ಮನುಷ್ಯ ದೇವನಾಗಲಾರ ಎಂದು ಸಾರಿದ ಮಹಾರಾಷ್ಟ್ರದ ದೇವಮಾನವ

0
471

ಸನ್ಮಾರ್ಗ ಸಂಪಾದಕೀಯ

ಎಪ್‌ಸ್ಟೀನ್ ಫೈಲನ್ನೂ ಮೀರಿಸಿದ ಖರಾಟ್ ಫೈಲ್ ದೇಶದಾದ್ಯಂತ ಸುದ್ದಿಯಲ್ಲಿದೆ. ತನ್ನನ್ನು ದೇವಮಾನವ ಮತ್ತು ಜ್ಯೋತಿಷ್ಯಶಾಸ್ತ್ರ ಬಲ್ಲವ ಎಂದು ಬಿಂಬಿಸಿಕೊಂಡ ಮಹಾರಾಷ್ಟ್ರದ ಅಶೋಕ್ ಖರಾಟ್ ಎಂಬ 67 ವರ್ಷದ ವ್ಯಕ್ತಿ ಮಾಡಿರುವ ಕೋಟ್ಯಂತರ ರೂಪಾಯಿ ಆಸ್ತಿ-ಪಾಸ್ತಿ ಮತ್ತು ಅನೈತಿಕ ಚಟುವಟಿಕೆಗಳ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ. 58ಕ್ಕಿಂತಲೂ ಅಧಿಕ ಅಶ್ಲೀಲ ವೀಡಿಯೋಗಳಿರುವ ಪೆನ್‌ಡ್ರೈವನ್ನು ವಶಪಡಿಸಿಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಗಣಿತದಲ್ಲಿ ಫೇಲ್ ಆಗುವ ಮೂಲಕ ಶಿಕ್ಷಣ ಸ್ಥಗಿತಗೊಳಿಸಿದ ಈತ, ಇದೀಗ ಸಂಖ್ಯಾಶಾಸ್ತ್ರದಲ್ಲಿ ಪ್ರವೀಣನಾಗಿ ಮತ್ತು ಜನರ ಸಮಸ್ಯೆಗಳಿಗೆ ಆಧ್ಯಾತ್ಮಿಕ ಪರಿಹಾರವನ್ನು ನೀಡುವ ದೇವಮಾನವನಾಗಿ ಬೆಳೆದಿರುವುದು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಗೆ ಕನ್ನಡಿ ಹಿಡಿಯುತ್ತಿದೆ.

22 ವರ್ಷಗಳ ಕಾಲ ಮರ್ಚಂಟ್ ಲೇವಿ ಅಧಿಕಾರಿಯಾಗಿ ದುಡಿದು 1990ರಲ್ಲಿ ನಿವೃತ್ತಿಯಾದ ಬಳಿಕ ಈತನ ಎರಡನೇ ಅವತಾರ ಪ್ರಾರಂಭವಾಗುತ್ತದೆ. ಅಶೋಕ್ ಕುಮಾರ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡು ಜ್ಯೋತಿಷ್ಯಾಲಯ ಆರಂಭಿಸಿದ ಈತ ಬಳಿಕ ದೇವಮಾನವನಾಗಿ ಬದಲಾದ. ವೈಯಕ್ತಿಕ ಸಮಸ್ಯೆಗಳು, ವೈವಾಹಿಕ ಸಮಸ್ಯೆಗಳು ಮತ್ತು ವ್ಯವಹಾರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಘೋಷಿಸಿದ. ತಂತ್ರ-ಮಂತ್ರಗಳ ಭಯಮಿಶ್ರಿತ ವಾತಾವರಣವನ್ನೂ ತನ್ನ ಸುತ್ತ ಬೆಳೆಸಿಕೊಂಡ. ಈತನ ಬಳಿಗೆ ಬರುತ್ತಿದ್ದವರು ಸಾಮಾನ್ಯರಲ್ಲ. ರಾಜಕಾರಣಿಗಳು, ವಿಐಪಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಸಹಿತ ಐಎಎಸ್, ಐಪಿಎಸ್ ಅಧಿಕಾರಿಗಳ ದಂಡೇ ಇತ್ತು. ಉನ್ನತ ಶಿಕ್ಷಣ ಪಡೆದ ಮತ್ತು ಅತೀ ಹೆಚ್ಚು ಲೋಕಜ್ಞಾನ ಮತ್ತು ಅಧಿಕಾರ ಬಲ ಉಳ್ಳವರೇ ಈತನ ಗ್ರಾಹಕರಾದರು. ಮುಖ್ಯವಾಗಿ,

ಅಧಿಕಾರಿಗಳ ಪತ್ನಿಯರ ನಂಬಿಕೆ ಗಳಿಸಿಕೊಂಡ ಈತ ಯಥೇಚ್ಛ ಹಣ ಮಾಡಿದ. ಆಧ್ಯಾತ್ಮಿಕ ಸೇವೆಯ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸಿದ. 2000 ಇಸವಿಯಲ್ಲಿ ಈಶಾನ್ಯೇಶ್ವರ ಮಹಾದೇವಿ ಮಂದಿರ ಕಟ್ಟಿದ. ಹುಣಸೇ ಹಣ್ಣಿನ ಒಂದು ಕೆಜಿ ಬೀಜಗಳನ್ನು ಇಂಥ ಅಧಿಕಾರಿಗಳು ಮತ್ತು ರಾಜ ಕಾರಣಿಗಳಿಗೆ 1 ಲಕ್ಷ ರೂಪಾಯಿಗೆ ಮಾರುತ್ತಿದ್ದ. ತುರ್ಕಿ ದೇಶದ ಒಂದು ಕೆಜಿ ಜೇನುತುಪ್ಪವನ್ನು 15 ಲಕ್ಷ ರೂಪಾಯಿಗೆ ಮಾರುತ್ತಿದ್ದ.

ಇವುಗಳಲ್ಲಿ ಅನುಗ್ರಹ ಇದೆ ಮತ್ತು ಸಮಸ್ಯೆಗಳಿಗೆ ಪರಿಹಾರ ಇದೆ ಎಂದು ಆಶೀರ್ವದಿಸಿ ಕೊಡುತ್ತಿದ್ದ. ಸುಮಾರು 154 ದೇಶಗಳಿಗೆ ಈತ ಪ್ರವಾಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, 200 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾನೆ ಎಂಬ ಮಾಹಿ ತಿಯೂ ಬಹಿರಂಗವಾಗಿದೆ. ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆಯೊಂದಿಗೆ ಈತನ ಅಸಭ್ಯ ವೀಡಿಯೋಗಳು ಬಿಡುಗಡೆಗೊಂಡಿರುವುದೇ ಈತನ ಪ್ರಭಾವಕ್ಕೆ ಸಾಕ್ಷಿ. ಇದೇ ಸಂದರ್ಭದಲ್ಲಿ ಇದೇ ಮಹಾರಾಷ್ಟ್ರದಲ್ಲಿ ಹೃಷಿಕೇಶ್ ವೈದ್ಯ ಎಂಬ ಇನ್ನೋರ್ವ ದೇವಮಾನವನನ್ನು ಬಂಧಿಸಲಾಗಿದೆ. ಈತನ ಮೇಲೂ ಮಹಿಳೆಯರನ್ನು ಲೈಂಗಿಕವಾಗಿ ದುರುಪಯೋಗಿಸಿದ ಆರೋಪವೇ ಇದೆ. ಅಂದಹಾಗೆ,

ಅಶೋಕ್ ಖರಾಟ್ ಪ್ರಕರಣ ಕೆಲವು ಪ್ರಶ್ನೆಗಳನ್ನು ಎತ್ತುತ್ತದೆ. ಧರ್ಮ ಅಂದರೇನು? ಮನುಷ್ಯ ಮತ್ತು ದೇವನ ನಡುವಿನ ಸಂಬಂಧ ಏನು? ಮನುಷ್ಯ ದೇವನಾಗಬಹುದೇ? ದೇವನಿಗೆ ಮಧ್ಯವರ್ತಿಗಳ ಅಗತ್ಯ ಇದೆಯೇ?

ಮನುಷ್ಯ ದೇವನಾಗಲಾರ ಮತ್ತು ದೇವನೆಂದು ಬಿಂಬಿಸಿಕೊಳ್ಳುವ ಮನುಷ್ಯನು ದೌರ್ಬಲ್ಯಗಳಿಂದ ಮುಕ್ತನಲ್ಲ ಎಂಬುದಕ್ಕೆ ಅಸಾರಾಂ ಬಾಪುವಿನಿಂದ ಈ ಖರಾಟ್ ವರೆಗೆ ಸಾಲು ಸಾಲು ಉದಾಹರಣೆ ಗಳಿವೆ. ಈ ಎಲ್ಲ ದೇವಮಾನವರು ಸಾಮಾನ್ಯವಾಗಿ ಒಂದೇ ದೌರ್ಬಲ್ಯಕ್ಕಾಗಿ ಗುರುತಿಸಿಕೊಳ್ಳುತ್ತಾರೆ. ಅದುವೇ ಮಹಿಳೆಯರನ್ನು ಲೈಂಗಿಕವಾಗಿ ದುರುಪಯೋಗಿಸಿಕೊಳ್ಳುವುದು. ಈ ಅಶೋಕ್ ಖರಾಟ್ ಪ್ರಕರಣದಲ್ಲೂ ಚರ್ಚೆಗೊಳಗಾಗಿರುವುದೂ ಇದುವೇ. ಹಾಗಂತ,

ಈತನ ಬಲೆಯೊಳಗೆ ಬಿದ್ದ ಮಹಿಳೆಯರೆಲ್ಲ ಬಡಪಾಯಿಗಳಲ್ಲ. ಶಿಕ್ಷಣ ಇಲ್ಲದ ಮತ್ತು ಪ್ರಭಾವ ಇಲ್ಲದ ದುರ್ಬಲ ಮಹಿಳೆಯರೂ ಅಲ್ಲ. ಸಾರ್ವಜನಿಕವಾಗಿ ಪ್ರಭಾವಿಯಾಗಿರುವುದು ಮತ್ತು ಹೆಸರು ಗಳಿಸಿಕೊಂಡವರೇ ಈತನ ಅಸಭ್ಯ ಚಟುವಟಿಕೆಗೆ ಬಳಕೆಯಾಗಿದ್ದಾರೆ. ಆದ್ದರಿಂದಲೇ, ಈತನ ಕೃತ್ಯವನ್ನು ಮಹಿಳಾ ಶೋಷಣೆ ಎಂಬ ಸಾಮಾನ್ಯ ಪದಗುಚ್ಚದೊಳಗೆ ಇಟ್ಟು ವೀಕ್ಷಿಸುವುದು ಸೂಕ್ತವೂ ಆಗುವುದಿಲ್ಲ. ಆರ್ಥಿಕವಾಗಿ ಸಬಲರಿರುವ ಮತ್ತು ಶೈಕ್ಷಣಿಕವಾಗಿ ಶಕ್ತರಿರುವ ಈ ಮಹಿಳೆಯರು ಮತ್ತು ಪುರುಷರು ಈತನಿಗೆ ಶರಣಾಗಿರುವುದಕ್ಕೆ ಕಾರಣ ಏನು? 100 ರೂಪಾಯಿ ಬೆಲೆಯ ಹುಣಸೇ ಹಣ್ಣಿನ ಬೀಜವನ್ನು 1 ಲಕ್ಷ ರೂಪಾಯಿಗಳಿಗೆ ಕೊಂಡುಕೊಳ್ಳಲು ಇವರನ್ನು ಪ್ರೇರೇಪಿಸಿದ್ದು ಯಾವುದು? ಸಾವಿರ ರೂಪಾಯಿಯ ಜೇನುತುಪ್ಪವನ್ನು 15 ಲಕ್ಷ ರೂಪಾಯಿಗೆ ಖರೀದಿಸಲು ಕಾರಣ ಏನು? ವಿದ್ಯಾವಂತ ಮಹಿಳೆಯರೇ ಈತನೊಂದಿಗೆ ಅಸಭ್ಯವಾಗಿ ಕಾಣಿಸಿಕೊಂಡಿರುವುದಕ್ಕೆ ಏನು ಕಾರಣ?

ಧರ್ಮವನ್ನು ಸರಿಯಾಗಿ ಅರಿತುಕೊಳ್ಳದಿರುವುದೇ ಇಂಥ ಡೋಂಗಿ ಬಾಬಾಗಳು ಉದಯಿಸುವುದಕ್ಕೆ ಮುಖ್ಯ ಕಾರಣ ಎಂದೇ ಹೇಳಬೇಕಾಗುತ್ತದೆ. ಯಾವುದೇ ಧರ್ಮ ಇವತ್ತಿನ ದಿನಗಳಲ್ಲಿ ಅಜ್ಞಾತವಾಗಿ ಉಳಿದಿಲ್ಲ. ಧರ್ಮವನ್ನು ಅರಿತುಕೊಳ್ಳಬೇಕು ಎಂದು ಬಯಸುವ ಪ್ರತಿಯೊಬ್ಬರಿಗೂ ಧರ್ಮಜ್ಞಾನವನ್ನು ನೀಡುವ ಅಧಿಕೃತ ಗ್ರಂಥಗಳು ಮಾರುಕಟ್ಟೆಯಲ್ಲೂ ಇವೆ ಮತ್ತು ಆನ್‌ಲೈನ್‌ನಲ್ಲೂ ಲಭ್ಯವಿವೆ. ಆದರೆ,

ಹೆಚ್ಚಿನ ಜನರು ಈ ಅಧಿಕೃತ ಮಾರ್ಗವನ್ನು ಅನುಸರಿಸುವುದಿಲ್ಲ. ಇಂಥವರೇ ದೇವಮಾನವರ ಗ್ರಾಹಕರಾಗುತ್ತಾರೆ. ದೇವನ ಹೆಸರಲ್ಲಿ ಇಂಥ ದೇವಮಾನವರು ತಂತ್ರ-ಮಂತ್ರಗಳ ಕಣ್ಕಟ್ಟು ನಡೆಸುತ್ತಾರೆ. ಹಿಪ್ನೋಟಿಸಂ ಮಾಡುತ್ತಾರೆ. ಧರ್ಮದ ವೇಷ ಭೂಷಣಗಳನ್ನು ಧರಿಸುತ್ತಾರೆ. ವಿಚಿತ್ರ ಭಾವ-ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಜನರು ಭಕ್ತಿ-ಭಾವದಿಂದ ನಡಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಪಾದ ತೊಳೆಸುತ್ತಾರೆ. ಕಾಲಿಗೆರಗುವಂಥ ಸನ್ನಿವೇಶ ಸೃಷ್ಟಿ ಮಾಡುತ್ತಾರೆ. ತಮ್ಮ ಸುತ್ತ ಇವರು ಸೃಷ್ಟಿ ಮಾಡುವ ವಿಚಿತ್ರ ಪ್ರಭಾವಳಿಯನ್ನು ಸಾಕ್ಷಾತ್ ದೈವಿಕವೆಂದು ಬಗೆಯುತ್ತಾ ಇವರು ಆಡಿಸಿದಂತೆ ಆಡತೊಡಗುತ್ತಾರೆ. ಅವರನ್ನೇ ದೇವರೆಂದು ಬಗೆಯತೊಡಗುತ್ತಾರೆ. ತಮ್ಮಲ್ಲಿರುವ ಚಿನ್ನ-ಹಣ ಎಲ್ಲವನ್ನೂ ಈ ದೇವರಿಗೆ ಸಮರ್ಪಿಸತೊಡಗುತ್ತಾರೆ. ಅಂದಹಾಗೆ,

ನಿಜಧರ್ಮ ಈ ಎಲ್ಲವುಗಳಿಂದ ಹೊರಗಿದೆ. ದೇವನನ್ನು ತಲುಪುವುದಕ್ಕೆ ದೇವಮಾನವರೆಂಬ ಮಧ್ಯವರ್ತಿಗಳ ಅಗತ್ಯ ಇಲ್ಲ. ದೇವ ಮತ್ತು ಮನುಷ್ಯರ ನಡುವೆ ಪರದೆಯೇ ಇಲ್ಲ. ಮನುಷ್ಯರನ್ನು ಸೃಷ್ಟಿಸಿದ್ದು ದೇವ ಎಂದಾದರೆ, ದೇವನನ್ನು ತಲುಪುವುದಕ್ಕೆ ಆತ ಹೇಳಿದಂತೆ ಬದುಕುವುದೇ ಅತ್ಯುತ್ತಮ ವಿಧಾನ. ದೇವನು ಮಾಟ-ಮಂತ್ರಗಳನ್ನು ತಡೆಯಬಲ್ಲಷ್ಟು ಶಕ್ತಿಶಾಲಿ. ಆತನ ಸೃಷ್ಟಿಗಳಾದ ಮನುಷ್ಯರ ಎಲ್ಲ ವಿಧದ ಮಾಂತ್ರಿಕತೆಯನ್ನು ನಿಗ್ರಹಿಸಬಲ್ಲಷ್ಟು ಬಲಶಾಲಿ. ಆತನು ಮನುಷ್ಯನಿಗೆ ಆರೋಗ್ಯವನ್ನೂ ನೀಡಬಲ್ಲ. ನೆಮ್ಮದಿಯನ್ನೂ ಕರುಣಿಸಬಲ್ಲ. ಸರ್ವ ಸಮಸ್ಯೆಗಳಿಂದಲೂ ತನ್ನ ಸೃಷ್ಟಿಯನ್ನು ಮುಕ್ತ ಗೊಳಿಸಬಲ್ಲ. ಅದಕ್ಕೆ ಮನುಷ್ಯ ಮಾಡಬೇಕಾದದ್ದು ಏನೆಂದರೆ, ದೇವ ಹೇಳಿದಂತೆ ಬದುಕುವುದು.

ಮೋಸ, ವಂಚನೆ, ದ್ವೇಷ ಇತ್ಯಾದಿ ಸರ್ವ ಕೆಡುಕುಗಳಿಂದಲೂ ಮುಕ್ತವಾಗುವುದು. ದೇವನಿಗಲ್ಲದೇ ಇನ್ನಾರಿಗೂ ಬಾಗದಿರುವುದು. ಹೀಗೆ ಬದುಕಲು ಪ್ರಾರಂಭಿಸಿದಾಗ ಭಯ ಹೊರಟು ಹೋಗುತ್ತದೆ ಮತ್ತು ತನ್ನ ಸಮಸ್ಯೆಗಳ ಪರಿಹಾರವಾಗಿ ದೇವನಿದ್ದಾನೆ ಎಂಬ ವಿಶ್ವಾಸ ಆವರಿಸಿಕೊಳ್ಳುತ್ತದೆ. ಇಂಥ ವಿಶ್ವಾಸ ವ್ಯಕ್ತಿಯ ಒಳಗಿನಿಂದ ಯಾವಾಗ ಮೂಡಿಬರುತ್ತದೋ ಆಗ ಸರ್ವ ದೇವಮಾನವರೂ ಕ್ಷುಲ್ಲಕವಾಗಿ ಕಾಣುತ್ತಾರೆ. ಅವರೆಲ್ಲ ನಿಜ ದೇವನನ್ನು ಅವಮಾನಿಸುವವರಾಗಿ ಕಾಣುತ್ತಾರೆ. ಸ್ವಯಂ ತಮ್ಮ ಕಾಯಿಲೆಯನ್ನೇ ಗುಣಪಡಿಸಲು ಆಸ್ಪತ್ರೆಗೆ ಹೋಗುವ ಮತ್ತು ಮಾನವ ದೌರ್ಬಲ್ಯಗಳಿಂದ ಮುಕ್ತವಾಗಿಲ್ಲದ ವ್ಯಕ್ತಿ ಹೇಗೆ ಇನ್ನೊಬ್ಬರ ಸಮಸ್ಯೆಯನ್ನು ಮಾಂತ್ರಿಕ ಶಕ್ತಿಯಿಂದ ಗುಣಪಡಿಸಬಲ್ಲ ಎಂಬ ಪ್ರಶ್ನೆ ಎತ್ತುತ್ತಾರೆ.

ಸದ್ಯದ ಸಮಸ್ಯೆ ಏನೆಂದರೆ, ಧರ್ಮವು ಅನುಸರಣೆಗಿಂತ ಮಾರಾಟಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಅಶೋಕ್ ಖರಾಟ್ ಪ್ರಕರಣ ಮತ್ತೊಮ್ಮೆ ಇದನ್ನು ಸಾಬೀತುಪಡಿಸಿದೆ.