಎಂದು ಟ್ರಂಪ್ ಹೇಳಿರುವುದು ಇಲ್ಲಿ ಸ್ಮರಣೀಯ.

ಚಾವೇಝ್‌ ಅಧಿಕಾರಕ್ಕೆ ಬಂದ ಬಳಿಕ ಅಮೇರಿಕ ಮತ್ತು ವೆನೆಝುವೇಲಾಗಳ ನಡುವಿನ ಸಂಬಂಧ ಹಳಸಿತು. 2006ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಅವರು ವೆನೆಝುವೇಲಾಕ್ಕೆ ಶಸ್ತ್ರಾಸ್ತ್ರ ಮಾರಾಟವನ್ನು ನಿಷೇಧಿಸಿದರು. ತನ್ನ ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ಚಾವೇಝ್‌ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಹೊರಿಸಿ ಈ ಕ್ರಮ ಕೈಗೊಂಡರು. 2013-14ರಲ್ಲಿ ಚಾವೇಝ್‌ ನಿಧನರಾದರು. ಇದಾದ ಬಳಿಕ ವೆನೆಝುವೇಲಾದ ಅಧಿಕಾರಿಗಳ ಮೇಲೆ ಅಮೇರಿಕದ ಒಬಾಮ ಸರಕಾರ ನಿರ್ಬಂಧಗಳನ್ನು ಹೇರಿತು. 2017ರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದಾಗ ಮಡುರೋ ಮತ್ತು ಸರಕಾರದ ಮೇಲೆ ಹಣಕಾಸು ನಿರ್ಬಂಧಗಳನ್ನು ಹೇರಿದರು. ಮಿಲಿಟರಿ ದಾಳಿಯ ಆಯ್ಕೆಯನ್ನು ಮುಕ್ತವಾಗಿಟ್ಟಿರುವುದಾಗಿಯೂ ಆಗಲೇ ಹೇಳಿದ್ದರು.

2019ರಲ್ಲಿ ವೆನೆಝುವೇಲಾದಲ್ಲಿ ಚುನಾವಣೆ ನಡೆದು ಮಡುರೋ ಮರು ಆಯ್ಕೆಯಾದರು. ಆದರೆ, ಅಮೇರಿಕ ಈ ಚುನಾವಣೆಯನ್ನು ಅಕ್ರಮ ಎಂದು ಕರೆಯಿತು ಮತ್ತು ವಿರೋಧ ಪಕ್ಷದ ನಾಯಕ ಜುವಾನ್ ಗುಯಿಡೋರನ್ನು ಅಧ್ಯಕ್ಷ ಎಂದು ಮಾನ್ಯ ಮಾಡಿತು. ವೆನೆಝುವೇಲಾದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನೂ ಕಡಿದುಕೊಂಡಿತು. ಅಲ್ಲಿನ ತೈಲ ಕಂಪೆನಿಗಳ ಮೇಲೆ ನಿಷೇಧವನ್ನು ಹೇರಿ ತೈಲ ಆಮದನ್ನು ನಿಷೇಧಿಸಿತು. 2020ರಲ್ಲಿ ಮಡುರೋ ಮತ್ತು ಅವರ ಪ್ರಮುಖ ಸಂಪುಟ ಸಚಿವರ ಮೇಲೆ ಮಾದಕ ವಸ್ತು ಸರಬರಾಜು ಭಯೋತ್ಪಾದನೆಯ ಆರೋಪವನ್ನು ಹೊರಿಸಿತು. ಅವರ ಮೇಲೆ 15 ಮಿಲಿಯನ್ ಡಾಲ್ ಬಹುಮಾನವನ್ನೂ ಘೋಷಿಸಿತು. 2023-24ರಲ್ಲಿ ಮತ್ತೆ ಮಡುರೋ ಅಧ್ಯಕ್ಷರಾಗಿ ಮರು ಚುನಾಯಿತರಾದರು. ಆದರೆ,

ಅಮೇರಿಕ ಇದನ್ನೂ ಒಪ್ಪಿಕೊಳ್ಳಲಿಲ್ಲ ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಎಡ್ಮುಂಡೋ ಗೊನ್ಝಾಲೆಝ್ ಅವರನ್ನು ವಿಜೇತರೆಂದು ಮಾನ್ಯ ಮಾಡಿತು. 2025ರಲ್ಲಿ ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದಾಗ ವೆನೆಝುವೇಲಾದ ಮೇಲೆ ಕಠಿಣ ನಿಲುವು ತಳೆದರು. ಅಲ್ಲಿ ಬಹು ರಾಷ್ಟ್ರೀಯ ಕಂಪೆನಿಗಳ ತೈಲ ಪರವಾನಿಗೆಯನ್ನು ರದ್ದುಗೊಳಿಸಿದರು. ಮಡುರೋ ಮೇಲಿನ ಬಹುಮಾನವನ್ನು 50 ಮಿಲಿಯನ್ ಡಾಲರ್‌ಗೆ ಏರಿಸಿದರು. ಕಳೆದ ಆಗಸ್ಟ್ ತಿಂಗಳಿನಿಂದ ವೆನೆಝುವೇಲಾ ಪಕ್ಕದ ಕೆರಿಬಿಯನ್ ದ್ವೀಪಗಳಲ್ಲಿ ಮಿಲಿಟರಿ ಕವಾಯತು ಆರಂಭಿಸಿದರು. ಸೆಪ್ಟೆಂಬರ್ ತಿಂಗಳಿನಿಂದ ಮಾದಕ ದ್ರವ್ಯ ಕಳ್ಳಸಾಗಾಣೆ ದೋಣಿಗಳ ಮೇಲೆ ವೈಮಾನಿಕ ದಾಳಿ ನಡೆಸಿದರು. ಡಿಸೆಂಬರ್ 10ರಂದು ವೆನೆಝುವೇಲಾದ ತೈಲ ಟ್ಯಾಂಕರನ್ನೇ ವಶಪಡಿಸಿಕೊಂಡರು. ಡಿಸೆಂಬರ್ 29ರಂದು ಕರಾವಳಿ ಪ್ರದೇಶಗಳ ಮೇಲೆ ಮೊದಲ ಭೂದಾಳಿ ನಡೆಸಿದರು. ಇದೀಗ ಪೂರ್ಣ ಪ್ರಮಾಣದ ದಾಳಿ ನಡೆಸಿ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಬಂಧಿಸಿ ಕೈದಿಗಳನ್ನಾಗಿ ಇರಿಸಿಕೊಂಡಿದ್ದಾರೆ. ಹಾಗಂತ,

ದಕ್ಷಿಣ ಅಮೇರಿಕದ ತೈಲ ಸಮೃದ್ಧ ಮತ್ತು ಪ್ರಬಲ ರಾಷ್ಟ್ರವೊಂದರ ಅಧ್ಯಕ್ಷರನ್ನು ಅಲ್ಲಿನ ಮಿಲಿಟರಿಯ ಸಹಕಾರ ಇಲ್ಲದೇ ಇಷ್ಟೊಂದು ಸುಲಭವಾಗಿ ಅಮೇರಿಕ ಬಂಧಿಸಲು ಸಾಧ್ಯವಿಲ್ಲ ಎಂಬುದು ನಿಜ. ಅಮೇರಿಕದ ಆಮಿಷಕ್ಕೆ ಅಲ್ಲಿನ ಮಿಲಿಟರಿ ಒಳಗಾಗಿರಲೂಬಹುದು. ಆದರೆ, ಈ ಇಡೀ ಕಾರ್ಯಾಚರಣೆಯು ವಿಶ್ವಸಂಸ್ಥೆಯನ್ನು ಅಪ್ರಸ್ತುತಗೊಳಿಸಿದೆ. ಮಾತ್ರವಲ್ಲ, ನೆರೆರಾಷ್ಟ್ರಗಳು ಒಗ್ಗಟ್ಟಾಗಿ ಇರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಜಗತ್ತು ನಾಲ್ಕು ಖಂಡಗಳಾಗಿ ವಿಭಜನೆಗಳಾಗುವ ಸಾಧ್ಯತೆ ಇದ್ದು, ಈ ಉಪಭೂಖಂಡಗಳ ಒಳಗೆ ಗುರುತಿಸಿಕೊಂಡ ರಾಷ್ಟ್ರಗಳು ತಮ್ಮದೇ ರೀತಿಯಲ್ಲಿ ಮಿನಿ ವಿಶ್ವಸಂಸ್ಥೆಯ ರಚನೆಯನ್ನು ಮಾಡಿಕೊಂಡು ತಂತಮ್ಮ ರಕ್ಷಣೆಗೆ ಸ್ವಯಂ ಒಂದಾಗುವ ಅನಿವಾರ್ಯತೆಯನ್ನೂ ಸೃಷ್ಟಿಸಿದೆ.