ದೇಶವನ್ನೇ ದಿವಾಳಿಯನ್ನಾಗಿಸುವ ಬಜೆಟ್- ಎಸ್ ಡಿ ಪಿ ಐ

0
959

ಆಧಾರ್ ಕಾರ್ಡ್, ಡಿಜಿಟಲ್, ಎಫ್ ಡಿ ಐ ಗೆ ಜೋತು ಬಿದ್ದಿರುವ ಕೇಂದ್ರ ಸರಕಾರ, ಮುದ್ರಾ ಯೋಜನೆಗೆ ಹೆಚ್ಚಿನ ಮಹತ್ವ ನೀಡಿದ್ದು ಹಾಸ್ಯಾಸ್ಪದವಾಗಿದೆ. ಯಾಕೆಂದರೆ ಆ ಯೋಜನೆಯ ಹಿಂದಿನ ಫಲಾನುಭವಿಗಳು ಮತ್ತದರ ಧನಾತ್ಮಕ ಅಂಶಗಳ ಪಟ್ಟಿಯನ್ನು ಇದುವರಗೂ ಬಿಡುಗಡೆಗೊಳಿಸದೆ ತನ್ನೆಲ್ಲಾ ಹಳೆಯ ಯೋಜನೆಗಳಂತೆ ಇದೂ ಒಂದು ‘ಫ್ಲಾಪ್ ಯೋಜನೆ’ಯಾಗಿದೆ ಎಂದು ದ ಕ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಟೀಕಿಸಿದೆ.

ಬಜೆಟಿನಲ್ಲಿ ಬಿಜೆಪಿ ಎಂದಿನಂತೆ ತನ್ನ ‘ಸಿದ್ಧಾಂತದ ಪರ ಒಲವುಳ್ಳ’ವರ ಬಜೆಟ್ ಮಂಡಿಸಿದೆ. ಬಂಡವಾಳಶಾಹಿಗಳಿಗೆ ಪೂರಕವಾಗಿ ಬಜೆಟ್ ರಚಿಸಿದೆ. ಅದು ಮಾತ್ರವಲ್ಲದೆ ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ ನ್ನು ಏರಿಸುವ ಮೂಲಕ ಕೇಂದ್ರ ಸರಕಾರ, ಆ ಮೂಲಕ ಜನರ ದಿನಬಳಕೆಯ ವಸ್ತುಗಳ ಬೆಲೆಯೇರುವಂತೆ ಮಾಡಿದೆ. ಇದು ಖಂಡಿತವಾಗಿಯೂ ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆಯಾಗಿ ಮಾರ್ಪಟ್ಟು ಜೀವನ ನಿರ್ವಹಣೆಯೇ ಕಷ್ಟ ಸಾಧ್ಯವಾಗಬಹುದು. ಕೇಂದ್ರ ಸರಕಾರದ ಈ ಬಜೆಟ್ ಜನ ಸಾಮಾನ್ಯರ ಪರವಿಲ್ಲ. ಎಂದಿನಂತೆ ಅದು ಬಂಡವಾಳಶಾಹಿಗಳ ಪರ, ಬೄಹತ್ ಉದ್ಯಮಿಗಳ ಪರವಾಗಿದೆ ಎಂದು SDPI ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.