✍️ ಅಮಾನ್
ಇವಿಎಂಗೂ ಬಿಜೆಪಿಗೂ ನಂಟು ಇದೆಯೇ ಎಂಬ ಅನುಮಾನವನ್ನು ರಾಜ್ಯ ಬಿಜೆಪಿ ನಾಯಕರು ಹುಟ್ಟು ಹಾಕಿದ್ದಾರೆ. ಗ್ರಾಮ ಪಂಚಾಯತ್ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಇವಿಎಂ ನ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ರಾಜ್ಯ ಸರಕಾರ ಮುಂದಾಗಿರುವುದನ್ನು ರಾಜ್ಯ ಬಿಜೆಪಿ ನಾಯಕರು ಬಲವಾಗಿ ಖಂಡಿಸಿದ್ದಾರೆ. ವಿಧಾನ ಸಭೆಯಿಂದ ಸಭಾತ್ಯಾಗ ಮಾಡಿ ಬಿಜೆಪಿ ನಾಯಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇವಿಎಂ ಬದಲು ಮತಪತ್ರದ ಮೂಲಕ ನಡೆಸುತ್ತಿರುವುದು ಕರ್ನಾಟಕ ಮಾತ್ರ ಅಲ್ಲ. ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಬಿಹಾರ ಮುಂತಾದ ರಾಜ್ಯಗಳಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತಪತ್ರದ ಮೂಲಕವೇ ನಡೆಸಲಾಗಿದೆ. ಆದರೆ ರಾಜ್ಯ ಬಿಜೆಪಿ ನಾಯಕರು ಮಾತ್ರ ಇವಿಎಂನ ಪರ ವಾದಿಸುತ್ತಿದ್ದಾರೆ.
ಇವಿಎಂನಲ್ಲಿ ಮೋಸ ನಡೆಯುತ್ತಿಲ್ಲ ಎಂದಾದರೆ ಮತ್ತೇಕೆ ಇವಿಎಂ ಮೂಲಕವೇ ಮತದಾನ ನಡೆಯಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ ಅನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಗೆಲುವಿನಲ್ಲಿ ಇವಿಎಂನ ಪಾತ್ರ ಇದೆ ಎಂಬ ವಿಪಕ್ಷಗಳ ಆರೋಪವನ್ನು ಸಾಬೀತುಪಡಿಸುವಂತೆ ರಾಜ್ಯ ಬಿಜೆಪಿ ನಾಯಕರು ನಡೆದುಕೊಂಡಿದ್ದಾರೆ.
ಆದರೆ ಇವಿಎಂನಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಅನುಮಾನಕ್ಕೆ ಪುಷ್ಟಿಕೊಡುವ ಕೆಲವು ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಅವರು ವಿಧಾನಸಭೆಯ ಮುಂದೆ ಇಟ್ಟಿದ್ದಾರೆ. ಅದಕ್ಕೆ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದ ವರದಿಯಂತೆ ಸಂಜೆ ಐದು ಗಂಟೆಗೆ ಶೇಕಡ 58. 22 ಮತದಾನ ಆಗಿತ್ತು. ರಾತ್ರಿ 11 ಗಂಟೆ 30 ನಿಮಿಷಕ್ಕೆ ಶೇಕಡ 65. 02ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮತ್ತೊಮ್ಮೆ ತಿದ್ದಿ ಹೇಳಿತು. ಇಲ್ಲಿಗೆ ಮುಗಿಯಲಿಲ್ಲ. ಅಂತಿಮ ವರದಿ ಬಂದಾಗ ಈ ಮತದಾನದ ಪ್ರಮಾಣವು 66.05 ಶೇಕಡಾ ಆಗಿತ್ತು. ಅಂದರೆ 5 ಗಂಟೆಯಲ್ಲಿ 10 ಲಕ್ಷದಷ್ಟು ಹೆಚ್ಚುವರಿ ಮತದಾನವಾಗಿದೆ. ಆದರೆ ಈ ವ್ಯತ್ಯಾಸ ಏಕೆ ಎಂಬ ಪ್ರಶ್ನೆಗೆ ಚುನಾವಣಾ ಆಯೋಗ ಈವರೆಗೂ ಉತ್ತರ ನೀಡಿಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದರು. ಅಲ್ಲದೆ ಹರಿಯಾಣ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಇದೇ ರೀತಿಯ ವ್ಯತ್ಯಾಸ ಉಂಟಾಗಿದೆ. ಹಲವಾರು ಸಂಘ-ಸಂಸ್ಥೆಗಳು ಈ ಬಗ್ಗೆ ಪ್ರಶ್ನೆ ಮಾಡಿದ್ರು ಚುನಾವಣಾ ಆಯೋಗ ಅದಕ್ಕೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಅವರು ಹೇಳಿದರು.
ಅಂದರೆ ಕೇವಲ ಐದು ಗಂಟೆಯಲ್ಲಿ 10 ಲಕ್ಷದಷ್ಟು ಹೆಚ್ಚುವರಿ ಮತದಾನವಾಗಬೇಕು ಎಂದಾದರೆ ಅದರಲ್ಲಿ ಏನೋ ಮೋಸ ನಡೆದಿರಬೇಕು. ಏಕಾಏಕಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತ್ತು ಅಷ್ಟು ಸಣ್ಣ ಅವಧಿಯಲ್ಲಿ ಮತದಾನ ವಾಗಲು ಸಾಧ್ಯವಿಲ್ಲ ಇವಿಎಂ ನ ದುರುಪಯೋಗ ಆಗುತ್ತಿದೆ ಎಂಬ ಅನುಮಾನಕ್ಕೆ ಈ ಫಲಿತಾಂಶ ಪುಷ್ಟಿಯನ್ನು ನೀಡುತ್ತಿದೆ.
ಇದೀಗ ರಾಜ್ಯ ಬಿಜೆಪಿ ನಾಯಕರು ಇವಿಎಂನ ಪರ ಎಷ್ಟು ವಾದಿಸುತ್ತಿದ್ದಾರೆ ಎಂದರೆ ಬ್ಯಾಲೆಟ್ ಪೇಪರ್ನಲ್ಲಿ ಮತದಾನ ಮಾಡುವುದನ್ನು ಪ್ರಶ್ನಿಸಿ ಸಭಾತ್ಯಾಗ ಮಾಡುತ್ತಾರೆ. ಅವರದೇ ಪಕ್ಷದ ಆಡಳಿತ ಇರುವ ರಾಜ್ಯಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತಪತ್ರದಲ್ಲಿ ನಡೆಸಲು ನಡೆಸಿದ್ದರೂ ರಾಜ್ಯ ಬಿಜೆಪಿ ನಾಯಕರಿಗೆ ವಿಶ್ವಾಸ ಇಲ್ಲ.
ಅಂತೂ ರಾಜ್ಯ ಬಿಜೆಪಿ ತನ್ನ ದ್ವಂದ್ವ ನಿಲುವಿನ ಮೂಲಕ ನಗೆ ಪಾಟಲಿಗೆ ಈಡಾಗಿದೆ. ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳು ಮತಪತ್ರದಲ್ಲಿ ಚುನಾವಣೆ ನಡೆಸುತ್ತಿರುವಾಗ ರಾಜ್ಯ ಬಿಜೆಪಿ ನಾಯಕರಿಗೆ ಯಾಕೆ ವಿರೋಧ ಎಂಬ ಪ್ರಶ್ನೆ ಎದುರಾಗಿದೆ. ತನ್ನದೇ ಪಕ್ಷದ ಮೇಲೆ ಈ ನಾಯಕರಿಗೆ ನಂಬಿಕೆ ಇಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ.












