‘ಲವ್ ಜಿಹಾದ್’ನಿಂದ ‘ಕಾರ್ಪೊರೇಟ್ ಜಿಹಾದ್’ವರೆಗೆ: ಸವಾಲು ಮತ್ತು ವಾಸ್ತವ

0
482

✍️ ಏ.ಕೆ. ಕುಕ್ಕಿಲ

1. 2026 ಎಪ್ರಿಲ್ 13

ಮತಾಂತರ ನಿಷೇಧ ಕಾಯ್ದೆಯಡಿ ದಾಖಲಿಸಲಾಗಿದ್ದ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡಿದ್ದ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಅಬ್ದುಲ್ ಮೊಯಿನ್ ಮತ್ತು ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರು ಪೊಲೀಸ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ಎತ್ತಿಕೊಂಡರು. ಎಫ್‌ಐಆರ್‌ನಲ್ಲಿರುವ ಆರೋಪಗಳನ್ನು ಯುವತಿ ಸಂಪೂರ್ಣ ನಿರಾಕರಿಸಿರುವ ಹೊರತಾಗಿಯೂ ನೀವೇಕೆ ಪ್ರಕರಣವನ್ನು ಮುಂದುವರಿಸಿದ್ದೀರಿ? ಕೇವಲ ಅತ್ಯಾಚಾರದ ಆರೋಪವನ್ನು ಕೈಬಿಟ್ಟು ಅಪಹರಣ, ಹಲ್ಲೆ, ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣವನ್ನು ಯಾಕೆ ಮುಂದುವರಿಸಿದ್ದೀರಿ? ಸಂತ್ರಸ್ತೆಯ ಹೇಳಿಕೆ ಸ್ಪಷ್ಟವಾಗಿದೆ.

‘ತನ್ನನ್ನು ಯಾರೂ ಅಪಹರಿಸಿಲ್ಲ, ನಾನು ಮತಾಂತರವಾಗಿಲ್ಲ, ಮದುವೆಯಾಗಿಲ್ಲ, ಬಲವಂತದ ದೈಹಿಕ ಸಂಬಂಧ ನಡೆಸಲಾಗಿಲ್ಲ…’ ಎಂದು ಸಂತ್ರಸ್ತೆಯೇ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಿದ್ದರೂ ನೀವೇಕೆ ಪ್ರಕರಣವನ್ನು ಕೈಬಿಟ್ಟಿಲ್ಲ? ತಾನು ಆರೋಪಿಯೊಂದಿಗೆ ವಾಸಿಸಲು ಬಯಸುತ್ತೇನೆ ಮತ್ತು ಹಿಂದೂ ಸಂಘಟನೆಗಳಿಂದ ಹಿಂಸೆಯ ಭಯವಿದೆ… ಎಂದಾಕೆ ಹೇಳಿಕೊಂಡರೂ ಅತ್ಯಾಚಾರ ಆರೋಪದ ಹೊರತಾಗಿ ಮತಾಂತರವೂ ಸೇರಿದಂತೆ ಇನ್ನಿತರ ಆರೋಪಗಳನ್ನು ಹಾಗೆಯೇ ಯಾಕೆ ಉಳಿಸಿಕೊಂಡಿದ್ದೀರಿ… ಎಂದು ನ್ಯಾಯ ಮೂರ್ತಿಗಳು ಉತ್ತರ ಪ್ರದೇಶದ ಪೊಲೀಸರನ್ನು ಪ್ರಶ್ನಿಸಿದರು.

ಮತಾಂತರ ಕಾಯ್ದೆಯಡಿ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದ್ದು, ಇದು ಆತಂಕಕಾರಿ ಮಟ್ಟಕ್ಕೆ ತಲುಪಿದೆ, ಎಡೆಬಿಡದೇ ಈ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ, ಆದರೆ ನಂತರ ಇವುಗಳು ಆಧಾರ ರಹಿತ ಮತ್ತು ಕಪೋಲಕಲ್ಪಿತ ಎಂದು ಸಾಬೀತಾಗುತ್ತಿದೆ… ಎಂದು ನ್ಯಾಯ ಮೂರ್ತಿಗಳು ಹೇಳಿದರು. ಅಲ್ಲದೇ,

ದೂರುದಾರರಾದ ಯುವತಿಯ ತಂದೆ ಮುಂದಿನ ದಿನಾಂಕದಲ್ಲಿ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಬೇಕು ಮತ್ತು ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಉತ್ತರಿಸಬೇಕು. ಪೊಲೀಸರು ಬಾಹ್ಯ ಒತ್ತಡದಿಂದ ಇಂಥ ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ. ಕಾಪಿ ಪೇಸ್ಟ್ ಶೈಲಿಯ ಎಫ್‌ಐಆರ್‌ಗಳು ದಾಖಲಾಗುತ್ತಿವೆ. ಮತಾಂತರ ನಿಷೇಧ ಕಾಯ್ದೆಯನ್ನು ಹಿಂಸಿ ಸುವ ಟೂಲ್ ಆಗಿ ದುರುಪಯೋಗಿಸಲಾಗುತ್ತಿದೆ. ಆದ್ದರಿಂದ ರಾಜ್ಯದ ಮುಖ್ಯ ಕಾರ್ಯದರ್ಶಿ ಅಫಿದವಿತ್ ಸಲ್ಲಿಸಬೇಕು ಮತ್ತು ಇಂಥ ಆಧಾರರಹಿತ ಪ್ರಕರಣಗಳನ್ನು ತಡೆಯಲು ಏನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು… ಎಂದು ಮೊನ್ನೆ ಎಪ್ರಿಲ್ 13ರಂದು ಆದೇಶಿಸಿದೆ.

ವಿಷಯ ಏನೆಂದರೆ,

ಬಹ್ರೈಚ್‌ ಜಿಲ್ಲೆಯ ಕೊತ್ವಲಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮುಹಮ್ಮದ್ ಫೈಝಾನ್ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮುಹಮ್ಮದ್ ಫೈಝಾನ್ ತನ್ನ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ, ಆತನಿಗೆ ಬಲವಂತದ ಮತಾಂತರ ಮಾಡುವ ಮತ್ತು ಮದುವೆ ಮಾಡಿಕೊಳ್ಳುವ ಉದ್ದೇಶ ಇದೆ ಎಂದು ಯುವತಿಯ ತಂದೆ ದೂರು ಸಲ್ಲಿಸಿದ್ದರು. ಆದರೆ, ಯುವತಿ ಇದನ್ನು ಸಂಪೂರ್ಣ ನಿರಾಕರಿಸಿ ಹೇಳಿಕೆ ನೀಡಿದ್ದಳು. ಆದರೂ ಪೊಲೀಸರು ಎಫ್‌ಐಆರ್‌ನಲ್ಲಿ ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾದ ದೂರನ್ನು ಹಾಗೆಯೇ ಉಳಿಸಿಕೊಂಡು ಫೈಝಾನ್‌ನನ್ನು ಬಂಧಿಸುವುದಕ್ಕೆ ಬಲೆ ಬೀಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಆರೋಪಿಯನ್ನು ಬಂಧಿಸಬಾರದು ಮತ್ತು ಯುವತಿ ಹಾಗೂ ಆಕೆಯ ಕುಟುಂಬಕ್ಕೆ ಭದ್ರತೆಯನ್ನು ನೀಡಬೇಕು ಎಂದು ಸರಕಾರಕ್ಕೆ ಆದೇಶಿಸಿದರು.

2. 2025 ಅಕ್ಟೋಬರ್ 30

ತನ್ನ ಪತ್ನಿಯನ್ನು ಮುಸ್ಲಿಮ್ ಯುವಕ ಬಲವಂತದಿಂದ ಅಪಹರಿಸಿ ಮತಾಂತರ ಮಾಡಿದ್ದಾನೆ ಎಂದು ಉತ್ತರ ಪ್ರದೇಶದ ವ್ಯಕ್ತಿಯೋರ್ವ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡರು. ಆದರೆ ಮಹಿಳೆ ಈ ದೂರನ್ನು ನಿರಾಕರಿಸಿದ್ದಳು ಮತ್ತು ಪತಿಯ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತು ಹೋಗಿದ್ದಾನೆ, ತನ್ನನ್ನು ಅಪಹರಿಸಿಲ್ಲ, ತಾನು ಮತಾಂತರವಾಗಿಲ್ಲ ಎಂದು ಬಿಎನ್‌ಎಸ್‌ಎಸ್ ಕಾಯ್ದೆಯು 183 ಸೆಕ್ಷನ್‌ ಅಡಿ 2025 ಸೆ. 19ರಂದು ಹೇಳಿಕೆ ನೀಡಿದ್ದಳು. ಇದಾದ ಬಳಿಕವೂ ವಿಚಾರಣೆ ಮುಂದುವರಿಸಿ ಮುಸ್ಲಿಮ್ ಯುವಕನನ್ನು ಬಂಧಿಸಲಾಗಿತ್ತು.

ಈ ಪ್ರಕರಣವನ್ನು ವಿಚಾರಣೆಗೆತ್ತಿ ಕೊಂಡ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾದ ಬಬಿತಾ ರಾಣಿ ಮತ್ತು ಅಬ್ದುಲ್ ಮೊಯಿನ್ ಅವರಿದ್ದ ಪೀಠ, ಪೊಲೀಸರನ್ನು ತರಾಟೆಗೆ ತೆಗೆದು ಕೊಂಡಿತು. ಸಂತ್ರಸ್ತೆಯ ಹೇಳಿಕೆಯ ಬಳಿಕವೂ ಆರೋಪಿಗೆ ತೊಂದರೆ ಕೊಟ್ಟಿರುವುದನ್ನು ಪ್ರಶ್ನಿಸಿತು. ಮತಾಂತರ ಕಾಯ್ದೆಯನ್ನು ನಿರಪರಾಧಿಗಳನ್ನು ಹಿಂಸಿಸುವುದಕ್ಕಾಗಿ ಬಳಸಲಾಗುತ್ತಿದೆ ಎಂದು ಆಕ್ಷೇಪಿಸಿತು. ಎಫ್‌ಐಆರ್ ಮತ್ತು ಎಲ್ಲಾ ಕ್ರಮಗಳನ್ನು ರದ್ದುಪಡಿಸಿತು. ಬಂಧಿತ ವ್ಯಕ್ತಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿದ ನ್ಯಾಯಾಧೀಶರು ಸಂತ್ರಸ್ತ ವ್ಯಕ್ತಿಗೆ 50 ಸಾವಿರ ರೂಪಾಯಿ ಪರಿಹಾರ ಪಾವತಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದರು.

3. 2025 ಡಿಸೆಂಬರ್ 2

2025 ಎಪ್ರಿಲ್ 26ರಂದು ಉತ್ತರ ಪ್ರದೇಶದ ಪ್ರತಾಪ್‌ಗಢ್ ಜಿಲ್ಲೆಯ ಜೆತ್ವಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹೇಮಂತ್ ಯಾದವ್ ಎಂಬವರು ದೂರು ದಾಖಲಿಸಿದರು. ಸಬೀರ್ ಅಲಿ ಮತ್ತಿತರರು ಯುವತಿಯನ್ನು ಬಲವಂತ ದಿಂದ ಅಪಹರಿಸಿ ಮತಾಂತರ ಮಾಡಿದ್ದಾರೆ ಎಂಬ ಅವರ ದೂರಿನ ಅನ್ವಯ ಮತಾಂತರ ನಿಷೇಧ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಆದರೆ,

ಯುವತಿ ಈ ದೂರನ್ನು ನಿರಾಕರಿಸಿದಳು. ಯಾವುದೇ ಬಲವಂತದ ಅಪಹರಣ ಆಗಿಲ್ಲ, ಆಮಿಷ ನಡೆದಿಲ್ಲ, ಸ್ವಇಚ್ಛೆಯಿಂದ ಧರ್ಮ ಅನುಸರಿಸುತ್ತಿದ್ದೇವೆ… ಎಂದು ಹೇಳಿಕೆ ನೀಡಿದಳು.

ಈ ಪ್ರಕರಣವನ್ನು ವಿಚಾರಣೆಗೆ ಎತ್ತಿ ಕೊಂಡ ಹೈಕೋರ್ಟ್ ನ್ಯಾಯಾಧೀಶರಾದ ಬಬಿತಾ ರಾಣಿ ಮತ್ತು ಅಬ್ದುಲ್ ಮೊಯಿನ್ ಅವರಿದ್ದ ಪೀಠ, ಇದು ಕಾಪಿ ಪೇಸ್ಟ್ ಶೈಲಿಯ ದೂರುಗಳಾಗಿದ್ದು, ಮತಾಂತರ ನಿಷೇಧ ಕಾಯ್ದೆಯ ಕಠಿಣ ನಿಯಮಗಳನ್ನು ದುರುಪಯೋಗಿಸುವ ಉದ್ದೇಶವನ್ನು ಹೊಂದಿವೆ ಎಂದಿತು. ಎಫ್‌ಐಆರನ್ನು ರದ್ದುಗೊಳಿಸಿತು. ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಅಫಿದವಿತನ್ನು ಕೇಳಿತು. ಭವಿಷ್ಯದಲ್ಲಿ ಇಂಥ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸುವ ಮೊದಲು ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಎಚ್ಚರಿಕೆ ನೀಡಿತು. ಇದು ಕಾನೂನನ್ನು ದುರ್ಬಳಕೆ ಮಾಡುವ ಕ್ರಮವಾಗಿದ್ದು, ಪದೇ ಪದೇ ಮರುಕಳಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿತು. ಅಂದಹಾಗೆ,

ಈ ಎಲ್ಲ ಮಾಹಿತಿಯನ್ನು ಲೈವ್ ಲಾ, ಬಾರ್ & ಬೆಂಚ್, ದಿ ಹಿಂದೂ ಸಹಿತ ವಿವಿಧ ಮಾಧ್ಯಮಗಳು ವಿವರವಾಗಿ ಪ್ರಕಟಿಸಿವೆ. ಅಷ್ಟಕ್ಕೂ,

ಇವುಗಳನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಒಂದು ಕಾರಣ ಇದೆ. ಅದುವೇ, ಮಹಾರಾಷ್ಟ್ರದ ನಾಸಿಕ್‌ನ ಟಾಟಾ ಕನ್ಸಲ್ಟನ್ಸಿ ಸರ್ವಿಸ್ (ಟಿಸಿಎಸ್) ಸಂಸ್ಥೆಯಲ್ಲಿ ಬಲ ವಂತದ ಮತಾಂತರ ಪ್ರಕರಣ ನಡೆದಿದೆ ಎಂಬ ಆರೋಪ ಮತ್ತು ದೇಶದ ಪ್ರಮುಖ ಟಿವಿ ಚಾನೆಲ್‌ಗಳು ಭಾರೀ ಮಹತ್ವ ಕೊಟ್ಟು ನಡೆಸುತ್ತಿರುವ ಚರ್ಚೆ ಮತ್ತು ವಿಶ್ಲೇಷಣೆಗಳೇ ಇದಕ್ಕೆ ಕಾರಣ.

ಟಿಸಿಎಸ್‌ನ ಉದ್ಯೋಗಿ ದಾನಿಶ್ ಶೈಕ್ ಎಂಬವನಿಗೆ ಸಹೋದ್ಯೋಗಿಯ ಜೊತೆ ಪ್ರೇಮ ಸಂಬಂಧ ಇತ್ತು. ಕಳೆದ ರಮಝಾನ್‌ನಲ್ಲಿ ಯುವತಿ ಉಪವಾಸವನ್ನು ಆಚರಿಸಿದ್ದಾಳೆ. ಉಡುಪಿನಲ್ಲೂ ಬದಲಾವಣೆಯನ್ನು ಮಾಡಿಕೊಂಡಿದ್ದಾಳೆ ಎಂಬ ಅಭಿಪ್ರಾಯ ಇದೆ. ಆದರೆ ಈ ದಾನಿಶ್‌ಗೆ ಮದುವೆಯಾಗಿದೆ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂಬುದನ್ನು ಯುವತಿಗೆ ದಾನಿಶ್‌ನ ಪತ್ನಿ ತಿಳಿಸಿದ್ದಾಳೆ. ಆ ಬಳಿಕ ಈ ಯುವತಿ ಮತ್ತು ದಾನಿಶ್ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಆಕೆಯನ್ನು ಹೆತ್ತವರು ಕೆಲಸದಿಂದ ಬಿಡಿಸಿದ್ದಾರೆ. ಈ ವಿಷಯವನ್ನು ಓರ್ವ ‘ರಾಜಕಾರಣಿ’ಯ ರಹಸ್ಯ ದೂರಿನನ್ವಯ ನಾಸಿಕ್ ಪೊಲೀಸರು ತಿಳಿದುಕೊಂಡರು ಮತ್ತು ತಮ್ಮದೇ ಕಡೆಯ ಓರ್ವರನ್ನು ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿ ತನಿಖೆ ನಡೆಸಿದರಲ್ಲದೇ, ಈ ಸಂತ್ರಸ್ತ ಯುವತಿಯಿಂದ ದೂರನ್ನೂ ಕೊಡಿಸಿದರು. ವಿವಾಹ ಭರವಸೆಯನ್ನು ನೀಡಿ ಅತ್ಯಾಚಾರ ನಡೆಸಿದ್ದಾನೆ ಮತ್ತು ಮತಾಂತರಕ್ಕೆ ಬಲವಂತಪಡಿಸಿದ್ದಾನೆ ಎಂದು ದಾನಿಶ್ ಶೈಕ್ ಮೇಲೆ ಆಕೆ ದೂರು ನೀಡಿದಳು. ಇದರ ಜೊತೆಗೇ,

ಇತರ ಏಳು ಮಂದಿ ಯುವತಿಯರು ಮತ್ತು ಓರ್ವ ಯುವಕ ಕೂಡ ದೂರು ನೀಡಿದರು. ಆದರೆ ಈ ದೂರು ನೀಡುವುದಕ್ಕೆ ಪೊಲೀಸರ ಪ್ರೇರಣೆಯೇ ಕಾರಣ ಎಂಬ ಅಭಿಪ್ರಾಯ ಇದೆ. ಆದರೆ, ಕಾರ್ಪೊರೇಟ್ ಸಂಸ್ಥೆಯಲ್ಲಿ ಪ್ರೇಮ ಸಂಬಂಧ ಸಹಜವಾಗಿದ್ದು, ಇದೇ ನಾಸಿಕ್‌ನಲ್ಲಿ ಬೆಳಕಿಗೆ ಬಂದ ಅಶೋಕ್ ಕರಾಟ್ ಎಂಬ ದೇವಮಾನವನ ಲೈಂಗಿಕ ಹಗರಣದ ಚರ್ಚೆಯನ್ನು ಬದಿಗೆ ಸರಿಸಲು ಮಾಡಲಾದ ಸಂಚಾಗಿರಬಹುದೇ ಎಂಬ ಅನುಮಾನವೂ ಇದೆ. ಈ ನಡುವೆ ವಿದೇಶಿ ಫಂಡ್ ಮೂಲಕ ನಡೆಯುವ ಸಂಘಟಿತ ಮತಾಂತರ ಪ್ರಕರಣ ಎಂಬ ಆರೋಪವನ್ನು ಮಹಾರಾಷ್ಟ್ರ ಎಟಿಎಸ್ ನಿರಾಕರಿಸಿದೆ. ಅಲ್ಲದೇ,

ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯ ಹಿನ್ನೆಲೆ ಯಲ್ಲಿ ಮತ ಧ್ರುವೀಕರಣಕ್ಕಾಗಿ ಮತ್ತು ಮುಸ್ಲಿಮ್ ದ್ವೇಷವನ್ನು ಹಬ್ಬಿಸುವುದಕ್ಕಾಗಿ ಈ ಪ್ರಕರಣಕ್ಕೆ ವ್ಯವಸ್ಥಿತ ತಿರುವನ್ನು ಮತ್ತು ಮಹತ್ವವನ್ನು ನೀಡುವ ಪ್ರಯತ್ನ ನಡೆಸಲಾಗಿದೆಯೇ ಎಂಬ ಸಂದೇಹವೂ ಇದೆ. ಇಷ್ಟೇ ಅಲ್ಲ, ಮಹಾರಾಷ್ಟçದಲ್ಲಿ ಮತಾಂತರ ನಿಷೇಧ ಕಾಯ್ದೆಯು ವಿಧಾನಸಭೆ ಮತ್ತು ಪರಿಷತ್‌ಗಳಲ್ಲಿ ಅಂಗೀಕಾರಗೊಂಡು ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿದೆ. ಈ ಕಾನೂನಿನಂತೆ 7 ವರ್ಷಗಳ ಜೈಲು ಮತ್ತು 5 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ. ಈಗಾಗಲೇ ಕರ್ನಾಟಕವೂ ಸೇರಿದಂತೆ 12 ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಂಡಿದೆ. ಮಹಾರಾಷ್ಟ್ರದಲ್ಲಿ ಇದಕ್ಕೆ ರಾಜ್ಯಪಾಲರು ಅಂಗೀಕಾರ ನೀಡುವುದಕ್ಕಿಂತ ಮೊದಲು ಇಂಥದ್ದೊಂದು ಸುದ್ದಿಗೆ ರೆಕ್ಕೆ-ಪುಕ್ಕಗಳನ್ನು ಸೇರಿಸಿ ಸ್ಫೋಟಿಸುವುದು ಮತ್ತು ಜನರ ಗಮನವನ್ನು ಅಶೋಕ್ ಕರಾಟ್ ಪ್ರಕರಣದಿಂದ ದೂರ ಸರಿಸಿ ಇದರತ್ತ ಕೇಂದ್ರೀಕೃತವಾಗುವAತೆ ಮಾಡುವುದು ಉದ್ದೇಶವೇ ಎಂಬ ಪ್ರಶ್ನೆಯೂ ಇದೆ. ಅಂದಹಾಗೆ,

ಮುಖ್ಯವಾಹಿನಿಯ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳು ಈ ಟಿಸಿಎಸ್ ಪ್ರಕರಣವನ್ನು ಕಾರ್ಪೊರೇಟ್ ಜಿಹಾದ್ ಎಂಬ ಹೆಸರು ಕೊಟ್ಟ ದೇಶದಾದ್ಯಂತ ಹಂಚಿಕೆ ಮಾಡಿವೆ. ಟಿಸಿಎಸ್ ಕಂಪೆನಿ ಕೂಡಾ ಈ ಆರೋಪಿತರನ್ನೆಲ್ಲ ಕೆಲಸದಿಂದ ವಜಾ ಮಾಡಿದೆ. ಇನ್ನು ಮುಂದೆ ಮುಸ್ಲಿಮರನ್ನು ಕೆಲಸಕ್ಕೆ ಆಯ್ಕೆ ಮಾಡುವ ಮೊದಲು ನೂರು ಬಾರಿ ಆಲೋಚಿಸು ವಂಥ ಒತ್ತಡಕ್ಕೆ ಈ ಸಂಸ್ಥೆಯನ್ನು ತಳ್ಳಿ ಬಿಡಲಾಗಿದೆ. ಹಾಗಂತ,

ಇದು ಕೇವಲ ಈ ಸಂಸ್ಥೆಗೆ ಸಂಬಂಧಿಸಿ ಮಾತ್ರ ಹೇಳಬೇಕಾದ್ದಲ್ಲ. ಮುಸ್ಲಿಮರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವುದು ರಿಸ್ಕ್ ಎಂಬ ಅಭಿಪ್ರಾಯಕ್ಕೆ ಕಾರ್ಪೊರೇಟ್ ಸಹಿತ ಇನ್ನಿತರ ಸಂಸ್ಥೆಗಳು ಬರುವುದಕ್ಕೂ ಕಾರಣವಾಗಬಹುದು. ಅನಗತ್ಯ ವಿವಾದದಿಂದ ದೂರ ಉಳಿದು ಕೊಳ್ಳುವ ‘ಸೇಫ್ ಝೋನ್’ ತಂತ್ರಕ್ಕೆ ಸಂಸ್ಥೆಗಳು ಮುಂದಾಗಲೂ ಬಹುದು. ಇನ್ನೊಂದು ಕಡೆ, ಬಲಪಂಥೀಯ ಶಕ್ತಿಗಳು ಕಾರ್ಪೊರೇಟ್ ಸಹಿತ ವಿವಿಧ ಸಂಸ್ಥೆಗಳು ಮತ್ತು ಅಂಗಡಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಮುಸ್ಲಿಮರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳದಂತೆ ಒತ್ತಡ ತರುವುದಕ್ಕೂ ಇಂಥ ಘಟನೆಗಳನ್ನು ಬಳಸಿಕೊಳ್ಳಬಹುದು. ಇದಕ್ಕೆ ಒಪ್ಪದ ಸಂಸ್ಥೆಗಳ ಉದ್ಯೋಗಿಗಳನ್ನು ಗುರಿ ಮಾಡಿ ‘ಲವ್ ಜಿಹಾದ್’ ಪ್ರಕರಣವನ್ನು ಸ್ಫೋಟಿಸಿ ಸಂಸ್ಥೆಯನ್ನು ಒತ್ತಡಕ್ಕೆ ಸಿಲುಕಿಸಲೂ ಬಹುದು.

ಅಂದಹಾಗೆ,

ಇಂಥ ಪ್ರಕರಣಗಳ ಫಾಲೋ ಅಪ್ ಸುದ್ದಿಗಳನ್ನು ಬಹುತೇಕ ಯಾವ ಮೀಡಿಯಾಗಳೂ ಮಾಡುವುದಿಲ್ಲ. ನ್ಯಾಯಾಲಯಗಳ ತೀರ್ಪುಗಳೂ ಅಷ್ಟೇ, ಒಂದು ಕಾಲಂ ಸುದ್ದಿಯಾಗಿ ಯಾರಿಗೂ ಕಾಣದಂತೆ ಕಣ್ಮರೆಯಾಗುತ್ತವೆ. ಇವು ‘ಕಾರ್ಪೊರೇಟ್ ಜಿಹಾದ್’ ಎಂದು ಪ್ರೈಮ್‌ ಟೈಮ್ ಡಿಬೇಟ್ ನಡೆಸುವವರಿಗೂ ಗೊತ್ತು, ‘ಲವ್ ಜಿಹಾದ್’ ಎಂದು ಸೋಶಿಯಲ್ ಮೀಡಿಯಾದಲ್ಲಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಮಾಡುವವರಿಗೂ ಗೊತ್ತು.

ಆರಂಭದಲ್ಲಿ ಉಲ್ಲೇಖಿಸಲಾದ ಮೂರೂ ಪ್ರಕರಣಗಳನ್ನೂ ಮೀಡಿಯಾಗಳು ಲವ್ ಜಿಹಾದ್ ಎಂದೇ ಕರೆದಿದ್ದುವು. ಜನರ ಮನಸ್ಸಲ್ಲಿ ‘ಮುಸ್ಲಿಮ್ ಭಯ’ ಬಿತ್ತುವ ರೀತಿಯಲ್ಲಿ ಮಸಾಲೆ ಲೇಪಿತ ಕತೆಗಳನ್ನು ಕಟ್ಟಿದ್ದುವು. ನಿಜವಾಗಿ, ಜನರ ಮನಸ್ಸಲ್ಲಿ ಉಳಿಯುವುದು ಇಂಥ ಕತೆಗಳೇ. ವರ್ಷಗಳ ಬಳಿಕ ನ್ಯಾಯಾಲಯಗಳು ಆರೋಪಿಗಳನ್ನು ಖುಲಾಸೆಗೊಳಿಸಿ ಪ್ರಕರಣವನ್ನು ವಜಾ ಮಾಡಿದರೂ ಆ ಸುದ್ದಿ ಜನರಿಗೆ ತಲುಪುವುದಿಲ್ಲ. ತಲುಪಿದರೂ ಜನರು ಅವನ್ನು ನಂಬುವ ಸ್ಥಿತಿಯಲ್ಲಿರುವುದಿಲ್ಲ. ಯಾಕೆಂದರೆ, ಈ ಅವಧಿಯಲ್ಲಿ ಇನ್ನಷ್ಟು ಇಂಥ ರೋಚಕ ಕತೆಗಳು ಪ್ರಸಾರ ಆಗಿರುತ್ತವೆ. ಮೀಡಿಯಾ ಟ್ರಯಲೂ ನಡೆದಿರುತ್ತದೆ. ಮುಖ ಮುಚ್ಚಿದ ಆರೋಪಿಗಳ ಚಿತ್ರಗಳೂ ಜನರ ಮನಃಪಟಲದಲ್ಲಿರುತ್ತದೆ. ‘ಮುಸ್ಲಿಮರೆಲ್ಲ ಹೀಗೆ’ ಎಂಬ ಸಿದ್ಧ ಅಭಿಪ್ರಾಯ ಮನೆ ಮಾಡಿರುತ್ತದೆ.