ರಮಝಾನಿನ ಸಿದ್ಧತೆಯ ಮಾಸ ಶಅಬಾನ್

0
415

✍️ ಡಾ| ಮಸ್ವೂದ್ ಸ್ವಬರಿ

ಪ್ರಶ್ನೆ: ಶಅಬಾನ್ ತಿಂಗಳು ವ್ರತಕ್ಕೆ ಪಾಪ ವಿಮೋಚನೆಗೆ ಹೆಚ್ಚು ಮಹತ್ವ ನೀಡುವುದರ ಹಿಂದಿರುವ ರಹಸ್ಯವೇನು? ಓರ್ವ ಮುಸ್ಲಿಮನಿಗೆ ಅದು ಆಧ್ಯಾತ್ಮಿಕವಾಗಿ ಹೇಗೆ ಪ್ರಯೋಜನಕಾರಿಯಾಗುವುದು?

ಉ: ಶಅಬಾನ್ ತಿಂಗಳಲ್ಲಿ ಉಪವಾಸ ಮತ್ತು ಸತ್ಕರ್ಮಗಳನ್ನು ಹೆಚ್ಚು ಪ್ರೋತ್ಸಾಹ ನೀಡುವುದಕ್ಕೆ ಕಾರಣವೇನೆಂದರೆ ರಮಝಾನಿನೊಂದಿಗೆ ಅದಕ್ಕಿರುವ ನಿಕಟ ಸಂಬಂಧವಾಗಿದೆ. ರಮಝಾನ್ ತಿಂಗಳು ಅನುಸರಣೆಯ ದೇವನಿಗೆ ಹೆಚ್ಚು ನಿಕಟವಾಗುವ ತಿಂಗಳಾದ ಕಾರಣ ಓರ್ವ ಮುಸ್ಲಿಮನೆಂಬ ನೆಲೆಯಲ್ಲಿ ಅನುಸರಣೆಯಲ್ಲಿ ತರಬೇತಿ ಪಡೆಯಲು ಅದನ್ನು ರೂಢಿಸಿಕೊಳ್ಳಲು ಕಲಿಯಬೇಕಾಗಿದೆ.

ಶಅಬಾನ್ ತಿಂಗಳು ರಮಝಾನಿಗೆ ಸಿದ್ಧತೆ ಮಾಡಿಕೊಳ್ಳಲು ಅತ್ಯುತ್ತಮ ಸಮಯವಾಗಿದೆ. ಯಾಕೆಂದರೆ ಓರ್ವನಿಗೆ ಹಠಾತ್ತನೆ ಒಂದು ಸ್ಥಿತಿಯಿಂದ ಮತ್ತೊಂದು ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಆತನು ಅನುಸರಣೆಯಲ್ಲಿ ದೇವ ಸಾಮೀಪ್ಯ ಗಳಿಸಲು ಸ್ವಯಂ ತರಬೇತಿಗೊಳ್ಳಬೇಕು. ಶಅಬಾನಿನ ಸತ್ಕರ್ಮಗಳೊಂದಿಗೆ ರಮಝಾನಿಗೆ ಪ್ರವೇಶಿಸುವಾಗ ತಾನು ತರಬೇತಿಗೊಂಡ ಅಭ್ಯಾಸಗಳು ಯಾವುದೇ ರೀತಿಯ ತೊಂದರೆಗಳಿಲ್ಲದೆ ಸಕ್ರಿಯವಾಗಿ ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ. ಇದು ಅನುಸರಣೆಯಿಂದ ಆಧ್ಯಾತ್ಮಿಕವಾದ ಅನುಸರಣೆಗೆ ಅವನನ್ನು ತಲುಪಿಸುತ್ತದೆ. ಆ ಮೂಲಕ ಆತನು ಈಮಾನಿನ ಶಕ್ತಿಯಿಂದ ಇಹ್ಸಾನ್ ಮತ್ತು ಇತ್‌ಖಾನ್(ಪರಿಪೂರ್ಣತೆ)ಯ ಹಂತಕ್ಕೆ ಮೇಲೇರುತ್ತಾನೆ.

ಪ್ರಶ್ನೆ: ರಮಝಾನಿಗೆ ಓರ್ವ ಮುಸ್ಲಿಮನು ಹೇಗೆ ಸಿದ್ದಗೊಳ್ಳಬೇಕು? ಆರಾಧನೆಗೆ ಲೌಕಿಕವಾದ ಕರ್ತವ್ಯ ನಿಭಾವಣೆಯ ಮಧ್ಯೆ ಸಂತುಲಿತಾವಸ್ಥೆ ಗಳಿಸಿಕೊಳ್ಳಲು ಸಮಯವನ್ನು ಹೇಗೆ ಮೀಸಲಿಡಬಹುದು?

ಉ: ಮೊದಲನೇ ಹೆಜ್ಜೆಯಾಗಿ ರಮಝಾನಿನ ಸಿದ್ಧತೆಗಾಗಿ ಶಅಬಾನ್ ತಿಂಗಳಲ್ಲಿ ಸಾಧ್ಯವಾದಷ್ಟು ಪುಣ್ಯ ಕರ್ಮಗಳನ್ನು ಮಾಡುವ ಅಭ್ಯಾಸವನ್ನು ಸ್ವಯಂ ರೂಢಿಸಿಕೊಳ್ಳಬೇಕು. ಪ್ರತೀ ಮುಸ್ಲಿಮನು ತನಗೆ ಸುಲಭವಾಗಿ ಮಾಡಲು ಸಾಧ್ಯವಾದ ಒಂದು ಯೋಜನೆಯನ್ನು ತಯಾರಿಸಬೇಕು. ಅದು ಕುರ್‌ಅನ್ ಪಾರಾಯಣ ಅಧ್ಯಯನ, ಕಂಠಪಾಠ ಮುಂತಾದವುಗಳಲ್ಲಿ ವೈವಿಧ್ಯತೆಯಿರಬೇಕು. ಹಾಗೆಯೇ ಕಡ್ಡಾಯ ಮತ್ತು ಐಚ್ಛಿಕ ನಮಾಝ್, ದಾನ-ಧರ್ಮಗಳು, ದುರ್ಬಲರಿಗೆ ನೆರವಾಗುವುದು, ಪುಣ್ಯ ಬಯಸಿ ಸ್ವಯಂ ಸೇವಾ ಚಟುವಟಿಕೆಯಲ್ಲಿ ನಿರತರಾಗುವುದು, ಸಂಬಂಧಿಕರ ಮನೆಯನ್ನು ಭೇಟಿಯಾಗುವುದು, ರೋಗಿಗಳ ಸಂದರ್ಶನ, ಮಿತ್ರರ ಆಪ್ತರ ಸಂದರ್ಶನ, ಧಾರ್ಮಿಕ ಜ್ಞಾನಗಳಿಸುವ ಅಧ್ಯಯನ ತರಗತಿಗಳಲ್ಲಿ ಸಕ್ರಿಯವಾಗುವುದು ಮುಂತಾದವುಗಳು ಆಯೋಜನೆಯಲ್ಲಿರಬೇಕು.

ಸಮಯದನುಸಾರ ಸಿದ್ಧಪಡಿಸುವುದಕ್ಕಿಂತ ಉದ್ದೇಶಗಳಿಗನುಸಾರವಾಗಿ ಸಿದ್ಧಪಡಿಸುವುದು ಉತ್ತಮ. ಪ್ರತೀ ಸತ್ಕರ್ಮಗಳಲ್ಲಿ ಅದಕ್ಕೊಂದು ಮಾನದಂಡವನ್ನು ಸ್ವಯಂ ನಿಶ್ಚಯಿಸಿರಿ. ಮತ್ತು ಅದಕ್ಕನುಗುಣವಾದ ಸಮಯವನ್ನು ನಿಶ್ಚಯಿಸಿರಿ. ನಂತರ ಅದನ್ನು ನಿರ್ದಿಷ್ಟ ಗಂಟೆಗಳಿಗೆ ಕ್ರಮಬದ್ದಗೊಳಿಸಿರಿ. ಜೊತೆಗೆ ಸಕ್ರಿಯ ಚಟುವಟಿಕೆಯನ್ನು ಬಾಹ್ಯವಾದ ರೂಪಕ್ಕಿಂತ ಅದರ ಆಧ್ಯಾತ್ಮಿಕತೆಗೆ ಮತ್ತು ಗುರಿಗೆ ಹೆಚ್ಚು ಮಹತ್ವ ನೀಡಿರಿ.

ಪ್ರಶ್ನೆ: ಕುರ್‌ಆನ್ ಭಯಭಕ್ತಿಯೊಂದಿಗೆ ಪಾರಾಯಣ ಮಾಡಲು ಮತ್ತು ಅದರ ಅರ್ಥವನ್ನು ಗ್ರಹಿಸಿಕೊಳ್ಳಲು ಇರುವ ದಾರಿಯಾವುದು? ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಪಾರಾಯಣ ಮಾಡಿ ಸಂಪೂರ್ಣಗೊಳಿಸಲು ಗಮನಿಸಬೇಕಾದ ಅಂಶಗಳು ಯಾವುವು?

ಉ: ರಮಝಾನ್ ಕುರ್‌ಆನ್ ಅವತೀರ್ಣಗೊಂಡ ಮಾಸವೆಂಬುದು ಅದರ ಮಹತ್ವವಾಗಿದೆ. ಸಾಮೂಹಿಕವಾದ ಆರಾಧನೆ, ಆಧ್ಯಾತ್ಮಕತೆಯ ವಾತಾವರಣವು ತುಂಬಿದ ಈ ಮಾಸದಲ್ಲಿ ಅದರ ಮಹತ್ವವನ್ನು ಸ್ವಯಂ ನಮಗೆ ಅನುಭವಿಸಿ ಗ್ರಹಿಸಿಕೊಳ್ಳಬಹುದು. ಕುರ್‌ಆನ್ ಪಾರಾಯಣ ಮಾಡಲು ಮತ್ತು ಅದರ ಅರ್ಥ ಮಹತ್ವ ಗ್ರಹಿಸಲು ಬೇಕಾದ ಕೆಲವು ಸೂಚನೆಗಳನ್ನು ಈ ಕೆಳಗೆ ನೀಡುತ್ತೇನೆ.

ಕುರ್‌ಆನ್ ಪಾರಾಯಣ ಮತ್ತು ಅದರ ಸೂಕ್ತಗಳ ಕುರಿತು ಚಿಂತಿಸಲು ಒಂದು ನಿಶ್ಚಿತ ಸಮಯವನ್ನು ನಿರ್ಧರಿಸಿ ಅದಕ್ಕೊಂದು ನಿರ್ದಿಷ್ಟ ಸ್ಥಳವನ್ನೂ ಮೀಸಲಿಡಿರಿ. ಇತರ ವಿಷಯಗಳ ಕಡೆಗೆ ಗಮನಹರಿಸದ ರೀತಿಯ ಸ್ಥಳವನ್ನು ಆಯ್ದುಕೊಳ್ಳಿರಿ. ತಜ್ವೀದ್‌ನ ನಿಯಮವನ್ನು ಪಾಲಿಸಿ ಪಾರಾಯಣ ಮಾಡಿರಿ. ಕುರ್‌ಆನಿನಲ್ಲಿ ಓದುವ ವಿಷಯಗಳು ಮನದಲ್ಲಿ ಚಿತ್ರಣ ಮೂಡಿಸುವಂತಿರ ಬೇಕು. ಕುರ್‌ಆನ್‌ನ ಪ್ರತೀ ಸೂಕ್ತದ ಅರ್ಥವನ್ನು ಓದುವಾಗ ಅದರ ಅರ್ಥದೊಂದಿಗೆ ನೀವು ನಿಮ್ಮನ್ನು ಸೇರಿಸಿರಿ. ಪಾರಾಯಣ ಮಾಡುವಾಗ ಶಬ್ದವನ್ನು ಕಡಿಮೆ ಮಾಡಿರಿ. ನಿದ್ರೆ ಬರುವುದರಿಂದ ಇದು ತಡೆಯುತ್ತದೆ. ಒಂದುಸಣ್ಣ ತಫ್ಸೀರ್ ಪುಸ್ತಕವನ್ನು ಇಟ್ಟುಕೊಳ್ಳಿರಿ. ಅರ್ಥವಾಗದಿದ್ದರೆ ತಫ್ಸೀರ್ ತೆರೆದು ನೋಡಿದಾಗ ಸಹಾಯಕವಾಗುತ್ತದೆ.

ಇನ್ನು ಕುರ್‌ಆನನ್ನು ಒಂದಕ್ಕಿಂತ ಹೆಚ್ಚು ಬಾರಿ ಸಂಪೂರ್ಣಗೊಳಿಸಲು ಬಯಸುವುದಾದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಿರಿ.
ಪ್ರತೀ ನಮಾಝ್‌ನ ಬಳಿಕ ಅಥವಾ ಮೊದಲು ಹೆಚ್ಚಾಗಿ ಕುರ್‌ಆನ್ ಓದಿರಿ. ಪಾರಾ ಯಣಕ್ಕಾಗಿ ನಮಾಝ್ ಅಲ್ಲದೆ ಇತರ ಸಮಯಗಳನ್ನೂ ನಿಶ್ಚಯಿಸಿರಿ. ರಾತ್ರಿ ವೇಳೆಯ ತಹಜ್ಜುದ್ ನಮಾಝ್‌ನಲ್ಲಿಯೂ ಕುರ್‌ಆನ್ ಪಾರಾಯಣ ನಡೆಸಿರಿ. ಖಯಾಮಿನ ತಹಜ್ಜುದ್‌ನ ನಮಾಝ್‌ನಲ್ಲಿ ಕುರ್‌ಆನ್ ನೋಡಿ ಓದಬಹುದೆಂಬ ಅಭಿಪ್ರಾಯವನ್ನು ಪರಿಗಣಿಸಬಹುದು. ಈ ಸಲಹೆಗಳು ಕುರ್‌ಆನ್ ಪಾರಾಯಣವನ್ನು ಹೆಚ್ಚು ಫಲಪ್ರದ ಗೊಳಿಸಲು ಸಹಾಯಕವಾಗಬಹುದೆಂಬ ನಂಬಿಕೆ ನನಗಿದೆ.

ಪ್ರಶ್ನೆ: ರಮಝಾನ್ ಎಂಬುದು ಓರ್ವನ ಮನಸ್ಸನ್ನು ಶುದ್ಧೀಕರಿಸುವ ಮತ್ತು ಪಾಪ ಕೃತ್ಯಗಳಿಂದ ದೂರ ನಿಲ್ಲಲು ಇರುವ ಸುವರ್ಣಾವಕಾಶವಾಗಿದೆ. ಈ ಪುಣ್ಯ ಮಾಸದಲ್ಲಿ ಓರ್ವ ಮುಸ್ಲಿಮನು ತನ್ನ ಭಯ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಪಾವಿತ್ರ್ಯತೆಯನ್ನು ವರ್ಧಿಸಲು ಗಮನಿಸಬೇಕಾದ ವಿಷಯಗಳು ಯಾವುವು?

ಉ: ಪಾಪಕ್ಕೆ ಅವಕಾಶ ಇರುವಂತಹ ಸ್ಥಳದಿಂದ ದೂರವಾಗಿರಿ. ಏಕಾಂತತೆಯಿಂದ ಮುಕ್ತರಾಗಿ ಸಮಾಜದೊಂದಿಗೆ ಬೆರೆಯಿರಿ. ಅಲ್ಲಾಹನ ಮಾರ್ಗದಲ್ಲಿ ಸೇವಾ ನಿರತರಾದವರ ಸಂಘ ಬೆಳೆಸಿರಿ. ಕಡ್ಡಾಯ ಕರ್ಮಗಳೊಂದಿಗೆ ಐಚ್ಚಿಕ ಕರ್ಮಗಳನ್ನೂ ನಿರ್ವಹಿಸಿರಿ. ಅಗತ್ಯವಿಲ್ಲದೆ ಟಿವಿ. ನೋಡುವ ಅಭ್ಯಾಸದಿಂದ ದೂರವಿರಿ. ಸೋಶಿಯಲ್ ಮೀಡಿಯಾದ ಬಳಕೆಯನ್ನೂ ಕಡಿಮೆಗೊಳಿಸಿರಿ. ಪ್ರವಾದಿಗಳ ಸಹಾಬಿಗಳ ಜೀವನ ಚರಿತ್ರೆಗಳನ್ನು ಓದಿ ಅಲ್ಲಾಹನ ಮಾರ್ಗದಲ್ಲಿ ಅವರ ಹಾದಿಯನ್ನು ಮಾದರಿಗೊಳಿಸಿರಿ. ಅಲ್ಲಾಹನನ್ನು ಹೆಚ್ಚು ಸ್ಮರಿಸಿರಿ. ಕರ್ಮಗಳ ಪಾವಿತ್ರ್ಯತೆಗೆ ಮಹತ್ವ ನೀಡಿರಿ.

ನಮಾಝ್ ಕುರ್‌ಆನ್ ಪಾರಾಯಣ, ರುಕೂಅï. ಸುಜೂದ್ ಮುಂತಾದವುಗಳನ್ನು ಸುದೀರ್ಘಗೊಳಿಸಿರಿ. ಸಂಜೆ ಮುಂಜಾನೆಗಳಲ್ಲಿ ಹೇಳುವ ದಿಕ್ರ್‌ಗಳನ್ನು ಹೇಳುತ್ತಲಿರಿ. ಎಲ್ಲಾ ಕರ್ಮಗಳಲ್ಲಿ ಅಲ್ಲಾಹನ ಸಂಪ್ರೀತಿ ಬಯಸಿರಿ. ಪ್ರತೀ ಚಟುವಟಿಕೆಗಳಲ್ಲಿಯೂ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಗುರಿಯಿದೆ. ಕಣ್ಣಿನಿಂದ ನೋಡದ, ಕಿವಿಯಿಂದ ಆಲಿಸದ ಸ್ವರ್ಗೀಯ ಅನುಗ್ರಹಗಳನ್ನು ಅಲ್ಲಾಹನು ಸತ್ಕರ್ಮಗಳಿಗಾಗಿ ಸಿದ್ಧಪಡಿಸಿಟ್ಟಿದ್ದಾನೆ ಎಂದು ಸ್ವಯಂ ನೆನಪಿಸಿಕೊಳ್ಳಿರಿ. ತನ್ನನ್ನು ಈ ಧರ್ಮದಲ್ಲಿ ಸ್ಥಿರವಾಗಿ ನಿಲ್ಲಲು ಅಲ್ಲಾಹನೊಂದಿಗೆ ನಿರಂತರ ಪ್ರಾರ್ಥಿಸುತ್ತಲಿರಿ.