ಸನ್ಮಾರ್ಗ ಸಂಪಾದಕೀಯ
ಉತ್ತರಾಖಂಡದಲ್ಲಿ ನಡೆದಿರುವ ಘಟನೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಮುಹಮ್ಮದ್ ಶುಹೈಬ್ ಎಂಬ ವೃದ್ಧ ವ್ಯಾಪಾರಿ ತನ್ನ ಅಂಗಡಿಗೆ ಬಾಬಾ ಎಂಬ ಹೆಸರಿಟ್ಟದ್ದನ್ನೇ ಅಪರಾಧವೆಂದು ಪರಿಗಣಿಸಿದ ದುಷ್ಕರ್ಮಿಗಳ ಗುಂಪು, ಆ ಬೋರ್ಡನ್ನು ಕಿತ್ತು ಹಾಕುವಂತೆ ಬೆದರಿಕೆ ಹಾಕಿದ್ದು ಮತ್ತು ಆ ಸಮಯದಲ್ಲಿ ಆ ವೃದ್ಧರ ನೆರವಿಗೆ ನಿಂತು ದುಷ್ಕರ್ಮಿಗಳು ಕಾಲ್ಕೀಳುವಂತೆ ಮಾಡಿದ ದೀಪಕ್ ಕುಮಾರ್ರನ್ನು ರಾಷ್ಟ್ರವೇ ಗುರುತಿಸಿದೆ.
ದೀಪಕ್ ನಿಜವಾದ ಹೀರೋ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀಪಕ್ ಕುಮಾರ್ರ ಧೈರ್ಯ ಮತ್ತು ಮಾನವೀಯ ಗುಣವನ್ನು ಶ್ಲಾಘಿಸಲಾಗಿದೆ. ಸೋಶಿಯಲ್ ಮೀಡಿಯಾದುದ್ದಕ್ಕೂ ದೀಪಕ್ ಕುಮಾರ್ರೇ ತುಂಬಿಕೊಂಡಿದ್ದಾರೆ. ಇದು ಒಂದು ಮುಖವಾದರೆ,
ಇದರ ಇನ್ನೊಂದು ಮುಖ ಅತ್ಯಂತ ಕರಾಳವಾದದ್ದು. ಈ ಪ್ರಕರಣದಲ್ಲಿ ತನ್ನ ನಾಗರಿಕನ ಪರ ನಿಲ್ಲಬೇಕಿದ್ದ ಉತ್ತರಾಖಂಡದ ಬಿಜೆಪಿ ಸರಕಾರವು ಅದರ ಬದಲು ದುಷ್ಕರ್ಮಿಗಳ ಜೊತೆ ನಿಂತಿದೆ. ಇದೇ ದೀಪಕ್ ಕುಮಾರ್ ಮತ್ತು ಅವರ ಗೆಳೆಯ ವಿಜಯ್ ರಾವತ್ ವಿರುದ್ಧವೇ ಪ್ರಕರಣ ದಾಖಲಿಸಿದೆ. ಬಾಬಾ ಬೋರ್ಡನ್ನು ಕಿತ್ತು ಹಾಕುವಂತೆ ಬೆದರಿಕೆ ಹಾಕಿದವರಿಗೆ ಇವರಿಬ್ಬರು ಹಲ್ಲೆ ನಡೆಸಿದ್ದಾರೆ ಎಂಬುದು ಪ್ರಕರಣದ ತಿರುಳು. ಅಲ್ಲದೇ,
ಈ ಘಟನೆಯಿಂದ ಮುಜುಗರಕ್ಕೆ ಒಳಗಾದ ದುಷ್ಕರ್ಮಿಗಳ ಗುಂಪು ನೂರಾರು ಸಂಖ್ಯೆಯಲ್ಲಿ ಮನೆ ಮುಂದೆ ಸೇರಿ ದೀಪಕ್ ಕುಮಾರ್ ಮತ್ತು ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಗೋಲಿ ಮಾರೋ ಸಾಲೋಂಕೋ ಎಂಬ ಘೋಷಣೆ ಕೂಗಿದ್ದಾರೆ. 5ರಿಂದ 6 ಗಂಟೆಗಳ ಕಾಲ ಅವರ ಮನೆ ಮುಂದೆ ನಿಂತಿದ್ದಾರೆ. ದೀಪಕ್ ಕುಮಾರ್ ಅವರ ಜಿಮ್ ಶಾಪ್ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ದೀಪಕ್ ಕುಮಾರ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅವರ ತಾಯಿ, ತಂದೆ, ತಂಗಿಗೆ ಅಸಹನೀಯ ನಿಂದನೆ, ಬೈಗುಳಗಳ ಸಂದೇಶ ಕಳುಹಿಸಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಪೊಲೀಸರು ಇದೇ ದೀಪಕ್ ಕುಮಾರ್ರನ್ನೇ ಬಂಧಿಸಿ ಎರಡು ಗಂಟೆಗಳ ಕಾಲ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ. ಮಾತ್ರವಲ್ಲ, ಈ ದುಷ್ಕರ್ಮಿಗಳ ಗುಂಪನ್ನು ತಡೆಯುವ ಬದಲು ಮತ್ತು ಬಲ ಪ್ರಯೋಗಿಸಿ ಚದುರಿಸುವ ಬದಲು ಇದೇ ದೀಪಕ್ ಕುಮಾರ್ರನ್ನು ಕ್ಷಮೆ ಯಾಚಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಇಲ್ಲಿಗೇ ಮುಗಿದಿಲ್ಲ,
ಇಷ್ಟೆಲ್ಲ ನಡೆಯುತ್ತಿದ್ದರೂ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿಯವರಾಗಲಿ, ಅವರ ಗೃಹಸಚಿವರಾಗಲಿ ಒಂದೇ ಒಂದು ಮಾತನ್ನೂ ಹೇಳಿಲ್ಲ. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಘಟನೆಯೊಂದಕ್ಕೆ ತನ್ನ ರಾಜ್ಯ ಸಾಕ್ಷಿಯಾಗಿದ್ದರೂ ಆ ಬಗ್ಗೆ ಏನನ್ನೂ ಹೇಳದೇ ಮತ್ತು ಪೊಲೀಸ್ ಕ್ರಮಗಳ ಮೂಲಕ ದುಷ್ಕರ್ಮಿಗಳ ಮನೋಬಲ ಹೆಚ್ಚಿಸುವಂತೆ ನಡಕೊಂಡಿದೆ. ಇಂಥ ಸಂದರ್ಭಗಳಲ್ಲಿ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವುದು ಬಹಳ ಮುಖ್ಯ. ಸರಕಾರದ ಹೇಳಿಕೆಯನ್ನು ಅನುಸರಿಸಿ ದುಷ್ಕರ್ಮಿಗಳು ತಮ್ಮ ಮುಂದಿನ ಯೋಜನೆಯನ್ನು ರೂಪಿಸುತ್ತಾರೆ. ಸರಕಾರ ತಮ್ಮ ವಿರುದ್ಧ ಇದೆ ಎಂಬುದು ಸ್ಪಷ್ಟವಾದರೆ ಅವರು ಮುಂದೆ ಬೆದರಿಕೆ ಹಾಕುವ ಮತ್ತು ದಾಳಿ ಮಾಡುವ ಉದ್ದೇಶದಿಂದ ಹಿಂಜರಿಯುತ್ತಾರೆ. ಆದರೆ, ಉತ್ತರಾಖಂಡ ಸರಕಾರವು ದುಷ್ಕರ್ಮಿಗಳ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ. ನಿಜವಾಗಿ,
ಸರಕಾರದ ಈ ಮೌನ ಉದ್ದೇಶಪೂರ್ವಕ ಎಂದೇ ಹೇಳಬೇಕು. ಕೇವಲ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರಷ್ಟೇ ಅಲ್ಲ, ಅಸ್ಸಾಮ್ನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡಾ ಧರ್ಮದ್ವೇಷವನ್ನೇ ಉಸಿರಾಗಿಸಿಕೊಂಡಂತೆ ವರ್ತಿಸುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಒಡಿಸ್ಸಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿಯೂ ಇದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಈ ನಾಲ್ವರೂ ಪೈಪೋಟಿಗೆ ಬಿದ್ದಂತೆ ಮುಸ್ಲಿಮ್ ದ್ವೇಷ ವರ್ತನೆಯಲ್ಲಿ ಭಾಗಿಯಾಗಿರುವುದನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಕ್ಕಾಗಿ ಸ್ಪರ್ಧೆ ನಡೆಸುತ್ತಿರುವಂತೆ ಕಾಣಿಸುತ್ತಿದೆ. ಅತೀ ಹೆಚ್ಚು ತೀವ್ರವಾಗಿ ಧರ್ಮದ್ವೇಷದಲ್ಲಿ ತೊಡಗಿಸಿಕೊಂಡವರಿಗೆ ಪ್ರಧಾನಿ ಪಟ್ಟ ಒಲಿದು ಬರಬಹುದು ಎಂಬ ಭಾವ ಇವರಲ್ಲಿ ಇದ್ದಂತೆ ಕಾಣಿಸುತ್ತಿದೆ.
ಅಸ್ಸಾಮ್ನ ಮುಖ್ಯಮಂತ್ರಿಯಂತೂ ಮುಸ್ಲಿಮರ ವಿರುದ್ಧ ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಿದ್ದಾರೆ. ಬಂಗಾಳಿ ಮಾತಾಡುವ 5 ಲಕ್ಷ ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ. ಬಂಗಾಳಿ ಮಾತಾಡುವ ಮುಸ್ಲಿಮ್ ರಿಕ್ಷಾ ಚಾಲಕರಿಗೆ ನಿಗದಿತ 5 ರೂಪಾಯಿಯ ಬದಲು ನಾಲ್ಕು ರೂಪಾಯಿ ಕೊಡುವ ಮೂಲಕ ಅವರನ್ನು ಕಷ್ಟಕ್ಕೀಡು ಮಾಡಿ ಎಂದು ಕರೆ ನೀಡುತ್ತಿದ್ದಾರೆ. ಇದೇ ಕರೆಯನ್ನು ನಂಬಿ ಓರ್ವ ಮಹಿಳೆ ರಿಕ್ಷಾ ಚಾಲಕನಿಗೆ 5 ರೂಪಾಯಿ ಬದಲು ನಾಲ್ಕು ರೂಪಾಯಿ ನೀಡುತ್ತಿರುವುದು ಮತ್ತು ಮುಖ್ಯಮಂತ್ರಿಯ ಕರೆಯಂತೆ ತಾನು ನಡಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿರುವ ವೀಡಿಯೋ ಕೂಡಾ ಬಹಿರಂಗವಾಗಿದೆ. ಈ ನಡುವೆ,
ಇಂಡಿಯಾ ಹೇಟ್ ಸ್ಪೀಚ್ ಸಂಸ್ಥೆಯು ಬಿಡುಗಡೆಗೊಳಿಸಿದ ವರದಿಯನ್ನು ನೋಡಿದರೆ ಈ ಬಗೆಗಿನ ಅನುಮಾನ ಇನ್ನಷ್ಟು ಬಲಗೊಳ್ಳುವಂತಿದೆ. ಅತೀ ಹೆಚ್ಚು ದ್ವೇಷಭಾಷಣ ಮಾಡಿದ ರಾಜಕಾರಣಿಗಳಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಮೊದಲ ಸ್ಥಾನದಲ್ಲಿದ್ದಾರೆ. ಆ ಪಟ್ಟಿಯಲ್ಲಿ ಹಿಮಂತ ಬಿಸ್ವ ಶರ್ಮ ಮತ್ತು ಯೋಗಿ ಆದಿತ್ಯನಾಥ್ ಅವರ ಹೆಸರುಗಳೂ ಮುಂಚೂಣಿಯಲ್ಲಿವೆ. ಈ ಎಲ್ಲವನ್ನು ನೋಡುವಾಗ ಈ ಧರ್ಮದ್ವೇಷದ ಹಿಂದೆ ರಾಜಕೀಯ ಮಹತ್ವಾಕಾಂಕ್ಷೆ ಇದ್ದಂತೆ ಕಾಣಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಬಾರಿ ಪ್ರಧಾನಿ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲಾರರು ಎಂಬ ಅಭಿಪ್ರಾಯವಿದೆ.
ಅಲ್ಲದೇ ಬಿಜೆಪಿಯ ಒಳಗೆ ಈಗಾಗಲೇ ಮುಂದಿನ ಪ್ರಧಾನಿ ಸ್ಥಾನಕ್ಕೆ ಹೆಸರುಗಳ ಪಟ್ಟಿ ತಯಾರಾಗುತ್ತಿದೆ ಎಂಬ ಅಭಿಪ್ರಾಯವೂ ಇದೆ. ಬಿಜೆಪಿ ಹೊಸ ಅಧ್ಯಕ್ಷ ನಿತಿನ್ ನಬಿನ್ ಅವರ ಮೇಲೆ ಈ ಕುರಿತಂತೆ ದೊಡ್ಡ ಭಾರವನ್ನು ಹೊರಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಆ ಕಾರಣಕ್ಕಾಗಿಯೇ ಈ ಮೂವರು ಮುಖ್ಯಮಂತ್ರಿಗಳು ಸ್ಪರ್ಧೆಗೆ ಬಿದ್ದವರಂತೆ ಧರ್ಮದ್ವೇಷವನ್ನು ಹರಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಮುಖ್ಯವಾಗಿ,
ಯೋಗಿ ಆದಿತ್ಯನಾಥ್ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ಬಲವಾಗಿದ್ದರೂ ಆ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡಲು ಹಿಮಂತ ಬಿಸ್ವ ಶರ್ಮ ಮತ್ತು ಧಾಮಿ ಮುಂದಾಗಿದ್ದಾರೆ. ಅದರಲ್ಲೂ ಬಿಸ್ವ ಶರ್ಮ ಅವರು ಒಂದು ಹೆಜ್ಜೆ ಮುಂದಿದ್ದಾರೆ. ಅವರು ಮುಸ್ಲಿಮ್ ದ್ವೇಷಿ ಹೇಳಿಕೆಯನ್ನು ಬಹಿರಂಗವಾಗಿಯೇ ನೀಡುತ್ತಿದ್ದಾರೆ. ಯೋಗಿಗಿಂತಲೂ ಹೆಚ್ಚು ಕಟ್ಟರ್ ಪಂಥೀಯರಾಗಿ ಗುರುತಿಸಿಕೊಳ್ಳುವ ಹಪಾಹಪಿಯು ಅವರನ್ನು ಈ ರೀತಿಯಾಗಿ ವರ್ತಿಸುವಂತೆ ಪ್ರೇರೇಪಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಒಂದುರೀತಿಯಲ್ಲಿ,
ಮುಸ್ಲಿಮ್ ದ್ವೇಷದಲ್ಲಿ ಯಾರು ಎಷ್ಟು ತೀವ್ರವಾಗಿದ್ದಾರೆ ಎಂಬುದೇ ನರೇಂದ್ರ ಮೋದಿಯ ಉತ್ತರಾಧಿಕಾರಿಯ ಆಯ್ಕೆಯ ಪ್ರಧಾನ ಮಾನದಂಡ ಎಂಬುದು ಇವರ ವರ್ತನೆಯಿಂದ ಸ್ಪಷ್ಟವಾಗತೊಡಗಿದೆ. ಮುಸ್ಲಿಮ್ ದ್ವೇಷದ ಹೊರತಾಗಿ ಬಿಜೆಪಿಗೆ ಭವಿಷ್ಯವಿಲ್ಲ ಎಂಬುದು ಈ ಬೆಳವಣಿಗೆಗಳು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ದೀಪಕ್ ಕುಮಾರ್, ವಿಜಯ್ ರಾವತ್ರನ್ನು ಸನ್ಮಾನಿಸುವ ಮೂಲಕ ಧರ್ಮದ್ವೇಷಿಗಳಿಗೆ ಕಟು ಸಂದೇಶ ರವಾನಿಸಬೇಕಿದ್ದ ಉತ್ತರಾಖಂಡದ ಸರಕಾರವು, ಅದು ಬಿಟ್ಟು ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಿ ಬಾಯಿ ಮುಚ್ಚುವಂತೆ ಬಲವಂತಪಡಿಸಿರುವುದೇ ದ್ವೇಷದ ಪರಾಕಾಷ್ಟೆಯನ್ನು ಸೂಚಿಸುತ್ತದೆ. ಅಲ್ಲಿನ ಪೊಲೀಸರು ಈ ಇಬ್ಬರ ಬೆಂಬಲಕ್ಕೆ ಬಹಿರಂಗವಾಗಿ ನಿಲ್ಲಬೇಕಿತ್ತು.
ಸರಕಾರ ಧರ್ಮದ್ವೇಷವನ್ನು ಸಹಿಸುವುದಿಲ್ಲ ಮತ್ತು ಕಾನೂನು ಕೈಗೆತ್ತಿಕೊಳ್ಳುವವರನ್ನು ಸಹಿಸುವುದಿಲ್ಲ ಎಂದು ಸಂದೇಶ ರವಾನಿಸಬೇಕಿತ್ತು. ಆದರೆ ದುಷ್ಕರ್ಮಿಗಳೇ ನಮ್ಮವರು ಮತ್ತು ಅವರ ಜೊತೆಗೆ ನಾವಿರುತ್ತೇವೆ ಎಂಬುದಾಗಿ ಸರಕಾರ ಮತ್ತು ಪೊಲೀಸ್ ಇಲಾಖೆ ಸಾರಿದೆ. ಇದು ಅಪಾಯಕಾರಿ.












