ಮುಖ್ಯಮಂತ್ರಿ ಆಫರ್ ನೀಡಿತೇ ಬಿಜೆಪಿ? ನಟ ವಿಜಯ್ ಎನ್‌ಡಿಎ ಒಕ್ಕೂಟ ಸೇರುತ್ತಾರಾ?

0
525

✍️ ಇಷಲ್

ಬಿಜೆಪಿ ಮತ್ತು ಡಿಎಂಕೆ, ಎರಡೂ ನನ್ನ ಸಮಾನ ವಿರೋಧಿಗಳು ಎಂದು ಹೇಳಿ ರಾಜಕೀಯಕ್ಕೆ ಇಳಿದ ಚಿತ್ರನಟ ವಿಜಯ ದಳಪತಿ ಇದೀಗ ಟ್ರ್ಯಾಕ್ ಬದಲಿಸುವ ಸೂಚನೆ ಕಾಣಿಸುತ್ತಿದೆ. ತಮಿಳುನಾಡಿನ ರಾಜಕೀಯಕ್ಕೆ ಭಾರಿ ಪ್ರಚಾರದೊಂದಿಗೆ ಎಂಟ್ರಿಯಾದ ವಿಜಯ್ ನಿಧಾನಕ್ಕೆ ತನ್ನ ವರಸೆಯನ್ನು ಬದಲಿಸುವ ಸೂಚನೆ ನೀಡಿದ್ದಾರೆ. ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿರುವುದು ವಿಜಯ್ ಅವರನ್ನು ದಿನದ ಹಿಂದೆ ಚಿತ್ರನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭೇಟಿ ಆಗಿರೋದು. ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದಲ್ಲಿ ಎನ್.ಡಿ.ಎ. ಸರ್ಕಾರದ ಭಾಗವಾಗಿದ್ದಾರೆ. ಅವರು ವಿಜಯ್ ಅವರನ್ನು ಭೇಟಿಯಾಗಿರುವುದು ಮತ್ತು ಎನ್.ಡಿ.ಎ. ಒಕ್ಕೂಟಕ್ಕೆ ಅವರನ್ನು ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಉಂಟುಮಾಡಿದೆ.

ತಮಿಳುನಾಡಿನಲ್ಲಿ ಡಿಎಂಕೆ ಒಕ್ಕೂಟ ಬಲಿಷ್ಠವಾಗಿದ್ದು ವಿಜಯ್ ಅವರ ತಮಿಳಗ ವೆಟ್ರಿ ಕಯಗ ಅಥವಾ ಟಿವಿಕೆ ಪಕ್ಷಕ್ಕೆ ಒಂಟಿಯಾಗಿ ಸೋಲಿಸಲು ಸಾಧ್ಯವಿಲ್ಲ ಎಂಬುದು ಬಿಜೆಪಿಯ ನಿಲುವಾಗಿದೆ. ತಮಿಳುನಾಡಿನಲ್ಲಿ ಎ ಐ ಎ ಡಿ ಎಂ ಕೆ ಮತ್ತು ಬಿಜೆಪಿ ಮೈತ್ರಿಯಲ್ಲಿದೆ. ಈ ಮೈತ್ರಿ ಕೂಟಕ್ಕೆ ಸೇರಿಕೊಳ್ಳುವಂತೆ ವಿಜಯ್ ಅವರನ್ನು ಒಲಿಸಲು ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯ್ ಅವರು ಈವರೆಗೆ ಬಿಜೆಪಿಯನ್ನು ಪ್ರಬಲವಾಗಿ ವಿರೋಧಿಸುತ್ತಾ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನಡೆಸಿದ ಈ ಹಿಂದಿನ ಪ್ರಚಾರ ಅಭಿಯಾನವು ಕಾಲ್ತುಳಿತಕ್ಕೆ ಒಳಗಾಗಿ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಚಾರವನ್ನು ಪಡೆದಿತ್ತು. ಇದೀಗ ಅವರ ಕೌಟುಂಬಿಕ ಬದುಕು ಕೂಡ ಬಿರುಕುಗೊಂಡಿದ್ದು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ನಟಿ ತ್ರಿಷಾ ಅವರ ಜೊತೆ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೂ ಒಳಗಾಗಿದೆ. ಈ ಮಧ್ಯೆ ಅವರನ್ನು ರಾಜಕೀಯವಾಗಿ ಬಲಗೊಳಿಸುವ ಸಂದರ್ಭವನ್ನು ಬಿಜೆಪಿ ಕಂಡುಕೊಂಡಂತಿದೆ. ಕೌಟುಂಬಿಕ ಸಮಸ್ಯೆ ಮತ್ತು ಕಾಲ್ತುಳಿತದ ಕೇಸುಗಳ ಮಧ್ಯೆ ಒಂದಷ್ಟು ವಿಚಲಿತಗೊಂಡಂತಿರುವ ವಿಜಯ್ ಅವರನ್ನು ಆಧರಿಸಿ ಎನ್.ಡಿ.ಎ ಒಕ್ಕೂಟಕ್ಕೆ ಸೆಳೆಯುವುದು ಬಿಜೆಪಿಯ ಉದ್ದೇಶವಾಗಿರುವಂತಿದೆ. ಆ ಹಿನ್ನೆಲೆಯಲ್ಲಿಯೇ ನಟ ಪವನ್ ಕಲ್ಯಾಣ್ ಅವರನ್ನು ಮಧ್ಯವರ್ತಿಯಾಗಿ ಬಿಜೆಪಿ ನೇಮಿಸಿದೆ.

ಈ ಭೇಟಿಯಲ್ಲಿ ವಿಜಯ್ ಅವರನ್ನು ಒಕ್ಕೂಟಕ್ಕೆ ಪವನ್ ಕಲ್ಯಾಣ್ ಆಹ್ವಾನಿಸಿದ್ದಷ್ಟೇ ಅಲ್ಲ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯ ಆಫರನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪವನ್ ಕಲ್ಯಾಣ್ ಕೂಡ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಜೊತೆ ಸೇರಿಕೊಂಡು ಚುನಾವಣೆಯನ್ನು ಎದುರಿಸಿ ಈಗ ಉಪಮುಖ್ಯಮಂತ್ರಿಯಾಗಿದ್ದಾರೆ. ಇಂಥದ್ದೇ ಒಂದು ಆಫರನ್ನು ವಿಜಯ್ ಅವರಿಗೂ ಪವನ್ ಕಲ್ಯಾಣ್ ನೀಡಿದ್ದಾರೆ ಎಂಬ ಮಾತಿದೆ. ಸೀಟು ಹಂಚಿಕೆಯಲ್ಲೂ ಸಾಕಷ್ಟು ಉದಾರತನವನ್ನು ತೋರುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ ಎಂಬ ವರದಿ ಇದೆ.

ಡಿಎಂಕೆಯನ್ನು ಎದುರಿಸಬೇಕಾದರೆ ವಿಪಕ್ಷಗಳು ಬಲಿಷ್ಠವಾಗಬೇಕಾಗಿದ್ದು ಎನ್.ಡಿ.ಎ ಒಕ್ಕೂಟದಿಂದ ಮಾತ್ರ ಇದು ಸಾಧ್ಯ ಎಂದು ಪವನ್ ಕಲ್ಯಾಣ್ ಅವರು ವಿಜಯ್ ಅವರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಆದರೆ ಡಿಎಂಕೆ ಮತ್ತು ಬಿಜೆಪಿಯನ್ನು ವಿರೋಧಿಸಿಕೊಂಡೇ ಪಕ್ಷ ರಚನೆ ಮಾಡಿದ ವಿಜಯ್ ಅವರಿಗೆ ತಕ್ಷಣಕ್ಕೆ ಇದಕ್ಕೆ ಉತ್ತರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅವರು ಸಮಯ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಎನ್.ಡಿ.ಎ ಕೂಟಕ್ಕೆ ವಿಜಯ್ ಸೇರಿದರೆ ತಮಿಳುನಾಡಿನ ಅಸೆಂಬ್ಲಿ ಚುನಾವಣಾ ಕಣವು ಜಿದ್ದಾಜಿದ್ದಿನ ಹೋರಾಟವನ್ನು ಕಾಣಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಅಲ್ಲದೆ ವಿಜಯ್ ಅಂಥದೊಂದು ನಿರ್ಧಾರ ಮಾಡಿದರೆ ಅವರನ್ನು ಅಧಿಕಾರದಾಹಿ ವಚನ ಭಂಗ ಮಾಡಿದವ ಎಂದೆಲ್ಲ ಟಾರ್ಗೆಟ್ ಮಾಡುವುದಕ್ಕೆ ಡಿಎಂಕೆಗೆ ಸುಲಭವಾಗಲಿದೆ ಎಂಬ ಅಭಿಪ್ರಾಯವೂ ಇದೆ. ಈ ಹಿನ್ನೆಲೆಯಲ್ಲಿ ವಿಜಯ್ ಅಳೆದೂ ತೂಗಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.