ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳದ ಮುರುಷಿದಾ ಬಾದ್ ನ ಪರಕ್ಕ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮೆಹ್ ತಾಬ್ ಶೇಖ್ ಅವರ ಹೆಸರೇ ಮತದಾರರ ಪಟ್ಟಿಯಿಂದ ಕಾಣೆಯಾಗಿದೆ. ಎಸ್ಐಆರ್ ಅಡಿಯಲ್ಲಿ ಸಿದ್ದಪಡಿಸಲಾದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣೆಯಾಗಿರುವುದು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಚುನಾವಣೆಯಲ್ಲಿ ಭಾಗವಹಿಸುವ ಅವರ ಅರ್ಹತೆಯ ಬಗ್ಗೆ ಇದು ಗಂಭೀರ ಕಳವಳ ಹುಟ್ಟು ಹಾಕಿದೆ. ತುರ್ತು ಪರಿಹಾರ ಕೋರಿ ಶೇಕ್ ಅವರು ಕೊಲ್ಕತ್ತಾ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ.
ವಿಷಯದ ತುರ್ತು ಮತ್ತು ಚುನಾವಣಾ ಸಾಮಿಪ್ಯವನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಈ ಪ್ರಕರಣದಲ್ಲಿ ತಕ್ಷಣ ನ್ಯಾಯಾಂಗ ಹಸ್ತಕ್ಷೇಪ ನಡೆಸಬೇಕು ಎಂದು ವಕೀಲರು ಹೈಕೋರ್ಟ್‌ನಲ್ಲಿ ವಿವಾದಿಸಿದ್ರು.
ಆದರೆ ಮುಖ್ಯ ನ್ಯಾಯಮೂರ್ತಿ ಸುಜಯ್ ವಾಲ್ ನೇತೃತ್ವದ ಪೀಠವು ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ಎಸ್ಐಆರ್ ಗೆ ಸಂಬಂಧಿಸಿದ ಎಲ್ಲಾ ವಿಷಯಗಳು ಪ್ರಸ್ತುತ ಸುಪ್ರೀಂಕೋರ್ಟ್‌ನ ವಿಶೇಷ ವ್ಯಾಪ್ತಿಯಲ್ಲಿವೆ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು. ಸುಪ್ರೀಂ ಕೋರ್ಟ್ ನ ನಿರ್ದೇಶನದ ಪ್ರಕಾರ ಈ ಹಂತದಲ್ಲಿ ಹೈಕೋರ್ಟುಗಳು ಅಂತಹ ವಿವಾದಗಳನ್ನು ನಿರ್ಣಯಿಸುವುದರಿಂದ ನಿರ್ಬಂಧಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.
ಈ ಹಿನ್ನೆಲೆಯಲ್ಲಿ ನ್ಯಾಯವನ್ನು ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ಮೆಹತಾಬ್ ಷೇಕ್ ಹೇಳಿದ್ದಾರೆ.












