@ ಅರಫಾ ಮಂಚಿ
ಇಸ್ಲಾಮೀ ಇತಿಹಾಸವನ್ನು ಓದಿದವರಿಗೆ ಗೊತ್ತು, ಜಿಹಾದಿಲ್ಲದೆ ಮುಸ್ಲಿಮರಿಗೆ ಜೀವನವಿಲ್ಲ. ಧರ್ಮದ ದಾರಿಯ ಹೋರಾಟ ಇದು. ಇರಾನ್ ಮತ್ತು ಅಮೆರಿಕ, ಇಸ್ರೇಲ್ಗಳ ಸಂಘರ್ಷವನ್ನು ಮುಂದಿಟ್ಟು ಈ ಮಾತನ್ನು ಹೇಳುತ್ತಿಲ್ಲ. ಮುಸ್ಲಿಮರು ಯಾವ ಹಂತದಲ್ಲಿಯೂ ಹೋರಾಟದಿಂದ ಹಿಂದೆ ಸರಿದಿಲ್ಲ. ಸುರಕ್ಷೆ ಮತ್ತು ಸತ್ಯ ಸಾದರಪಡಿಸುವ ವಿಚಾರದಲ್ಲಿ ಜಗತ್ತಿನಲ್ಲಾದ ಎಲ್ಲ ಪ್ರವಾದಿಗಳೂ ಜಿಹಾದ್ಗಿಳಿದರು. ಇಬ್ರಾಹೀಂ(ಅ) ನಮ್ರೂದನ ವಿರುದ್ಧ, ಹಝ್ರತ್ ಮೂಸಾ ಫರೋವನ ವಿರುದ್ಧ, ಅಂತಿಮ ಪ್ರವಾದಿ(ಸ) ಕುರೈಶಿ ಸರದಾರರ ವಿರುದ್ಧ ಹೋರಾಡಿದರು. ಅವರಲ್ಲಿ ಅಬೂಜಹಲ್, ಅಬೂಲೆಹಬ್ ಹೆಸರು ಆಕ್ರಮಣಶೀಲ ಮನೋಭಾವಕ್ಕೆ ಹೋಲುವಂತಹದ್ದೇ ಆಗಿತ್ತು.
ಪ್ರವಾದಿ(ಸ) ತೋರಿಸಿಕೊಟ್ಟ ಮಾರ್ಗದಲ್ಲಿಯೇ ಮುಸ್ಲಿಮರು ನಡೆಯಬೇಕಾಗುತ್ತದೆ. ಆದ್ದರಿಂದ ಜಿಹಾದಿಲ್ಲದೆ ಇಸ್ಲಾಮ್ ಇಲ್ಲ ಅಂತಲೂ ಹೇಳಬಹುದು. ಮುಸ್ಲಿಮರ ನಿಟ್ಟಿನಲ್ಲಿ ಅದು ಅನಿವಾರ್ಯ ಘಟಕವಾಗಿದೆ. ಈ ಸತ್ಯ ಸ್ಥಿತಿಯನ್ನು ತಿಳಿಯದ ಮುಸ್ಲಿಮರ ಶತ್ರುಗಳು ಅನ್ಯಾಯಗಳಿಗೆ ಜಿಹಾದ್ ಎಂದು ಹೆಸರಿಟ್ಟರು. ನಿಮಗೂ ಗೊತ್ತು, ಪ್ರಚಲಿತ ಭಾರತದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಹಾಗೂ ಹತ್ತು ಹಲವು ಅಕ್ರಮಗಳಿಗೆ ಜಿಹಾದ್ನ ಹೆಸರಿಟ್ಟು ಇಂದು ಅವರೇ ಚರ್ಚೆಯಲ್ಲಿದ್ದಾರೆ. ವಾಸ್ತವದಲ್ಲಿ ಜಿಹಾದ್ ಎಂದರೆ ಧರ್ಮದ ದಾರಿಯಲ್ಲಿ ಎದುರಾಗುವ ಅಡಚಣೆಗಳ ನಿವಾರಣೆಗೆ ಮಾಡುವ ಪರಿಶ್ರಮವೂ ಸೇರಿದೆ. ತೀವ್ರ ಹಿಂದುತ್ವವಾದಿಗಳು ಆಧುನಿಕ ಭಾರತದಲ್ಲೂ, ಸ್ವಾತಂತ್ರ್ಯ ಪೂರ್ವದಿಂದಲೂ ಜಿಹಾದ್ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಬ್ರಿಟಿಷರು ಮಾಡಿದ್ದೂ ಅದೇ. ಇತಿಹಾಸದಲ್ಲಿ ಇದಕ್ಕೆ ಸಾಕ್ಷ್ಯವಿದೆ.
ಭಾರತದಲ್ಲಿ ಮುಸ್ಲಿಮರು ಮತ್ತು ಜಿಹಾದ್:
ಪ್ರವಾದಿಯವರು(ಸ) ಬದುಕಿದ್ದ ಕಾಲದಲ್ಲಿಯೇ ಅರೇಬಿಯಾದ ಸಮಾಜ ಮತ್ತು ಅಲ್ಲಿನ ಜನರಲ್ಲಿ ದೊಡ್ಡ ಮಟ್ಟದ ಪರಿವರ್ತನೆ ಬಂತು. ಒಬ್ಬನೇ ದೇವರು ಎಂಬ ಸತ್ಯದೆಡೆಗೆ ಆ ಜನರು ಪರಿವರ್ತನೆಗೊಂಡರು. ಅಲ್ಲಿ ನಡೆದ ಪರಿವರ್ತನೆಯನ್ನು ಅಲ್ಲಿನ ಜನರು ಎತ್ತಿಕೊಂಡು ಜಗತ್ತಿನುದ್ದಕ್ಕೂ ಪ್ರಚಾರದಲ್ಲಿ ತೊಡಗಿಸಿಕೊಂಡರು. ಅಂದು ನೆಲೆಯೂರಿದ್ದ ಅಂಧಕಾರ, ಮೌಢ್ಯವನ್ನು ತೊಡೆದುಹಾಕುವ ಉದ್ದೇಶ ಮತ್ತು ಇಸ್ಲಾಮ್ನ ಬೆಳಕನ್ನು ಎಲ್ಲರೂ ಪಡೆದುಕೊಳ್ಳುವಂತಾಗುವುದು ಅವರ ಗುರಿ ಆಗಿತ್ತು. ಅದಕ್ಕಾಗಿ ಪರಿಶ್ರಮಿಸಲು ತಮ್ಮ ಆಪ್ತ ಮಿತ್ರರಿರುವ ಮತ್ತು ತಾವು ಬದುಕಿದ್ದ ನೆಲವನ್ನು ಬಿಟ್ಟು ಬೇರೆ ನಾಡುಗಳಿಗೆ ವಲಸೆ ಹೋದರು. ಪರ್ಶಿಯಾ (ಈಗಿನ ಇರಾನ್), ಇರಾಕ್ನ ಅರ್ಧಭಾಗ, ಯುರೋಪ್ ಹಾಗೂ ಆಫ್ರಿಕಾಕ್ಕೂ ಅವರು ಇಸ್ಲಾಮನ್ನು ಕೊಂಡು ಹೋದರು. ಅದರಂತೆ ಅವರ ಮೂಲಕವೇ ನಮ್ಮ ಭಾರತಕ್ಕೂ ಇಸ್ಲಾಮ್ ಬಂತು. ವಿಚಾರವನ್ನು ಹೊತ್ತುಕೊಂಡು ಜಾಗೃತಿ ಮೂಡಿಸಿದ ಜನರಿಂದ ಇಸ್ಲಾಮಿನ ಮೌಲ್ಯಗಳನ್ನು ಪಸರಿಸುವ ಪ್ರಕ್ರಿಯೆ ನಡೆಯಿತು. ಈ ಪರಿಶ್ರಮ ವೈಚಾರಿಕವಾಗಿತ್ತು.
ಮಾನವೀಯತೆ ವಿರುದ್ಧ ಇದ್ದ ಶಕ್ತಿಗಳಿಂದ ದಮನಿಸಲ್ಪಟ್ಟ ಜನರು ಈ ಬೋಧನೆಯನ್ನು ಸ್ವೀಕರಿಸಿದರು. ಇಸ್ಲಾಮಿನ ಮೂಲಕ ತಮ್ಮ ವಿಮೋಚನೆ ಮಾಡಿಕೊಂಡರು; ಅಂದರೆ ಅವರು ಇಸ್ಲಾಮ್ ಸ್ವೀಕರಿಸಿದರು. ಈ ಜಿಹಾದ್ ಧರ್ಮದ ಸಂದೇಶ ಪ್ರಚಾರದ ಸ್ವಭಾವದಲ್ಲಿತ್ತು. ದಮನಿತ ಜನವರ್ಗಕ್ಕೆ ಸಾಂತ್ವನಗಳ ಜೊತೆಗೆ ವ್ಯಕ್ತಿ ಗೌರವ ಮತ್ತು ಸಮಾನತೆಯನ್ನು ಇದು ಒದಗಿಸಿಕೊಟ್ಟಿತು. ಇದು ಕೂಡ ಜಿಹಾದ್ ಆಗಿದೆ. ಅಗತ್ಯವಿರುವುದನ್ನು ಅಗತ್ಯವಿರುವವರಿಗೆ ಕೊಡುವ ಕೆಲಸ ಅವರಿಂದಾಗಿದೆ. ಹೀಗೆ ನಮ್ಮ ಭಾರತಕ್ಕೆ ಇಸ್ಲಾಮ್ ಮೊತ್ತ ಮೊದಲು ಹಿಜರಿ ಶಕೆ ಎರಡರಲ್ಲಿ ಬಂತು ಎಂದು ಶೇಖ್ ಮಕ್ದೂಂ ತಂಙಳ್ ಬರೆದಿದ್ದಾರೆ (ನೋಡಿರಿ: ತುಹ್ಫತುಲ್ ಮುಜಾಹಿದೀನ್). ಅನ್ಯಾಯಗಳು ಮತ್ತು ಅನ್ಯಾಯದಿಂದ ಲಾಭ ಎತ್ತುವವರು ರೂಪಿಸಿಕೊಟ್ಟ ಸಾಮಾಜಿಕ ಕಂದಾಚಾರಗಳಿಂದ ಜನರನ್ನು ಹೊರತೆಗೆಯುವುದು ಶಸ್ತ್ರರಹಿತ ಹೋರಾಟವೇ ಆಗಿದೆ. ಅದು ಕೂಡ ಅಲ್ಲಾಹನ ದಾರಿಯಲ್ಲಿ ನಡೆಸುವ ಪರಿಶ್ರಮವಾಗಿದೆ.
ಜಿಹಾದ್ನ ಬಗ್ಗೆ ಪವಿತ್ರ ಕುರ್ಆನಿನ ಒಂದು ವಿಶ್ಲೇಷಣೆ:
ಪವಿತ್ರ ಕುರ್ಆನ್ ಹೇಳುತ್ತದೆ: “ಅಲ್ಲಾಹನ ಮಾರ್ಗದಲ್ಲಿ ಹೋರಾಡ ಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ತನ್ನ ಕಾರ್ಯಕ್ಕಾಗಿ ನಿಮ್ಮನ್ನು ಆರಿಸಿಕೊಂಡಿರುತ್ತಾನೆ ಮತ್ತು ಧರ್ಮದಲ್ಲಿ ನಿಮಗೇನೂ ಸಂಕೀರ್ಣತೆಯನ್ನು ಇರಿಸಿಲ್ಲ. ನಿಮ್ಮ ಪಿತಾಮಹರಾದ ಇಬ್ರಾಹೀಮರ ಸಮುದಾಯದಲ್ಲಿ ಸ್ಥಿರವಾಗಿರಿ.” (ಪವಿತ್ರ ಕುರ್ಆನ್- 22:78).
ಈ ಅರ್ಥದಲ್ಲಿ ಮುಸ್ಲಿಮರಿಗೆ ಜಿಹಾದ್ ಕಡ್ಡಾಯವಾಗಿದೆ. ಆದರೆ ಜಿಹಾದ್ ಕೇವಲ ಯುದ್ಧ ಮಾತ್ರವೇ ಆಗುವುದಿಲ್ಲ. ಅಲ್ಲಾಹನು ಪ್ರವಾದಿಯವರು(ಸ) ತೋರಿಸಿಕೊಟ್ಟ ದಾರಿಯಲ್ಲಿ ಅಗತ್ಯವಿರುವ ಎಲ್ಲ ಪರಿಶ್ರಮ, ಪ್ರಯತ್ನಗಳನ್ನು ಜಿಹಾದ್ ಎಂದು ಕರೆಯಬಹುದು. ಹಿಂದುತ್ವವಾದಿಗಳು ಅಕ್ರಮಗಳಿಗೆ ನೀಡಿದ ಹೆಸರಿನಂತೆ ಜಿಹಾದ್ ಇಲ್ಲ. ಲವ್ ಮಾಡಿ ಧರ್ಮಕ್ಕೆ ಸೇರಿಸುವ ಅಧ್ಯಾಯವೇ ಇಸ್ಲಾಮಿನಲ್ಲಿಲ್ಲ. ಜಮೀನನ್ನು ಪಡೆಯಲು ಕೂಡ ಜಿಹಾದ್ ಮಾಡುವುದಿಲ್ಲ. ಜನಸಂಖ್ಯೆ ಹೆಚ್ಚಿಸುವುದು ಕೂಡ ಜಿಹಾದ್ನಲ್ಲಿ ಬರುವುದಿಲ್ಲ. ಇವೆಲ್ಲ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮರಂತಹವರು ಮಾಡುತ್ತಿರುವ ಸುಳ್ಳು ಪ್ರಚಾರಗಳು ಮಾತ್ರ ಆಗಿವೆ. ಹುಡುಗಿಯರನ್ನು ತರುವುದು ಧರ್ಮದ ಉತ್ಥಾನವಲ್ಲ, ಬದಲಾಗಿ ಅಪಮಾನವಾಗಿದೆ. ಅನ್ಯಮತೀಯ ವಿವಾಹದ ಪರಿಕಲ್ಪನೆಯೇ ಇಸ್ಲಾಮಿನದ್ದಲ್ಲ. ಮುಸ್ಲಿಮರು ಮುಸ್ಲಿಮರನ್ನೇ ಮದುವೆಯಾಗಬೇಕು. ಜನಸಂಖ್ಯೆ ಹೆಚ್ಚು-ಕಡಿಮೆ ಮಾಡುವುದು ದೈವಿಕ ನಿಷ್ಕರ್ಷೆಯಾಗಿದೆ ಎಂಬ ವಿಶ್ವಾಸವನ್ನು ಇಸ್ಲಾಮ್ ಕಲಿಸುತ್ತದೆ.
ಹೀಗಾಗಿ ಮಕ್ಕಳನ್ನು ಹುಟ್ಟಿಸುತ್ತಾ ಹೋಗಬೇಕು ಎಂದು ಇಸ್ಲಾಮ್ ಆದೇಶಿಸುವುದಿಲ್ಲ. ಮಕ್ಕಳನ್ನು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕೆಂದು ಕಲಿಸುತ್ತದೆ. ಅಂದರೆ, ಇಸ್ಲಾಮಿನ ವಿರೋಧಿಗಳು ಮಾಡುವ ಪ್ರಚಾರಕ್ಕೂ ಇಸ್ಲಾಮ್ ಪ್ರತಿಪಾದಿಸುವ ಜಿಹಾದಿಗೂ ಸಂಬಂಧವೇ ಇಲ್ಲ ಎಂಬುದನ್ನು ತಿಳಿಸು ವುದಕ್ಕೆ ಇಷ್ಟೆಲ್ಲ ಸಂಕ್ಷಿಪ್ತವಾಗಿ ಹೇಳಿದ್ದೇನೆ. ಜಿಹಾದ್ ಎಂಬುದಕ್ಕೆ ಬೇರೆ ರೀತಿಯಿದೆ ಎಂದು ಮೇಲಿನ ವಚನ ಸ್ಪಷ್ಟಪಡಿಸುತ್ತದೆ. ಆ ಹೋರಾಟ ಯಾವುದು?
ಸಿಂಧ್ ಯುದ್ಧ:
ಕೇರಳದ ನಂತರ ಇಸ್ಲಾಮ್ ಸಿಂಧ್ಗೆ ಬಂತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಅಂದರೆ ಹಜ್ಜಾಜ್ ಬಿನ್ ಯೂಸುಫ್ರ ಕಾಲದಲ್ಲಿ ಮಹಮ್ಮದ್ ಬಿನ್ ಖಾಸಿಂರವರು ಸಿಂಧ್ನ ರಾಜ ದಾಹಿರ್ನನ್ನು ಸೋಲಿಸಿ ಅಲ್ಲಿನ ರಾಜ್ಯ ಪಾಲರಾದರು. ಅವರ ಜೀವನ ರೀತಿ, ಶೈಲಿ ಮತ್ತು ಸರಳತನ ಎಲ್ಲವೂ ಇಸ್ಲಾಮಿನಂತಿದ್ದುದರಿಂದ ಅಲ್ಲಿನ ಜನರು ಇಸ್ಲಾಮ್ ಸ್ವೀಕರಿಸಿದರು. ರಾಜನನ್ನು ಸೋಲಿಸಿದ್ದಕ್ಕೆ ಅಥವಾ ಖಾಸಿಂ ಅವರಿಗೆ ಹೆದರಿ ಜನರು ಮುಸ್ಲಿಮರಾಗಲಿಲ್ಲ; ಬದಲಾಗಿ ಅಸ್ಪೃಶ್ಯತೆಯಿಂದ ಇಸ್ಲಾಮ್ ಮುಕ್ತಿ ಕೊಟ್ಟು ಸಮಾನತೆಯನ್ನು ತಂದು ಕೊಟ್ಟದ್ದಕ್ಕೆ ಇಸ್ಲಾಮನ್ನು ಸ್ವೀಕರಿಸಿದರು.
ಅರಬ್ ಮುಸ್ಲಿಮನ ಜೊತೆ ಇಲ್ಲಿನ ದಲಿತ ವಿಭಾಗದಿಂದ ಮುಸ್ಲಿಮನಾದವನು ಜೊತೆಜೊತೆಯಾಗಿ ಮಸೀದಿಯಲ್ಲಿ ನಮಿಸ ಬಹುದು ಎಂಬುದನ್ನು ಕ್ರಿಯೆಯಲ್ಲಿ ತಂದಾಗ ಮನಸೋತವರು ಇಸ್ಲಾಮ್ ಸ್ವೀಕರಿಸಿದರು. ಈಗ ಪಾಕಿಸ್ತಾನದ ಪಂಜಾಬ್ ಸಹಿತ ನಮ್ಮ ದೆಹಲಿಯ ವರೆಗೂ ಮಹಮ್ಮದ್ ಬಿನ್ ಖಾಸಿಂರ ಕಾಲದಲ್ಲಿ ಮುಸ್ಲಿಮರಾದವರ ಪೀಳಿಗೆ ಖಂಡಿತ ಇದೆ. ಇಸ್ಲಾಮ್ ಅವರ ಪಾಲಿಗೆ ತಮ್ಮ ನಾಡಿನ ದೌರ್ಜನ್ಯದ ವಿರುದ್ಧ, ಬೆದರಿಕೆಗಳಿಂದ ಮುಕ್ತರಾಗಲು ನಡೆಸಿದ ಹೋರಾಟದ ವೇದಿಕೆಯಾಗಿ ವರ್ತಿಸಿತು. ಅಗತ್ಯವಿರುವ ಧಾರ್ಮಿಕ ಕರ್ತವ್ಯಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಲು ನೀವು ನಡೆಸುವ ಹೋರಾಟವೂ ಜಿಹಾದೇ ಆಗಿದೆ.
ಸುಲ್ತಾನರ ಕಾಲದಲ್ಲಿ ಸೂಫಿಗಳು ಬಂದರು. ಅವರ ಬೋಧನೆಯ ಮೂಲಕವೂ ಇಸ್ಲಾಮ್ ಸ್ವೀಕರಿಸಿದ ಬಹಳಷ್ಟು ಜನರ ಪೀಳಿಗೆ ದೆಹಲಿ ಮುಂತಾದೆಡೆ ಇದೆ. ಆದರೆ ಸುಲ್ತಾನರಾಗಲಿ, ನಂತರದ ಮೊಘಲ್ ಅರಸರಾಗಲಿ ಇಸ್ಲಾಮನ್ನು ಭಾರತಕ್ಕೆ ಕೊಟ್ಟೇ ಇಲ್ಲ. ಅವರ ಯುದ್ಧಗಳು ಜಿಹಾದ್ನ ಭಾಗವಾಗಿಲ್ಲ ಎಂದು ಹೇಳುವುದಕ್ಕೆ ಈ ಮಾತನ್ನು ವಿವರಿಸ ಬೇಕಾಗುತ್ತದೆ. ಅವರು ರಾಜ್ಯ ವಿಸ್ತಾರಗೊಳಿಸಲು, ತಮ್ಮ ಅರಸೊತ್ತಿಗೆಯನ್ನು ವಿಶಾಲಗೊಳಿಸಲು ನೆರೆಯ ರಾಜರೊಂದಿಗೆ ಯುದ್ಧ ಮಾಡಿದರು. ಇಸ್ಲಾಮ್ ಇದನ್ನಲ್ಲ, ಜನರ ಬುದ್ಧಿಮತ್ತೆಯ ವಿಶಾಲತೆಗೆ ಪ್ರಯತ್ನಿಸುವುದನ್ನು ಬಯಸುತ್ತದೆ. ದೊರೆಗಳು, ಸುಲ್ತಾನರು ತಮಗೆ ತೋಚಿದಂತೆ ಬದುಕಿದರು. ಇವತ್ತು ಸಂಘಿಗಳು ಮುಸ್ಲಿಮರನ್ನು ಮತ್ತು ಅವರ ವಿಶ್ವಾಸವನ್ನು ಹಳಿಯುತ್ತಿದ್ದಾರೆ. ಇವರು ಮೂರ್ಖಮತಿಗಳು. ಅಂದರೆ ಈ ಸುಲ್ತಾನರ ಪ್ರವೃತ್ತಿಯನ್ನು ಇಸ್ಲಾಮಿನೊಂದಿಗೆ ಶತ್ರುಗಳು ಜೋಡಿಸಿದರು. ಜಿಹಾದ್ ಎಂದು ಅಪಮಾನಿಸಲು ಅವರು ಹೀಗೆ ಮಾಡುತ್ತಿದ್ದಾರೆ. ಇದರಿಂದ ಅವರೇ ಅಪಮಾನಗೊಳ್ಳುತ್ತಿದ್ದಾರೆ; ಅಂದರೆ ಅವರ ಅಜ್ಞಾನವೇ ಬಯಲಾಗುತ್ತಿದೆ.
ಭಾರತದಲ್ಲಿ ಜಿಹಾದ್:
ಸ್ವಾತಂತ್ರ್ಯ ಪೂರ್ವದಲ್ಲಿ ದೇವ್ಬಂದ್ನ ಉಲೇಮಾಗಳು ಜಿಹಾದ್ಗೆ ಕರೆ ಕೊಟ್ಟಿದ್ದರು. ಅದಕ್ಕೆ ಶೈಖುಲ್ ಹಿಂದ್ ಮಹ್ಮೂದುಲ್ ಹಸನ್, ವಲಿಯುಲ್ಲಾಹ್ ದೆಹಲವಿ, ಶಾ ಇಸ್ಮಾಯೀಲ್ ಅವರು ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿದೆ ಎಂದು ನೀಡಿದ ಕರೆ ಜಿಹಾದ್ಗೆ ಆಧಾರವಾಗಿತ್ತು. ಹೀಗೆ ಇದುವೇ ಭಾರತದಲ್ಲಿ ಜಿಹಾದ್ಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು ಎಂದು ನೀವು ತಿಳಿಯಬಹುದು. ಆನಂತರ ದಾರುಲ್ ಉಲೂಮ್ನ ಮಹ್ಮೂದುಲ್ ಹಸನ್ ಅವರು ಭಾರತದಿಂದ ಬ್ರಿಟಿಷರ ತೆರವಿಗೆ ಜಮೀಯ್ಯತ್ತುಲ್ ಉಲೇಮಾದ ಮೂಲಕ ಜಿಹಾದ್ಗೆ ಕರೆ ಕೊಟ್ಟರು. ಭಾರತವನ್ನು ಸ್ವಾತಂತ್ರ್ಯ ಗೊಳಿಸುವುದು ಧರ್ಮದ ಹಕ್ಕು ಎಂಬುದು ಅವರ ಪ್ರತಿಪಾದನೆಯಾಗಿತ್ತು.
ಧರ್ಮ ವಿದ್ವಾಂಸರು ಕೊಟ್ಟ ಜಿಹಾದ್ ಕರೆಯನ್ನು ಮುಸ್ಲಿಮರು ಎತ್ತಿಕೊಂಡರು. ಬ್ರಿಟಿಷರ ವಿರುದ್ಧ ನಾಗರಿಕ ಸಮರಕ್ಕಿಳಿದರು. ಜಿಹಾದ್ ಎಂಬುದು ಮುಸ್ಲಿಮರಿಗೆ ಕಡ್ಡಾಯವಾಗಿತ್ತು. ಸ್ವತಃ ಮಹ್ಮೂದುಲ್ ಹಸನ್ ಅವರು ಬ್ರಿಟಿಷರ ವಿರುದ್ಧ ಶಸ್ತ್ರ ಹೋರಾಟಕ್ಕೆ ನೇತೃತ್ವ ನೀಡಿದ್ದರು. ಅವರು ತಮ್ಮ ಶಿಷ್ಯನನ್ನು (ಉಬೈದುಲ್ಲಾಹ್ ಸಿಂಧಿ) ರಷ್ಯಾದ ಬೆಂಬಲ ಪಡೆಯಲು ಗುಪ್ತವಾಗಿ ತಾಷ್ಕೆಂಟ್ಗೂ ಕಳುಹಿಸಿದ್ದರು. ಭಾರತದ ಸ್ವಾತಂತ್ರ್ಯವು ಮುಸ್ಲಿಮರ ಧಾರ್ಮಿಕ ಅಗತ್ಯವಾಗಿದೆ ಎಂದು ಅವರು ಬಿಂಬಿಸಿದರು. ಜಮೀಯ್ಯತುಲ್ ಉಲೇಮಾದ ಇತರ ಹಲವು ಉಲೇಮಾಗಳ ನಂಬಿಕೆ ಕೂಡ ಇದೇ ಆಗಿತ್ತು.
ಮುಸ್ಲಿಮರ ಜಿಹಾದ್ ಎಂದರೆ ಯಾವುದೇ ಆಮಿಷ, ಓಲೈಕೆಗಳಿಗೆ ಬಗ್ಗುವುದಲ್ಲ ಎಂಬುದು ಬ್ರಿಟಿಷರಿಗೆ ಗೊತ್ತಿತ್ತು. ಜೊತೆಗೆ ಮುಸ್ಲಿಮರು ಜೀವದ ಹಂಗಿಲ್ಲದೆ ಹೋರಾಡುವವರು. ಅಂದು ಇದೇ ಜಿಹಾದನ್ನು ಮಹ್ಮೂದುಲ್ ಮದನಿ ಅವರು ಹೇಳಿದರು. ಅವರಿಗಿಂತ ಮೊದಲೂ ಹೇಳಿದವರಿದ್ದಾರೆ; ಅಹ್ಮದ್ ಸರ್ಹಿಂದಿ, ಶಾ ವಲಿಯುಲ್ಲಾಹ್ ದೆಹಲವಿ, ಸಯ್ಯದ್ ಅಹ್ಮದ್ ಶಹೀದ್ರಂತ ಹವರು ಇದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಟೀಪೂ ಸುಲ್ತಾನನ ಸುಧಾರಣೆಯ ಹಿನ್ನೆಲೆ ಮತ್ತು ಬ್ರಿಟಿಷರ ವಿರುದ್ಧ ಅವನೂ ಜಿಹಾದ್ಗೆ ಕರೆ ನೀಡಿದ್ದು ಬ್ರಿಟಿಷರ ಅನುಭವದಲ್ಲಿತ್ತು. ಆದರೆ ಆಧುನಿಕ ಭಾರತದಲ್ಲಿ ದೇವ್ಬಂದ್ ಉಲೇಮಾ ನೀಡಿದ ಜಿಹಾದ್ ಕರೆ ಹೆಚ್ಚು ಪ್ರಸಿದ್ಧವಾಯಿತು.
ಈ ಎಲ್ಲ ನೆಲೆಯಲ್ಲಿ ಮೊಟ್ಟಮೊದಲು ಬ್ರಿಟಿಷರೇ ಜಿಹಾದ್ ವಿರುದ್ಧ ಅಪಪ್ರಚಾರ ನಡೆಸಿದ್ದು. ಅವರನ್ನು ಹಿಂಬಾಲಿಸುತ್ತಿರುವ ಆಕ್ರಮಣಶೀಲ ಹಿಂದುತ್ವವಾದಿಗಳು ಬೇರೆ ಅಕ್ರಮಗಳಿಗೆ ಇಂದು ಜಿಹಾದ್ನ ಹೆಸರನ್ನು ಜೋಡಿಸುತ್ತಿದ್ದಾರೆ. ಜಿಹಾದನ್ನು ಅಪಮಾನಿಸುವುದು ಅವರ ಉದ್ದೇಶವಾಗಿದೆ. ಆದರೆ ಭಾರತದ ಸ್ವಾತಂತ್ರ್ಯಕ್ಕೆ ಜಿಹಾದ್ ಮಾಡಿಕೊಟ್ಟ ಮಾರ್ಗ ಮತ್ತು ಹೋರಾಟದ ಪಾತ್ರ ಇತಿಹಾಸದಲ್ಲಿದೆ. ಅವರು ಇತಿಹಾಸವನ್ನು ತಿರುಚುವುದಕ್ಕೆ ಹೊರಟದ್ದೂ ಇದಕ್ಕೇ. ಆದ್ದರಿಂದ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಶರ್ಮರಂತಹವರ ದುಷ್ಟ ಷಡ್ಯಂತ್ರ ಓದುಗರಿಗೂ ಅರ್ಥವಾಗಬಹುದು ಅನಿಸುತ್ತದೆ.
ಸಹನೆ ಕೂಡ ಜಿಹಾದ್:
ಭಾರತದಲ್ಲಿ ಮುಸ್ಲಿಮರ ಮೇಲೆ ಇಷ್ಟೆಲ್ಲ ದಾಳಿ ನಡೆದರೂ ಮುಸ್ಲಿಮರು ಸುಮ್ಮನಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಪ್ರವಾದಿಯವರ(ಸ) ಮಕ್ಕಾ ಜೀವನದ ಕಾಲದಲ್ಲಿ ಸಹನೆ ಎಂದರೆ ತಾಳ್ಮೆ, ಇನ್ನೂ ಚೆನ್ನಾಗಿ ಹೇಳುವುದಿದ್ದರೆ ಸಹಿಸುವುದು ಬಿಟ್ಟು ಬೇರೊಂದು ಹೋರಾಟ ನಡೆದಿಲ್ಲ. ಸಹನೆ ವಹಿಸುವವರೊಂದಿಗೆ ಅಲ್ಲಾಹನಿದ್ದಾನೆ ಎಂಬ ಪವಿತ್ರ ಕುರ್ಆನ್ ಬೋಧನೆಗೆ ಸರಿಯಾದಂತೆ ಮಕ್ಕಾದಲ್ಲಿ ವಹಿಸಿದ ಸಹನೆ ಇಡೀ ಇಸ್ಲಾಮಿನ ಅಸ್ತಿತ್ವವನ್ನು ಗಟ್ಟಿಪಡಿಸಿದೆ. ಇಂದು ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ದಾಳಿಯಲ್ಲಿ ಬಹುತೇಕ ಮುಸ್ಲಿಮರು ಸಹನೆಯನ್ನೇ ವಹಿಸುತ್ತಿದ್ದಾರೆ. ಸಹನೆಯೊಂದಿಗೆ ಅವರು ಮಿಥ್ಯವಾದಿಗಳ ಕೆಡುಕನ್ನು ಅಳಿಸುವುದಕ್ಕೆ ಸಂವಿಧಾನ ಕೊಟ್ಟ ಹಕ್ಕುಗಳನ್ನು ಬಳಸುತ್ತಿದ್ದಾರೆ ಎಂದರ್ಥ. ಪ್ರವಾದಿಯವರ(ಸ) ಕಾಲದಲ್ಲಿ ಮಕ್ಕಾದಲ್ಲಿ ಅಬುಜಹಲನ ತಂಡ ಅಮ್ಮಾರ್, ಅವರ ತಂದೆ ತಾಯಿಗಳನ್ನು ಕೊಂದು ಹಾಕಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಪ್ರವಾದಿಯವರು(ಸ) ಈ ಕುರೈಶಿಗಳ ತಂಡದ ವಿರುದ್ಧ ಕ್ರಮ ಜರುಗಿಸಲಿಲ್ಲ; ತಮ್ಮ ಅನುಯಾಯಿಗಳಿಗೂ ಹೇಳಲಿಲ್ಲ ಎಂಬುದು ಗಮನಿಸಬೇಕಾಗಿದೆ. ಹೌದು, ಈ ನೀತಿಯಲ್ಲಿ ನಿಂತು ಭಾರತೀಯ ಮುಸ್ಲಿಮರು ಇಂದು ಅಕ್ರಮಗಳನ್ನು ಎದುರಿಸುತ್ತಿದ್ದಾರೆ. ಹಾಗಂತ ಅವರು ಸುಮ್ಮನಿಲ್ಲ. ಭಾರತದಲ್ಲಿ ಇಸ್ಲಾಮೀ ಸಂವಿಧಾನವಿಲ್ಲ ಎಂಬುದು ನಿಮಗೂ ಗೊತ್ತು. ಭಾರತದ ಸಂವಿಧಾನ ಎಲ್ಲರಿಗೂ ಸಮಾನತೆ ನೀಡುತ್ತದೆ. ಇದು ಕೂಡ ಭಾರತೀಯ ಮುಸ್ಲಿಮರನ್ನು ಜಿಹಾದ್ನ ಸಹನೆಯ ಅಸ್ತçವನ್ನು ಎತ್ತಿಕೊಳ್ಳಲು ಪ್ರೇರೇಪಿಸುತ್ತಿದೆ. ಜಿಹಾದ್ ಗಳಲ್ಲಿ ಹಲವು ರೀತಿಗಳಿವೆ. ಆದರೆ ಜಿಹಾದ್ ಪರಿಕಲ್ಪನೆಯಿಲ್ಲದೆ ವ್ಯಾಪಾರ ವಹಿವಾಟು ನೆಪದಲ್ಲಿ ಮತ್ತು ದೌರ್ಜನ್ಯಕೋರರಿಗೆ ಹೆದರಿ ಸುಮ್ಮನಿರುವವರು ಮುಸ್ಲಿಮರೇ ಅಲ್ಲ ಎಂದು ಇಸ್ಲಾಮನ್ನು ಮುಂದಿಟ್ಟು ವ್ಯಾಖ್ಯಾನಿಸಬಹುದು.












