ರೋಷನ್ ಕಾತೂನ್ ಹತ್ಯೆಯಾಗಿ ಒಂದು ತಿಂಗಳು: ಇನ್ನೂ ಆರೋಪಿಗಳ ಬಂಧನವಾಗಿಲ್ಲ

0
474

ಸನ್ಮಾರ್ಗ ವಾರ್ತೆ

ಬಿಹಾರದಲ್ಲಿ ಉಪವಾಸ ಹಿಡಿದಿದ್ದ ಮಹಿಳೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಒಂದು ತಿಂಗಳು ತುಂಬಿದರೂ ಈವರೆಗೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಫೆಬ್ರವರಿ 25ರಂದು ಈ ಘಟನೆ ನಡೆದಿತ್ತು. ರೋಷನ್ ಕಾತೂನ್ ಎಂಬ ಯುವತಿಯನ್ನು 20ರಷ್ಟು ಮಂದಿ ಥಳಿಸಿದ್ದರು. ಒಂದು ವಿವಾದವನ್ನು ಬಗೆಹರಿಸುವುದಕ್ಕಾಗಿ ಗ್ರಾಮದ ಸರಪಂಚೆಯನ್ನು ಭೇಟಿಯಾಗಲು ಹೋದ ಬಳಿಕ ಈ ಘಟನೆ ನಡೆದಿತ್ತು.

ಇವರ ಥಳಿತದಿಂದ ಬಸವಳಿದ ಕಾತೂನ್ ನೀರಿಗಾಗಿ ವಿನಂತಿಸಿದಾಗ ಮದ್ಯ ಮತ್ತು ಮೂತ್ರವನ್ನು ಸೇರಿಸಿ ಅವರಿಗೆ ಕುಡಿಸಿರುವುದಾಗಿ ಕುಟುಂಬ ಆರೋಪಿಸಿತ್ತು. ಗಂಭೀರ ಗಾಯಗೊಂಡ ಕಾತೂನ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮಾರ್ಚ್ ಒಂದರಂದು ಅವರು ನಿಧನರಾದರು. ಆ ಬಳಿಕ ದುಷ್ಕರ್ಮಿಗಳು ಹೊಸ ಕಥೆಯನ್ನು ಕಟ್ಟಿದರು.

ಮನೆ ಪ್ರವೇಶಿಸಿ ಕಳ್ಳತನ ಮಾಡಲು ಕಾತೂನ್ ಯತ್ನಿಸಿದ್ದಾರೆ, ಆ ಕಾರಣಕ್ಕಾಗಿ ಅವರನ್ನು ಥಳಿಸಲಾಗಿದೆ ಎಂದು ಹೇಳಲಾಯಿತು. ಆದರೆ ಕುಟುಂಬ ಈ ಆರೋಪವನ್ನು ನಿರಾಕರಿಸಿತ್ತು. ಆ ಬಳಿಕ ಪೊಲೀಸ್ ತನಿಖೆಯಲ್ಲಿ ಕುಟುಂಬ ಹೇಳಿದ ವಿಷಯವೇ ಸತ್ಯ ಅನ್ನುವುದು ಬಯಲಾಗಿತ್ತು.

ಗಂಭೀರ ಗಾಯಗೊಂಡಿದ್ದ ಆಕೆಗೆ ತಕ್ಷಣ ಚಿಕಿತ್ಸೆ ಒದಗಿಸುವ ಬದಲು ಪೊಲೀಸರು ಕಾತೂನ್ ಮತ್ತು ಆಕೆಯ ಗಂಡನನ್ನು ಪೊಲೀಸ್ ಠಾಣೆಗೆ ಒಯ್ದರು. ಮಾತ್ರ ಅಲ್ಲ ಬಿಡುಗಡೆಗೊಳಿಸಬೇಕಾದರೆ 50 ಸಾವಿರ ರೂಪಾಯಿ ಕೊಡಬೇಕು ಎಂದು ಆಗ್ರಹಿಸಿದರು . ಆರು ಗಂಟೆಗಳ ಕಾಲ ಸ್ಟೇಷನ್ ನಲ್ಲಿ ಇರಿಸಲಾಗಿತ್ತು. 4,000 ಯನ್ನು ನೀಡಿದ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ 19 ಮಂದಿಯ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರೂ ಯಾರನ್ನು ಈವರೆಗೂ ಬಂಧಿಸಿಲ್ಲ.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಕಾತೂನ್ ಕುಟುಂಬ ಆರೂಪಿಸಿದೆ.