ಸನ್ಮಾರ್ಗ ವಾರ್ತೆ
“ಬೆಂಗಳೂರು ನಮ್ಮ ಮೆಟ್ರೋ ದರ ಪರಿಷ್ಕರಣೆಯು ರಾಜ್ಯ ಸರ್ಕಾರದ ನಿರ್ಧಾರವಲ್ಲ, ಅದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರ ದರ ನಿಗದಿ ಸಮಿತಿಯ ಶಿಫಾರಸಾಗಿದೆ. ಈ ವಿಷಯದಲ್ಲಿ ರಾಜ್ಯದ ಜನರನ್ನು ದಾರಿತಪ್ಪಿಸುವುದನ್ನು ಬಿಟ್ಟು, ಕರ್ನಾಟಕದ ಹಿತಾಸಕ್ತಿಗಾಗಿ ಬಿಜೆಪಿ ಸಂಸದರು ಕೇಂದ್ರದ ಬಳಿ ಧ್ವನಿ ಎತ್ತಲಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿನ ಮೆಟ್ರೋ ದರ ಏರಿಕೆಯ ಕುರಿತು ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೆಟ್ರೋ ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಅದು ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಜೀವನಾಡಿ ಎಂಬುದನ್ನು ಸರ್ಕಾರ ಅರಿತಿದೆ. ಜನರ ಅಹವಾಲುಗಳೇ ನಮಗೆ ಆದ್ಯತೆಯಾಗಿದ್ದು, ಸತ್ಯಾಂಶವನ್ನು ಜನರ ಮುಂದಿಡುವುದು ತಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.
ಮೆಟ್ರೋ ದರ ಏರಿಕೆಯ ಹೊಣೆಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವ ಕ್ರಮವನ್ನು ‘ಅಪ್ರಾಮಾಣಿಕ ಮತ್ತು ದುಷ್ಟತನದ ನಡೆ’ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೆಟ್ರೋ ರೈಲ್ವೇಸ್ ಕಾಯ್ದೆಯ ಅಡಿಯಲ್ಲಿ ದರಗಳನ್ನು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಸಮಿತಿಯ ಶಿಫಾರಸುಗಳನ್ನು ಮೆಟ್ರೋ ಆಡಳಿತವು ಕಡ್ಡಾಯವಾಗಿ ಜಾರಿಗೊಳಿಸಲೇಬೇಕಿದ್ದು, ಇದನ್ನು ರದ್ದುಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಾಗಲೀ ಅಥವಾ ಬಿಎಂಆರ್ಸಿಎಲ್ಗಾಗಲೀ ಇರುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.












