✍️ ಇರ್ಶಾದ್, ಬೆಂಗಳೂರು
(ಪತ್ರಕರ್ತರು ಮತ್ತು ತಂತ್ರಜ್ಞಾನ ಪರಿಣತರಾಗಿದ್ದಾರೆ)
“ನೀವು ಒಂದೇ ಸಮಯದಲ್ಲಿ ಹಲವು ಗುರುತುಗಳನ್ನು ಹೊಂದಬಹುದು: ಒಬ್ಬ ಒಳ್ಳೆಯ ಮುಸ್ಲಿಂ, ಒಬ್ಬ ಒಳ್ಳೆಯ ಕೇರಳಿಗ ಮತ್ತು ಒಬ್ಬ ಒಳ್ಳೆಯ ಭಾರತೀಯ- ಇವೆಲ್ಲವೂ ಏಕಕಾಲದಲ್ಲಿ. ಭಾರತೀಯ ಬಹುತ್ವದ ಇಡೀ ಸಾರವೇ ಇದು.” – ಶಶಿ ತರೂರ್
ಭಾರತ – ಒಂದು ಕನಸು, ಒಂದು ಜೀವಂತ ಪರಿಕಲ್ಪನೆ
ಒಂದು ರಾಷ್ಟ್ರವನ್ನು ಕಟ್ಟುವುದು ಕೇವಲ ಗಡಿರೇಖೆ ಎಳೆದಂತಲ್ಲ. ಅದು ಒಂದು ಕನಸನ್ನು ನಿರ್ಮಿಸುವ ಕೆಲಸ. ಭಾರತದ ಸ್ವಾತಂತ್ರ್ಯ ಚಳವಳಿ ಬರೀ ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಹೋರಾಟವಾಗಿರಲಿಲ್ಲ. ಅದೊಂದು ಬಹುತ್ವದ ರಾಷ್ಟ್ರ ಕಟ್ಟುವ ಸಾಮೂಹಿಕ ಕನಸಾಗಿತ್ತು. ಗಾಂಧಿ, ಅಂಬೇಡ್ಕರ್, ನೆಹರೂ, ಮೌಲಾನಾ ಆಝಾದ್ ಬೇರೆ ಬೇರೆ ದೃಷ್ಟಿಕೋನದ ಈ ನಾಯಕರು ಒಂದು ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯದ ರೂಪುರೇಖೆ ಎಳೆದರು. 1950ರಲ್ಲಿ ಜಾರಿಗೆ ಬಂದ ಸಂವಿಧಾನ ಈ ಕನಸಿಗೆ ಕಾನೂನಿನ ರೂಪ ನೀಡಿತು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಧಾರ್ಮಿಕ ತಟಸ್ಥತೆ ಅದರ ಆಧಾರಸ್ತಂಭಗಳಾದವು.
ಐತಿಹಾಸಿಕ ಹಿನ್ನೆಲೆ: ಸ್ವಾತಂತ್ರ್ಯದಿಂದ ಸಂವಿಧಾನದವರೆಗೆ
1857ರ ಸಿಪಾಯಿ ದಂಗೆಯಲ್ಲಿ ಮೊಳಕೆ ಒಡೆದು, 1920-40ರ ದಶಕಗಳಲ್ಲಿ ಅರಳಿದ ಈ ಕಲ್ಪನೆಯಲ್ಲಿ ಎಲ್ಲ ಧರ್ಮ-ಜಾತಿಗಳ ಜನರು ಒಟ್ಟಾಗಿ ಹೋರಾಡಿದರು. ಹಿಂದೂ-ಮುಸ್ಲಿಂ ಮತ್ತು ಸಿಖ್ ಎಲ್ಲರೂ ಸ್ವಾತಂತ್ರ್ಯದ ಒಂದೇ ಕನಸಿನ ಭಾಗೀದಾರರಾದರು.
1947ರಲ್ಲಿ ಸ್ವಾತಂತ್ರ್ಯ ದೊರೆತಾಗ, ಭಾರತ ಒಂದು ಅಸಾಧಾರಣ ಪ್ರತಿಜ್ಞೆ ಮಾಡಿತು: ಧರ್ಮ, ಜಾತಿ, ಭಾಷೆ ಅಥವಾ ಪ್ರದೇಶದ ಹೊರತಾಗಿ, ಪ್ರತಿಯೊಬ್ಬ ಪ್ರಜೆಯೂ ಸಮಾನ ಘನತೆ ಮತ್ತು ಹಕ್ಕುಗಳಿಗೆ ಅರ್ಹ. ಆ ಪ್ರತಿಜ್ಞೆಯನ್ನೇ “ಭಾರತದ ಪರಿಕಲ್ಪನೆ” (The Idea of India) ಎನ್ನುತ್ತಾರೆ.
ಸುನಿಲ್ ಖಿಲ್ನಾನಿ ಅವರು ವಿಶ್ಲೇಷಿಸುವಂತೆ, ಭಾರತವು ಕೇವಲ ಒಂದು ರಾಷ್ಟ್ರವಲ್ಲ, ಅದು ಇತಿಹಾಸ ಮತ್ತು ಸಾಂವಿಧಾನಿಕ ತತ್ವಗಳ ಮೂಲಕ ನಿರಂತರವಾಗಿ ಮರು ರೂಪಗೊಳ್ಳುತ್ತಿರುವ ಒಂದು ಬಹುಮುಖಿ ಪ್ರಯೋಗ.
ನೆಹರೂ ಮತ್ತು ಖಿಲ್ನಾನಿ ಅವರು ಭಾರತವನ್ನು ಒಂದು ಪಾಲಿಂಪ್ಸೆಸ್ಟ್'(palimpsest)ಗೆ ಹೋಲಿಸುತ್ತಾರೆ - ಹಳೆಯ ಹಸ್ತಪ್ರತಿಯ ಮೇಲೆ ಪದರ ಪದರವಾಗಿ ಹೊಸ ವಿಚಾರಗಳನ್ನು ಬರೆದಂತೆ, ಹಿಂದಿನ ಕುರುಹುಗಳು ಅಳಿಯದೆ ಉಳಿಯುತ್ತವೆ. ಹಾಗೆಯೇ ಭಾರತದಲ್ಲಿ ಆರ್ಯ-ಅನಾರ್ಯ, ಬುದ್ಧ-ಅಶೋಕ, ಭಕ್ತಿ-ಸೂಫಿ, ಮತ್ತು ವಸಾಹತು ಶಾಹಿ ವಿರೋಧಿ ಹೋರಾಟದ ಸ್ತರಗಳು ಒಂದರ ಮೇಲೊಂದು ಕುಳಿತಿವೆ. ಈ ಅಂತರಂಗದ ಆಳವೇ ಭಾರತದ ವಿಶಿಷ್ಟತೆ.
ನಮ್ಮ ನಾಯಕರ ಕನಸು: ಗಾಂಧಿ, ನೆಹರೂ, ಅಂಬೇಡ್ಕರ್
ಭಾರತ ಸ್ವತಂತ್ರವಾದಾಗ, “ಎಲ್ಲರನ್ನೂ ಒಳಗೊಂಡ ದೇಶ” ಕಟ್ಟುವುದು ಆಯ್ಕೆ ಮಾತ್ರವಾಗಿರಲಿಲ್ಲ, ಅದು ಅನಿವಾರ್ಯವಾಗಿತ್ತು. ಯುರೋಪ್ ದೇಶಗಳು ಒಂದೇ ಧರ್ಮ, ಒಂದೇ ಭಾಷೆ ಹೇರಿ ದೇಶ ಕಟ್ಟಿದ ಮಾದರಿಯನ್ನು ಗಾಂಧೀಜಿ ಮತ್ತು ಇತರರು ಸ್ಪಷ್ಟವಾಗಿ ತಿರಸ್ಕರಿಸಿದರು.
ಮಹಾತ್ಮ ಗಾಂಧಿ
ಗಾಂಧೀಜಿಯವರು ವಿಭಿನ್ನ ಧಾರ್ಮಿಕ ಧಾರೆಗಳನ್ನು ಸಮನ್ವಯಗೊಳಿಸುವ ಮೂಲಕ ರಾಷ್ಟ್ರೀಯ ಐಕ್ಯತೆಯನ್ನು ರೂಪಿಸಿದರು. ಕಬೀರ, ಮೀರಾಬಾಯಿ, ರಾಮ-ರಹೀಮ್ – ಎಲ್ಲ ಸಂತರ ಬೋಧನೆಗಳನ್ನು ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಬಳಸಿಕೊಂಡರು. ಧರ್ಮ ಸೌಹಾರ್ದ ಮತ್ತು ಅಹಿಂಸೆ ಅವರ ರಾಜಕೀಯ ಅಸ್ತ್ರಗಳಾದವು.
ಜವಾಹರಲಾಲ್ ನೆಹರೂ
ನೆಹರೂ ಅವರು ಪ್ರತಿಪಾದಿಸಿದ ವೈವಿಧ್ಯತೆಯಲ್ಲಿ ಏಕತೆ' ತತ್ವವು ಬಹು ಸಂಸ್ಕೃತಿಯನ್ನು ರಕ್ಷಿಸುವ ಕವಚವಾಗಿತ್ತು. ದೇಶಾದ್ಯಂತ ಸಂಚರಿಸುತ್ತಿದ್ದಾಗ ರೈತ ಸಮುದಾಯವನ್ನು ಭೇಟಿಯಾಗಿ, "ಯಾರು ಈ ಭಾರತ ಮಾತೆ?" ಎಂದು ಪ್ರಶ್ನಿಸುತ್ತಿದ್ದರು. ಅವರಿಗೆ ಕೇವಲ ಪರ್ವತ-ನದಿಗಳು ಭಾರತ ಮಾತೆಯಲ್ಲ; ಭಾರತ ಮಾತೆ’ ಎಂದರೆ ದೇಶದೆಲ್ಲೆಡೆ ಹರಡಿರುವ `ಕೋಟ್ಯಂತರ ಜನರು’. ಎಂದು ತಿಳಿಸಿದರು. ನೆಹರೂ ಅವರ ಧರ್ಮನಿರಪೇಕ್ಷ ರಾಷ್ಟ್ರ-ಕಲ್ಪನೆ “ಸಬ್ಕಾ ಭಾರತ” ಎಂಬ ಆಶಯವನ್ನು ರೂಪಿಸಿತು.
ಡಾ. ಬಿ.ಆರ್. ಅಂಬೇಡ್ಕರ್
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ದಲಿತರು ಮತ್ತು ಶೋಷಿತ ವರ್ಗಗಳಿಗೆ ಕೇವಲ ರಾಜಕೀಯ ಹಕ್ಕುಗಳಷ್ಟೇ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಭರವಸೆ ನೀಡುವ ಮೂಲಕ ಸಂವಿಧಾನಕ್ಕೆ ಮಾನವೀಯ ಘನತೆ ತಂದುಕೊಟ್ಟರು. ಅವರ “ಒಂದು ವ್ಯಕ್ತಿ, ಒಂದು ಮತ, ಒಂದು ಮೌಲ್ಯ” ತತ್ವ ಜಾತಿ ಅಸಮಾನತೆಯ ವಿರುದ್ಧ ಸಂವಿಧಾನದ ಮೂಲ ಅಸ್ತ್ರ. 1976ರ 42ನೇ ತಿದ್ದುಪಡಿಯ ಮೂಲಕ ಸಂವಿಧಾನದ ಪೀಠಿಕೆಗೆ ಜಾತ್ಯತೀತ' (Secular) ಮತ್ತುಸಮಾಜವಾದಿ’ (Socialist) ಪದಗಳನ್ನು ಅಧಿಕೃತವಾಗಿ ಸೇರಿಸಲಾಯಿತು.
ಬಹುತ್ವ ಮತ್ತು ಜಾತ್ಯತೀತತೆ: ಭಾರತದ ಪರಿಕಲ್ಪನೆಯ ಆತ್ಮ
“ಭಾರತದ ಪರಿಕಲ್ಪನೆ” ಎಂದರೆ ಒಂದು ಭೌಗೋಳಿಕ ಹಕ್ಕು ಮಾತ್ರವಲ್ಲ, ಅದೊಂದು ನಾಗರಿಕ ಗುರುತು. ಒಬ್ಬ ತಮಿಳ್ ಹಿಂದೂ, ಒಬ್ಬ ಕಾಶ್ಮೀರಿ ಮುಸ್ಲಿಂ, ಒಬ್ಬ ಪಂಜಾಬಿ ದಲಿತ, ಒಬ್ಬ ಕೇರಳ ಕ್ರಿಶ್ಚಿಯನ್ ಎಲ್ಲರೂ ಒಂದೇ ಸಂವಿಧಾನದ ನಾಗರಿಕರು ಎಂಬ ಸತ್ಯ ಈ ಕಲ್ಪನೆಯ ತಿರುಳು. ಇದರ ಕೇಂದ್ರದಲ್ಲಿ ನಾಲ್ಕು ಮೌಲ್ಯಗಳಿವೆ:
- ಬಹುಸಂಸ್ಕೃತಿಕತೆ – ವೈವಿಧ್ಯತೆಯನ್ನು ದೌರ್ಬಲ್ಯವಾಗಿ ಅಲ್ಲ, ಬಲವಾಗಿ ನೋಡುವ ದೃಷ್ಟಿ
- ಕಾನೂನಿನ ಮುಂದೆ ಸಮಾನತೆ- ಧರ್ಮ-ಜಾತಿ ಯಾವುದಾಗಿರಲಿ, ನ್ಯಾಯ ಒಂದೇ
- ಪ್ರಜಾಸತ್ತಾತ್ಮಕ ಚರ್ಚೆ- ಅಸಮ್ಮತಿ ಪ್ರಜಾಪ್ರಭುತ್ವದ ಜೀವ, ದ್ರೋಹವಲ್ಲ
- ಸಂವಿಧಾನದ ಮೇಲುಗೈ- ಯಾವ ಸಿದ್ಧಾಂತವೂ ಸಂವಿಧಾನಕ್ಕಿಂತ ದೊಡ್ಡದಲ್ಲ
“ಎಲೈ ಮಾನವರೇ! ನಾವು ನಿಮ್ಮನ್ನು ಒಂದು ಗಂಡು ಮತ್ತು ಹೆಣ್ಣಿನಿಂದ ಹುಟ್ಟಿಸಿದೆವು; ನೀವು ಪರಸ್ಪರ ಪರಿಚಯ ಮಾಡಿಕೊಳ್ಳಲೆಂದು ನಿಮ್ಮನ್ನು ಬೇರೆ ಬೇರೆ ಜನಸಮೂಹಗಳು ಮತ್ತು ಬುಡಕಟ್ಟುಗಳನ್ನಾಗಿ ಮಾಡಿದೆವು. ನಿಶ್ಚಯವಾಗಿ, ಅಲ್ಲಾಹನ ಕಣ್ಣಲ್ಲಿ ನಿಮ್ಮಲ್ಲಿ ಅತ್ಯಂತ ಗೌರವಾನ್ವಿತರು- ನಿಮ್ಮಲ್ಲಿ ಅತ್ಯಂತ ಒಳ್ಳೆಯ ನಡತೆಯವರು. ಅಲ್ಲಾಹನು ಎಲ್ಲ ಬಲ್ಲ, ಎಲ್ಲ ತಿಳಿದವನು.”
ಪವಿತ್ರ ಕುರ್ಆನ್, ಸೂರಃ ಅಲ್-ಹುಜುರಾತ್ (49:13).
1,400 ವರ್ಷಗಳ ಹಿಂದೆ ಹೇಳಿದ ಈ ಮಾತು ಇಂದಿಗೂ ಅಷ್ಟೇ ಸತ್ಯ. ದೇವರು ನಮ್ಮನ್ನು ವಿವಿಧ ಜನಾಂಗ ಮತ್ತು ಬುಡಕಟ್ಟುಗಳಾಗಿ ಮಾಡಿದ್ದು ಪರಸ್ಪರ ಪರಿಚಯ ಮಾಡಿಕೊಳ್ಳಲು. ಭಾರತದ ವೈವಿಧ್ಯ ಬರೀ ಸಂವಿಧಾನದ ಮಾತಲ್ಲ, ಅದು ದೇವರ ಇಚ್ಛೆ. ಹಾಗಿದ್ದಮೇಲೆ ಧರ್ಮ-ಜಾತಿ ಹೆಸರಲ್ಲಿ ಜನರನ್ನು ಒಡೆಯುವವರು ಈ ದೈವಿಕ ಸಂದೇಶಕ್ಕೇ ವಿರುದ್ಧ ನಿಂತಂತೆ.
ಭಾರತದಲ್ಲಿ ಬಹುತ್ವ ಎಂಬುದು ಕೇವಲ ರಾಜಕೀಯ ನೀತಿಯಲ್ಲ, ಅದು ಇ.ಬಿ. ಹ್ಯಾವೆಲ್ ಹೇಳುವಂತೆ “ಮಾನವ ನಡವಳಿಕೆಯ ಕಾರ್ಯಕಾರಿ ಸಿದ್ಧಾಂತ” (Working hypothesis of human conduct). ಕೇರಳದಲ್ಲಿ ವಿವಿಧ ಧರ್ಮದ ಜನರು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು, ಕರ್ನಾಟಕದಲ್ಲಿ ಭಾಷಾ ವೈವಿಧ್ಯವನ್ನು ಗೌರವಿಸುವುದು, ಸೂಫಿ-ಭಕ್ತಿ ಪರಂಪರೆಯ ‘ಮಿಶ್ರ ಸಂಸ್ಕೃತಿ’. ಇವೆಲ್ಲ ಈ ಆತ್ಮದ ಜೀವಂತ ಉದಾಹರಣೆಗಳು. ಇದನ್ನು ಮಾನವನಿಷ್ಠ ಭಾರತೀಯತೆ' (Humane Indian Nationalism) ಎಂದು ಹೇಳಲಾಗುತ್ತದೆ. ನಮ್ಮದು ಯಾವುದೇ ಮತೀಯ ಸಂಕುಚಿತತೆಯಿಂದ ಮುಕ್ತವಾದ ರಾಷ್ಟ್ರೀಯತೆ. ಆದರೆ ಇಂದು ಇದೇಮಿಶ್ರ ಸಂಸ್ಕೃತಿ’ ತೀವ್ರ ಸೈದ್ಧಾಂತಿಕ ಒತ್ತಡಕ್ಕೆ ಒಳಗಾಗಿದೆ. ಇಂದು ಆ ಕಲ್ಪನೆ ತನ್ನ ಇತಿಹಾಸದಲ್ಲೇ ಅತ್ಯಂತ ತೀವ್ರವಾದ ಪರೀಕ್ಷೆಗೆ ಒಳಗಾಗಿದೆ. ಭಾರತ ಹೇಗಿರಬೇಕು ಎಂಬ ಪ್ರಶ್ನೆ ಮತ್ತೆ ಮತ್ತೆ ಕೇಳಲಾಗುತ್ತಿದೆ ಮತ್ತು ಅದಕ್ಕೆ ಉತ್ತರ ಹುಡುಕುವುದು ಅತ್ಯಂತ ಆವಶ್ಯಕವಾಗಿದೆ.
ಪರಿಕಲ್ಪನೆಗೆ ಎದುರಾದ ಸವಾಲುಗಳು
ಹಾಗಂತ ಈ ಪರಿಕಲ್ಪನೆಗೆ 2014ರ ಮುಂಚೆ ಸವಾಲುಗಳು ಇರಲಿಲ್ಲಂತಲ್ಲ, ಈ ಕನಸು ಹುಟ್ಟಿದ ದಿನದಿಂದಲೇ ಹಲವಾರು ಸಂಘರ್ಷಗಳೊಂದಿಗೆ ಮುಖಾಮುಖಿಯಾಗುತ್ತಲೇ ಬಂದಿದೆ. 1947ರ ವಿಭಜನೆ ಹತ್ತಾರು ಲಕ್ಷ ಜನರ ಜೀವ ತೆಗೆದು, ಕೋಟ್ಯಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿ, ಎರಡು ಸಮುದಾಯಗಳ ನಡುವೆ ಆಳವಾದ ಗಾಯ ಮಾಡಿತು. ನಂತರ
- 1969 – ಅಹಮದಾಬಾದ್ ಕೋಮು ಗಲಭೆಗಳು
- 1975-77 – ತುರ್ತು ಪರಿಸ್ಥಿತಿ: ಪ್ರಜಾಸತ್ತಾತ್ಮಕ ಹಕ್ಕುಗಳ ಸ್ಥಗಿತ
- 1984 – ದೆಹಲಿ ಸಿಖ್ ನರಮೇಧ: 3,000ಕ್ಕೂ ಹೆಚ್ಚು ಸಿಖ್ರ ಸಾವು
- 1992 – ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಗಲಭೆಗಳು
- 2002 – ಗುಜರಾತ್ ಹಿಂಸಾಚಾರ: 1,000ಕ್ಕೂ ಹೆಚ್ಚು ಮೃತ, ಅಧಿಕಾಂಶ ಮುಸ್ಲಿಮರು
ಈ ಎಲ್ಲ ಸಂದರ್ಭಗಳಲ್ಲಿ ಪ್ರತಿ ಬಾರಿಯೂ ಚುನಾವಣೆ, ನ್ಯಾಯಾಂಗ, ಪ್ರತಿಭಟನೆ ಮತ್ತು ನಾಗರಿಕ ಸಮಾಜದ ಬಲದಿಂದ ಭಾರತ ಚೇತರಿಸಿಕೊಂಡಿತು.
ಹಿಂದುತ್ವದ ಉದಯ: ಸಿದ್ಧಾಂತ, ರಾಜಕಾರಣ ಮತ್ತು ಪರಿಣಾಮ
ಹಿಂದುತ್ವ ಮತ್ತು ಹಿಂದೂ ಧರ್ಮ ಒಂದೇ ಅಲ್ಲ – ಈ ವ್ಯತ್ಯಾಸ ಅರ್ಥ ಮಾಡಿಕೊಳ್ಳದೆ ಇಂದಿನ ರಾಜಕೀಯ ಚರ್ಚೆ ಸಾಧ್ಯವಿಲ್ಲ. ಹಿಂದೂ ಧರ್ಮ ಒಂದು ವೈಯಕ್ತಿಕ ಆಧ್ಯಾತ್ಮಿಕ ಪರಂಪರೆ; ಹಿಂದುತ್ವ ಒಂದು ರಾಜಕೀಯ ಸಿದ್ಧಾಂತ.
ಹಿಂದುತ್ವದ ಮೂಲ ಮತ್ತು ವ್ಯಾಖ್ಯಾನ
ವಸಾಹತುಶಾಹಿ ಕಾಲದ ಅಸ್ಥಿರತೆಯಿಂದ ಉದಯಿಸಿದ ಹಿಂದುತ್ವ, ಹಿಂದೂ ಧರ್ಮದ ಆಧ್ಯಾತ್ಮಿಕ ಅಂಶಗಳಿಗಿಂತ ಹೆಚ್ಚಾಗಿ ರಾಜಕೀಯ ಅಸ್ತಿತ್ವದ ಮೇಲೆ ಕೇಂದ್ರೀಕರಿಸುತ್ತದೆ. ವಿ.ಡಿ. ಸಾವರ್ಕರ್ ಅವರು 1923ರಲ್ಲಿ ಬರೆದ `ಎಸೆನ್ಷಿಯಲ್ಸ್ ಆಫ್ ಹಿಂದುತ್ವ’ ಕೃತಿಯಲ್ಲಿ ಇದನ್ನು ಸ್ಪಷ್ಟಪಡಿಸಿದರು: ಹಿಂದುತ್ವ ಕೇವಲ ಧರ್ಮವಲ್ಲ, ಅದೊಂದು ‘ಜನಾಂಗೀಯ ಮತ್ತು ರಾಜಕೀಯ ಗುರುತು’. 1925ರಲ್ಲಿ ಈ ಸಿದ್ಧಾಂತದ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆಯಾಯಿತು.
ಸಾವರ್ಕರ್ ಅವರ ವ್ಯಾಖ್ಯಾನದಂತೆ, ಭಾರತೀಯ ಮೂಲದ್ದಲ್ಲದ ಧರ್ಮಗಳನ್ನು (ವಿಶೇಷವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ) ಅನುಸರಿಸುವವರು ಈ ದೇಶದ ಪೂರ್ಣ ನಾಗರಿಕರಲ್ಲ. ಈ ಸಿದ್ಧಾಂತ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಚುನಾವಣಾ ರಾಜಕೀಯದಲ್ಲಿ ಪ್ರಭಾವಿಯಾಗಿದೆ; 2014 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನೊಂದಿಗೆ ಅದು ರಾಷ್ಟ್ರ ರಾಜ ಕಾರಣದಲ್ಲಿ ಮುಖ್ಯ ವಾಹಿನಿಗೆ ಬಂದಿದೆ.
ಸಂಸ್ಥೆಗಳ ಮೇಲಿನ ಪ್ರಭಾವ
ಇದರ ಪ್ರಭಾವ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ, ವಿಶ್ವವಿದ್ಯಾಲಯಗಳ ನೇಮಕಾತಿ, ಮಾಧ್ಯಮಗಳ ಮೇಲೆ ಹಿಡಿತ, ನ್ಯಾಯಾಂಗ ನೇಮಕ – ಇವೆಲ್ಲದರಲ್ಲೂ ಸಂಸ್ಥೆಗಳ ತಟಸ್ಥತೆ ಪ್ರಶ್ನಾರ್ಹವಾಗಿದೆ.
ಇಂದು `ಅತಿ-ರಾಷ್ಟ್ರೀಯತೆ’ (Hyper-nationalism) ಎಂಬುದು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಸಾಧನವಾಗಿ ಬಳಕೆಯಾಗುತ್ತಿದೆ. ಪ್ರತಿಭಟನಾಕಾರರನ್ನು “ಟುಕಡೆ-ಟುಕಡೆ ಗ್ಯಾಂಗ್”, “ಆಂದೋಲನ ಜೀವಿ”, ಅರ್ಬನ್ ನಕ್ಸಲ್ ಮತ್ತು “ಖಲಿಸ್ತಾನಿ ಅಜೆಂಡಾ” ಹೊಂದಿರುವವರು ಎಂದು ಹಣೆಪಟ್ಟಿ ಹಚ್ಚುವ ಮೂಲಕ, ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಅಸಮ್ಮತಿಯನ್ನೇ ಅಪರಾಧೀಕರಿಸಲಾಗುತ್ತಿದೆ.
ಚಿದಂಬರಂ ಅವರ “ಅಂಡಾಂಟೆಡ್” ಕೃತಿಯಲ್ಲಿ ಹೇಳಿದಂತೆ, “ಭಯ ಮತ್ತು ಸ್ವಾತಂತ್ರ್ಯ ಜೊತೆಗಿರಲು ಸಾಧ್ಯವಿಲ್ಲ.”
ಗೋರಕ್ಷಕರಿಂದ 2015-25ರ ನಡುವೆ ನೂರಾರು ಲಿಂಚಿಂಗ್ ಘಟನೆಗಳು ದಾಖಲಾಗಿವೆ (ಅಧಿಕಾಂಶ ಮುಸ್ಲಿಮರ ಮೇಲೆ). ಮಸೀದಿ-ಚರ್ಚ್ ಧ್ವಂಸ, ಲವ್ ಜಿಹಾದ್ ಪ್ರಚಾರ, “ಘರ್ ವಾಪಸಿ” ಕ್ಯಾಂಪೇನ್, ಇವು ಒಂದು ಸಾಂಸ್ಕೃತಿಕ ಯುದ್ಧದ ರೂಪ ತಳೆದಿವೆ. ಅಯೋಧ್ಯೆ ರಾಮಮಂದಿರ ವಿಷಯ ಒಂದು ಸಂಕೀರ್ಣ ಕಾನೂನು ವ್ಯಾಜ್ಯವಾಗಿ ಶುರುವಾಗಿ, ಅಂತಿಮವಾಗಿ ಚುನಾವಣಾ ಅಸ್ತ್ರವಾಯಿತು.
ಭಾರತೀಯ ಮುಸ್ಲಿಮರು: ಪಾರಂಪರಿಕ ಪಾಲುದಾರರು, ಆಧುನಿಕ ಆರೋಪಿಗಳು
ಭಾರತೀಯ ಮುಸ್ಲಿಮರು ಈ ನೆಲದ ಸಂಸ್ಕೃತಿ, ಸಂಗೀತ, ವಾಸ್ತುಶಿಲ್ಪ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವಿಭಾಜ್ಯ ಪಾತ್ರ ವಹಿಸಿದ್ದಾರೆ. ಖಾನ್ ಅಬ್ದುಲ್ ಗಫಾರ್ ಖಾನ್ರಿಂದ ಮೌಲಾನಾ ಅಬುಲ್ ಕಲಾಂ ಆಝಾದ್ರವರೆಗೆ, ಅಸಂಖ್ಯ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ರಕ್ತ ಸುರಿಸಿದ್ದಾರೆ. ಆದರೆ 1947ರ ವಿಭಜನೆ ಒಂದು ಮಾನಸಿಕ ಕಂದಕ ಸೃಷ್ಟಿಸಿತು. ಮುಸ್ಲಿಮರ ನಿಷ್ಠೆ ಯಾವಾಗಲೂ ಅನುಮಾನಕ್ಕೆ ಗುರಿ ಯಾಗುವಂತಹ ವಾತಾವರಣಕ್ಕೆ ಕಾರಣ ವಾಯಿತು.
ಕೋಮು ಹಿಂಸೆ ಮತ್ತು ಕಾನೂನು ಅಸಮಾನತೆ
2002ರ ಗುಜರಾತ್ ಹಿಂಸಾಚಾರ ಒಂದು ಐತಿಹಾಸಿಕ ಕಳಂಕ. ಸರ್ಕಾರಿ ತನಿಖೆ ಮತ್ತು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗಳ ಪ್ರಕಾರ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, ಅಧಿಕಾಂಶ ಬಲಿಪಶುಗಳು ಮುಸ್ಲಿಮರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ “ಗೋ ರಕ್ಷಣೆ” ಹೆಸ ರಿನ ಗುಂಪುಗಳ ಕೈಯಲ್ಲಿ ಮುಹಮ್ಮದ್ ಅಖ್ಲಾಖ್ (2015), ಪೆಹ್ಲು ಖಾನ್ (2017) ರಂತಹ ಹಲವರ ಹತ್ಯೆ ನಡೆಯಿತು. ಈ ಎಲ್ಲಾ ಘಟನೆಗಳಲ್ಲಿ ಸಂಪೂರ್ಣ ನ್ಯಾಯ ಸಿಗಲಿಲ್ಲ, ಆರೋಪಿಗಳಿಗೆ ಸೂಕ್ತ ಶಿಕ್ಷೆ ಯಾಗಲಿಲ್ಲ.
ರಾಜಕೀಯ ಬಹಿಷ್ಕಾರ
2024ರ ಚುನಾವಣೆ 240 ಸ್ಥಾನ ಗೆದ್ದಾಗ ಆಗಲಿ, 2019ರ ಲೋಕಸಭೆ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆದ್ದ ಆಡಳಿತಾರೂಢ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದರಿಲ್ಲದಿರುವುದು ಈ ಸಮುದಾಯದ ರಾಜಕೀಯ ಬಹಿಷ್ಕಾರದ ತೀವ್ರತೆಗೆ ಸಾಕ್ಷಿ. ಖ್ಯಾತ ವಿದ್ವಾಂಸ ಕ್ರಿಸ್ಟೋಫ್ ಜಾಫ್ರೆಲೋ ವಿವರಿಸುವಂತೆ, ಭಾರತವು ಇಂದು “ವಾಸ್ತವಿಕ ಜನಾಂಗೀಯ ಪ್ರಜಾಪ್ರಭುತ್ವ” (De facto Ethnic Democracy) ಆಗಿ ಬದಲಾಗುತ್ತಿದೆ. ಸಂವಿಧಾನದ ಪ್ರಕಾರ ಎಲ್ಲರೂ ಸಮಾನರಾಗಿದ್ದರೂ, ಪ್ರಾಯೋ ಗಿಕವಾಗಿ ಬಹುಸಂಖ್ಯಾತರಿಗೆ ಹೆಚ್ಚಿನ ಹಕ್ಕುಗಳು ಲಭ್ಯ.
ನೀತಿ ತಾರತಮ್ಯ
ತ್ರಿವಳಿ ತಲಾಖ್ ಕಾಯ್ದೆ, ಪೌರತ್ವ ತಿದ್ದುಪಡಿ ಕಾಯ್ದೆ (CAA), ರಾಷ್ಟ್ರೀಯ ಪೌರತ್ವ ನೋಂದಣಿ (NRC), ಹಿಜಾಬ್ ನಿಷೇಧ, ಅಜಾನ್ ವಿರೋಧ – ಇವೆಲ್ಲ ಮುಸ್ಲಿಮರ ಅಸ್ತಿತ್ವವನ್ನೇ ರಾಜಕೀಯ ವಿಷಯವಾಗಿ ಪರಿವರ್ತಿಸಿವೆ.
ಒಬ್ಬ ಮುಸ್ಲಿಂ ಎಲ್ಲೋ ಅಪರಾಧ ಎಸಗಿದರೆ
ಅದು ಸಂಪೂರ್ಣ ಸಮುದಾಯದ ಮೇಲೆ ಆರೋಪ ಎಸಗಲು ಉಪಯೋಗಿಸಿಕೊಳ್ಳಲಾಗುತ್ತಿದೆ; ಆದರೆ ಇತರ ಸಮುದಾಯಗಳ ಅಪರಾಧಗಳು ವ್ಯಕ್ತಿಗತ ಘಟನೆಗಳಾಗಿ ಉಳಿಯುತ್ತವೆ. ಹಬ್ಬ-ಮೆರವಣಿಗೆಗಳನ್ನು ಮುಸ್ಲಿಂ ಮಹಲ್ಲಾ ಮತ್ತು ಮಸೀದಿಗಳ ಮುಂದೆ ಪ್ರಚೋದಕ ರೀತಿಯಲ್ಲಿ ನಡೆಸುವುದು, ಆರ್ಥಿಕ ಬಹಿಷ್ಕಾರದ ಕರೆ ನೀಡುವುದು. ಇಂತಹ ಪ್ರವೃತ್ತಿಗಳು ನಾಗರಿಕ ಜೀವನದಲ್ಲಿ ಮುಸ್ಲಿಮರ ಭಾಗವಹಿಸುವಿಕೆಯನ್ನು ಸಂಕುಚಿತಗೊಳಿಸುತ್ತಿವೆ.
ವಿರೋಧ ಪಕ್ಷಗಳಾದ ಕಾಂಗ್ರೆಸ್ ಮುಂತಾದವು ಹಿಂದು ಮತಗಳನ್ನು ಕಳೆದುಕೊಳ್ಳುವ ಭಯದಿಂದ “ಮೃದು ಹಿಂದುತ್ವ” (Mild Hindutva) ಪಾಲಿಸು ತ್ತಿರುವುದು ಅಲ್ಪಸಂಖ್ಯಾತರ ಸ್ಥಿತಿಯನ್ನು ಇನ್ನಷ್ಟು ಅಸಹಾಯಕವಾಗಿಸಿದೆ.
ದಲಿತರು ಮತ್ತು ಒಬಿಸಿಗಳು: ಸಮಾನತೆಯ ಅಪೂರ್ಣ ಯಾತ್ರೆ
ಹಿಂದಿಯಲ್ಲಿ ಒಂದು ಹೇಳಿಕೆ ಇದೆ – “ಜಾತಿ ಹೈ ಕೆ ಜಾತಿ ನಹಿ” ಅಂದರೆ ಜಾತಿ ಎಂಬುದು ಭಾರತದ ಆಳದಲ್ಲಿ ಬೇರು ಬಿಟ್ಟ ಅಸಮಾನತೆ. ಸಾವಿರ ವರ್ಷಗಳ ಅಸ್ಪೃಶ್ಯತೆ, ದೌರ್ಜನ್ಯ ಮತ್ತು ನಿರಾಕರಣೆಯ ಇತಿಹಾಸ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಮೀಸಲಾತಿ ನೀತಿ, ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆ (1989), ಪಂಚಾಯತ್ ರಾಜ್ ಪ್ರಾತಿನಿಧ್ಯ, ಇವು ಸಾಮಾಜಿಕ ನ್ಯಾಯದ ಪ್ರಯಾಣದ ಮಹತ್ವದ ಹೆಜ್ಜೆಗಳು. ಆದರೆ ಹಿಂಸೆ ಮತ್ತು ದಮನ ನಿಂತಿಲ್ಲ. 2018ರ ಭೀಮಾ-ಕೊರೇಗಾಂವ್ ಗಲಭೆ, ಉನ್ನಾವ್ ಮತ್ತು ಹಾಥ್ರಸ್ನ ಅತ್ಯಾ ಚಾರ-ಹತ್ಯೆ ಪ್ರಕರಣಗಳು ರಾಷ್ಟ್ರಾದ್ಯಂತ ಆತಂಕ ಹುಟ್ಟಿಸಿದವು. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ವರದಿ ಪ್ರಕಾರ ದಲಿತರ ವಿರುದ್ಧ ವರ್ಷಕ್ಕೆ 70,000ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಸ್ವತಃ ಸರ್ಕಾರಿ ದಾಖಲೆಗಳ ಪ್ರಕಾರ, manual scavenging ಪದ್ಧತಿ ಕಾನೂನಿನಲ್ಲಿ ನಿಷೇಧಿತ ವಾದರೂ ಇನ್ನೂ ಮುಂದುವರೆಯುತ್ತಿದೆ.
ಉನ್ನತ ಶಿಕ್ಷಣ, ಖಾಸಗಿ ಉದ್ಯೋಗ, ವಸತಿ ಮತ್ತು ಸಾರ್ವಜನಿಕ ಜಾಗದ ಪ್ರವೇಶದಲ್ಲಿ ಅಸಮಾನತೆ ಇನ್ನೂ ಮುಂದುವರೆಯುತ್ತಿದೆ. ಇತ್ತೀಚಿನ ಯುಜಿಸಿ ನಿಯಮಗಳ ವಿರುದ್ಧ, ಮೀಸಲಾತಿ ವ್ಯವಸ್ಥೆಯ ವಿರುದ್ಧ “ಮೆರಿಟ್” ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಸಾಮಾಜಿಕ ನ್ಯಾಯದ ಚೌಕಟ್ಟನ್ನೇ ಅಲ್ಲಾಡಿಸುವ ಪ್ರಯತ್ನಗಳಾಗಿವೆ.
ಸಂಸ್ಥೆಗಳ ಹೈಜಾಕ್: ಪ್ರಜಾಪ್ರಭುತ್ವದ ಜೀವನಾಡಿ ತಣ್ಣಗಾಗುತ್ತಿದೆಯೇ?
ಸಾಂಸ್ಥಿಕ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಜೀವನಾಡಿ. ಆದರೆ ಇಂದು ಸಂಸ್ಥೆಗಳ ವ್ಯವಸ್ಥಿತ ಕುಸಿತವು ಎದ್ದು ಕಾಣುತ್ತಿದೆ. ಚಿದಂಬರಂ ಅವರ ವಿಶ್ಲೇಷಣೆಯಂತೆ, ಇದು “ಕನಿಷ್ಠ ಸರ್ಕಾರ”ದ (Minimum Government) ಹೆಸರಿನಲ್ಲಿ ನಡೆಯುತ್ತಿರುವ “ಗರಿಷ್ಠ ಹಾನಿ” (Maximum Damage).
ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳು
ನ್ಯಾಯಾಂಗದ ಉನ್ನತ ಹಂತಗಳಲ್ಲಿ ನೂರಾರು ಹುದ್ದೆಗಳು ಖಾಲಿ ಇರುವುದು ನ್ಯಾಯದಾನ ವಿಳಂಬಕ್ಕೆ ಕಾರಣವಾಗಿದೆ. ED, IT, CBI ಮತ್ತು RBIನಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪದ ಆರೋಪಗಳಿವೆ. RBI ಬ್ಯಾಂಕಿಂಗ್ ಮೇಲ್ವಿಚಾರಣೆ ವಿಭಾಗದ ಡೆಪ್ಯುಟಿ ಗವರ್ನರ್ ಹುದ್ದೆ ದೀರ್ಘಕಾಲ ಖಾಲಿ ಇದ್ದಕ್ಕೂ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣ ಪತ್ತೆಯಾಗದಿರುವುದಕ್ಕೂ ನೇರ ಸಂಬಂಧ ಇದೆ ಎಂದು ತಜ್ಞರು ಹೇಳುತ್ತಾರೆ.
ಆರ್ಥಿಕ ಅವ್ಯವಸ್ಥೆ
ನೋಟು ಅಮಾನ್ಯೀಕರಣ ಮತ್ತು ಜಿ.ಎಸ್.ಟಿಯ ದೋಷಪೂರಿತ ಅನುಷ್ಠಾನ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿವೆ. ಹೂಡಿಕೆ ಸೂಚ್ಯಂಕ (GFCF) ಶೇ. 31.3 ರಿಂದ ಶೇ. 28.5ಕ್ಕೆ ಕುಸಿದಿರುವುದು ಆರ್ಥಿಕತೆಯ ಮಂದಗತಿಯನ್ನು ದೃಢೀ ಕರಿಸುತ್ತದೆ. ಇಂಧನ ಬೆಲೆಗಳ ಮೇಲೆ ವಿಪರೀತ ತೆರಿಗೆ ಹಾಕುವ ತಂತ್ರ ಜನ ಸಾಮಾನ್ಯರಕೊಳ್ಳುವ ಶಕ್ತಿ ತಗ್ಗಿಸಿದೆ.
ಅಯೋಧ್ಯಾ ತೀರ್ಪಿನ ವಿರೋಧಾಭಾಸ
2019ರ ಸುಪ್ರೀಂ ಕೋರ್ಟ್ ತೀರ್ಪು ಸಮಕಾಲೀನ ಭಾರತದ ನ್ಯಾಯಾಂಗ ಇತಿಹಾಸದ ವಿರೋಧಾಭಾಸವನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಮಸೀದಿ ಧ್ವಂಸವನ್ನು ಕಾನೂನು ಉಲ್ಲಂಘನೆ ಎಂದು ಕರೆದ ನ್ಯಾಯಾಲಯ, ಅಂತಿಮವಾಗಿ ಅದೇ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿತು. ಇದು “ನೈಜ ನ್ಯಾಯ”ಕ್ಕಿಂತ ಹೆಚ್ಚಾಗಿ ಬಹುಸಂಖ್ಯಾತ ರಾಜಕಾರಣಕ್ಕೆ ಮಣಿದಂತೆ ಎಂದು ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ.
ನಾಗರಿಕ ಸಮಾಜ: ಪ್ರಜಾಪ್ರಭುತ್ವದ ನಿಜವಾದ ಕಾವಲುಗಾರ
ಸರ್ಕಾರ ಮತ್ತು ಪ್ರಜೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ನಾಗರಿಕ ಸಮಾಜದ ಪಾತ್ರ ಮಹತ್ತರವಾದುದು. 19ನೇ ಶತಮಾನದ ವಿವಿಧ ಸಮಾಜ ಸುಧಾರಣೆಗಳಿಂದ ಹಿಡಿದು ಇಂದಿನ ಮಾಹಿತಿ ಹಕ್ಕು ಕಾಯ್ದೆ (RTI) ಮತ್ತು ಭ್ರಷ್ಟಾಚಾರ ವಿರೋಧಿ ಚಳುವಳಿಗಳ ವರೆಗೆ ನಾಗರಿಕ ಸಮಾಜ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ.
ನಾಗರಿಕ ಸಮಾಜ ಸಂಸ್ಥೆಗಳ ಐದು ಪ್ರಮುಖ ಹೊಣೆಗಳು:
- ವಕಾಲತ್ತು- ಧ್ವನಿ ಇಲ್ಲದವರ ಧ್ವನಿಯಾಗಿ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವುದು.
- ಸೇವಾ ವಿತರಣೆ- ಸರ್ಕಾರ ತಲುಪದ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ.
- ಕಾವಲು- ಸರ್ಕಾರದ ಭ್ರಷ್ಟಾಚಾರ ಮತ್ತು ಸಾಂವಿಧಾನಿಕ ಉಲ್ಲಂಘನೆಗಳನ್ನು ಪ್ರಶ್ನಿಸುವುದು.
- ನಾಗರಿಕ ಶಿಕ್ಷಣ- ಪ್ರಜೆಗಳಿಗೆ ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಾಗೃತಿ.
- ಸಂಘರ್ಷ ನಿವಾರಣೆ- ಸಮಾಜದಲ್ಲಿ ಒಡಕು ಉಂಟಾದಾಗ ಶಾಂತಿಗಾಗಿ ಮಧ್ಯಸ್ಥಿಕೆ.
ಆದರೆ ಇತ್ತೀಚಿನ ದಿನಗಳಲ್ಲಿ FCRA (Foreign Contribution Regulation Act) ನಿಯಮಗಳ ಬಿಗಿಗೊಳಿಸುವಿಕೆ ಮತ್ತು ರಾಜಕೀಯ ಹಸ್ತಕ್ಷೇಪದ ಮೂಲಕ ಈ ಸಂಸ್ಥೆಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಕಾಮಿಡಿಯನ್ ಮಾಡುವ ಹಾಸ್ಯವನ್ನು ಸಹಿಸಿಕೊಳ್ಳದೆ, ಸೋಷಿಯಲ್ ಮೀಡಿಯಾಗಳ ಮೇಲೆ ಸಹ ಕಡಿವಾಣ ಹಾಕುವ ಕೆಲಸ ನಡೆದಿದೆ. ಇದು ರಾಷ್ಟ್ರದ “ನೈತಿಕ ಸಾಕ್ಷಿ”ಯನ್ನು (Moral Conscience) ಮೌನಗೊಳಿಸುವ ಪ್ರಯತ್ನವಾಗಿದೆ.
ಮುಂದಿನ ದಾರಿ
ಭಾರತದ ಪರಿಕಲ್ಪನೆಯನ್ನು ಪುನರುಜ್ಜೀವನಗೊಳಿಸಲು ಕೇವಲ ಭಾವನಾತ್ಮಕ ಕರೆ ಸಾಲದು – ಕ್ರಿಯಾಶೀಲ, ಸ್ಪಷ್ಟ ಕ್ರಮಗಳು ಅಗತ್ಯ:
- ಸಂಸ್ಥೆಗಳ ಸ್ವಾಯತ್ತತೆ ಪುನಃ ಸ್ಥಾಪಿಸಬೇಕು
ನ್ಯಾಯಾಂಗ, ಚುನಾವಣಾ ಆಯೋಗ, CBI, ಮಾಧ್ಯಮ – ಇವೆಲ್ಲ ರಾಜಕೀಯ ಒತ್ತಡದಿಂದ ಮುಕ್ತವಾಗಿ ಕಾರ್ಯ ನಿರ್ವಹಿಸಬೇಕು. ನ್ಯಾಯಾಧೀಶರ ಖಾಲಿ ಹುದ್ದೆಗಳನ್ನು ತ್ವರಿತ ವಾಗಿ ಭರ್ತಿ ಮಾಡಬೇಕು. ಈ ಎಲ್ಲಾ ಸಂಸ್ಥೆಗಳಲ್ಲಿ ಹಿಂದುಳಿದ ಮತ್ತು ದಮನಿತರಿಗೆ ಸರಿಯಾದ ಪ್ರತಿನಿಧಿತ್ವ ದೊರೆಯಬೇಕು. ಸೂಕ್ತ ಪ್ರತಿನಿಧಿತ್ವ, ಸಾಂಸ್ಥಿಕ ಶ್ರೇಷ್ಠತೆ ಇಲ್ಲದೆ ನ್ಯಾಯ ಸಾಧ್ಯವಿಲ್ಲ. - Marginalised ಅಂದರೆ ಅಂಚಿನ ಸಮುದಾಯಗಳ ಸಮಗ್ರ ಅಭಿವೃದ್ಧಿ
ಮೀಸಲಾತಿಯನ್ನು ಕೇವಲ ರಾಜಕೀಯ ಅಸ್ತ್ರವಾಗಿ ಅಲ್ಲ, ನಿಜವಾದ ಸಾಮಾಜಿಕ ನ್ಯಾಯದ ಸಾಧನವಾಗಿ ಬಳಸಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ, ನ್ಯಾಯಾಂಗ ಮತ್ತು ಇತರ ಉನ್ನತ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ನಿರ್ದಿಷ್ಟ ಮತ್ತು ಸೂಕ್ತ ಪ್ರತಿನಿಧಿತ್ವ ನಿಗದಿ ಮಾಡಬೇಕು. - ಕೋಮು ಹಿಂಸೆ ಮತ್ತು ದ್ವೇಷ ಅಪರಾಧಗಳಿಗೆ ತ್ವರಿತ ನ್ಯಾಯ
ಕೋಮು ಹಿಂಸಾಚಾರ, ಗುಂಪು ಹತ್ಯೆ, ದ್ವೇಷ ಭಾಷಣ – ಇವಕ್ಕೆ ಮೊಕದ್ದಮೆ ತ್ವರಿತವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತರ ಧರ್ಮ ಮತ್ತು ಜಾತಿ ಏನೇ ಇರಲಿ, ನ್ಯಾಯ ಒಂದೇ ಮಾನದಂಡದಿಂದ ಸಿಗಬೇಕು. - ನಾಗರಿಕ ಶಿಕ್ಷಣ ಮತ್ತು ಬಹುತ್ವದ ಸಂಸ್ಕೃತಿ
ಶಾಲಾ ಮಟ್ಟದಿಂದ ಸಂವಿಧಾನದ ಮೌಲ್ಯಗಳನ್ನು, ಬಹುತ್ವದ ಇತಿಹಾಸವನ್ನು, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಲಿಸಬೇಕು. ಸಮುದಾಯಗಳ ನಡುವೆ ಸಂವಾದ ಮತ್ತು ಪರಿಚಯಕ್ಕಾಗಿ ಸಾರ್ವಜನಿಕ ವೇದಿಕೆಗಳನ್ನು ನಿರ್ಮಿಸಬೇಕು. - ಕೇಂದ್ರೀಕರಣ ತಗ್ಗಿಸಿ, ಸ್ಥಳೀಯ ಉತ್ತರದಾಯಿತ್ವ ಬೆಳೆಸಬೇಕು
ಪಂಚಾಯತ್, ಪುರಸಭೆ, ಜಿಲ್ಲಾ ಮಟ್ಟದ ಸಂಸ್ಥೆಗಳನ್ನು ಬಲಪಡಿಸಿ, ಜನರು ತಮ್ಮ ನಿರ್ಧಾರಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಪರಕೀಯ ಭಾವ ತಗ್ಗಿದಾಗ ಮಾತ್ರ ಪ್ರಜಾಸತ್ತೆ ಗಟ್ಟಿಯಾಗುತ್ತದೆ.
ಭಾರತದ ಘನತೆ ಉಳಿಸುವ ಹೊಣೆ ನಮ್ಮದು
ಭಾರತದ ಪರಿಕಲ್ಪನೆ ಇಂದು ಅಸ್ತಿತ್ವದ ಸಂಕಟದಲ್ಲಿದೆ. ಆದರೆ ಅದು ಸತ್ತಿಲ್ಲ, ಅದು ಉಸಿರಾಡಲು ಹೆಣಗುತ್ತಿದೆ. ಅದನ್ನು ಮತ್ತೆ ಜೀವಂತಗೊಳಿಸಲು ಇತಿಹಾಸದ ಅಸ್ವಸ್ಥ ಸತ್ಯಗಳನ್ನು ಎದುರಿಸಬೇಕು, ಮುಸ್ಲಿಮರ ಮೇಲಿನ ಅನ್ಯಾಯ, ದಲಿತರ ಮೇಲಿನ ದೌರ್ಜನ್ಯ, ಸಂಸ್ಥೆಗಳ ದುರ್ಬಲಗೊಳಿಸುವಿಕೆ – ಇವನ್ನು ನಿರ್ಲಕ್ಷ್ಯ ಮಾಡಿ ರಾಷ್ಟ್ರ ಕಟ್ಟಲಾಗದು.
ಕೇವಲ ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ ಎಂಬ ಘೋಷಣೆಗಳಿಂದ ಪ್ರಯೋಜನವಿಲ್ಲ ಅದು ತಳ ಮಟ್ಟದಲ್ಲಿ ಜಾರಿಯಾಗಬೇಕು.
ಧರ್ಮ ಸಂಸದ್ಗಳಲ್ಲಿ ಮುಸ್ಲಿಮರ ವಿರುದ್ಧ ಕೇಳಿಬಂದ ಹತ್ಯೆಯ ಕರೆಗಳು `Genocide Watch’ ಅಂತಹ ಅಂತರ ರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಕೆ ನೀಡುವಂತೆ ಮಾಡಿದೆ. ಇತಿಹಾಸವು ನಮಗೆ ಕಲಿಸಿರುವ ಪಾಠ: ಬಹುಸಂಖ್ಯಾತವಾದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಶಿಥಿಲಗೊಳಿಸಬಹುದು. ಭಾರತದ ವೈವಿಧ್ಯತೆ ಎಷ್ಟು ಸಮೃದ್ಧವಾಗಿದೆಯೆಂದರೆ, ಸಂಪೂರ್ಣ ಏಕರೂಪತೆ ಹೇರುವುದು ಸುಲಭವಲ್ಲ, ಇದೇ ನಮ್ಮ ಆಶಾಕಿರಣ.
ರಾಷ್ಟç ಎಂಬುದು ದ್ವೇಷದ ಆಧಾರದ ಮೇಲೆ ಕಟ್ಟುವ ಗೋಡೆಯಲ್ಲ, ಅದು ಪರಸ್ಪರ ಗೌರವ ಮತ್ತು ಮಾನವೀಯತೆಯ ಮೇಲೆ ನಿರ್ಮಾಣವಾಗಬೇಕಾದ ಸೇತುವೆ. “ಭಾರತ ಮಾತೆಯ ಜಯಘೋಷ ಅವಳ ಕೆಲವು ಮಕ್ಕಳ ಆಕ್ರಂದನ ಮತ್ತು ಸಂಕಟದ ಮೇಲೆ ಮೊಳಗಲು ಸಾಧ್ಯವಿಲ್ಲ.”
ಇದು ಕೇವಲ ಒಂದು ರಾಜಕೀಯ ಪಕ್ಷದ ವಿರುದ್ಧದ ಹೋರಾಟವಲ್ಲ. ಇದು ನಮ್ಮ ನಾಗರಿಕತೆಯ ಘನತೆಯನ್ನು ಉಳಿಸಿಕೊಳ್ಳುವ “ಹೊಸ ಸ್ವಾತಂತ್ರ್ಯ ಸಂಗ್ರಾಮ”. ಭಾರತದ ಭವಿಷ್ಯ ನಮ್ಮ ಕೈಯಲ್ಲಿದೆ, ಭವಿಷ್ಯದ ಭಾರತವನ್ನು ನಾವು ಯಾವ ರೀತಿಯಲ್ಲಿ ನಿರ್ಮಿಸಬೇಕೆಂದು ತೀರ್ಮಾನಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದೆ.












