ಸನ್ಮಾರ್ಗ ವಾರ್ತೆ
ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿ ಸಂಕೀರ್ಣದ ಕುರಿತು ದೀರ್ಘಕಾಲದಿಂದ ನಡೆಯುತ್ತಿರುವ ವಿವಾದವು ನಿರ್ಣಾಯಕ ಹಂತವನ್ನು ತಲುಪಿದೆ. ಏಪ್ರಿಲ್ ಎರಡರಂದು ನಡೆಯಲಿರುವ ಮುಂದಿನ ವಿಚಾರಣೆಗೆ ಮುಂಚಿತವಾಗಿ ಮಧ್ಯಪ್ರದೇಶದ ಹೈಕೋರ್ಟಿನ ನ್ಯಾಯಾಧೀಶರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲ ಸೇರಿದಂತೆ ಹೈಕೋರ್ಟ್ ನ ವಿಭಾಗಿಯ ಪೀಠವು ಸ್ಮಾರಕದ ಇತಿಹಾಸಿಕ ಮತ್ತು ರಚನಾತ್ಮಕ ವೈಶಿಷ್ಟ್ಯಗಳನ್ನು ಅರ್ಥ ಮಾಡಿಕೊಳ್ಳಲು ಭೇಟಿ ನೀಡಿತು. ಸ್ಥಳೀಯಾಧಿಕಾರಿಗಳ ಬೆಂಬಲದೊಂದಿಗೆ ನ್ಯಾಯಾಧೀಶರು ಕಂಬಗಳು ಶಾಸನಗಳು ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಪರಿಶೀಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಈ ಪ್ರಕರಣ ಸುಪ್ರೀಂಕೋರ್ಟಿಗೆ ತಲುಪಿದೆ. ನ್ಯಾಯಾಂಗ ಪರಿಶೀಲನೆ ನಡೆಸುವ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಮೌಲಾನ ಕಮಲುದ್ದೀನ್ ವೆಲ್ಫೇರ್ ಸೊಸೈಟಿ ಅರ್ಜಿ ಸಲ್ಲಿಸಿದೆ.
ಕಮಲ್ ಮೌಲಾ ಸ್ಥಳವು ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವಿನ ದಶಕಗಳಷ್ಟು ಹಳೆಯದಾದ ವಿವಾದದ ಕೇಂದ್ರಬಿಂದುವಾಗಿದೆ. ಹಿಂದುಗಳು ಇದನ್ನು ಸರಸ್ವತಿ ದೇವಿಗೆ ಅರ್ಪಿತವಾದ ಪ್ರಾಚೀನ ದೇವಾಲಯವೆಂದು ಹೇಳಿಕೊಳ್ಳುತ್ತಾರೆ. ಆದರೆ ಮುಸ್ಲಿಮರು ಇದನ್ನು ಐತಿಹಾಸಿಕ ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸುತ್ತಾರೆ.












