ಕಣ್ಣಿನ ತಂಪಾಗಬೇಕಾದ ಮಕ್ಕಳು

0
357

✍️ ಸಿ.ಟಿ. ಶುಹೈಬ್

ದೇವನು ಕರುಣಿಸಿದ ಅನುಗ್ರಹಗಳಲ್ಲಿ ಅತ್ಯಂತ ಸಿಹಿ ಯಾದದ್ದು ಮಕ್ಕಳು. ಮಕ್ಕಳ ಬಗ್ಗೆ ಪ್ರಮುಖವಾಗಿ ಮೂರು ಪ್ರಯೋಗಗಳನ್ನು ಪವಿತ್ರ ಕುರ್‌ಆನ್ ನಡೆಸುತ್ತದೆ: ಹಿಬತ್, ಝೀನತ್ ಮತ್ತು ಫಿತ್‌ನತ್.

`ಹಿಬತ್' ಅಂದರೆ ಉಡುಗೊರೆ ಎಂದರ್ಥ. ನಮಗೊಂದು ಉಡುಗೊರೆ ದೊರೆತಾಗ ಆ ಉಡುಗೊರೆಯ ಬಗ್ಗೆ ಮಾತ್ರವಲ್ಲದೆ, ಅದನ್ನು ನೀಡಿದವರ ಬಗ್ಗೆಯೂ ಪ್ರತ್ಯೇಕವಾದ ಪ್ರೀತಿ ಉಂಟಾಗುತ್ತದೆ.

"ಅಲ್ಲಾಹ್ ಭೂಮಿ-ಆಕಾಶಗಳ ಪ್ರಭುತ್ವದ ಒಡೆಯನು. ತಾನಿಚ್ಛಿಸಿದ್ದನ್ನು ಅವನು ಸೃಷ್ಟಿಸುತ್ತಾನೆ, ತಾನಿಚ್ಛಿಸಿದವರಿಗೆ ಹೆಣ್ಣು ಮಕ್ಕಳನ್ನು ಕೊಡುತ್ತಾನೆ, ತಾನಿಚ್ಛಿಸಿದವರಿಗೆ ಗಂಡು ಮಕ್ಕಳನ್ನು ಕೊಡುತ್ತಾನೆ, ತಾನಿಚ್ಛಿಸಿದವರಿಗೆ ಗಂಡು-ಹೆಣ್ಣುಗಳೆರಡನ್ನೂ ಸೇರಿಸಿ ಕೊಡುತ್ತಾನೆ." (ಅಶ್ಶೂರಾ: 49, 50)

`ಝೀನತ್’ ಅಂದರೆ ಅಲಂಕಾರ ಎಂದರ್ಥ. “ಸಂಪತ್ತು ಮತ್ತು ಸಂತಾನಗಳು ಇಹಲೋಕ ಜೀವನದ ಅಲಂಕಾರಗಳಾಗಿವೆ” (ಅಲ್ ಕಹ್ಫ್ 46). ಈ ಲೋಕದಲ್ಲಿ ಮಕ್ಕಳು ಸಂತೋಷ ಮತ್ತು ಆನಂದವನ್ನು ನೀಡುವ ಘಟಕಗಳು. ಅದೇ ಸಮಯದಲ್ಲಿ, ಈ ಲೋಕದ ಎಲ್ಲಾ ವಿಷಯವೂ ತಾತ್ಕಾಲಿಕ ಮತ್ತು ನಶ್ವರವಾಗಿದೆ. ಯಾವುದೇ ಕ್ಷಣದಲ್ಲಿ ಅದು ಇಲ್ಲವಾಗಬಹುದು. ಆದರೆ, ಈ ಅಲಂಕಾರವನ್ನೇ ಪರಲೋಕದ ಪುಣ್ಯ ಕಾರ್ಯಗಳನ್ನಾಗಿ (ಸತ್ಕರ್ಮಗಳನ್ನಾಗಿ) ಬದಲಾಯಿಸಿದಾಗ ಅದು ಶಾಶ್ವತವಾಗಿ ಉಳಿಯುತ್ತದೆ.

`ಫಿತ್‌ನತ್’ ಅಂದರೆ ಪರೀಕ್ಷೆ ಎಂದರ್ಥ. “ನಿಮ್ಮ ಸೊತ್ತುಗಳು ಮತ್ತು ನಿಮ್ಮ ಸಂತತಿಗಳು ವಾಸ್ತವದಲ್ಲಿ ಪರೀಕ್ಷಾ ಸಾಧನಗಳೆಂದೂ ಪ್ರತಿಫಲ ನೀಡಲು ಅಲ್ಲಾಹನ ಬಳಿ ಬೇಕಾ ದಷ್ಟಿದೆಯೆಂದೂ ತಿಳಿದುಕೊಳ್ಳಿರಿ.” (ಅಲ್ ಅನ್ಫಾಲ್ 28). ಅಲ್ಲಾಹನು ನೀಡಿದ ಎಲ್ಲಾ ಅನುಗ್ರಹಗಳೂ ಪರೀಕ್ಷೆಗಳೇ ಆಗಿವೆ. ಸಂಪತ್ತು ಒಂದು ಅನುಗ್ರಹವಾಗಿರುವಂತೆಯೇ, ಅದನ್ನು ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.

ಮಕ್ಕಳ ವ್ಯಕ್ತಿತ್ವದ ವಿಕಸನದಲ್ಲಿ ಪೋಷಕರು ಅತ್ಯಂತ ಸಕ್ರಿಯ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದೇವೆಯೇ ಎಂಬ ಬಗ್ಗೆ ಅಲ್ಲಾಹನ ಮುಂದೆ ಉತ್ತರ ನೀಡಬೇಕಾಗುತ್ತದೆ.

ನಮ್ಮ ನಡವಳಿಕೆ, ಮನೆ ಮತ್ತು ಕುಟುಂಬ ವ್ಯವಸ್ಥೆಯು ಇಸ್ಲಾಮಿನ ಒಳ್ಳೆಯತನ ಮತ್ತು ಸೌಂದರ್ಯದಲ್ಲಿ ರೂಪಿತವಾದರೆ ಮಾತ್ರ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ. ಕುಟುಂಬ ಎನ್ನುವುದು ಇಸ್ಲಾಮಿನಲ್ಲಿ ಕೇವಲ ಸಂತೋಷ ಮತ್ತು ಶಾಂತಿ ಕಂಡುಕೊಳ್ಳುವ ಸ್ಥಳ ಮಾತ್ರವಲ್ಲ, ಈ ಲೋಕದಲ್ಲಿ ಒಬ್ಬ ವಿಶ್ವಾಸಿಯು ನಿರ್ವಹಿಸಬೇಕಾದ ಮಹತ್ತರ ಜವಾಬ್ದಾರಿಗಳಿಗೆ ಬೇಕಾದ ಮೌಲ್ಯಗಳು ಮತ್ತು ಗುಣಗಳನ್ನು ಬೆಳೆಸುವ ಕೇಂದ್ರವೂ ಆಗಿದೆ.

ಮಕ್ಕಳ ಮೇಲೆ ಪ್ರೀತಿಯನ್ನು ಧಾರಾಳವಾಗಿ ವ್ಯಕ್ತಪಡಿಸಬೇಕು. ಅವರ ಸಣ್ಣ ಸಾಧನೆಗಳನ್ನು ಮತ್ತು ಒಳ್ಳೆಯ ಕೆಲಸಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಬೇಕು. ತಪ್ಪುಗಳನ್ನು ತಿದ್ದುವಾಗಲೂ ಅವರ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವುದೇ ಭಿನ್ನಾಭಿಪ್ರಾಯ ತೋರಿಸಬಾರದು. ಪೋಷಕರು ಮಕ್ಕಳ ಸ್ನೇಹಿತರಾಗಲು ಪ್ರಯತ್ನಿಸಬೇಕು. ಮನೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಆ ಅಭಿಪ್ರಾಯಗಳನ್ನು ಗೌರವಿಸುವಂತಹ ವಾತಾವರಣವಿರಬೇಕು. ಅವರ ಲೋಕವನ್ನು ತಿಳಿಯಲು ಪ್ರಯತ್ನಿಸಿದಾಗ ಮಾತ್ರ ಅವರಿಗೆ ಉತ್ತಮ ಮಾರ್ಗದರ್ಶನ ನೀಡಲು ಮತ್ತು ಅವರ ಆಲೋಚನೆಗಳನ್ನು ಸಕಾರಾತ್ಮಕವಾಗಿ ಪ್ರಭಾವಿಸಲು ಪೋಷಕರಿಗೆ ಸಾಧ್ಯವಾಗುತ್ತದೆ.

ಪೋಷಕರು ತಮ್ಮ ಇಷ್ಟ-ಕಷ್ಟಗಳನ್ನು ಅಥವಾ ಸ್ವಭಾವಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ಮಕ್ಕಳಲ್ಲಿ ಕೇವಲ ವೈಯಕ್ತಿಕ ಗುಣಗಳನ್ನು ಬೆಳೆಸಿದರೆ ಸಾಲದು, ಅವರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಇತರರಿಗೆ ಸಹಾಯ ಮಾಡುವ ಗುಣವನ್ನೂ ಬೆಳೆಸಬೇಕು. ನ್ಯಾಯ, ಸತ್ಯ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಮಕ್ಕಳಿಗೆ ಪ್ರೇರಣೆ ನೀಡಬೇಕು. ಈ ಹಾದಿಯಲ್ಲಿ ಅವರು ಎದುರಿಸುವ ಸವಾಲುಗಳಲ್ಲಿ ಪೋಷಕರು ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು.