ಚೆನ್ನೈ,ಜು.5: ಕುಡಿಯುವ ನೀರಿನ ಕೊರತೆ ಉದ್ಭವಿಸಿದಾಗ ತಮಿಳ್ನಾಡು ಸರಕಾರ, ರಾಜ್ಯದ ರಾಜಕಾರಣಿಗಳು ಮತ್ತು ಸಾರ್ವಜನಿಕರನ್ನು ಅಪಮಾನಿಸಿ ಟ್ವೀಟ್ ಮಾಡಿದ್ದ ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ ವಿಷಾದ ಸೂಚಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಗುರುವಾರ ಪಾರ್ಲಿಮೆಂಟಿಗೆ ತಿಳಿಸಿದ್ದಾರೆ. ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಮತ್ತು ವಿವಿಧ ಪಾರ್ಟಿ ನಾಯಕರು ಕಿರಣ್ ಬೇಡಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು.
ತಮಿಳ್ನಾಡಿನ ವಿಧಾನಸಭೆಯಲ್ಲಿ ಕಿರಣ್ ಬೇಡಿಯನ್ನು ಆಡಳಿತ-ಪ್ರತಿಪಕ್ಷಗಳೆನ್ನುವ ಭೇದವಿಲ್ಲದೆ ಖಂಡಿಸಲಾಗಿತ್ತು. ತಾಂತ್ರಿಕ ಕಾರಣಗಳಿಗಾಗಿ ಇದನ್ನು ಕಡತಕ್ಕೆ ಸೇರಿಸಿರಲಿಲ್ಲ. ಪುದುಚೇರಿ ಡಿಎಂಕೆಯ ನೇತೃತ್ವದಲ್ಲಿ ಕಿರಣ್ ಬೇಡಿ ಕಚೇರಿಯ ಮುಂದೆ ಪ್ರತಿಭಟನಾ ಕಾರ್ಯಕ್ರಮ ನಡೆದಿತ್ತು.
ಕಿರಣ್ ಬೇಡಿ ಅಪಮಾನಿಸಿದ ವಿಷಯವನ್ನು ಟಿಆರ್ ಬಾಲು ಲೋಕಸಭೆಯಲ್ಲಿ ಪ್ರಸ್ತಾಪಿಸಿದರು. ತಮಿಳರನ್ನು ಅಪಮಾನಿಸಿದ ಕಿರಣ್ ಬೇಡಿ ಕ್ಷಮೆಯಾಚಿಸಬೇಕೆಂದು ಮತ್ತು ಅವರನ್ನು ರಾಜ್ಯಪಾಲರ ಸ್ಥಾನದಿಂದ ತೆಗೆದು ಹಾಕಬೇಕೆಂದು ತಮಿಳ್ನಾಡಿನ ಸದಸ್ಯರು ಆಗ್ರಹಿಸಿದರು. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಹೊರಳಿದಾಗ ಕಿರಣ್ ಬೇಡಿ ವಿಷಾದ ಸೂಚಿಸಿದ್ದಾರೆ ಎಂದು ರಾಜ್ನಾಥ್ ಸಿಂಗ್ ಸಭೆಗೆ ತಿಳಿಸಿದರು.












