ಮುತಮ ಇಲ್ಲದ ಮನೆ

0
607

✍️ ಎ.ಎ. ಅತ್ತಾವರ

ಮುತಮ ನಮ್ಮ ಮನೆಯ ದೊಡ್ಡಮ್ಮ. ನಮ್ಮ ಅಗಲಿನ್ನು ಆಗಲೇ ತಿಂಗಳುಗಳು ಕಳೆದವು. ಆಕೆ ನಮ್ಮೆಲ್ಲರ ಮಟ್ಟಿಗೆ ಒಂದು ರೀತಿಯಲ್ಲಿ ಗಾಡ್ ಫಾದರ್ ಆಗಿದ್ದರು ಎನ್ನಬಹುದು. ಬಲವಾದ ನಿರ್ಣಯಗಳು, ಎಲ್ಲರೂ ಎಲ್ಲಾ ರೀತಿಯಲ್ಲೂ ಸುಸೂತ್ರವಾಗಿ ಸೌಖ್ಯವಾಗಿರುವರೆಂದು ನಿಗಾವಹಿಸುವ ರೀತಿ ರಿವಾಜು, ಯಾರಿಗೂ ಕೊರತೆ ಆಗಿಲ್ಲ ಎಂಬ ಮೇಲ್ನೋಟ, ಎಲ್ಲರ ಆವಶ್ಯಕತೆಗಳು ಸರಿಯಾಗಿ ಕೈಗೂಡಿವೆ ಎಂಬ ಸಾಂತ್ವನ… ಇವೆಲ್ಲವನ್ನು ನಿರ್ವಹಿಸುವ ಜೊತೆಗೆ ಮನೆಯ ಮಕ್ಕಳು, ಮರಿಮಕ್ಕಳನ್ನು ವಿಚಾರಿಸುವ ಹವ್ಯಾಸ ಅವರಿಗಾಗಿ ತಿಂಡಿ-ತಿನಿಸು ವ್ಯವಸ್ಥೆ ಎಲ್ಲವೂ ಸಾಂಗವಾಗಿ ನೆರವೇರುತ್ತಿತ್ತು. ತನಗೆ ಮಕ್ಕಳಿಲ್ಲವೆಂಬ ಆಳವಾದ ಕೊರಗು ಎಲ್ಲೋ ಹುದುಗಿದ್ದರೂ ಅವ್ಯಾವುದನ್ನೂ ಲೆಕ್ಕಿಸದೆ ತಂಗಿಯ ಮಕ್ಕಳೆಲ್ಲಾ ತನ್ನವರೆಂಬ ಔದಾರ್ಯವನ್ನು ತೋರುತ್ತಾ ದಿನ ಬೆಳಗಾದರೆ ಅವರಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಜೀವ. ಅವರೇ ಬೀಫಾತಿಮಾ.

ಫಾತಿಮಾ ಎಂಬ ಹೆಸರು ಮುಸ್ಲಿಮ್ ಸಮಾಜದಲ್ಲಿ ಜನಜನಿತ ಹೆಸರು. ಕ್ರೈಸ್ತ ಸಮುದಾಯದಲ್ಲೂ ಲೇಡಿ ಆಫ್ ಫಾತಿಮಾ ಎಂಬ ಪ್ರಸ್ತಾಪಗಳಿವೆ. ಪ್ರವಾದಿ ಮುಹಮ್ಮದ್(ಸ)ರ ನೆಚ್ಚಿನ ಮಗಳು ಹಾಗೂ ಹಜ್ರರ್ ಅಲೀ(ರ)ರವರ ಪತ್ನಿ ಫಾತಿಮಾ ಸರ್ವ ಮುಸ್ಲಿಮರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಅವರ ಬಗ್ಗೆ ಮಾದರಿಯು ಪ್ರಸ್ತಾಪಗಳು ಘಟನೆಗಳು ಚರಿತ್ರೆಯಲ್ಲಿ ದಾಖಲಾಗಿದ್ದು ಫಾತಿಮಾ(ರ)ರವರ ಮಗ ಹಝ್ರತ್ ಹುಸೈನ್(ರ)ರವರ ತ್ಯಾಗ ಬಲಿದಾನಗಳ ಬಗ್ಗೆ ಶಿಯಾ ಹಾಗೂ ಸುನ್ನಿ ಕಥಾನಕಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದಿದ್ದು, ಇಸ್ಲಾಮೀ ಚರಿತ್ರೆ ಇವೆಲ್ಲ ಸುವರ್ಣಾಕ್ಷರಗಳಲ್ಲಿ ದಾಖಲಿಸಲ್ಪಟ್ಟಿವೆ.

ಇಂದು ಹಲವು ರೀತಿಯ ಜಿಹಾದ್‌ಗಳ ಬಗ್ಗೆ ಚರ್ಚೆಗಳು ಆಗಿಂದಾಗ್ಗೆ ನಮ್ಮ ಮಾಧ್ಯಮಗಳಲ್ಲಿ ಮೂಡಿ ಬರುತ್ತಾ ಇರುತ್ತವೆ. ಹೆಚ್ಚಿನವು ನಕಾರಾತ್ಮಕ ನಿಲುವನ್ನು ಹೊರಗೆಡವಲು ಹೂಡಿರುವ ಶ್ರಮಗಳೇ ವಿನಃ ವಿನೀತವಾಗಿ ಮೂಡಿ ಬಂದವುಗಳಲ್ಲವೆಂಬ ಸತ್ಯ ಹೆಚ್ಚಿನವರಿಗೆ ಇತ್ತೀಚೆಗೆ ಮನವರಿಕೆಯಾಗುತ್ತಾ ಇದೆ. ಈ ಬಗ್ಗೆ ಪರಾಮರ್ಶಿಸಿ ನೋಡಿದಾಗ ಹಝ್ರತ್ ಹುಸೈನ್‌ರವರು ಹೂಡಿದ ಜಿಹಾದ್ ತನ್ನ ನೈಜ ಉದ್ದೇಶವನ್ನು ಸಾಬೀತು ಪಡಿಸುತ್ತದೆ ಎಂಬುದು ಯಾವನೇ ವ್ಯಕ್ತಿಗೆ ಭಾಸವಾಗದೇ ಇರಲಾರದು.

ಹಝ್ರತ್ ಹುಸೈನ್(ರ) ಆಗಿನ ನಿರಂಕುಶ ರಾಜನೆನಿಸಿಕೊಳ್ಳಲು ಪ್ರಯತ್ನಿಸಿದ ಯಝೀದ್‌ನ ವಿರುದ್ಧ ಅಭಿಯಾನವೊಂದನ್ನು ಸಂಘಟಿಸಿ, ಅದಕ್ಕೋಸ್ಕರ ಹಲವಾರು ಸಭೆ ಹಾಗೂ ಧುರೀಣರೊಂದಿಗೆ ಸಂವಾದ ಚರ್ಚೆಯನ್ನು ಸಂಘಟಿಸಿ, ಯಝೀದ್‌ನ ನಿರಂಕುಶ ಪ್ರಭುತ್ವಕ್ಕೆ ಸವಾಲೆಸೆದರು. ಈ ವಿಚಾರದಲ್ಲಿ ಹಝ್ರತ್ ಹುಸೈನ್(ರ)ರವರಿಗೆ ಹೆಚ್ಚಿನ ಸಹಕಾರ ಹಾಗೂ ಸಹಮತಿಯನ್ನು ನೀಡಲು ಇರಾಕ್‌ನ ಕೂಫಾದ ಜನರು ಆಹ್ವಾನ ನೀಡುತ್ತಾರೆ. ಆದರೆ ಹುಸೈನ್(ರ) ಹಾಗೂ ಅವರೊಂದಿಗಿದ್ದ ಸುಮಾರು 70 ರಷ್ಟು ಬೆಂಬಲಿಗರು ಈ ಬಗ್ಗೆ ಸಹಕಾರ ಪಡೆಯುವ ಬದಲಾಗಿ ಸಂಚಿಗೆ ಬಲಿಯಾಗಿ ಹುಸೈನ್(ರ) ಹಾಗೂ ಬೆಂಬಲಿಗರಲ್ಲಿ ಹೆಚ್ಚಿನವರು ಕರ್ಬಲಾ ಎಂಬ ಸ್ಥಳದಲ್ಲಿ ಯಝೀದ್‌ನ ದಂಡನಾಯಕ ತಾರಿಕ್ ಬಿನ್ ಝಿಯಾದ್‌ನಿಂದ ದಾರುಣವಾಗಿ ವಧಿಸಲ್ಪಡುತ್ತಾರೆ.

ಈ ರೀತಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದ ಹಾಗೂ ಅವುಗಳ ಪುನರ್ ಸ್ಥಾಪನೆಗಾಗಿ ಹೋರಾಡಿದ ಅಪ್ರತಿಮ, ಅನನ್ಯ ಮಾದರಿ ಆಗಿ ಹುಸೈನ್(ರ) ನಮ್ಮ ಮುಂದೆ ನಿಲ್ಲುತ್ತಾರೆ. ಇದು ನಿಜವಾದ ಜಿಹಾದ್ ಆಗಿದೆ ಎಂಬುದಾಗಿ ಎಲ್ಲಾ ಚರಿತ್ರೆಕಾರರು ದಾಖಲಿಸಿರುತ್ತಾರೆ. ಆದರೆ ಈ ಬಗ್ಗೆ ತಿರಸ್ಕಾರ ಮನೋಭಾವನೆ ಇರುವ ಹಾಗೂ ನಿರಂಕುಶ ಪ್ರಭುತ್ವದ ಮನಃಸ್ಥಿತಿಯನ್ನು ಅರಗಿಸಿಕೊಂಡಿರುವ ಮಂದಿ ಇಂದಿಗೂ ಹ. ಹುಸೈನ್(ರ)ರವರ ತ್ಯಾಗ ಬಲಿದಾನವನ್ನು ಸ್ಮರಿಸುವಲ್ಲಿ ಹಾಗೂ ಅದನ್ನು ಪುನರಾವರ್ತನೆ ಗೊಳಿಸಲು ಹಿಂದೇಟು ಹಾಕುತ್ತಾರೆ. ಅದಾಗ್ಯೂ ಜಗತ್ತಿನ ಎಲ್ಲಾ ದಾರ್ಶನಿಕರು, ಬುದ್ಧಿ ಜೀವಿಗಳು ಹುಸೈನ್(ರ) ತ್ಯಾಗ ಬಲಿದಾನವನ್ನು ಡೆಮಾಕ್ರಸಿಯ ವಿಜಯವೆಂದು ಬಣ್ಣಿಸುತ್ತಾರೆ.

ಮುತಮ ಅಹ್ಲು ಸುನ್ನತ್ ವಲ್ ಜಮಾಅತ್‌ನ ಆಶಯಗಳಡಿ ಬೆಳೆದು ಬಂದವರು. ಶಾಲಾ ಶಿಕ್ಷಣ ಅವಕಾಶ ವಂಚಿತರು. 40 ಅಥವಾ 50ರ ದಶಕದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ತೀರಾ ಕಡೆಗಣಿಸಲಾದ ಒಂದು ಸನ್ನಿವೇಶ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದ ಹಿನ್ನೆಲೆಯಲ್ಲಿ ಇಂಗ್ಲೀಷ್ ಶಿಕ್ಷಣವನ್ನಂತೂ ಸಾರ್ವತ್ರಿಕವಾಗಿ ತಿರಸ್ಕರಿಸಲಾಗಿತ್ತು. ಇದು ಸ್ವಾಭಾವಿಕವಾಗಿಯೇ ಆಗಿನ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಅವರು ಮದ್ರಸಾ ಶಿಕ್ಷಣವನ್ನೇನೋ ಅರಗಿಸಿಕೊಂಡರು.

ಆದರೆ ಅದರಲ್ಲಿ ಗಣಿತಶಾಸ್ತ್ರವಾಗಲೀ, ಸಮಾಜ ವಿಜ್ಞಾನವಾಗಲೀ ಅಥವಾ ಇತರ ಯಾವುದೇ ಜಾಗೃತಿ ಮೂಡಿಸುವಂತಹ ವಿಚಾರಗಳು ಅವರಿಗೆ ನಿಲುಕಲಿಲ್ಲ. ಅವರು ಬರಿಯ ಸಿಮ್‌ಪ್ಲೇಟನ್‌ಗಳಾಗಿ ಬೆಳೆದರು. ಅದೃಷ್ಟವಶಾತ್ ಆಗಿನ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು ಜೀವಂತವಾಗಿರುವುದರಿಂದಲೋ ಏನೋ ಅಲ್ಪ ಸ್ವಲ್ಪ ಪ್ರಭುದ್ಧತೆಯನ್ನು ಬೆಳೆಸಿಕೊಂಡರು ಎನ್ನಬಹುದು. ಒಟ್ಟಿನಲ್ಲಿ ಈ ಸನ್ನಿವೇಶದಿಂದಾಗಿ ಒಂದು ಜೆನರೇಶನ್ ಆಫ್ ವುಮೆನ್ ಬಹಳ ಕ್ಲಿಷ್ಟಕರ ಪರಿಸ್ಥಿತಿಯೊಂದಿಗೆ ಉಳಿಯ ಬೇಕಾಯಿತು ಎಂಬುದು ವಾಸ್ತವ.

ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ಮೂಡಿ ಬಂದ ಮುತಮ(ಬೀ ಫಾತಿಮಾ) ಹಾಗೂ ನನ್ನ ತಾಯಿ ಮರಿಯಮ್ಮ ಮತ್ತು ಇತರ ಎಲ್ಲಾ ಸಮಕಾಲೀನರು ಪ್ರಾಥಮಿಕ ಶಿಕ್ಷಣಕ್ಕಿಂತ ಆಚೆಗೆ ಹೋದವರಲ್ಲ. ಅದರಲ್ಲೂ ಹೆಚ್ಚಿನವರು ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿಲ್ಲವೆಂಬುದನ್ನು ಪರಾಮರ್ಶಿಸಿದಾಗ ನಮಗೆ ಇನ್ನಷ್ಟು ಖೇದವಾಗದಿರದು! ಆಂಗ್ಲ ಶಿಕ್ಷಣವನ್ನೇನೋ ತಿರಸ್ಕರಿಸಿದ್ದಾಯಿತು. ಆದರೆ ಆ ಶಿಕ್ಷಣ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳದೆ ಇದ್ದ ನಮ್ಮ ಹಿರಿಯರ ಬಗ್ಗೆ ಒಂದು ರೀತಿಯ ಭಾವನೆ ಮೂಡಿದರೂ, ಅದರ ಗಂಭೀರ ಪರಿಣಾಮಗಳ ಬಗ್ಗೆ ನಮ್ಮಲ್ಲಿ ಪುನಾರವಲೋಕನ, ಅಧ್ಯಯನ ನಡೆಯದಿರುವುದು ಖೇದಕರ ಸಂಗತಿ.

ಈ ರೀತಿಯ ಧೋರಣೆಗಳಿಂದಾಗಿ ಒಂದು ಪೀಳಿಗೆ ಅಥವಾ ನಂತರದ ಎರಡು ಪೀಳಿಗೆಗಳು ತೀರಾ ಬವಣೆ ಪಡುವಂತಾಯಿತು ಅಥವಾ ಬಹಳಷ್ಟು ಕಳೆದುಕೊಳ್ಳಬೇಕಾಯಿತು ಎಂಬುದನ್ನು ನಾವು ನಿರಾಕರಿಸುವಂತಿಲ್ಲ. ಮಹಾ ಕವಿ ಹಾಗೂ ದಾರ್ಶನಿಕ ಸರ್ ಇಕ್ಬಾಲ್‌ರವರು ಅಂದಂತೆ, “ಕಳೆದುಕೊಂಡದ್ದನ್ನು ಹೇಗೋ ಕಳೆದು ಕೊಂಡಾಯಿತು. ಆದರೆ ಕಳೆದುಕೊಂಡಿದ್ದೇವೆ ಎಂಬ ಪ್ರಜ್ಞೆಯೇ ಇಲ್ಲವಾದರೆ ಅದನ್ನು ಮರಳಿಸುವವರು ಯಾರು?” ಎಲ್ಲಿಂದ ಅದನ್ನು ಮರು ಸ್ಥಾಪಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ನಮ್ಮಲ್ಲಿ ಬರಿಯ ಪ್ರಶ್ನೆಗಳಾಗಿ ಉಳಿದುಕೊಂಡಿವೆ.

ಇತ್ತೀಚೆಗೆ ನಾನು ಹಾಗೂ ನನ್ನ ಪತ್ನಿ ಫಾತಿಮಾರವರು ಭಾಗವಹಿಸಿದ್ದ ಪ್ರಾಮುಖ್ಯ ಸಭೆಯೊಂದರಲ್ಲಿ ಮುಂದಿನ 25 ವರ್ಷಗಳಿಗೆ ಶಿಕ್ಷಣದ ರೂಪರೇಷೆ ಎಂಬ ಯೋಜನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸುಮಾರು ಅರ್ಧ ದಿನದ ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮ್ ವಿದ್ವಾಂಸರು ಹಾಗೂ ಬುದ್ಧಿ ಜೀವಿಗಳು ಭಾಗವಹಿಸಿದ್ದರು. ಅದರಲ್ಲಿ ಹೆಚ್ಚಿನವರು ಉತ್ತರ ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಅಳವಡಿಸಿಕೊಂಡು ಅವುಗಳಲ್ಲಿ ಶಿಕ್ಷಣದ ಉತ್ತೇಜನ ಹಾಗೂ ಶಿಕ್ಷಣಕ್ಕಾಗಿ ಹಣಕಾಸಿನ ವ್ಯವಸ್ಥೆಯನ್ನು ಮಾಡಿರುವ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ನೀಡಿದ್ದು ಮಾತ್ರವಲ್ಲ, ಈ ಬಗ್ಗೆ ಹೆಚ್ಚಿನ ಸಾಧನೆಯನ್ನು ಭಾರತದಾದ್ಯಂತ ಕೈಗೊಳ್ಳುವುದಾಗಿ ಘೋಷಿಸಿದರು. ಆದರೆ ಯಾವುದೇ ಸ್ಪಷ್ಟ ರೋಡ್ ಮ್ಯಾಪ್ ಅಥವಾ ಯೋಜನೆಯ ರೂಪರೇಷೆಯನ್ನು ಸಭೆಯ ಮುಂದಿಡುವ ಪ್ರಯತ್ನ ಮಾಡಿಲ್ಲವೆಂಬುದು ಗಮನಾರ್ಹ.

ಮುಸ್ಲಿಮ್ ಸಮಾಜದಲ್ಲಿ ಶಿಕ್ಷಣದ ಬಗ್ಗೆ ಮಾತನಾಡುವಾಗ ಕೆಲವೊಂದು ಸೂಕ್ಷ್ಮ ವಿಚಾರಗಳು ಕಾರಣಾಂತರಗಳಿಂದಾಗಿ ಪ್ರಸ್ತಾಪಿಸಲ್ಪಡುವುದಿಲ್ಲ ಅಥವಾ ಆ ಬಗ್ಗೆ ನಾರ್ತ್ ಇಂಡಿಯನ್ ಮನಸ್ಥಿತಿ ಹೊಂದಿರುವವರು ಹೆಚ್ಚಿನ ಪರಿಶೀಲನೆಗೆ ಮುಂದಾಗುವುದಿಲ್ಲ ಎಂದು ಭಾವಿಸಬೇಕಾಗಿದೆ. ಉದಾಹರಣೆಗೆ ದಕ್ಷಿಣ ಭಾರತದಲ್ಲಿ ಹಲವಾರು ಪ್ರಾಂತೀಯ ಭಾಷೆಗಳು ಇದ್ದು ಅವುಗಳಲ್ಲಿ ಪ್ರಾವೀಣ್ಯತೆಗಳಿಸುವುದು ತೀರಾ ಆವಶ್ಯಕವೆನಿಸುತ್ತದೆ. ಆದರೆ ಉರ್ದು ಭಾಷೆಯಲ್ಲಿ ಪರಿಣತಿ ಹೊಂದಿದವರು ಈ ಬಗ್ಗೆ ಅಷ್ಟೊಂದು ಗಮನಹರಿಸದೆ ಇರುವ ಕಾರಣ ಅವರ ಪ್ರಭಾವ ಜಾಸ್ತಿ ಇರುವೆಡೆ ಶೈಕ್ಷಣಿಕ ರೂಪಣೆಯನ್ನು ಅಸಮತೋಲನ ಉಂಟಾಗಿದ್ದು ಶೈಕ್ಷಣಿಕ ಆಯ್ಕೆಯಲ್ಲಿರುವ ಮುಕ್ತ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಮುದಾಯದ ಬಹಳಷ್ಟು ಮಂದಿ ಗಂಡು-ಹೆಣ್ಣು ಮಕ್ಕಳು ವಂಚಿತರಾಗುತ್ತಾರೆ ಎಂಬುದನ್ನು ಅಧ್ಯಯನದ ಮೂಲಕ ಕಂಡುಕೊಳ್ಳಬಹುದಾಗಿದೆ.

ಉದಾಹರಣೆಗೆ ಬ್ಯಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಇತ್ಯಾದಿ ಪ್ರದೇಶಗಳಲ್ಲಿ ಶೈಕ್ಷಣಿಕ ಆಯ್ಕೆಯ ರೀತಿಯನ್ನು ಗಮನಿಸಿದರೆ ಅಥವಾ ವಿಶ್ಲೇಷಣೆಗೊಳ ಪಡಿಸಿದರೆ ಕೆಲವೊಂದು ವಿಶಿಷ್ಟ ಅಂಕಿ ಅಂಶಗಳು ಲಭ್ಯವಾಗಬಹುದು. ಏನಿದ್ದರೂ ಶೈಕ್ಷಣಿಕ ಆಯ್ಕೆಯಲ್ಲಿ ಮನೆ ಮಂದಿನ ಶೈಕ್ಷಣಿಕ ಹಿನ್ನೆಲೆ ಹಾಗೂ ಪರಿಸರದಲ್ಲಿನ ಶೈಕ್ಷಣಿಕ ಅವಕಾಶಗಳು ಹೆಚ್ಚಿನ ಪ್ರಭಾವ ಬೀರುವುದರಲ್ಲಿ ಸಂಶಯವಿಲ್ಲ. ಜೊತೆಗೆ ತಲೆ ತಲಾಂತರಗಳಿಂದ ಕ್ರೋಡೀಕೃತ ಪೂರ್ವಾಗ್ರಹಗಳು, ತಪ್ಪು ಧೋರಣೆಗಳು ಹಾಗೂ ಎಲ್ಲಕ್ಕಿಂತಲೂ ಮೇಲಾಗಿ ಆರ್ಥಿಕ ನೆಲೆಗಟ್ಟು ಹಾಗೂ ನೀಡಲಾಗುವ ಪ್ರಾಶಸ್ತ್ಯವೂ ಸಹ ಹೆಚ್ಚಿನ ನಿರ್ಧಾರಗಳಿಗೆ ಕಾರಣವಾಗಿವೆ.

ಶಿಕ್ಷಣವೆನ್ನುವುದು ದೇವದತ್ತ ಕೊಡುಗೆ. ಮನುಷ್ಯನಿಗೆ ದೇವನಿಗೆ ಲೇಖನಿಯ ಮೂಲಕ ಜ್ಞಾನದಯ ಪಾಲಿಸಿರುವುದಾಗಿ ಕುರ್‌ಆನ್ ಅವತೀರ್ಣಗೊಂಡ ಪ್ರಥಮ ಶ್ಲೋಕದಲ್ಲಿ ಸಾರಿ ಹೇಳಲಾಗಿದೆ. ಓರ್ವ ಲೇಖನಿಯನ್ನು ಪ್ರಯೋಗಿಸದೆ ಇದ್ದ ಮನುಷ್ಯನಿಗೆ ಅದರ ಬೃಹತ್ ವಿಸ್ತೃತ ರೋಡ್ ಮ್ಯಾಪ್‌ನೊಂದಿಗೆ ಅಣಿಗೊಳಿಸಿ ಅದು ವೆರಗೂ ಪಾರಮ್ಯ ಪಾರಂಗತರೆನಿಸಿದ್ದ ಆದರೆ ಜನಸಮೂಹಕ್ಕೆ ವಿರೋಧಾಭಾಸವಾಗಿ ಮೂಡಿದ್ದ ಯಹೂದ್ಯರಿಗೆ ಇದನ್ನು ಪುನರ್ ಜ್ಞಾಪಿಸಲಾಯಿತು.

ಹೌದು ಶ್ರೀರಾಮ್ ಜೇಥ್ಮಲಾನಿಯವರು ಕಂಡುಕೊಂಡಂತೆ ಆರಂಭಿಕ 10ನೇ ಶತಮಾನದ ವರೆಗೂ ಮುಸಲ್ಮಾನರು ಸರ್ವರಂಗಗಳಲ್ಲೂ ಬಹಳಷ್ಟು ಸಂಶೋಧನೆ, ಆವಿಷ್ಕಾರ ಎಲ್ಲವನ್ನೂ ಸಾಧಿಸುತ್ತಾರೆ. ನಂತರ ಯಾವ ಕಾರಣಗಳಿಂದಾಗಿ ತಮ್ಮ ಚಾರಿತ್ರಿಕ ಜವಾಬ್ದಾರಿಯನ್ನು ಕಡೆಗಣಿಸುತ್ತಾರೆ ಹಾಗೂ ಜಗತ್ತಿನ ಒಂದು ರೀತಿಯ ಕಂಟಕದಂತೆ ಕಂಡು ಬರುತ್ತಾರೆ ಎಂಬುದು ನಿಗೂಢವಾಗಿ ಅವರಿಗೆ ಪ್ರಶ್ನೆಗಳಂತೆ ತೋರುತ್ತದೆ. ಆದರೆ ಇದರಲ್ಲಿ ಯಾವುದೇ ನಿಗೂಢತೆ ಇರಲಾರದು. ಇಸ್ಲಾಮಿನ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡು ಅದರಿಂದಲೇ ಎಲ್ಲಾ ರೀತಿಯ ಗೊಂದಲ ಹಾಗೂ ಸಂಘರ್ಷಕ್ಕೆ ಹೇತುವಾಯಿತೆಂದು ಯಾರಿಗಾದರೂ ಚಾರಿತ್ರಿಕ ಅಧ್ಯಯನದಿಂದ ಮನನವಾಗಬಹುದು.

ಇಂದು ಮುಸ್ಲಿಮರಲ್ಲಿ ಹೆಚ್ಚಿನವರು ಅಹ್ಲು ಸುನ್ನತ್ ವಲ್ ಜಮಾಅತ್ ವಿಚಾರಧಾರೆಗೆ ಒಳಪಟ್ಟವರು. ಈ ವ್ಯವಸ್ಥೆಯಲ್ಲಿ ವಿದ್ವಾಂಸರೆನಿಸಿಕೊಂಡವರು ಹೆಚ್ಚಿನ ಅಧಯಯನ ಹಾಗೂ ಪಾರಂಗತರೆನಿಸಿದರೂ ಜನಸಾಮಾನ್ಯ ಮಟ್ಟದಲ್ಲಿ ಕೇವಲ ಆಚರಣೆಗಳಿಗಷ್ಟೇ ಸೀಮಿತ ವಿಚಾರಗಳನ್ನು ಸಂಸ್ಕರಿಸಿ ನೀಡಲ್ಪಟ್ಟು, ತನ್ನ ಹತ್ತಿರದ ಸಮಾಜದೊಂದಿಗೆ ವ್ಯವಹರಿಸುವ ಅಥವಾ ಇಸ್ಲಾಮಿನ ಮೌಲ್ಯಗಳ ಬಗ್ಗೆ ಇರಬೇಕಾಗಿದ್ದ ಅಂತರ್ ಧರ್ಮೀಯ ವಿಚಾರ ಮಂಥನಗಳು, ಇತರರ ಬಗೆಗಿನ ಸಾಮಾಜಿಕ ಸ್ಪಂದನಗಳು ಇತ್ಯಾದಿಗಳೆಲ್ಲವೂ ಪರಸ್ಪರ ಭಿನ್ನತೆಯನ್ನು ಹೆಚ್ಚಿನ ಮಟ್ಟಕ್ಕೆ ಒಯ್ಯುವಂತಹ ಸ್ಥಿತ್ಯಂತರದೆಡೆಗೆ ಸಾಗಿದವು ಅದಾಗ್ಯೂ ಪ್ರಸ್ತುತ ಚಿಂತನೆಗಳಿಗೆ ಎದುರಾಗಿ ಮೂಡಿ ಬಂದ ಸಂಘಟನೆಗಳು ಅಥವಾ ಚಳವಳಿಗಳಿಂದ ತಬ್ಲೀಗಿ ಜಮಾಅತ್, ಜಮಾಅತೆ ಅಹ್ಲೆ ಹದೀಸ್, ಜಮಾಅತೆ ಇಸ್ಲಾಮಿಯವರು ಪ್ರಚುರಪಡಿಸಿದ ಇಸ್ಲಾಮಿ ಮೌಲ್ಯಗಳನ್ನು ಸಕರಾತ್ಮಕವಾಗಿ ಸ್ವೀಕರಿಸುವಲ್ಲಿ ಹಾಗೂ ಅವುಗಳನ್ನು ಅವಳಡಿಸುವಲ್ಲಿ ಕೆಲವೊಮ್ಮೆ ತಿರಸ್ಕಾರವಾದರೆ ಇದನ್ನು ಹಲವೆಡೆ ಆಂತರಿಕ ಸಂಘರ್ಷಗಳಿಗೆ ಕಾರಣವೆನಿಸಿದವು.

ಪ್ರಸ್ತುತ ಸಂಘಟನೆಗಳು ಭಾರತೀಯ ಮುಸ್ಲಿಮ್ ಸಮಾಜದಲ್ಲಿ ನೆಲೆ ನಿಂತಿದ್ದ ಅಂಧವಿಶ್ವಾಸ ಹಾಗೂ ಸಾಮಾಜಿಕ ಅನಾಚಾರಗಳ ಬಗ್ಗೆ ಧ್ವನಿಯೆತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಅವುಗಳ ನೈಜ ಗುರಿಯೆಡೆಗೆ ಗಮನಹರಿಸದೆ ಇರುವ ಕಾರಣದಿಂದಾಗಿ ಜನಸಾಮಾನ್ಯರು ಆ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೆ ಹೋಗಲಿಲ್ಲವೆಂಬುದು ವಾಸ್ತವ.

ವಾಸ್ತವದಲ್ಲಿ ಸದರಿ ಸಂಘಟನೆಗಳು ಕುರ್‌ಆನ್ ಹಾಗೂ ಹದೀಸ್ ಪ್ರಸ್ತಾಪಿತ ಉತ್ತರದಾಯಿತ್ವದ ಅಂಶಗಳನ್ನು ಜನರಿಗೆ ತಲುಪಿಸ ಬಯಸಿದ್ದವು ಹಾಗೂ ಅವುಗಳ ಪುನರ್ ಸ್ಥಾಪನೆಯಿಂದ ಒಂದು ಸುಧಾರಿತ ಮುಸ್ಲಿಮ್ ಸಮಾಜವನ್ನು ಸ್ಥಾಪಿಸ ಬಯಸಿದ್ದರು. ಜೊತೆಗೆ ಮುಸ್ಲಿಮ್ ಹಾಗೂ ಇತರ ಧರ್ಮೀಯರ ಬಗ್ಗೆ ಉತ್ತಮ ಭಾಂದವ್ಯವನ್ನು ಸ್ಥಾಪಿಸ ಬಯಸಿದ್ದರು ಎಂಬುದನ್ನು ನಾವು ಇಲ್ಲಿ ಗಮನಿಸಬೇಕಾಗಿದೆ.

ತಬ್ಲೀಗಿ ಜಮಾಅತ್ 1926ರಲ್ಲಿ ಮೇವಾತ್‌ನಲ್ಲಿ ಸ್ಥಾಪಿಸಲ್ಪಟ್ಟಿದ್ದರೆ, ಜಮಾಅತೆ ಅಹ್ಲೆ ಹದೀಸ್ ನಂತರ ಸ್ಥಾಪಿತವಾಗಿದೆ. ತಬ್ಲೀಗ್ ಜಮಾಅತ್‌ನ ಸೀಮಿತ ವಲಯದಲ್ಲಿ ಅಂದರೆ ಮುಸ್ಲಿ ಮರ ಮಧ್ಯೆ ಇಸ್ಲಾಮಿನ ಕೆಲವೊಂದು ಆಚಾರಗಳನ್ನಷ್ಟೇ ಬಿಂಬಿಸುತ್ತಾ ಅವರನ್ನು ಸುಧಾರಿಸುವ ಕೆಲಸವನ್ನು ಕೈಗೊಂಡಿದೆ. ಆದರೆ ಇವುಗಳಿಗೆ ತೀರಾ ವಿಭಿನ್ನವಾಗಿ ಮೂಡಿ ಬಂದ ಜಮಾ ಅತೆ ಇಸ್ಲಾಮಿ ಸಂಘಟನೆಯು ಮುಸ್ಲಿಮರ ಮಧ್ಯೆ ಕಾರ್ಯವೆಸಗಲು ಒಂದು ಸ್ಪಷ್ಟ ರೋಡ್ ಮ್ಯಾಪ್‌ನಿಂದ ಶ್ರಮಿಸಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಎಸಗ ಬೇಕಾದ ಪಾಲಿಸಿ ಹಾಗೂ ಕಾರ್ಯ ಕ್ರಮಗಳನ್ನು ರೂಪಿಸಿ, ಮುಸ್ಲಿಮ್ ಹಾಗೂ ಇತರ ಸಮುದಾಯಗಳೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಸಾಧಿಸಲು ಹಾಗೂ ಭಾರತೀಯ ಸಮಾಜದಲ್ಲಿ ಸೌಹಾರ್ದಯುತ ಪರಂಪರೆಯನ್ನು ಉಳಿಸಿ ಬೆಳೆಸಲು ಅದು ಶ್ರಮಿಸುತ್ತಾ ಬಂದಿದೆ. ಆದರೆ ಸಮುದಾಯದ ಒಳಗಿನ ಕೆಲವೊಂದು ಆಕ್ಷೇಪಗಳು ಹಾಗೂ ಹೆಚ್ಚಿನ ಸಂದರ್ಭದಲ್ಲಿ ತೀರಾ ತಪ್ಪುಕಲ್ಪನೆಗಳಿಂದಾಗಿ ಜಮಾಅತೆ ಇಸ್ಲಾಮೀ ತನ್ನ ಪ್ರಾಬಲ್ಯವನ್ನು ಗಳಿಸದೆ ಮುಸ್ಲಿಮ್ ಬುದ್ಧಿಜೀವಿಗಳ ಸಂಘಟನೆಯಾಗಿ ಗುರುತಿಸಲ್ಪಟ್ಟಿದೆ ವಿನಃ ಅದು ಪ್ರಸ್ತಾಪಿಸುವ ಇಸ್ಲಾಮಿನ ಮೌಲ್ಯಗಳನ್ನು ಹಾಗೂ ಸಾಮಾಜಿಕ ಜವಾಬ್ದಾರಿಕೆಯ ಮೌಲ್ಯಗಳನ್ನು ಮುಸ್ಲಿಮ್ ಸಮುದಾಯವು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧವಾಗಿಲ್ಲವೆಂಬುದು ದುರದೃಷ್ಟಕರ ಸಂಗತಿ.

ಇದರಿಂದಾಗಿ ಸಾಮಾಜಿಕ ಬದುಕುಗಳು ಪರಿಹಾರಗೊಳ್ಳುವುದರ ಬದಲು ಅಲ್ಲಿಂದಲ್ಲಿಗೆ ಉಳಿದುಕೊಂಡಿವೆ ಹಾಗೂ ಭಾರತೀಯ ಸಮಾಜದ ಚಿಕಿತ್ಸಕ ಉದ್ದೀಪನಕ್ಕೆ ತಡೆಯಾಗಿವೆ ಎಂಬುದನ್ನು ನಮ್ಮ ಬುದ್ಧಿಜೀವಿಗಳು, ವಿದ್ವಾಂಸರು ಅರಿತುಕೊಳ್ಳ ಬೇಕಾಗಿದೆ.

ಮುತಮ ಅರ್ಥಾತ್ ದೊಡ್ಡಮ್ಮರವರ ಕನ್ನಡಿನಲ್ಲಿ ಸಮುದಾಯವನ್ನು ಕಂಡುಕೊಳ್ಳಲು ಹಾಗೂ ಅದರ ಒಳ ನೋಟಗಳನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿರುವೆ. ಮುಸ್ಲಿಮ್ ಸಮುದಾಯದಲ್ಲಿ ಹಲವು ಬರಹಗಾರರು ಹಾಗೂ ಬುದ್ಧಿಜೀವಿಗಳು ಕನ್ನಡ ಭಾಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮುದಾಯಿಕ ಏಳು ಬೀಳುಗಳ ಬಗ್ಗೆ ಹಾಗೂ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಬರೆಯುತ್ತಿರುವುದು ಸಂತಸದ ಸಂಗತಿ. ಭಾರತೀಯ ಸಮಾಜದಲ್ಲಿ ಬಹುಜನ ಸಮುಚ್ಛಯ ಅಂದರೆ ನಮ್ಮ social diversity ಬಗ್ಗೆ ಹೆಚ್ಚಿನ ಅಧ್ಯಯನಗಳು ಮೂಡಿ ಬಂದು ನಮ್ಮ ದೇಶದಲ್ಲಿ ಶಾಂತಿ ನೆಲೆಸಲು ಪ್ರೇರಕವಾಗಲಿ ಎಂದು ಆಶಿಸುವೆ.